ಟೀಮ್ ಇಂಡಿಯಾದಲ್ಲಿ ಮತ್ತೆ ಡಿಕೆ ದರ್ಬಾರ್

ಸುಮಾರು ಮೂರು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರವಾಗಿದ್ದ ದಿನೇಶ್‌ ಕಾರ್ತಿಕ್‌, ಈ ಬಾರಿಯ ಐಪಿಎಲ್‌ನಲ್ಲಿ ತೋರಿದ ಅಮೋಘ ನಿರ್ವಹಣೆಯಿಂದಾಗಿ ಟೀಮ್‌ ಇಂಡಿಯಾ ಕ್ಯಾಂಪ್‌ಗೆ ಮರಳಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ ಎಲ್ಲವೂ ಇನ್ನೇನು ಮುಗಿದೇ ಹೋಯಿತು ಅನ್ನುವಷಾರಲ್ಲಿ ಐಪಿಎಲ್‌ ಅಧೃಷ್ಟವನ್ನು ಬದಲಾಯಿಸಿತ್ತು.
Cricket

ದಕ್ಷಿಣ ಆಫ್ರಿಕ ವಿರುದ್ಧದ ನಿರ್ಣಾಯಕ ಟಿ20 ಪಂದ್ಯದಲ್ಲಿ ಅಮೋಘ ಅರ್ಧಶತಕ ದಾಖಲಿಸಿದ್ದ ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಟ್ರಂಪ್ ಕಾರ್ಡ್ ಆಗಲಿದ್ದಾರೆ ಎಂದು ಅಭಿಮಾನಿಗಳ ಜೊತೆ ಹಿರಿಯ ಕ್ರಿಕೆಟ್ ಪಂಡಿತರೂ ಈಗಾಗಲೇ ಭವಿಷ್ಯ ನುಡಿದಿದ್ದಾರೆ.

4ನೇ ಟಿ20 ಪಂದ್ಯದಲ್ಲಿ ಡೈನ್ ಪ್ರಿಟೋರಿಯಸ್ ಎಸೆದ ಅಂತಿಮ ಓವರ್‌ನ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದ ಕಾರ್ತಿಕ್, ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಪೂರ್ತಿಗೊಳಿಸಿದ್ದರು. ಆ ಮೂಲಕ ಹೆಚ್ಚು ವಯಸ್ಸಾದ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ವಿಕೆಟ್ ಕೀಪರ್- ಬ್ಯಾಟರ್ ಕಾರ್ತಿಕ್ ತನ್ನದಾಗಿಸಿಕೊಂಡರು. ಇದರೊಂದಿಗೆ ದಿಗ್ಗಜ ಆಟಗಾರ ಎಂ ಎಸ್ ಧೋನಿ ಹೆಸರಿನಲಿದ್ದ ದಾಖಲೆಯನ್ನು ಹಿಂದಿಕ್ಕಿದರು.

Eedina App

2018ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧವೇ ನಡೆದಿದ್ದ ಟಿ20 ಪಂದ್ಯವೊಂದರಲ್ಲಿ ಎಂ ಎಸ್ ಧೋನಿ ತಮ್ಮ 36 ನೇ ವಯಸ್ಸಿನಲ್ಲಿ (36 ವರ್ಷ 229 ದಿನಗಳು) ವೃತ್ತಿ ಜೀವನದ ಎರಡನೇ ಟಿ20 ಅರ್ಧಶತಕ ದಾಖಲಿಸಿದ್ದರು. ಆದರೆ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿ ದಿನೇಶ್ ಕಾರ್ತಿಕ್ (37 ವರ್ಷ 16 ದಿನ ದಿನ) ಧೋನಿ ದಾಖಲೆಯನ್ನು ಹಿಂದಿಕ್ಕಿ ಹಿರಿಯರಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಶಿಖರ್ ಧವನ್, (35 ವರ್ಷ 1 ದಿನ) 2020ರಲ್ಲಿ ಆಸ್ಟ್ರೇಲಿಯ ವಿರುದ್ಧ ಅರ್ಧಶತಕ ದಾಖಲಿಸಿದ್ದರು.

ಚೊಚ್ಚಲ ಟಿ20 ತಂಡದ ಏಕೈಕ ಆಟಗಾರ

2006, ಡಿಸೆಂಬರ್ 1ರಂದು, ಟೀಮ್ ಇಂಡಿಯಾ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯವನ್ನಾಡಿತ್ತು. ಜೊಹನೆಸ್‌ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತ್ತು. ವಿಶೇಷವೆಂದರೆ ದಿನೇಶ್ ಕಾರ್ತಿಕ್ ಹೊರತುಪಡಿಸಿ ಚೊಚ್ಚಲ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿದ್ದವರೆಲ್ಲರೂ ರಾಷ್ಟ್ರೀಯ ತಂಡದಿಂದ ನಿವೃತ್ತರಾಗಿದ್ದಾರೆ.

2019ರ ಫೆಬ್ರವರಿಯಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಟಿ20 ಪಂದ್ಯವನ್ನಾಡಿದ್ದ ದಿನೇಶ್ ಕಾರ್ತಿಕ್, ಸುಮಾರು ಮೂರು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರವಾಗಿದ್ದರು.  ಆದರೆ ಐಪಿಎಲ್‌ನಲ್ಲಿ ತೋರಿದ ಅಮೋಘ ನಿರ್ವಹಣೆಯಿಂದ ಹರಿಣಗಳ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.

ದಿಕ್ಕು ಬದಲಾಯಿಸಿದ ಐಪಿಎಲ್

ಐಪಿಎಲ್ ಹೊರತುಪಡಿಸಿ ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಅಧ್ಯಾಯ ಕೊನೆಗೊಂಡಿದ್ದ ಕಾರಣ ದಿನೇಶ್ ಕಾರ್ತಿಕ್ ವೀಕ್ಷಕ ವಿವರಣೆಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೆಕೆಆರ್ ತಂಡದಿಂದ ಬಿಡುಗಡೆಗೊಂಡಿದ್ದ ದಿನೇಶ್ ಕಾರ್ತಿಕ್‌ರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5.5 ಕೋಟಿಗೆ ಖರೀದಿಸಿತ್ತು. ಈ ವೇಳೆ ಬಹುತೇಕರು ಆರ್‌ಸಿಬಿ ನಿರ್ಧಾರವನ್ನು ಟೀಕಿಸಿದ್ದರು. ಆದರೆ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದ ಕಾರ್ತಿಕ್, ಆರ್‌ಸಿಬಿ ಪಾಲಿಗೆ ಫಿನಿಶರ್ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 16 ಇನ್ನಿಂಗ್ಸ್‌ಗಳಲ್ಲಿ 183.33 ಸ್ಟ್ರೈಕ್ ರೇಟ್ ಮೂಲಕ 330 ರನ್‌ಗಳಿಸಿದ್ದರು. 

ಈ ಸುದ್ದಿ ಓದಿದ್ದೀರಾ ? : ವಿಶ್ವದಾಖಲೆ | ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲಿಸಿದ ಇಂಗ್ಲೆಂಡ್

ಕೈ ಹಿಡಿದ ಕಾರ್ತಿಕ್‌

ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹತ್ವದ 4ನೇ ಟಿ20 ಪಂದ್ಯದಲ್ಲಿ ಅಗ್ರ ಕ್ರಮಾಂಕದ ಆಟಗಾರರು ವಿಫಲರಾದರೂ ಸಹ, ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಧಾರ ಸ್ಥಂಭವಾಗಿದ್ದರು. ಆರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ದಿನೇಶ್ ಕಾರ್ತಿಕ್ 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ, 27 ಎಸೆತಗಳಲ್ಲಿ 55 ರನ್ ಸಿಡಿಸುವ ಮೂಲಕ ಅಬ್ಬರಿಸಿದ್ದರು.

ಹಾರ್ದಿಕ್ ಪಾಂಡ್ಯ ಜತೆ 5.3 ಓವರ್ ನಿಭಾಯಿಸಿ 65 ರನ್‌ಗಳ ಜತೆಯಾಟವಾಡಿ ತಂಡ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಕಾರ್ತಿಕ್ ಪಾಲಾಯಿತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app