ಸರಣಿ ಜಯಕ್ಕೆ ಉಭಯ ತಂಡಗಳ ಕಾತರ | ಕೂತುಹಲ ಕೆರಳಿಸಿರುವ ಭಾರತ, ಇಂಗ್ಲೆಂಡ್‌ ಕೊನೆಯ ಪಂದ್ಯ

  • ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ
  • ಕೊಹ್ಲಿ ನಿರೀಕ್ಷಿತ ಆಟವಾಡದೆ ಇರುವುದು ತಂಡಕ್ಕೆ ಹಿನ್ನಡೆ

ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ ಶಾಕ್‌ನಿಂದ ಕಂಗೆಟ್ಟಿರುವ ಭಾರತ ಭಾನುವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯಾವಳಿಯಲ್ಲಿ ತನ್ನ ಆಟದ ಶೈಲಿಯನ್ನು ಬದಲಾಯಿಸಿಕೊಂಡು ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.

2ನೇ ಪಂದ್ಯದಲ್ಲಿ ಗೆಲ್ಲಲು 247 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಭಾರತ, 100 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಟಿ-20ಯಲ್ಲಿ ತೋರಿದ ಪ್ರದರ್ಶನವನ್ನು ಕೊನೆಯ ಪಂದ್ಯದಲ್ಲಿ ತೋರಿದರೆ ಮಾತ್ರ ಆಂಗ್ಲರ ನೆಲದಲ್ಲಿ ಸರಣಿ ಜಯ ಗಳಿಸಬಹುದು ಎನ್ನಲಾಗಿದೆ. 

ತಂಡದ ಹಿರಿಯ ಆಟಗಾರರಾದ ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ ನಿರೀಕ್ಷಿತ ಆಟವಾಡದೇ ಇರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಇದರ ಜೊತೆಗೆ ಮಧ್ಯಮ ಕ್ರಮಾಂಕದಲ್ಲೂ ಕೂಡ ಜವಾಬ್ದಾರಿಯುತ ಆಟ ಮೂಡಿಬರಬೇಕಿದೆ.

ಈ ಸುದ್ದಿ ಓದಿದ್ದೀರಾ? ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದ ಪಿ ವಿ ಸಿಂಧು

ಭಾರತ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಬುಮ್ರಾ, ಶಮಿ ಜೋಡಿ ವಿಕೆಟ್ ಕಬಳಿಸಬೇಕಿದೆ, ಚಹಲ್ ಸ್ಪಿನ್ ಮೋಡಿ ಮಾಡಬೇಕಿದೆ. ಇಂದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ ಅನುಮಾನ ಎನ್ನಲಾಗಿದೆ.

ಇಂಗ್ಲೆಂಡ್ ತಂಡದ ಸಮಸ್ಯೆಯೂ ಭಾರತದಂತಿದೆ. ಎರಡೂ ಪಂದ್ಯಗಳಲ್ಲಿ ಬ್ಯಾಟರ್‌ಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಸ್ವತಃ ನಾಯಕ ಜೋಸ್ ಬಟ್ಲರ್ ರನ್ ಗಳಿಸದಿರುವುದು ತಂಡಕ್ಕೆ ದೊಡ್ಡ ಹಿನ್ನಡೆ. ಸ್ಟಾರ್ ಬ್ಯಾಟರ್​ಗಳಾದ ಜಾನಿ ಬೈರ್​ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್​ ಕೂಡ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತದ 6 ವಿಕೆಟ್ ಕಬಳಿಸಿದ ರೀಸ್ ಟಾಪ್ಲಿ ಮೇಲೆ ಎಲ್ಲರ ಕಣ್ಣಿದೆ.

ಓಲ್ಡ್ ಟ್ರಾಫಾರ್ಡ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಲ್ಲಿಯವರೆಗೂ ಒಟ್ಟು 8 ಏಕದಿನ ಪಂದ್ಯಗಳನ್ನಾಡಿವೆ. ಈ ಪೈಕಿ ಭಾರತ ತಂಡ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ ಉಳಿದ 6 ಪಂದ್ಯಗಳಲ್ಲಿ ಗೆದ್ದಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ನೇರ ಪ್ರಸಾರವನ್ನು ಸೋನಿ ನೆಟ್‌ವರ್ಕ್‌ನ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್