ಕ್ರಿಕೆಟಿಗ ವೃದ್ಧಿಮಾನ್ ಸಹಾಗೆ ‌ಬೆದರಿಕೆ| ಪತ್ರಕರ್ತ ಬೋರಿಯಾ ಮಜುಂದಾರ್‌ಗೆ ಎರಡು ವರ್ಷ ನಿಷೇಧ ಸಾಧ್ಯತೆ

  • ಬೋರಿಯಾ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲು ಬಿಸಿಸಿಐ ಚಿಂತನೆ
  • ಎರಡು ವರ್ಷ ನಿಷೇಧ ಸಂಕಷ್ಟ ಎದುರಾಗುವ ಸಾಧ್ಯತೆ

ಟೀಮ್ ಇಂಡಿಯಾ ಆಟಗಾರ ವೃದ್ಧಿಮಾನ್ ಸಹಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಆರೋಪ ಎದುರಿಸುತ್ತಿರುವ ಕ್ರೀಡಾ ಪತ್ರಕರ್ತನಿಗೆ ಎರಡು ವರ್ಷ ನಿಷೇಧ ಹೇರುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.  

ಪತ್ರಕರ್ತ ಬೋರಿಯಾ ಮಜುಂದಾರ್‌ ಅವರು ತನಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಸಹಾ ಅವರು, ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳ ಸ್ಕ್ರೀನ್ ಶಾಟ್ ಹಾಕಿದ್ದರು.

'ನೀವು ನನ್ನ ಕರೆಯನ್ನು ಸ್ವೀಕರಿಸಿಲ್ಲ, ಇನ್ನು ಮುಂದೆ ನಿಮ್ಮ ಸಂದರ್ಶನವನ್ನು ಮಾಡುವುದಿಲ್ಲ. ನನಗೆ ಈ ರೀತಿಯ ಅವಮಾನಗಳೆಂದರೆ ಇಷ್ಟವಾಗುವುದಿಲ್ಲ . ಇದನ್ನು ನಾನು ಎಂದಿಗೂ ಮರೆಯುವುದಿಲ್ಲ' ಎಂದು ನೆಪವೊಡ್ಡಿ ಸಹಾ ವಿರುದ್ಧ ಬೊರಿಯಾ ಅವರು ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದರು.

ಪತ್ರಕರ್ತ ಕಳುಹಿಸಿದ್ದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವೃದ್ಧಿಮಾನ್ ಸಹಾ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಕ್ರಿಕೆಟಿಗನೋರ್ವನಿಗೆ ಈ ರೀತಿಯ ಬೆದರಿಕೆ ಹಾಕಿದ ಆ ಪತ್ರಕರ್ತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಒತ್ತಾಯಿಸಿದ್ದರು. ಬಳಿಕ ಈ ಕುರಿತಾಗಿ ಪ್ರತಿಕ್ರಿಯಿಸಿದ್ದ ಬಿಸಿಸಿಐ ಅಧಿಕಾರಿ ಅರುಣ್ ಧುಮಾಲ್, "ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು. ತಪ್ಪು ರುಜುವಾತಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂಬ ಭರವಸೆ ನೀಡಿದ್ದರು.

ಈ ಮಧ್ಯೆ ಬೋರಿಯಾ ಅವರು, "ಸಹಾ ಅವರು ನಾನು ಮಾಡಿರುವ ವಾಟ್ಸಪ್​ ಸಂದೇಶಗಳನ್ನು ತಿದ್ದಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ" ಎಂದು ಆರೋಪಿಸಿದ್ದರು. ಇದರಿಂದ ವಿವಾದ ಮತ್ತಷ್ಟು ದೊಡ್ಡದಾಗಿತ್ತು.

ಈ ಹಿನ್ನೆಲೆಯಲ್ಲಿ ಬಿಸಿಸಿಐ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕೋಶಾಧಿಕಾರಿ ಅರುಣ್ ಧುಮಾಲ್, ಅಪೆಕ್ಸ್ ಕೌನ್ಸಿಲ್ ಸದಸ್ಯ ಪ್ರಭುತೇಜ್​ ಭಾಟಿಯಾ ಅವರನ್ನೊಳಗೊಂಡ ಸಮಿತಿ ನೇಮಿಸಿ ವಿಚಾರಣೆ ನಡೆಸಲು ತಿಳಿಸಿತ್ತು. ಇದೀಗ ಈ ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಶನಿವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬೋರಿಯಾ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಹೆಸರು ಹೇಳಲಿಚ್ಛಿಸದ ಬಿಸಿಸಿಐನ ಉನ್ನತಾಧಿಕಾರಿಯೋರ್ವರು, "ಬೋರಿಯಾ ಮಜುಂದಾರ್ ಅವರನ್ನು ದೇಶದಲ್ಲಿನ ಯಾವುದೇ ಕ್ರೀಡಾಂಗಣಗಳಿಗೂ ಪ್ರವೇಶಿಸದಂತೆ ನಿಷೇಧ ಹೇರಲು ಎಲ್ಲಾ ರಾಜ್ಯ ಘಟಕಗಳಿಗೂ ಅಧಿಸೂಚನೆ ಹೊರಡಿಸುತ್ತೇವೆ. ದೇಶದಲ್ಲಿ ನಡೆಯಲಿರುವ ಪಂದ್ಯಗಳನ್ನು ವೀಕ್ಷಿಸಲು ಅವಕಾಶವನ್ನು ನೀಡುವುದಿಲ್ಲ. ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಹಾಗೂ ಮಾಧ್ಯಮ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು. ಯಾವುದೇ ಆಟಗಾರರು ಅವರಿಗೆ ಸಂದರ್ಶನ ನೀಡಬಾರದು ಎಂದು ಘೋಷಿಸುವ ಬಗ್ಗೆ ಚಿಂತನೆ ನಡೆಸಿದೆ" ಎಂದು 'ದಿ ಸಂಡೇ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಹೀಗಾಗಿ ಬೋರಿಯಾ ಮಜುಂದಾರ್ ಅವರಿಗೆ ಎರಡು ವರ್ಷಗಳ ನಿಷೇಧ ಎದುರಾಗುವುದು ಖಚಿತ ಎನ್ನಲಾಗುತ್ತಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180