ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌

  • ಮಂಗಳವಾರ ಕೊನೆಯ ಪಂದ್ಯ ಆಡಲಿರುವ ಬೆನ್‌ಸ್ಟೋಕ್ಸ್‌
  • 2019ರ ವಿಶ್ವಕಪ್‌ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಿರಿಮೆ 

ಇಂಗ್ಲೆಂಡ್‌ ತಂಡದ 2019ರ ವಿಶ್ವಕಪ್‌ ಹೀರೋ ಮತ್ತು ಟೆಸ್ಟ್ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 

ಬೆನ್‌ ಸ್ಟೋಕ್ಸ್‌ ಡುರಾಮ್‌ನಲ್ಲಿ ಮಂಗಳವಾರ ದಕ್ಷಿಣ ಆಫ್ರಿಕ ವಿರುದ್ಧದ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಲಿದ್ದಾರೆ. ಇಂಗ್ಲೆಂಡ್‌ ಪರ 104 ಏಕದಿನ ಪಂದ್ಯಗಳನ್ನಾಡಿರುವ ಅವರು, 2019ರ ವಿಶ್ವಕಪ್‌ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. 7 ದಶಕಗಳ ನಂತರ ಇಂಗ್ಲೆಂಡ್‌ ಚೊಚ್ಚಲ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಸ್ಟೋಕ್ಸ್ ಕಿವೀಸ್‌ ವಿರುದ್ಧ ಅಜೇಯ 84 ರನ್‌ ಗಳಿಸಿದ್ದರು.

ನಿವೃತ್ತಿ ಕುರಿತು ಬೆನ್‌ಸ್ಟೋಕ್ಸ್‌ ಮಾತುಗಳು

"ಇದು ನಂಬಲಾಗದಷ್ಟು ಕಠಿಣ ನಿರ್ಧಾರ. ಆದರೆ ಇಂಗ್ಲೆಂಡ್‌ಗಾಗಿ ನನ್ನ ಸಹ ಆಟಗಾರರೊಂದಿಗೆ ಆಡುವ ಪ್ರತಿ ನಿಮಿಷವನ್ನು ನಾನು ಪ್ರೀತಿಸುತ್ತೇನೆ. ನಾವು ಈ ದಾರಿಯಲ್ಲಿ ನಂಬಲಾಗದ ಪಯಣ ಸಾಗಿದ್ದೇವೆ. ಈ ನಿರ್ಧಾರಕ್ಕೆ ಬರುವುದು ತುಂಬಾ ಕಷ್ಟ. ಆದರೆ ನಾನು ಇನ್ನು ಮುಂದೆ ಈ ಸ್ವರೂಪದಲ್ಲಿ ತಂಡಕ್ಕೆ ಶೇ. 100 ಸಾಧನೆ ನೀಡಲು ಸಾಧ್ಯವಿಲ್ಲ ಎನ್ನುವ ಭಾವನೆ ನನ್ನಲ್ಲಿದೆ. ನನಗೆ ಮೂರು ಸ್ವರೂಪದಲ್ಲಿ ಆಡಲು ಆಗುವುದಿಲ್ಲ, ಮುಂದಿರುವ ವೇಳಾಪಟ್ಟಿಗಳ ಕಾರಣದಿಂದಾಗಿ ನನ್ನ ದೇಹವು ನಿರಾಸೆಗೊಳಿಸುತ್ತಿದೆ. ಜೊತೆಗೆ ಜೋಸ್ ಬಟ್ಲರ್‌ ಮತ್ತು ತಂಡದ ಉಳಿದವರಿಗೆ ಎಲ್ಲಾ ರೀತಿಯಲ್ಲಿ ನೆರವಾಗಬಲ್ಲ ಇನ್ನೊಬ್ಬ ಆಟಗಾರನ ಸ್ಥಾನವನ್ನು ನಾನು ಕಸಿದುಕೊಳ್ಳುತ್ತಿದ್ದೇನೆ ಎಂದು ಅನಿಸುತ್ತಿದೆ. ಬೇರೆಯವರು ಕ್ರಿಕೆಟಿಗರಾಗಿ ಪ್ರಗತಿ ಸಾಧಿಸಲು ಮತ್ತು ಕಳೆದ 11 ವರ್ಷಗಳಲ್ಲಿ ನನ್ನಂತೆ ಹಲವು ನೆನಪುಗಳನ್ನು ಹೊಂದಲು ಅವಕಾಶ ಮಾಡಿಕೊಡುವುದಕ್ಕೆ ಇದು ಸರಿಯಾದ ಸಮಯ" ಎಂದು ಸ್ಟೋಕ್ಸ್ ಹೇಳಿದ್ದಾರೆ.

"ಈ ಪಯಣದಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಮತ್ತು ತಂಡಕ್ಕೆ ಮತ್ತು ಎಲ್ಲಾ ಆಟಗಾರರಿಗೂ ಭವಿಷ್ಯದಲ್ಲಿ ಸಾಕಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ" ಎಂದು ಬೆನ್ ಸ್ಟೋಕ್ ಬರೆದಿದ್ದಾರೆ.

ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್ ಪರ 104 ಏಕದಿನ ಪಂದ್ಯಗಳಿಂದ 3 ಶತಕ ಮತ್ತು 21 ಅರ್ಧ ಶತಕಗಳ ನೆರವಿನಿಂದ 3093 ರನ್‌ ಗಳಿಸಿದ್ದಾರೆ. 83 ಟೆಸ್ಟ್‌ ಪಂದ್ಯಗಳಿಂದ 11 ಶತಕಗಳ ಸಹಿತ 2919 ರನ್, 34 ಟಿ20 ಪಂದ್ಯಗಳಿಂದ 442 ರನ್‌ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 182, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಕ್ರಮವಾಗಿ 74 ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್