ಐಪಿಎಲ್ 2022 | 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ರಾಜಸ್ಥಾನಕ್ಕೆ ಗುಜರಾತ್‌ ಸವಾಲು

IPL 2022
  • 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವ ರಾಜಸ್ಥಾನ 
  • ಫೈನಲ್‌ ಪಂದ್ಯ ವೀಕ್ಷಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (ಐಪಿಎಲ್) ಚೊಚ್ಚಲ ಆವೃತ್ತಿಯಲ್ಲೇ ಶೇನ್ ವಾರ್ನ್ ನೇತೃತ್ವದಲ್ಲಿ ಚಾಂಪಿಯನ್ ಆಗಿ ಮೆರೆದಿದ್ದ ತಂಡ ರಾಜಸ್ಥಾನ ರಾಯಲ್ಸ್. ಮತ್ತೊಂದೆಡೆ ಮೊದಲ ಪ್ರಯತ್ನದಲ್ಲೇ ಹಾರ್ದಿಕ್ ಪಾಂಡ್ಯಾ ಸಾರಥ್ಯದಲ್ಲಿ ಫೈನಲ್ ಪ್ರವೇಶಿಸಿರುವ ಗುಜರಾತ್ ಟೈಟನ್ಸ್. ಇತ್ತಂಡಗಳ ನಡುವಿನ ಬಹುನಿರೀಕ್ಷಿತ ಫೈನಲ್ ಹಣಾಹಣಿಗೆ ಅಹಮದಾಬಾದ್ ಸಕಲ ರೀತಿಯಲ್ಲೂ ಸಜ್ಜಾಗಿದೆ. 

ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ಟೈಟನ್ಸ್ ಕೈ ಮೇಲಾಗಿದೆ. ಲೀಗ್ ಹಂತದ ಪಂದ್ಯದಲ್ಲಿ 37 ರನ್ ಅಂತರದಲ್ಲಿ ಗೆದ್ದಿದ್ದ ಪಾಂಡ್ಯ ಪಡೆ, ಕ್ವಾಲಿಫೈಯರ್-1ರಲ್ಲಿ ಮೂರು ಎಸೆತಗಳು ಬಾಕಿ ಉಳಿದಿರುವಂತೆ ಏಳು ವಿಕೆಟ್ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದೆ.

ಆದರೆ ಸುದೀರ್ಘ 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವ ಹುಮ್ಮಸ್ಸಿನಲ್ಲಿರುವ ರಾಜಸ್ಥಾನ ರಾಯಲ್ಸ್, ಈ ಬಾರಿ ಟ್ರೋಫಿ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿದೆ. ಟ್ರೆಂಟ್ ಬೌಲ್ಟ್, ಪ್ರಸಿದ್ಧ್‌ ಕೃಷ್ಣ ಮತ್ತು ಸ್ಪಿನ್‌ ಮಾಂತ್ರಿಕರಾದ ಆರ್ ಅಶ್ವಿನ್, ಯಜುವೇಂದ್ರ ಚಾಹಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲಿ ಜಾಸ್ ಬಟ್ಲರ್, ರಾಯಲ್ಸ್ ಪಾಲಿಗೆ ರನ್ ಮೆಶಿನ್ ಆಗಿ ಬದಲಾಗಿದ್ದಾರೆ. ನಾಯಕ ಸಂಜು ಸ್ಯಾಮ್ಸನ್, ಶಿಮ್ರೋನ್ ಹೇಟ್ಮೇರ್ ಕೂಡ ಫಾರ್ಮ್‌ನಲ್ಲಿದ್ದು, ತಂಡ ಸಮತೋಲನದಿಂದ ಕೂಡಿದೆ. 

ಟೈಟನ್ಸ್ ಪಾಲಿಗೆ ಹೇಳಿಕೊಳ್ಳುವ ಬ್ಯಾಟಿಂಗ್ ಬಲವಿಲ್ಲ. ಆದರೆ ಸಾಮಾನ್ಯ ಮೊತ್ತ ದಾಖಲಿಸಿದರೂ ಬೌಲರ್‌ಗಳು ಪಂದ್ಯ ಗೆಲ್ಲಿಸಿಕೊಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೆವಾಟಿಯಾ ತಂಡದ ಬ್ಯಾಟಿಂಗ್ ಭರವಸೆ. ಬೌಲಿಂಗ್ ವಿಭಾಗದಲ್ಲಿ ಅನುಭವಿಗಳಾದ ಮುಹಮ್ಮದ್ ಶಮಿ, ರಶೀದ್ ಖಾನ್ ಹಾಗೂ ಲೂಕಿ ಫರ್ಗ್ಯೂಸನ್ ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸುತ್ತಿದ್ದಾರೆ. 

ಎರಡೂ ತಂಡಗಳ ನಡುವೆ ಸಮಬಲದ ಹೋರಾಟದ ನಿರೀಕ್ಷೆಯಿದೆ. ತವರು ಮೈದಾನದಲ್ಲಿ 1 ಲಕ್ಷದ 20 ಸಾವಿರಕ್ಕೂ ಅಭಿಮಾನಿಗಳ ಕರತಾಡನದ ಎದುರು ಪಂದ್ಯವನ್ನಾಡುತ್ತಿರುವುದು ಗುಜರಾತ್ ಟೈಟನ್ಸ್ ಪಾಲಿಗೆ ಸಂತೋಷದ ವಿಚಾರವಾಗಿದ್ದರೆ, ರಾಜಸ್ಥಾನಕ್ಕೆ ದೊಡ್ಡ ಸವಾಲೆನಿಸಲಿದೆ. 

ಈ ಹೈ ವೋಲ್ಟೇಜ್ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಹಾಲಿವುಡ್- ಬಾಲಿವುಡ್‌ನ ಪ್ರಮುಖ ತಾರೆಯರ ಜೊತೆ ಕುಳಿತು ವೀಕ್ಷಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಪಂದ್ಯ ನಡೆಯುವ ಮೈದಾನದ ಸುತ್ತ ಭಾರೀ ಭದ್ರತೆ ಒದಗಿಸಲಾಗಿದೆ. ಅಹಮದಾಬಾದ್ ನಗರದಲ್ಲಿ 6000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್