ಕಾಮನ್‌ವೆಲ್ತ್‌ ಗೇಮ್ಸ್‌ | ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಮುರಳಿ ಶ್ರೀಶಂಕರ್

Murali srishankar
  • ಕಾಮನ್‌ವೆಲ್ತ್‌ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಅಥ್ಲೀಟ್‌
  • ಮುರಳಿ ಶ್ರೀಶಂಕರ್ ಕೈ ತಪ್ಪಿದ ಚಿನ್ನದ ಪದಕ 

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 22ನೇ ಕಾಮನ್‌ವೆಲ್ತ್‌ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಲಾಂಗ್‌ಜಂಪ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಬೆಳ್ಳಿಯೆಡೆಗೆ ಜಿಗಿದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 8.08 ಮೀಟರ್ ದೂರ ಜಿಗಿದ ಮುರಳಿ ಶ್ರೀಶಂಕರ್, ಎರಡನೇ ಸ್ಥಾನ ಪಡೆದರು.

ಕಾಮನ್‌ವೆಲ್ತ್‌ ಕೂಟದಲ್ಲಿ ಇದು ಮುರಳಿ ಶ್ರೀಶಂಕರ್ ಅವರ ಚೊಚ್ಚಲ ಪದಕ ಸಾಧನೆಯಾಗಿದೆ. ಬಹಾಮಸ್‌ನ ಲಕ್ವಾನ್ ನಾಯರ್ನ್ ಚಿನ್ನ ಗೆದ್ದರು. ಮುರಳಿ ಮತ್ತು ಲಕ್ವಾನ್‌ ನಡುವೆ ಚಿನ್ನದ ಪದಕಕ್ಕಾಗಿ ನಿಕಟ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ  ಅಂತಿಮವಾಗಿ 8.08 ಮೀ. ದೂರ ದಾಖಲಿಸಿದ್ದರು. ಹೀಗಾಗಿ ಸ್ವರ್ಣ ವಿಜೇತರನ್ನು ನಿರ್ಧರಿಸಲು ಇವರಿಬ್ಬರ ಎರಡನೇ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಲಾಯಿತು. ಬಹಾಮಸ್‌ನ ಅಥ್ಲೀಟ್‌ನ ಎರಡನೇ ಅತ್ಯುತ್ತಮ ಪ್ರದರ್ಶನ 7.98 ಮೀ. ಆಗಿದ್ದರೆ, ಮುರಳಿ ಅವರದ್ದು 7.84 ಮೀ. ಆಗಿತ್ತು. ಹೀಗಾಗಿ ಚಿನ್ನದ ಪದಕ ಲಕ್ವಾನ್ ನಾಯರ್ನ್ ಪಾಲಾಯಿತು. ದಕ್ಷಿಣ ಆಫ್ರಿಕಾದ ಜೋವನ್ ವ್ಯಾನ್ ವುರೆನ್ 8.06 ಮೀ ಜಂಪ್ ನೊಂದಿಗೆ ಕಂಚು ಗೆದ್ದರು.

ಈ ಸುದ್ದಿ ಓದಿದ್ದೀರಾ ? : ಮಹಾರಾಜ ಟ್ರೋಫಿ | ಮಂಗಳೂರು ಯುನೈಟೆಡ್‌, ಮೈಸೂರು ತಂಡ ಪ್ರಕಟ

ಭಾರತದ ಮತ್ತೋರ್ವ ಅಥ್ಲೀಟ್ ಮೊಹಮ್ಮದ್ ಅನೀಸ್ ಯಹಿಯಾ ಅವರು 7.97 ಮೀಟರ್ ಜಂಪ್ ನೊಂದಿಗೆ ಐದನೇ ಸ್ಥಾನ ಪಡೆದರು. ಕಾಮನ್‌ವೆಲ್ತ್‌ ಕೂಟದ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವ ಶ್ರೀಶಂಕರ್‌ಗೆ ಒಲಿಯಿತು. ಸುರೇಶ್‌ ಬಾಬು ಅವರು 1978ರ ಕೂಟದಲ್ಲಿ ಕಂಚು ಗೆದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಪ್ರಜೂಶಾ ಮಲಿಯಕ್ಕಲ್‌ ಅವರು 2010ರ ನವದೆಹಲಿ ಕೂಟದಲ್ಲಿ ಬೆಳ್ಳಿ ಹಾಗೂ ಅಂಜು ಬಾಬಿ ಜಾರ್ಜ್‌ 2002 ರಲ್ಲಿ ಕಂಚು ಜಯಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್