ನಾನು ಮಾನಸಿಕವಾಗಿ ಕುಗ್ಗಿದ್ದೇನೆ; ಸ್ಟಾರ್ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ವಿರಾಟ್‌ ಕೊಹ್ಲಿ

  • ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿಗೆ 100ನೇ ಪಂದ್ಯ
  • ಕೊಹ್ಲಿಯ ಇತ್ತೀಚಿನ ಫಾರ್ಮ್ ಬಹಳ ಚರ್ಚೆಯಾಗಿದೆ

ನಾನು ಮಾನಸಿಕವಾಗಿ ಕುಗಿದ್ದೇನೆ. ಈ ಬಗ್ಗೆ ಹೇಳಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ . ಈ ಕಾರಣದಿಂದಲೇ ಇಂಗ್ಲೆಂಡ್‌ ಪ್ರವಾಸದ ಬಳಿಕ ಒಂದೂವರೆ ತಿಂಗಳು ವಿಶ್ರಾಂತಿ ಪಡೆದುಕೊಂಡಿದ್ದೆ ಎಂದು ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ, ವಿರಾಮದ ಸಮಯದಲ್ಲಿ, ಅವರು ಒಂದು ತಿಂಗಳ ಕಾಲ ತಮ್ಮ ಕ್ರಿಕೆಟ್ ಬ್ಯಾಟ್ ಮುಟ್ಟಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

Eedina App

ಹೆಚ್ಚೂ-ಕಡಿಮೆ ಎರಡು ತಿಂಗಳ ಬಳಿಕ ವಿರಾಟ್‌ ಕೊಹ್ಲಿ ಏಷ್ಯಾ ಕಪ್‌ ಟೂರ್ನಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಭಾನುವಾರ ಸಂಜೆ 07:30ಕ್ಕೆ ಆರಂಭವಾಗುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆ.

ಕಳೆದ 10 ವರ್ಷಗಳಿಂದ ಇದೇ ಮೊದಲ ಬಾರಿ ಒಂದು ತಿಂಗಳು ಬ್ಯಾಟ್‌ ಮುಟ್ಟಿರಲಿಲ್ಲ. ಇತ್ತೀಚೆಗೆ ನನ್ನ ಉತ್ಸಾಹದ ತೀವ್ರತೆ ಮೈದಾನದಲ್ಲಿ ಎಲ್ಲರೂ ನೋಡಿದ್ದಾರೆ. ಆದರೆ ನಾನು ತೀವ್ರತೆಯನ್ನು ನಕಲಿ ಮಾಡಲು ಪ್ರಯತ್ನಿಸುತ್ತಿದ್ದೆ ಎಂದು ನನಗೇ ಈಗ ಅರಿವಾಗಿದೆ. "ಇಲ್ಲವೇ ಇಲ್ಲ. ನನ್ನಲ್ಲಿ ತೀವ್ರತೆ ಇದೆ ಎಂದು ಆಗಾಗ ಮನವರಿಕೆ ಮಾಡಿಕೊಂಡು ಸಮಾಧಾನಪಡುತ್ತಿದ್ದೆ. ಆದರೆ ವಿರಾಮ ತೆಗೆದುಕೊಳ್ಳುವಂತೆ ಮನಸ್ಸು ಆಶಿಸುತ್ತಿತ್ತು" ಎಂದು ವಿರಾಟ್‌ ಕೊಹ್ಲಿ ಮಾತನಾಡಿರುವ ವಿಡಿಯೋವನ್ನು ಸ್ಟಾರ್‌ ಸ್ಪೋರ್ಟ್ಸ್‌ ಹಂಚಿಕೊಂಡಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್‌| ದುಬೈನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳ ಕದನ

"ಮಾನಸಿಕವಾಗಿ ಅತ್ಯಂತ ಬಲಿಷ್ಠವಾಗಿರುವ ಆಟಗಾರನನ್ನಾಗಿ ನನ್ನನ್ನು ನಾನು ನೋಡುತ್ತೇನೆ. ಆದರೆ, ಪ್ರತಿಯೊಬ್ಬರಿಗೂ ಮಿತಿ ಇದೆ ಮತ್ತು ನೀವು ಆ ಮಿತಿಯನ್ನು ಗುರುತಿಸಬೇಕು, ಇಲ್ಲದಿದ್ದರೆ ವಿಷಯಗಳು ನಿಮಗೆ ಅನಾರೋಗ್ಯಕರವಾಗಿ ಬದಲಾಗಬಹುದು. ಈ ಅನುಭವದಿಂದ ಸಾಕಷ್ಟು ಕಲಿತಿದ್ದೇನೆ," ಎಂದು ಅವರು ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ, "10 ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ಒಂದು ತಿಂಗಳ ಕಾಲ ನನ್ನ ಬ್ಯಾಟ್ ಹಿಡಿದಿಲ್ಲ. ನನ್ನ ತೀವ್ರತೆಯನ್ನು ಸ್ವಲ್ಪ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇನೆ ಎಂದು ಅರಿತುಕೊಂಡೆ. ಬಿಡುವು ಮಾಡಿಕೊಂಡು ವಿಶ್ರಾಂತಿ ತೆಗೆದುಕೊಳ್ಳುವಂತೆ ನನ್ನ ಮನಸ್ಸು ಹೇಳುತ್ತಿತ್ತು" ಎಂದರು.

ಮುಂದುವರಿದು ಮಾತನಾಡಿದ ವಿರಾಟ್ ಕೊಹ್ಲಿ, "ನಾನು ಮಾನಸಿಕವಾಗಿ ಸದೃಢವಾಗಿರುವ ವ್ಯಕ್ತಿ. ಆದರೆ ಪ್ರತಿಯೊಬ್ಬರಿಗೂ ಮಿತಿ ಇರುತ್ತದೆ. ನೀವು ಆ ಮಿತಿ ಗುರುತಿಸಬೇಕು" ಎಂದು ಹೇಳಿದರು. ಈ ಸಮಯ ನನಗೆ ಬಹಳಷ್ಟು ಕಲಿಸಿದೆ. ಮುನ್ನೆಲೆಗೆ ಬರದ ವಿಷಯಗಳು ತುಂಬಾ ಇವೆ. ನಾನು ಅವುಗಳನ್ನು ಒಪ್ಪಿಕೊಂಡಿದ್ದೇನೆ. ನಾನು ಮಾನಸಿಕವಾಗಿಯೂ ದುರ್ಬಲನಾಗಿದ್ದೆ ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ತೊಂದರೆ ಇಲ್ಲ. ಇದು ತುಂಬಾ ಸಾಮಾನ್ಯ ವಿಷಯ, ಆದರೆ ಹಿಂಜರಿಕೆಯಿಂದ ಇಂಥ ವಿಷಯಗಳ ಬಗ್ಗೆ ನಾವು ಮಾತನಾಡುವುದಿಲ್ಲ. ನನ್ನನ್ನು ನಂಬಿ, ದುರ್ಬಲ ಎಂದು ಒಪ್ಪಿಕೊಳ್ಳುವುದಕ್ಕಿಂತ ಬಲಶಾಲಿ ಎಂದು ನಟಿಸುವುದು ಅಪಾಯಕಾರಿ" ಎಂದು ಕೊಹ್ಲಿ ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ವಿರಾಟ್‌ ಕೊಹ್ಲಿ ಪಾಲಿಗೆ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ. ಈವರೆಗೂ ಅವರು 3308 ರನ್‌ಗಳನ್ನು ಗಳಿಸಿದ್ದಾರೆ. ಅಜೇಯ 94 ರನ್‌ ಅವರ ವೈಯಕ್ತಿಕ ಗರಿಷ್ಠ ಮೊತ್ತ. ಅಂದಹಾಗೆ ಚುಟುಕು ಸ್ವರೂಪದಲ್ಲಿ ಅವರು 137.66ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ಗಳನ್ನು ಗಳಿಸಿದ್ದಾರೆ.

ಕೊಹ್ಲಿಗೆ ರಾಹುಲ್ ಬೆಂಬಲ  

ಕೊಹ್ಲಿಯ ಇತ್ತೀಚಿನ ಫಾರ್ಮ್ ಕುರಿತು ಎಲ್ಲಡೆ ಚರ್ಚೆಯಾಗಿತ್ತು.  ಈ ಸಂದರ್ಭದಲ್ಲಿ  ಭಾರತದ ಉಪನಾಯಕ ಕೆಎಲ್ ರಾಹುಲ್ ಅವರು ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ. ಹೊರಗಿನ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

"ನಾನು ನಿಜವಾಗಿಯೂ ಯಾವುದೇ ಟೀಕೆಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಅಭಿಪ್ರಾಯವನ್ನು ಹೊಂದಿದ್ದಾರೆ, ಅದು ಆಟಗಾರನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ವಿರಾಟ್‌ನಂತಹ ವಿಶ್ವ ದರ್ಜೆಯ ಆಟಗಾರನ ಕುರಿತಾಗಿ ಹೊರಗಿನ ಮಾತುಗಳು ಬಹಳ ಪರಿಣಾಮ ಉಂಟು ಮಾಡುತ್ತವೆ. ವಿರಾಟ್‌ ಕೊಂಚ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ತಮ್ಮ ಆಟದ ಕುರಿತು ಗಮನಹರಿಸಿದ್ದಾರೆ. ದೇಶಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಹಸಿವನ್ನು ಹೊಂದಿದ್ದಾರೆ ಎಂದು ನನಗೆ ಖಾತ್ರಿಯಿದೆ. ವೃತ್ತಿ ಜೀವನದುದ್ದಕ್ಕೂ ಅವರು ಇದನ್ನೇ ಮಾಡಿದ್ದು. ಅವರ ಮನಸ್ಥಿತಿ ಯಾವಾಗಲೂ ದೇಶಕ್ಕಾಗಿ ಪಂದ್ಯಗಳನ್ನು ಗೆಲ್ಲಲು ಬಯಸುತ್ತದೆ. ಕೊಹ್ಲಿ ಫಾರ್ಮ್‌ಗೆ ಮರಳುತ್ತಾರೆ" ಎಂದು ಕೆ ಎಲ್‌ ರಾಹುಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜುಲೈ ತಿಂಗಳ ಇಂಗ್ಲೆಂಡ್‌ ಪ್ರವಾಸದಲ್ಲಿ ವಿರಾಟ್‌ ಕೊಹ್ಲಿ ಒಂದು ಟೆಸ್ಟ್‌, ಎರಡು ಟಿ20 ಹಾಗೂ ಎರಡು ಏಕದಿನ ಪಂದ್ಯಗಳಿಂದ (ವಿರಾಟ್‌ ಕೊಹ್ಲಿ) ಗಳಿಸಿದ್ದು ಕೇವಲ 76 ರನ್‌ ಮಾತ್ರ. ಈ ಪ್ರವಾಸದ ಬಳಿಕ ಅವರು, ವೆಸ್ಟ್‌ ಇಂಡೀಸ್‌ ಹಾಗೂ ಜಿಂಬಾಬ್ವೆ ಪ್ರವಾಸಗಳಿಗೆ ವಿರಾಮ ಪಡೆದುಕೊಂಡಿದ್ದರು.

ಏಷ್ಯಾ ಕಪ್‌ನಲ್ಲಿ ಈವರೆಗಿನ ಅಂಕಿ ಅಂಶ

ಏಷ್ಯಾಕಪ್‌ನಲ್ಲೂ ವಿರಾಟ್ ಕೊಹ್ಲಿಯ ಅಂಕಿ ಅಂಶ ಉತ್ತಮವಾಗಿವೆ. ವಿರಾಟ್ ಕೊಹ್ಲಿ ನಾಲ್ಕನೇ ಬಾರಿಗೆ ಏಷ್ಯಾಕಪ್‌ನ ಭಾಗವಾಗಲಿದ್ದಾರೆ. ಏಷ್ಯಾಕಪ್ ಏಕದಿನ ಮಾದರಿಯಲ್ಲಿ ವಿರಾಟ್ ಈವರೆಗೆ 16 ಪಂದ್ಯಗಳಲ್ಲಿ 63.83 ಸರಾಸರಿಯಲ್ಲಿ 766 ರನ್ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ, ಅವರ ಬ್ಯಾಟ್ ಐದು ಪಂದ್ಯಗಳಲ್ಲಿ 76.50ರ ಸರಾಸರಿಯಲ್ಲಿ 153 ರನ್‌ಗಳನ್ನು ಕಂಡಿದೆ. ಏಷ್ಯಾ ಕಪ್‌ನಲ್ಲಿಯೇ ಪಾಕಿಸ್ತಾನದ ವಿರುದ್ಧ ಗಳಿಸಿದ 183 ರನ್‌ಗಳು ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಸ್ಕೋರ್ ಆಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app