ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತಕ್ಕೆ ಎರಡನೇ ಚಿನ್ನದ ಪದಕ

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಲಭಿಸಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಪುರುಷರ 67 ಕೆಜಿ ವಿಭಾಗದಲ್ಲಿ ಭಾರತದ 19 ವರ್ಷದ ಜೆರೆಮಿ ಲಾಲ್‌ರಿನುಂಗ ಒಟ್ಟು 300 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಇದು ಭಾರತಕ್ಕೆ ಕೂಟದಲ್ಲಿ ಲಭಿಸುತ್ತಿರುವ ಐದನೇ ಪದಕವಾಗಿದೆ. ವಿಶೇಷವೆಂದರೆ ಐದೂ ಪದಕಗಳೂ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲೇ ಲಭಿಸಿದೆ.

ಸ್ನ್ಯಾಚ್‌ನಲ್ಲಿ 140 ಕೆ.ಜಿ ಭಾರ ಹಾಗೂ ಕ್ಲೀನ್‌& ಜರ್ಕ್​ನಲ್ಲಿ 160 ಕೆ.ಜಿ ಸೇರಿದಂತೆ ಒಟ್ಟು 300 ಕೆ.ಜಿ ಭಾರ ಎತ್ತುವ ಮೂಲಕ ಜೆರೆಮಿ, ಕೂಟ ದಾಖಲೆಯೊಂದಿಗೆ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 19 ವರ್ಷದ ಯುವ ಅಥ್ಲೀಟ್‌ನ ಬಂಗಾರದ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻನಮ್ಮ ಯುವ ಶಕ್ತಿ ಇತಿಹಾಸ ಸೃಷ್ಟಿಸುತ್ತಿದೆ!. ಜೆರೆಮಿ ಲಾಲ್‌ರಿನುಂಗ ಅವರಿಗೆ ಅಭಿನಂದನೆಗಳು. ಅವರು ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದಿದ್ದಾರೆ ಮತ್ತು ಅಸಾಧಾರಣ ದಾಖಲೆಯನ್ನು ಸಹ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅವರು ಅಪಾರ ಹೆಮ್ಮೆ ಮತ್ತು ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್ | ಭಾರತಕ್ಕೆ 4ನೇ ಪದಕ; ಬೆಳ್ಳಿ ಗೆದ್ದ ಬಿಂದಿಯಾರಾಣಿ

ಭಾರತಕ್ಕೆ ಒಟ್ಟು ಐದು ಪದಕ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತವು ಎರಡನೇ ಪದಕದ ಸಾಧನೆ ಮಾಡಿದೆ. ಈ ಮೂಲಕ ಒಟ್ಟು ಪದಕಗಳ ಸಂಖ್ಯೆ ಐದಕ್ಕೆ ಏರಿದೆ. ಜೆರೆಮಿ ಸ್ವರ್ಣ ಸಾಧನೆಗೂ ಮೊದಲು, ವೇಟ್‌ ಲಿಫ್ಟಿಂಗ್‌ ಮಹಿಳೆಯರ 55 ಕೆಜಿ ವಿಭಾಗದ ಫೈನಲ್‌ನಲ್ಲಿ, ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಶನಿವಾರ ಮೀರಾಬಾಯಿ ಚಾನು ಚಿನ್ನ, ಸಂಕೇತ್ ಮಹದೇವ್ ಸರ್ಗರ್ ಮತ್ತು ಬೆಳ್ಳಿ ಹಾಗೂ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದರು

ನಿಮಗೆ ಏನು ಅನ್ನಿಸ್ತು?
0 ವೋಟ್