ದೇಸಿ ನುಡಿಗಟ್ಟು - ದಕ್ಷಿಣ ಕನ್ನಡ ಸೀಮೆ ಹವ್ಯಕ | ಬನಾರಿ ಹೇಳುವ ಕಾಡಿನ ಮಧ್ಯೆ ಇಪ್ಪ ಯಕ್ಷಗಾನ ಕಲಾಸಂಘ

ತಾಳಮದ್ದಳೆ ಕಾರ್ಯಕ್ರಮದಲ್ಲಿ ಶೇಣಿ ಭಟ್ಟರ ಎದುರು ಬನಾರಿ ಮಾವ ಅರ್ಥಕ್ಕೆ ಕೂದಿಪ್ಪಗ ಶೇಣಿಯವು ಹೇಳಿದವಡ, "ಈಗ ಇಲ್ಲಿಗೆ ಒಬ್ಬ ಬಂದು‌ ಸತ್ತ, ನೀನೂ ಅದೇ ವರ್ಗಕ್ಕೆ ಸೇರಿದವನೋ?" ಕೂಡ್ಲೆ ಪುಟ್ಟುಮಾವನ ಹೊಡೆಂದ ಬಂದ ಮಾತು, "ಬಂದವ ಬರುವಾಗಲೇ ಸತ್ತಿದ್ದ, ಬಂದು ಸತ್ತದ್ದಲ್ಲ, ನಾನು ಯಾರು ಎಂದು ಸರಿಯಾಗಿ ನೋಡಿದರೆ ಅರ್ಥವಾದೀತು..."

ಊರಿನ ಸುದ್ದಿ ಹೇಳುದು ಹೇಳ್ರೆ ಖುಷಿ ಅಪ್ಪದು. ಕಳೆದ ಸರ್ತಿ ಅಜ್ಜನ ಮನೆ ಅಜ್ಜಿಯ ಕಥೆ ಹೇಳಿತ್ತಿದ್ದೆ. ಆನು ಈ ಸರ್ತಿ ಈ ಅಂಕಣಲ್ಲಿಯುದೇ ಎನ್ನ ಅಜ್ಜನ ಮನೆಲಿ ಇದ್ದೆ ಅಷ್ಟೇ. ಎನ್ನ ಅಮ್ಮನ ಅಪ್ಪ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಹೇಳಿ. ಅವರ ಮೂಲ ಮನೆ‌ ಅಳಕೆ ಹೇಳುವ ಜಾಗೆ ಅಡ. ಆದರೆ ಅಜ್ಜ ಬೆಳದ್ದು ಕಾಸರಗೋಡಿನ ಕೀರಿಕ್ಕಾಡು.

ಸುಮಾರು ಎಂಬತ್ತು ವರುಷ ಹಿಂದೆ ಎನ್ನಜ್ಜ ಕೇರಳಲ್ಲಿಯೇ ಇಂದಿಂಗೂ ಇಪ್ಪ ದೇಲಂಪಾಡಿಯ ಬನಾರಿ ಹೇಳುವ ಜಾಗೆಲಿ ರೆಜ ತೋಟ ಮಾಡಿದವು. ತೋಟ, ಆಸ್ತಿ‌ ಹೇಳುದಕ್ಕಿಂತಲುದೇ ದೊಡ್ಡ‌ ಆಸ್ತಿ ಅದೇ ಜಾಗೆಲಿ ಮಾಡಿದವು. ಅದುವೇ‌ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ. ಆನು ಈ ಮಾತು ಸುಮ್ಮನೆ‌ ಮಾತಿಂಗೆ‌ ಹೇಳುದಲ್ಲ. ಬನಾರಿ ಹೇಳುವ ಕಾಡಿನ ಮಧ್ಯೆ ಯಕ್ಷಗಾನ ಕಲಿಕಾ ಕೇಂದ್ರ ಸ್ಥಾಪಿಸಿ, ಸಾವಿರಾರು‌ ವಿದ್ಯಾರ್ಥಿಗಳ ತಯಾರು ಮಾಡಿ, ಸಾಂಸ್ಕೃತಿಕ ‌ಜಗತ್ತಿಂಗೆ ಕೊಡುಗೆಯಾಗಿ ಕೊಡುದು ಸಣ್ಣ ಮಾತಲ್ಲನ್ನೇ? ಅದುದೇ, ಆ ಕಾಲಲ್ಲಿ ಅದೊಂದು‌ ಸಾಹಸವೇ‌ ಹೇಳಿ ಎನ್ನ ಮನಸ್ಸಿಂಗೆ‌ ಬಂದ ವಿಚಾರ.

Image

ಅಂತಿಪ್ಪ ಕಲಾಸಂಘವ ಈ‌ ದಿನಕ್ಕೂ ಎನ್ನ ಸೋದರಮಾವಂದಿರುದೇ ಮತ್ತು ಆ ಜಾಗೆಯ ಕೆಲ ಮುಖಂಡರು ಪೋಷಿಸಿಗೊಂಡು ಬತ್ತಾ ಇದ್ದವು. ಮುಳಿಮಾಡಿಲ್ಲಿ ಸುರುವಾದ‌ ಸಣ್ಣ ರಂಗಮಂದಿರ‌ ಇಂದಿಂಗೆ‌ ಅಂದಾಜು ಒಂದು ಸಾವಿರ ಜೆನ ಕೂಬ ಹಾಂಗಿಪ್ಪ ಆಡಿಟೋರಿಯಂ ಆದ್ದು ಇತಿಹಾಸ. ಈ ಯಕ್ಷಗಾನ ಕಲೆಲಿ ಮಿಂದೆದ್ದ ಜನಂಗಳ ಮಾತಾಡಿಶಿ ನೋಡಿರೆ ಅವರ ಜ್ಞಾನದ‌ ಮಟ್ಟ‌ ಅರಿವಾವ್ತು. ಈ ಕಲೆಯೇ ಹಾಂಗೆ. ವರ್ತಮಾನದೊಟ್ಟಿಂಗೆ‌ ಮುಖಾಮುಖಿಯಾಗಿಯೊಂಡು ಹೋಪಂತದ್ದು.

ಯಕ್ಷಗಾನಲ್ಲಿ ಎಂತ ಇಲ್ಲೆ? ಈ ಕಲೆಯ‌ ಒಂದು‌ ಸಣ್ಣ ಭಾಗವಾಗಿ ನಾವು ಒಂದು ದಿನ ಇದ್ದರುದೇ ರಾಗ, ತಾಳ, ಭಾವ, ಮಾತು, ಪುರಾಣದ ಅರಿವು, ನಿಲುವು‌ ಎಲ್ಲವೂ ತಕ್ಕಮಟ್ಟಿಂಗೆ ಗೊಂತಾಗಿಯೊಂಡು ಹೋವುತು. ಎನಗೆ ವೈಯಕ್ತಿಕವಾಗಿ ಯಕ್ಷಗಾನದ ಒಳಹೊಕ್ಕು ಗೊಂತಿಲ್ಲೆ. ಆದರೆ‌, ಈ ಕಲೆಗೆ ಹತ್ತರೆಯಾಗೇ ಸಣ್ಣಾರಭ್ಯ ಬೆಳೆದ್ದೆ. ಎನ್ನ ಅಪ್ಪ ಹಲವಾರು ತಾಳಮದ್ದಳೆಗಳ ಕಥೆ ಹೇಳುಗು. ಪ್ರಸಂಗ ಅಲ್ಲ. ತಾಳಮದ್ದಳೆ ಸಂದರ್ಭ ನಡೆವ ಕೆಲ ಕಲಾವಿದರ‌ ನಡುವಿನ ಸ್ವಾರಸ್ಯಕರ ಸಂಭಾಷಣೆಗೋ... ಹೀಂಗೆ. ಅದರ್ಲಿ, ಎನ್ನ‌ ಸೋದರಮಾವ ರಮಾನಂದ‌ ಬನಾರಿಯವರ ಬಗ್ಗೆ‌ ಎನ್ನ ಅಪ್ಪ ಹೇಳುವಾಗ ಎನಗೆ ಖುಷಿ. ಎಂತಕೆ ಹೇಳ್ರೆ, ಆ ಕಥೆಲಿ ಬಪ್ಪ ಹೀರೋ ಎನ್ನ‌ ಮಾವನೇ ಮತ್ತು ಅವರ ಎನಗೆ ಸರೀ ಗೊಂತಿದ್ದನ್ನೆ ಹೇಳಿ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಸೀಮೆ | ತಂಗಿ ಅಮ್ಮಾಯುನುಕ ಕೊಡದೆ ಉಳಿಸಿಕೊಂಡ ನಾಲ್ಹಾಣ

ಆನು ಹುಟ್ಟಿದ್ದೇ ಎನ್ನ‌ ಮಾವನ ಆಸ್ಪತ್ರೆಲಿ, ಎನ್ನ ಈ ಜಗತ್ತಿಲ್ಲಿ ಸುರು ನೋಡಿದ್ದೇ‌ ಪುಟ್ಟುಮಾವ. ಹಾಂಗಾಗಿಯೇ‌ ಪುಟ್ಟುಮಾವ ಹೇಳಿರೆ‌ ಎನಗೆ ರಜ ಹತ್ತರೆಯೇ. ಅದರೊಟ್ಟಿಂಗೆ‌, ಆನು ಈ ಮೊದಲು ಹೇಳಿದ‌ ಎನ್ನಜ್ಜಿಯ ತದ್ರೂಪು ಪುಟ್ಟುಮಾವ. ಡಾಕ್ಟರ್ ರಮಾನಂದ‌ ಬನಾರಿ ಹೇಳಿರೆ ಕರಾವಳಿಲಿ,‌ "ಈ ಹೆಸರು ಕೇಳಿ ಗೊಂತಿಲ್ಲೆ..." ಹೇಳಿ ಹೇಳುವವು ಕಡಮ್ಮೆ. ವೃತ್ತಿಲಿ ವೈದ್ಯ, ಕವಿ, ಅರ್ಥದಾರಿ. "ಮಾತಿನ‌ ಮಾಂತ್ರಿಕ ಶೇಣಿ ಗೋಪಾಲಕೃಷ್ಣ ಭಟ್ಟರ ಎದುರು ಸರಿಸಮಾನಕ್ಕೆ ಅರ್ಥ ಹೇಳುಗು ನಿನ್ನ‌ ಮಾವ," ಹೇಳಿ ಎನ್ನಪ್ಪ ಹೇಳ್ತವು. ಆ ಮಾತಿಂಗೆ ಅಪ್ಪು ಹೇಳುವ ಹಾಂಗೆ ಒಂದು‌ ಉದಾಹರಣೆಯನ್ನೂ‌ ಅಪ್ಪ ಹೇಳಿತ್ತಿದ್ದವು...

ಒಂದು ತಾಳಮದ್ದಳೆ ಕಾರ್ಯಕ್ರಮದಲ್ಲಿ ಶೇಣಿ ಭಟ್ಟರ ಎದುರು ಮಾವ ಅರ್ಥಕ್ಕೆ ಕೂದಿಪ್ಪಗ (ಏವ ಪ್ರಸಂಗ ಹೇಳುದು ಎನಗೆ ಗೊಂತಿಲ್ಲೆ) ಶೇಣಿಯವು ಹೇಳಿದವಡ, "ಈಗ ಇಲ್ಲಿಗೆ ಒಬ್ಬ ಬಂದು‌ ಸತ್ತ, ನೀನೂ ಅದೇ ವರ್ಗಕ್ಕೆ ಸೇರಿದವನೋ?" ಕೂಡ್ಲೆ ಪುಟ್ಟುಮಾವನ ಹೊಡೆಂದ ಬಂದ ಮಾತು, "ಬಂದವ ಬರುವಾಗಲೇ ಸತ್ತಿದ್ದ, ಅವ ಬಂದು ಸತ್ತದ್ದಲ್ಲ, ನಾನು ಯಾರು ಎಂದು ಸರಿಯಾಗಿ ನೋಡಿದರೆ ಅರ್ಥವಾದೀತು." ಹಾಂಗೆ ಉತ್ತರ ಬಕ್ಕು ಹೇಳಿ ಶೇಣಿಯವಕ್ಕೆ ಗೊಂತಿದ್ದತ್ತೋ ಏನೋ, "ಖಂಡಿತಾ ಗೊತ್ತಿದೆ, ನಿನ್ನ ಬಗ್ಗೆ ಸರಿಯಾಗಿಯೇ ಗೊತ್ತುಂಟು..." ಹೇಳಿ ಮುಂದಾಣ ಪದ್ಯಕ್ಕೆ ಭಾಗವತರಿಂಗೆ ಅನುವು ಮಾಡಿಕೊಟ್ಟವಡ.

Image
ಶೇಣಿ ಗೋಪಾಲಕೃಷ್ಣ ಭಟ್ಟರು ಮತ್ತು ಡಾಕ್ಟರ್ ರಮಾನಂದ‌ ಬನಾರಿ

ತಾಳಮದ್ದಳೆಯೇ ಹಾಂಗೆ, ಅಲ್ಲಿ ಅರ್ಥದಾರಿಗಳ ಸಮಯಪ್ರಜ್ಞೆ ಅವರಲ್ಲಿಪ್ಪ ಓದಿಂಗೆ ಮತ್ತೂ ಮೆರುಗು ಕೊಡ್ತು. ಶೇಣಿ ಗೋಪಾಲಕೃಷ್ಣ ಭಟ್ಟರು ಬನಾರಿಯ ಗುರುಮನೆ ಹೇಳುಗಡ. ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ ಅಚ್ಚುಕಟ್ಟಾಗಿ ನಡಕ್ಕೊಂಡು ಬತ್ತಾ ಇದ್ದು. ದಕ್ಷಿಣ ಕನ್ನಡದ ಹಲವಾರು ಯಕ್ಷಗಾನ ತಂಡಗಳಂದ ಇಲ್ಲಿ ಯಕ್ಷಗಾನ ಪ್ರಸ್ತುತಿ ನಡೆದ್ದು. ಕಲೆಯ ಬಗ್ಗೆ‌ ಆಸಕ್ತಿ ಇಪ್ಪ ಆರಿಂಗೇ ಆದರೂ ಇಲ್ಲಿ ಕಲೆಯ‌ ಬಗೆಗಿನ ಪಾಠ ಹೇಳಿಕೊಡ್ತವು. ಒಬ್ಬ ಹಳ್ಳಿಗಾಡಿನ ವ್ಯಕ್ತಿಗುದೇ‌ ಆನು ಯಕ್ಷಗಾನ ಪ್ರಸಂಗಲ್ಲಿ ಪಾತ್ರಧಾರಿ ಆಯೆಕ್ಕು ಹೇಳಿ ಅನ್ನಿಸಿ, ಕಲಿವದಿದ್ದನ್ನೇ‌? ಅಲ್ಲಿ ಕಲೆಗೆ ಸಿಕ್ಕ ನಿಜವಾದ ಬೆಲೆ. ಆ ದಾರಿಲಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ನಡೆತ್ತಾ ಇಪ್ಪದು ಸಂತೋಷದ ವಿಚಾರ. ಆಗಲೇ‌ ಆನು ಸುಮ್ಮನೆ‌ ಹೇಳಿದ್ದಲ್ಲ, ಅಜ್ಜ ಅಡಕ್ಕೆ ತೋಟಂದಲೂ ದೊಡ್ಡ ಆಸ್ತಿ ಮಾಡಿದ್ದವು ಹೇಳಿ!

ಮುಖ್ಯ ಚಿತ್ರ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಹಳೆಯ ಕಟ್ಟಡ ಮತ್ತು ಮಾಸ್ಟರ್ ವಿಷ್ಣು ಭಟ್
ನಿಮಗೆ ಏನು ಅನ್ನಿಸ್ತು?
0 ವೋಟ್