23 ವರ್ಷಗಳ ಬಳಿಕ ಆಂಗ್ಲರ ನೆಲದಲ್ಲಿ ಸರಣಿ ಗೆದ್ದ ಭಾರತ ಮಹಿಳಾ ತಂಡ

Indian Women Cricket team won ODI against Engaland
  • ಹೋವ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ಗೆಲುವು
  • ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ಗೆಲುವಿಗೆ 334 ರನ್‌ಗಳ ಕಠಿಣ ಗುರಿ ನೀಡಿದ್ದ ಭಾರತ 

ಇಂಗ್ಲೆಂಡ್ ವಿರುದ್ಧದ ಏರಡನೇ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ತಂಡ 88 ರನ್ ಅಂತರದಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಹರ್ಮನ್ ಪ್ರೀತ್ ಕೌರ್ ಬಳಗ 2-0 ಮುನ್ನಡೆ ಸಾಧಿಸಿದೆ.

ಈ ಮೂಲಕ 23 ವರ್ಷಗಳ ಬಳಿಕ, ಆಂಗ್ಲರ ನೆಲದಲ್ಲಿ, ಭಾರತದ ಮಹಿಳಾ ತಂಡ ಏಕದಿನ ಸರಣಿಯನ್ನು ಗೆದ್ದ ಸಾಧನೆ ಮಾಡಿದೆ. 

ಏಕದಿನ ಸರಣಿಗೂ ಮುನ್ನ ನಡೆದ ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಇಂಗ್ಲೆಂಡ್ ತಂಡಕ್ಕೆ ಶರಣಾಗಿತ್ತು

ಕ್ಯಾಂಟರ್ಬರಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ಗೆಲುವಿಗೆ 334 ರನ್‌ಗಳ ಕಠಿಣ ಗುರಿ ನೀಡಿತ್ತು. ಆದರೆ ರೇಣುಕಾ ಸಿಂಗ್ ದಾಳಿಗೆ ಕುಸಿದ ಅಮಿ ಜಾನ್ಸ್ ಬಳಗ, 44.2 ಓವರ್‌ಗಳಲ್ಲಿ  245 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. 
ಆ ಮೂಲಕ 88 ರನ್‌ಗಳ ಅಂತರದಿಂದ ಭಾರತಕ್ಕೆ ಶರಣಾಯಿತು.

ಭಾರತದ ಪರ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ 4 ವಿಕೆಟ್‌ ಪಡೆದರೆ, ದಯಾಳನ್ ಹೇಮಲತಾ 2 ವಿಕೆಟ್ ಪಡೆದರು . 

ಹರ್ಮನ್ ಪ್ರೀತ್ ಕೌರ್ 143 ರನ್ , ಭಾರತ 333/5

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ, ನಾಯಕಿ ಹರ್ಮನ್ ಪ್ರೀತ್ ಕೌರ್ ಗಳಿಸಿದ ಅಜೇಯ ಶತಕದ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 333 ರನ್ ಗಳಿಸಿತ್ತು.

ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 8 ರನ್ ಗಳಿಸುವಷ್ಟರಲ್ಲೇ ನಿರ್ಗಮಿಸಿದರು, ಆದರೆ ಸ್ಮೃತಿ ಮಂದಾನ ಮತ್ತು ಹರ್ಲಿನ್ ದಿಯೋಲ್ ಜೊತೆ ಮಹತ್ವದ ಜತೆಯಾಟದಲ್ಲಿ ಭಾಗಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 40 ರನ್ ಗಳಿಸಿದ್ದ ವೇಳೆ ಸ್ಮೃತಿ, ಎಕ್ಸಲ್‌ಸ್ಟೋನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ ಬಲಿಯಾದರು.

143 ರನ್‌ಗಳಿಸಿ ಅಜೇಯರಾಗುಳಿದ ಹರ್ಮನ್‌ಪ್ರೀತ್

ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಹರ್ಮನ್‌ಪ್ರೀತ್ ಕೌರ್, ಆಕರ್ಷಕ ಶತಕ ಗಳಿಸಿ ಅಜೇಯರಾಗುಳಿದರು. 111 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 18 ಬೌಂಡರಿಗಳ ನೆರವಿನೊಂದಿಗೆ 143 ರನ್ ಗಳಿಸಿದರು. ಪ್ರಸಕ್ತ ವರ್ಷ ಅಮೋಘ ಫಾರ್ಮ್‌ನಲ್ಲಿರುವ ನಾಯಕಿ ಕೌರ್, ಇದುವರೆಗೂ 15 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು 5 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ನಾಯಕಿಗೆ ಉತ್ತಮ ಸಾಥ್ ನೀಡಿದ ಹರ್ಲಿನ್ ದಿಯೋಲ್, 72 ಎಸೆತಗಳಲ್ಲಿ 58 ರನ್‌ಗಳಿಸಿ ನಿರ್ಗಮಿಸಿದರು. ಐದು ಬೌಂಡರಿ ಮತ್ತು ಎರಡು ಸಿಕ್ಸ್‌ ದಿಯೋಲ್ ಇನ್ನಿಂಗ್ಸ್‌ನ ಆಕರ್ಷಣೆಯಾಗಿತ್ತು. ಉಳಿದಂತೆ ಪೂಜಾ ವಸ್ತ್ರಾಕರ್ 18 ರನ್, ದೀಪ್ತಿ ಶರ್ಮಾ 15 ರನ್‌ಗಳಿಸಿದರು.

ಈ ಸುದ್ದಿ ಓದಿದ್ದೀರಾ? ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ |ಲಾರ್ಡ್ಸ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ಫೈನಲ್‌

ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಐವರು ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು. 24 ವೈಡ್ ಮತ್ತು ಒಂದು ಲೆಗ್ ಬೈ ಸೇರಿದಂತೆ ಇತರ ರೂಪದಲ್ಲಿ ಒಟ್ಟು 25 ರನ್ ನೀಡಿ ಆಂಗ್ಲ ಬೌಲರ್‌ಗಳು ದುಬಾರಿಯಾದರು.

ಹೋವ್‌ನಲ್ಲಿ ನಡೆದಿದ್ದ ಸರಣಿಯ ಮೊದಲನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ, ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.  1999ರಲ್ಲಿ ಭಾರತ ಮಹಿಳಾ ತಂಡವು ಕೊನೆಯದಾಗಿ ಇಂಗ್ಲೆಂಡ್‌ನಲ್ಲಿ 2-1ರಿಂದ ಸರಣಿ ಜಯಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app