
ರಾಹುಲ್ ಔಟ್ ಆದ. ಜಾಗ ಸರಿಯಿಲ್ಲವೆಂದು ಬದಲಾಯಿಸಿದೆ. ರೋಹಿತ್ ಒಂದೆರಡು ಬೌಂಡರಿ ಬಾರಿಸಿದ ಮನಸ್ಸು ಗರಿಗೆದರಿ ಕುಣಿಯಲಾರಂಭಿಸಿತು. ಮುಂದಿನ ಬಾಲಿಗೆ ರೋಹಿತ್ ಹೊರನಡೆದ. ಜಾಗ ಬದಲಾಯಿಸಲೆ? ಸಲಹೆ ನೀಡಿತೊಂದು ಮನಸ್ಸು, ನನ್ನ ಮರುಳುತನಕ್ಕೆ ನಾನೇ ನಕ್ಕೆ.
ಊಟದ ಸಮಯ. ಹಾಸಿಗೆ ಮೇಲೆ ಕುಳಿತಿದ್ದೆ. ಊಟಕ್ಕೆ ಕರೆಯಲು ಬಂದಳವಳು. ಕ್ರಿಕೆಟ್ ನೋಡುವಾಗ ಡೈನಿಂಗ್ ಟೇಬಲ್ಗೆ ಊಟ ಹಚ್ಚುವುದಿಲ್ಲ ಅವಳು. ಮುಖ ನೋಡಿ ಅಂದಾಜಿಸಿದಳು. ಬೆಡ್ ರೂಮಿಗೆ ಊಟ ಬಂತು. ಹಾಸಿಗೆಯಲ್ಲಿ ಉಂಡರೆ ದಿಮಿಗುಡುವಳವಳು. ಪಕ್ಕದಲ್ಲಿರುವ ಸೋಫಾಕ್ಕೆ ಬದಲಾಯಿಸಬೇಕು. ಕೊಹ್ಲಿ ಔಟಾದರೆ? ಮತ್ತೊಮ್ಮೆ ಮರುಕಪಟ್ಟಿತು ವಿವೇಕ. ಉಪಾಯವಿಲ್ಲದೆ ಪಕ್ಕದಲ್ಲಿರುವ ಸೋಫಾದಲ್ಲಿ ದಿಮಿಗುಡುತ್ತ ಆಸೀನನಾದೆ.

ಊಟ ಬೇಡವಾಗಿತ್ತು. ಆದರೂ ತಿನ್ನಲೇ ಬೇಕಾಗಿತ್ತು. ತಾಟಿಗೆ ಕೈ ಹಾಕಿದೆ. ಒಂದು ರೊಟ್ಟಿ ಹೊಟ್ಟೆ ಸೇರಿತ್ತು. ಎರಡನೆಯ ರೊಟ್ಟಿಯ ಒಂದನೆಯ ತುತ್ತು ಬಾಯಲ್ಲಿ ಇಡುವಾಗ ಯಾದವ್ ಔಟ್!! ವರ್ಲ್ಡ್ ಕಪ್ಪು ಜಾರಲಾರಂಭಿಸಿತು ಕೈಯಿಂದ. ಬಾಯಿ ಒಣಗಲಾರಂಭಿಸಿತು. ತುತ್ತು ಗಂಟಲಲ್ಲಿ ಇಳಿಯದೆ ಉಂಡಿಗಟ್ಟಲಾರಂಭಿಸಿತು. ಕಿಂಗ್ ಕೊಹ್ಲಿ ಆಡುತ್ತಲಿದ್ದ. ದೇವರೆ ಅವನಾದರು ಕೊನೆವರೆಗೆ ಇರಲಿ ಎಂದು ಮನದಲ್ಲಿ ಪ್ರಾರ್ಥಿಸಿದೆ. ಕಿಂಗ್ ಸೈನಿಕನಾಗಿ ಮಾರ್ಪಡುತ್ತಲಿದ್ದ. ಅವನ ಆಟದಲ್ಲಿ ಎಂದಿನ ಸೊಬಗು ಕಾಣಲಿಲ್ಲ. ಮುಂದಿನ ಪ್ರತಿ ಎಸೆತವನ್ನು ಸಿಕ್ಸರ್ ಸಿಡಿಸಿಯಾನು ಎನ್ನುತ್ತಿತ್ತು ಮನಸ್ಸು.
ಯುದ್ದ ಭೂಮಿಯಲ್ಲಿ ಒಂಟಿ ಹೋರಾಟಗಾರನಂತೆ ಕಾಣುತ್ತಿದ್ದ ಕಿಂಗ್ ಕೊಹ್ಲಿ. ಅವನ ಎದುರಿಸುವ ಪ್ರತಿಬಾಲ್ ಅಣುಬಾಂಬ್ ಎಂಬಂತೆ ಕಾಣುತ್ತಿತ್ತು ನನ್ನಂತ ಭಾವುಕ ಜೀವಿಗೆ. ಅವನೂ ಸಹ ಹಾಗೆ ಭಾವಿಸಿದಂತಿತ್ತು. ಅದು ಸಿಡಿಯಬಾರದೆಂದು ಸಾವಕಾಶವಾಗಿ ಬಾಲ್ ಟ್ಯಾಪ್ ಮಾಡುತ್ತಲಿದ್ದ ಕ್ರಿಕೆಟ್ ರಾಜ. ಒಂದೆರಡು ರನ್ನುಗಳನ್ನು ಮಧ್ಯ ಮಧ್ಯ ಕದಿಯುತ್ತಿದ್ದ.

ಪಿಚ್ಚಿನಲ್ಲಿ ದೆವ್ವ ಇರಬಹುದು ಎಂದೆನಿಸಿತು ನನಗೆ. ದೈತ್ಯ ಭಾರತಿಯ ಬ್ಯಾಟರುಗಳ ಗತಿ ಈ ರೀತಿಯಾದರೆ ಕೆಂಪು ಮೊತಿಯವರು ನೂರರ ಗಡಿ ದಾಟಲಾರರು ಎಂದು ಮತ್ತೊಂದು ಮನಸ್ಸು ಸಮಾಧಾನ ಹೇಳುತ್ತಿತ್ತು.
ಅತ್ಯಂತ ಕಳಪೆ ಬಾಲ್ ಅದು. ಅದನ್ನು ಟ್ಯಾಪ್ ಮಾಡಿ ಕ್ಯಾಚ್ ನೀಡಿದ ಕಿಂಗ್ ಕೊಹ್ಲಿ ಹೊರನಡೆದ. ಬಾಯಲ್ಲಿಯ ತುತ್ತು ಉಂಡೆಯಾಗಲಾರಂಭಿಸಿತು. ಕೈ ತೊಳೆದೆ. ಅನ್ನ ನೀಡಲು ಓಡಿ ಬಂದಳವಳು. ಬೇಡವೆಂದೆ. ನನ್ನ ಮುಖ ನೋಡುತ್ತ ಟಿ.ವಿ ಕಡೆ ದೃಷ್ಟಿ ಬೀರಿದಳು. ವಿಷಾದದ ನಗೆ ಬೀರುತ್ತ ಹೊರನಡೆದಳವಳು.
ಹಾರ್ದಿಕನೊಂದಿಗೆ ಆಡಲು ಬಂದ ಮತ್ತೊಬ್ಬ ಬೀಸುಗಾರ ರಿಷಭ್. ಹದಿನೇಳು ಓವರಗಳ ಆಟ ಮುಗಿದಿತ್ತು. ನೂರೈವತ್ತು ಬರಬಹುದು ಎನ್ನುತ್ತಲಿದ್ದ ವೀಕ್ಷಣೆಕಾರ. ಹಾರ್ದಿಕ್ ಬ್ಯಾಟು ಬೀಸಲಾರಂಭಿಸಿದ ಸಿಕ್ಸರ್ಗಳ ಮೇಲೆ ಸಿಕ್ಸರ್ ಬರಲಾರಂಭಿಸಿದವು. ಮಕ್ಕಳಿದ್ದರೆ ಹಾರ್ದಿಕನಂತಿರಬೇಕು ಎಂದಿತು ಹಿರಿಯ ಮನಸ್ಸು. ವೀಕ್ಷಣೆ ವಿವರಣೆಗಾರ 160-170 ಗಳಿಸಿದರೆ ಮ್ಯಾಚ್ ಆಗುವದೆಂದ. ಅವನ ಬಾಯಲ್ಲಿ ಸಕ್ಕರೆ ಬೀಳಲಿ ಎಂದೆ. 168ರನ್ನು ಸ್ಕೋರ್ ಬೋರ್ಡ್ ಮೇಲೆ ಮೂಡಿದ್ದವು.

ನಮ್ಮ ಮನೆಯ ಕೇಬಲ್ ನಿಂತು ಹೋಯಿತು. ಬರಸಿಡಿಲು ಬಡಿದಂತಾಯಿತು. ಕೇಬಲ್ನವನೊಂದಿಗೆ ಈ ಸಮಯದಲ್ಲಿ ವಾದ ಮಾಡುವದು ಸರಿಯಲ್ಲವೆಂದು ಕ್ಲಬ್ಬಿನತ್ತ ಹೊರಡಲಣಿಯಾದೆ. ಕಾರು ಕ್ಲಬ್ ಸೇರಿ ಸೋಪಾದಲ್ಲಿ ಆಸೀನನಾಗುವ ಮೊದಲೆ ಕೆಂಪು ಮೋತಿಯವರು 27 ರನ್ನುಗಳನ್ನು ಚಚ್ಚಿದ್ದರು. ತದೇಕ ಚಿತ್ತದಿಂದ ಪರದೆಯಲ್ಲಿ ಬರುತ್ತಿದ್ದ ಚಿತ್ರಗಳನ್ನು ನೋಡುತ್ತ ಕುಳಿತೆ. ಭುವಿ ಬಂದ ಹೊಡಿಸಿಕೊಂಡು ಹೋದ. ಹೊಸ ಹುಡುಗ ಬಂದ ಅವನ ಮೂತಿಗೂ ಚಚ್ಚಿದರವರು. ಗುಜರಾತಿನ ಅಕ್ಷರ ಬಂದ. ಅವನ ಅಕ್ಷರಗಳು ಮೂಡಲಿಲ್ಲ ವಿಕೆಟ್ ಹಾಳೆಯ ಮೇಲೆ. ಪಕ್ಕದೂರಿನ ಅಶ್ವಿನ್ ಬಂದ. ಮುಖ ಮೂತಿ ನೋಡದೆ ಬಾರಿಸಿದರವನಿಗೆ. ಹಾರ್ದಿಕ್ ಬಂದ ಹಾರೈಕೆ ಇಲ್ಲದೆ ಮರಳಿದ. ಯಾರಿಂದಲೂ ಸ್ಟಂಪ್ಗಳು ಅಲುಗಾಡಲಿಲ್ಲ. 16 ಓವರ್ಗಳಲ್ಲಿ ಮುಗಿಸಿದರವರು. ಸ್ಟೇಡಿಯಂಕ್ಕಿಂತ ಎತ್ತರವಾಗಿ ಕಾಣುತ್ತಲಿದ್ದರು ಇಂಗ್ಲೆಂಡಿನ ಬೀಸುಗಾರರು.

ಸೋತು ಸುಣ್ಣವಾಗಿದ್ದೆವು ನಾವು.
'ಕ್ರಿಕೆಟ್ ಎಂಬುದು ಮೋಸದಾಟ' ಎಂದುಕೊಳ್ಳುತ್ತೇನೆ ನಮ್ಮವರು ಸೋತಾಗಲೊಮ್ಮೆ. ಅದನ್ನು ನೋಡಲೇಬಾರದೆಂದು ನಿರ್ಧರಿಸುತ್ತೇನೆ ಅವರು ಪರದೆಯ ಮೇಲೆ ಮತ್ತೊಮ್ಮೆ ಮೂಡುವವರೆಗೆ. ಬಾಲ್ಯದಿಂದಲೂ ಅದರೊಂದಿಗೆ ಬೆಳೆದವರು ನಾವು. ದೆಹಲಿಯ ಬಿಶನ್ ಸಿಂಗ್ ಬೇಡಿ, ಕನ್ನಡದ ಚಂದ್ರಶೇಖರ, ಪ್ರಸನ್, ಮುಂಬೈಯ ಗವಾಸ್ಕರ, ಮಹಾರಾಷ್ಟ್ರದ ಏಕನಾಥ ಸೋಲ್ಕರ ನಮ್ಮ ಹೀರೋಗಳು ಆಗ. ಅವರ ಪಟಗಳು ನಮ್ಮ ಹಾಸ್ಟೆಲ್ ಗೋಡೆಯ ಮೇಲೆ. ಅಂದಿನಿಂದ ಕ್ರಿಕೆಟ್ ಒಂದು ಚಟವಾಗಿ ಪರಿಣಮಿಸಿದೆ ನನಗೆ.
ಆದರೆ ಅದೀಗ ಆಟವಾಗಿಲ್ಲ ಉಳಿದಿಲ್ಲ. ಅದೊಂದು ಜೂಜಾಟದ ಸರಕಾಗಿದೆ. ಹಣ ಗಳಿಸುವ ವಿಧಾನವಾಗಿದೆ. ರಾಜಕೀಯ ನಾಯಕರ ಇನ್ನೊಂದು ಉದ್ದಿಮೆಯಾಗಿದೆ.
ಹನ್ನೊಂದು ಜನ ಬುದ್ಧಿವಂತರು ನೂರು ಕೋಟಿ ಜನರನ್ನು ನಿತ್ಯ ಯಾಮಾರಿಸುತ್ತಲಿದ್ದಾರೆ. ಅದರೊಲ್ಲಬ್ಬವ ನಾನು.
-ಜಿ ಬಿ ಪಾಟೀಲ್