ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಅಪ್ಪ ಹಕ್ಕಿ ಹಾರ್ಸುದು ಇಡೀ ತದಡಿ ಊರಿಗೇ ಕೇಳ್ತಿತ್ತು

Paddy Cultivation

ಬತ್ತದ ಸಸಿಯೆಲ್ಲ ಸ್ವಲ್ಪ ದೊಡ್ಡ ಆಗ್ತಿದ್ದಂಗೇ ಕಿತ್ತು, ಹದ ಮಾಡಿಟ್ಟ ಗದ್ದೆಲಿ ಸಾಲಾಗಿ ನೆಡುದೇ ನೋಡುಕೆ ಕುಶೀ. ಜೋರು ಮಳಿಗೆ ಕಂಬಳಿ ಕೊಪ್ಪಿ ಸೂಡ್ಕಂಡಿ ಹಾಲಕ್ಕಿ ಹೆಣ್ಮಕ್ಳು ಸಣ್ಕೆ ನೆಗ್ಯಾಡ್ತ ಸಸಿ ನೆಡುದು, ಮುಂದ-ಮುಂದೆ ಅರಲಲ್ಲಿ ಶಬ್ದ ಮಾಡ್ತೆ ಹೆಜ್ಜೆ ಹಾಕು ಎರಡೆತ್ತಿನ ವಾರ್ಲ. "ಹೇರೆ... ಹೇರೆ..." ಹೇಳಿ ಎತ್ತಿಗೆ ದಣಿವಾಗ್ದಿದ್ದಂಗೇ ಹಾಡ್ತೇ ಹೋಗು ರೈತ ಎಲ್ಲಾನೂ ಮಜಾ

ಹದಾ ಮಳೆ ಹುಯ್ತಿದ್ದಂಗೇ ನಂಬದಿಗೆ ಈಗ ಜೋರು ಗದ್ದೆ ನೆಟ್ಟಿ. ಅರ್ಲು ತುಂಬಿದ ಗದ್ದೆಗೆ ವಾರ್ಲ್ ಕಟ್ಕಂಡು, "ಹೇರೇ... ಹೇರೇ..." ಹೇಳಿ ಹೂಡುದು ಬೆಟ್ಟಕ್ಕೆ ಬಡದು ಇಡೀ ಬಯ್ಲಿಗೆ ಪ್ರತಿದನಿ ಆತದೆ. ಈಗೇನಾರೂ ನೀವು ಕರಾವಳಿಗೆ ಬಂದ್ರೆ ಎಲ್ಲ ಗದ್ದೆ ಬಯ್ಲೂ ಒನ್ನಮ್ನಿ ಸ್ವರ್ಗ.

ಈ ಬತ್ತ ಬಿತ್ತು ಸಡಗರ ರೈತನ ಮನಿಲೇ ನೋಡ್ಬೇಕು. ಜೂನ್ ಮೊದಲ ವಾರನೇ ಭತ್ತದ ಬೀಜ ತಂದಿ, ಆರಿಸಿ ಗೋಣಿಚೀಲದಲ್ಲಿ ತುಂಬಿ, ಹಗ್ಗ ಕಟ್ಟಿ ಬಾವಿವೊಳ್ಗೆ ಇಳಿಸಿ ಇಡತ್ರು. ಒಂದು ವಾರದೊಳ್ಗೆ ಎತ್ತಿದ್ರೆ ಅದೆಲ್ಲ ಸಮಾ ಮೊಳಕಿ ಒಡದಿರ್ತದೆ. ಹಂಗೇ ಸರೀ ಮಾಡಿ ಹೂಡಿಟ್ಟ ಗದ್ದಿಲಿ, ಆ ಬೀಜ ತಕಂಡೋಗಿ ಮುಟ್ಟಿಲಿ ತುಂಬಿ ಇಡೀ ಗದ್ದಿಗೆ ಮುಷ್ಟಿಲಿ ಹಿಡಿದು ಎಲ್ಲಾ ಬದಿಗೂ ತೋಕುದು.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಸುಕ್ಕಿನುಂಡಿಗೆ ಇಪ್ಪು ಡಿಮ್ಯಾಂಡ್ ಯಾವತ್ತಿಗೂ ಕಮ್ಮಿ ಆತಿಲ್ಲ

ನಾವೆಲ್ಲ ಸಣ್ಣೋರಿದ್ದಾಗ ಈ ಬೀಜ ಬಿತ್ತಿದ್ಮೇಲೆ ಹಕ್ಕಿ ತಿಂದ್ಕಂಡಿ ಹೋಗುಕಿಲ್ಲ ಹೇಳಿ ಬೆಳಗಿಂದ ಸಂಜಿವರ್ಗೂ ಒಬ್ರಲ್ಲ‌ ಒಬ್ರು ಕಾಯುದಾಗಿತ್ತು. ನಮ್ಮ ಅಪ್ಪ ಬೆಳಗಾಗೆ ಆರು ಗಂಟಿಗೇ ಎದ್ಕಂಡಿ‌ ಹೋಗಿ, "ಹೇ... ಹೇ..." ಅಂದಿ ಹಕ್ಕಿ ಹಾರ್ಸುದು ಇಡೀ ತದಡಿ ಊರಿಗೇ ಕೇಳ್ತಿತ್ತು.

ಕಡಿಗೆಲ್ಲ ಶಾಲಿಗೆ ಹೋಗುವರಿಗೂ ನಮ್ದೇ ಪಾಳಿ. ನಮಗಂತೂ ಗದ್ದಿಲಿ ಬಾಳ ಕೆಲಸ ಇರ್ತಿತ್ತು. ಹಕ್ಕಿ ಒಂದು ಬದಿಗೆ ತಿಂದ್ಕಂಡಿ ಹೋತೆ ಇರುದು; ನಾವೊಂದು ಬದಿಗೆ ಗದ್ದೆಲಿ ಹೊಂಡ ತೋಡಿ ಸಣ್ಣ ಮೀನಿನ ಮರಿ ಬಿಡುದು, ಗುಳ್ಳೆ ಹೆಕ್ಕುದು, ದೋಣಿ ಮಾಡಿ ಹರ್ದೋಗು ನೀರಲ್ಲಿ ಬಿಡುದು ಮಾಡ್ತೇ ಇರುದಾಗಿತ್ತು. "ಮಳ್ಳ ಮಕ್ಳಾ, ಅಲ್ ನೋಡ್ರಾ... ಗುಬ್ಬಿ ಬೀಜ ಒಟ್ಟೂ ತಿಂದ್ಕಂಡೋಯ್ತು. ಹೇಳ್ಕೊಡ್ತಿ ನಿಮ್ಮಪ್ಪಗೆ..." - ಅಂದಿ ಯಾರರೂ ದೊಡ್ಡೋರು ಬೈದ್ರಷ್ಟೇ ನಮ್ಮ ಗದ್ದಿ ಬದಿಗೆ ಓಡೋಗುದಾಗಿತ್ತು.

ಬೀಜ ಬಿತ್ತಿ ಒಂದು ಹತ್ತಾರು ದಿವ್ಸ ಆದ್ಮೇಲೆ ನೋಡ್ಬೇಕು. ಗಾಳಿಗೆ ಚಂದಕ್ಕೆ ತೇಲಸ್ಕಂಡಿ ಹೋಗ್ವಂತ ಚಂದ ಹಸಿರು ಬಣ್ಣದ ಸಸಿ ರಾಶಿ. ವೆಲ್ವೆಟ್ ಬಟ್ಟೆ ಕಂಡಂಗೇಯಾ... ಬಾರೀ ಚಂದ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಪ್ರಾಂತ್ಯ | ನಾ ಹೇಳಿದ್ ಕೂಡ್ಲೇ ನೀವು ರೊಟ್ಟಿ ಮಾಡಾಕ ಸಾಧ್ಯಿಲ್ಲ. ಆದ್ರೂ...

ಬತ್ತದ ಸಸಿಯೆಲ್ಲ ಸ್ವಲ್ಪ ದೊಡ್ಡ ಆಗ್ತಿದ್ದಂಗೇ ಅದನ್ನು ಕಿತ್ತು, ಬೇರೆ ಹದ ಮಾಡಿಟ್ಟ ಗದ್ದೆಲಿ ಸಾಲಾಗಿ ನೆಡುದೇ ನೋಡುಕೆ ಬಾಳ ಕುಶೀ ಅನಿಸ್ತದೆ. ಜೋರು ಮಳಿಗೆ ಕಂಬಳಿ ಕೊಪ್ಪಿ ಸೂಡ್ಕಂಡಿ ಹಾಲಕ್ಕಿ ಹೆಣ್ಮಕ್ಳು ಸಣ್ಕೆ ನೆಗ್ಯಾಡ್ತ ಸಸಿ ನೆಡುದು, ಮುಂದ-ಮುಂದೆ ಅರಲಲ್ಲಿ ಶಬ್ದ ಮಾಡ್ತೆ ಹೆಜ್ಜೆ ಹಾಕು ಎರಡೆತ್ತಿನ ವಾರ್ಲ. "ಹೇರೆ... ಹೇರೆ..." ಹೇಳಿ ಎತ್ತಿಗೆ ದಣಿವಾಗ್ದಿದ್ದಂಗೇ ಹಾಡ್ತೇ ಹೋಗು ರೈತ ಎಲ್ಲಾನೂ ಮಜಾ ಅನಿಸ್ತದೆ. ಕೆಲಸ ಮಾಡು ಹೆಂಗಸರ ಹಿಂದೆ ಮತ್ತೆ ವಾರ್ಲದ ಹಿಂದೇ ಕಾಲೇಜು ಹುಡಗ್ರಂಗೇ ಆಚೀಚೆ ವಾರೇ ಹೆಜ್ಜೆ ಹಾಕ್ತೆ ಹುಳ ಹೆಕ್ಕ ತಿನ್ನು ಕೊಕ್ಕಾನಕ್ಕಿ ದಂಡು ನೋಡ್ಬೇಕು.

ಗದ್ದೆ ಕೆಲಸ ಮುಗ್ಸಿ ಮಳೆಲಿ ಅದ್ದಕಂಡಿ ಮನಿಗೆ ಬಂದ್ರೆ ಹಂಡಿ ತುಂಬ ಹದಾ ಬಿಸಿನೀರು. ತಲಿ ತುಂಬ ಕಾದ ನೀರು ಹೊಯ್ಕಂಡಿ, ಬಿಸಿ-ಬಿಸಿ ಬಳಚಿನ ಸಾರು, ಕುಚ್ಚಕ್ಕಿ ಅನ್ನ ಉಂಡ್ಕಂಡಿ, ಬಿಸಿ ರಾಗಿ ಅಂಬ್ಲಿ ಕುಡಿತಿದ್ರೆ... ಪರಮಾತ್ಮಾ ಇದಕ್ಕಿಂತ ಸುಖ ಎಲ್ಲೂ ಇಡ್ಲಿಲ್ಲ ಅನಿಸ್ತದೆ.

ನಿಮಗೆ ಏನು ಅನ್ನಿಸ್ತು?
2 ವೋಟ್