ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಮಳಿಗಾಲ್ದಲ್ಲಿ ಜೀವ ಕಳಕಂಡರ್ ಮನಿಯವ್ರ ಕಣ್ಣೀರ್ ಈ ಮಳಿಗಿಂತ ಚೂರ್ ಹೆಚ್ಚೇ

Coastal Rain

ಕಾರ ತಿಂಗ್ಳ್ ಕಳ್ದ್ ಆಸಾಡಿ ತಿಂಗ್ಳ್ ಸುರು ಆಪುಕು ಮಳಿ ಇನ್ನೂ ಜೋರ್ ಆತ್. ನೀಲಿ ಆಕಾಶಕ್ಕೆ ಕಪ್ಪ ದಪ್ಪ ವಲ್ಲಿ ಹೊಯ್ಸದಂಗೆ ಮೂಟಿ ಕಂಡಂಗಿಂದ ಕರಿ ಮೋಡ ಕೌಂಚಕಂಡ ಇರತ್. ಒಂದ್ ಗಾಳಿ ಬೀಸಿ ಹೊಪುಕು ಹೊಯ್ಯುಕೆ ಸುರು ಆದ್ ಮಳಿ ಐದಾರ್ ಗಂಟೆ ಪುರಸೊತ್ತೇ ಕೊಡುದಿಲ್ಲ. ಈ ಆಸಾಡಿ ಓಡ್ರ ಸುರು ಆರೇ ಇಡೀ ಊರಿಗೆ ಜಂಬ್ ನೆರಿ. ಎಲ್ಲಾ ಕಡೆ ಕೆಸರ್ ನೀರ್ ಓಕಳಿ

ಕಾರ್ ತಿಂಗ್ಳಂಗೆ ಮೊದಲ ಮಳಿಹನಿಗಳ ಮಣ್ಣಿಗೆ ಬೀಳೂಕು ಬಪ್ಪು ವಿಶೇಷವಾದ ಮಣ್ಣಿನ ಪರಿಮಳ, ಬೀಸು ಗಾಳಿ ತಪ್ಪು ತಂಪ ಉನ್ಮಾದ, ಜೋರ್ ಗುಡುಗ್ - ಸಿಡಲ್ ಒಟ್ಟಿಗೆ ಸುರುವಾದ ಮಳಿಗೆ ನಾವ್ ಬ್ಯಾಸಿಗಿ ತಿಂಗ್ಳ್ ಶೆಕಿನಾ ಮರಿತ್. ಸುರು ಆದ್ ಮಳಿ ಹಿಡ್ದ್ ಒಂದ್ ಎರಡ್ ಗಂಟಿ ಸಮಾ ಹೊಡ್ದ್ ಮನಿ ಹಂಚಿನ ಮಾಡ್, ರಸ್ತಿ, ಗೆದ್ದಿ, ತೋಟನೆಲ್ಲಾ ತೊಳ್ದ್ ಚೊಕ್ಕ ಮಾಡಿ ಬಿಡತ್. ಮಳಿ ಜೋರ್ ಆತೆ-ಆತೆ ಬ್ಯಾಸಿಗಿ ತಿಂಗ್ಳಂಗೆ ತಳ ಮುಟ್ಟದ್ ಬಾಮಿ ನೀರ್ ಮೇಲೆ ಬಪ್ಪುಕ್ ಸುರು ಆತ್. ಹೊಳಿ, ಕೆರಿ, ತೋಟದಂಗೆ ಇಪ್ಪು ತೋಡಂಗೆಲ್ಲಾ ನೀರ್ ಉಕ್ಕಿ ಹರಿತ್. ಸಾಗುವಳಿ ಮಾಡುವರ್ ಬ್ಯಾಸಗಿ ತಿಂಗಳಂಗೆ ಗೆದ್ದೆಂಗೆ ಹಾಕದ ಸಾರ, ಗೊಬ್ಬರ, ಸುಡ್ ಮಣ್ ಮಳಿ ನೀರ್ ಒಟ್ಟಿಗೆ ಸೇರಿ ಗೆದ್ದಿ ನಾಕೂ ಬದಿಗೆ ಹರಡಿ ಹೊತ್. ಅಷ್ಟಹೊತ್ತಿಗೆ ಗೆದ್ದಿನೆಲ್ಲಾ ಹೂಡಿ, ಗೆದ್ದಿ ಅಂಚಕಟ್ಟಿಗೆ ಮಣ್ ಹಾಕಿ ಎರಸಿ ನೀರ್ ನಿಲ್ಸಿ ಮಾಡಿ, ಇಟ್ ಅಗಿ ತಂದ ಹೆಂಗ್ಸರನ್ನಾ ಕರ್ಸಿ ನಟ್ಟಿ ಮಾಡ್ಸಿ ಬಿಟ್ರೆ ಒಂದ್ ಹಂತದ ಸಾಗೋಳಿ ಕೆಲ್ಸ್ ಆತ್ ಬಿಡತ್.

ಗುಡುಗ್ - ಸಿಡಲ್ ಮಳಿ ಬಪ್ಪುಕು ನಮ್ ಬದಿ ಹಾಡಿ ಬದೆಂಗೆ, ಗುಡ್ಡಿ ಬದೆಂಗೆ ಆಣಬ್ ಏಳತ್, ಅದನ್ನಾ ಹುಡುಕಿ ಹೆಕ್ಕ ಬಂದ ಸುಲ್ದ ಪದಾರ್ಥ ಮಾಡ್ಕಂಡ್ ದೋಸಿ ಒಟ್ಟಿಗೆ ಹಾಯ್ಕಂಡ್ ತಿಂಬುದ್ ಒಂದ್ನಮುನಿ ಖುಷಿ. ಆರೇ ಕೆಸುವಿನೆಲೆ ಕೊಯ್ಕಂಡ ಬಂದ ಕೆಂಪ್ ಮಸಾಲಿ ಅರ್ದ ಪತ್ರೊಡೆ ಮಾಡ್ಕಂಡ್ ತಿಂಬುದ್ ಇನ್ನೊಂದ್ ಖುಷಿ. ಮಳಿ ಬೀಳೂಕು ಭೂಮಿಗೆ ಮರುಜೀವ ಬಂದಂಗೆ ಎಲ್ಲಾ ಕಡೆ ಹಸರ ಹುಲ್ಲು ಹುಟ್ಕಂಡ ಇಡೀ ಪ್ರಕೃತಿಯೇ ಹಸರ ಸಿಂಗಾರ ಮಾಡ್ಕಂಡಿರತ್. ಒಂದ್ ಚಣ್ ಬಿಸಲ ಬಿದ್ರೆ ಸಾಕ್, ಮಳಿ ನೀರ್ ಬಿದ್ದದ್ ಮರದ ಎಲೆ, ಹಸರ ಪಾಚಿ ಕಟ್ಟದ್ ಹೆಂಚಿನ ಮಾಡ ಎಲ್ಲಾ ಮಿರ-ಮಿರ ಹೊಳಿತೋ. ಕಾಂಬುಕೆ ಎಲ್ಲಾ ಹೊಸ್ತ್ ಅಂಬು ಅನುಭವ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಅಪ್ಪ ಹಕ್ಕಿ ಹಾರ್ಸುದು ಇಡೀ ತದಡಿ ಊರಿಗೇ ಕೇಳ್ತಿತ್ತು

ವರ್ಷಕ್ಕೂ ಹಾಂಗೇ ಆಪ್ದ ರೋಹಿಣಿ ಮತ್ತೆ ಮೃಗಶಿರಾ ನಕ್ಷತ್ರದ ಮಳಿ ಹಿಡ್ಕಂಡ್ರೆ ಒಂದ್ ಘಳಗಿ ಹೊಳ ಆತಿಲ್ಲ. ಅದ ಯಾವ ನಮೂನಿದ ಅಂದ್ಹೇಳಿ ಹೇಳುಕೆಡ್ಯಾ. ಬೆಳಗಾತಿಂದ ಸಾಯಂಕಾಲದವರೆಗೂ ಪೂರಾ ಕಸ್ಲಿ ವಾತಾವರಣವೇ ಕಂಡ ಕಂಡ ಮೈಯಂಗೆ ಜಡ ಬಂದಿರತ್. ವಾರಗಟ್ಲೇ ಸೂರ್ಯನ ಮುಖವೇ ಕಾಂತಿಲ್ಲ ನಾವ್. ಮನಿಯಿಂದ ಹೊರಗೆ ಹೋಪುಕೆ ಮನ್ಸ್ ಆತಿಲ್ಲ. ತೆಂಗಿನಕಟ್ಟೆಂಗೆಲ್ಲಾ ವಾರಗಟ್ಲೇ ನೀರ್ ನಿಂತ್ಕಂಡ್ ಇರತ್. ತೋಟದಂಗೆ ಜಡ್ಡೆಲ್ಲಾ ಗೋಂಸ್ರ್ ಕಾಲ ಹಾಕುಕೆಡ್ಯಾ. ಮಕ್ಕಳ್ ಬೆಳಗಾತ ಶಾಲಿ ಹೋಪ್ಸಮೆಗೆ ಈ ಮಳಿ ಬಂದ ಭಂಗ ಕೊಡತ್. ನಾವೆಲ್ಲ ಶಾಲಿಗೆ ಹೋಪಂಗೆ ಮೈ ಪೂರ ಚಂಡಿ ಗೊಬ್ರ ಆತಿದಿತ್ ಆರೂ, ಶಾಲಿ ಚೀಲ ಚಂಡಿ ಆಪುಕಾಗ ಅಂದ್ಹೇಳಿ ಎದಿಗೆ ಚಂಚಕಂಡ ನೆಡ್ಕ ಹೊತಿದಿತ್.

ಕಾರ ತಿಂಗ್ಳ್ ಕಳ್ದ್ ಆಸಾಡಿ ತಿಂಗ್ಳ್ ಸುರು ಆಪುಕು ಮಳಿ ಇನ್ನೂ ಜೋರ್ ಆತ್. ನೀಲಿ ಆಕಾಶಕ್ಕೆ ಕಪ್ಪ ದಪ್ಪ ವಲ್ಲಿ ಹೊಯ್ಸದಂಗೆ ಮೂಟಿ ಕಂಡಂಗಿಂದ ಕರಿ ಮೋಡ ಕೌಂಚಕಂಡ ಇರತ್. ಒಂದ್ ಗಾಳಿ ಬೀಸಿ ಹೊಪುಕು ಹೊಯ್ಯುಕೆ ಸುರು ಆದ್ ಮಳಿ ಐದಾರ್ ಗಂಟೆ ಪುರಸೊತ್ತೇ ಕೊಡುದಿಲ್ಲ. ಈ ಆಸಾಡಿ ಓಡ್ರ ಸುರು ಆರೇ ಇಡೀ ಊರಿಗೆ ಜಂಬ್ ನೆರಿ. ಎಲ್ಲಾ ಕಡೆ ಕೆಸರ್ ನೀರ್ ಓಕಳಿ. ಕೆಳ್ ಬೈಲ್ ಬದಿ ಮನಿಯಾರೆ ಕತಿ ಕೈದೆ. ಮನಿಯೊಳಗೆ ನೀರ್ ನುಗ್ಗತ್. ಮಳಿ ಜೋರಾಯ್ ಹಿವಾರ್ ಏಳೂಕು ಶಾಲಿ ಮಕ್ಕಳಿಗೆಲ್ಲಾ ರಜಿ ಕೊಡ್ ಬಿಡ್ತ್ರ. ಈ ಮಳಿಗೆ ಹೆಚ್ಚಿನರ ಮನಿ ನಟ್ಟಿ ಮಾಡದ್ ಗೆದ್ದಿ ನೆರೆಂಗೇ ಮುಳಗಿ ಹೊಯ್ ಇರತ್ ವಾರಗಟ್ಲೇ ನೆರಿ ಇಳಿತೇ ಇಲ್ಲ. ದನದ ಕೊಟ್ಟಿಗಿಗೆ, ಸೌದಿ ಕೊಟ್ಟಿಗಿಗೆ ಕಟ್ಟದ್ ಜಿಡ್ಕಿ ಎಲ್ಲಾ ಕಳಚಿ ಬಂದ್ ಹಾಳಾಯ್ ಹೊಯಿರತ್. ಅದ್ನ ಸಮ ಮಾಡು ಬಾಬೇ ಅಲ್ಲ ಕಾಣಿ. ಪುನರ್ವಸು ಮತ್ತೆ ಪುಷ್ಯ ನಕ್ಷತ್ರದ ಮಳಿ ಹೊಡ್ತಾ ಬೀಗು ಇರತ್ ಅಂದ್ಹೇಳಿ ನನ್ನ ಅಜ್ಜಿ ಹೇಳ್ತೀದಿರ್.

ಹೀಂಗೆ ಜೋರ್ ಗಾಳಿ ಮಳಿಗೆ ನಮ್ ಬದೆಂಗೆ ಪ್ರತಿ ಸಲ ಸುಮಾರ್ ಮನಿ, ಮರ, ಕಟ್ಟಡಗಳೆಲ್ಲಾ ಕುಸ್ದ ಬೀಳ್ತೋ. ಈ ರಣ ಮಳೆಂಗೆ ಮನಿ ಕಳಕಂಡರ್ ಕಷ್ಟ ಕೇಂಬುಕೆಡ್ಯಾ. ಅಷ್ಟೇ ಅಲ್ಲಾ ಹೊಳಿ ಬದೆಂಗೆ ಈಜುಕೆ ಹೊಯೋ, ಆಯ ತಪ್ಪಿ ಬಿದ್ದೋ, ಸಿಡಲ ಹೊಡ್ದೋ, ಕರೆಂಟ್ ಶಾಕ್ ಹೊಡ್ದೋ ತಮ್ಮ ಗಂಡನ್ನೋ, ತಮ್ಮನ್ನೋ, ಮಗನ್ನೋ ಕಳ್ಕಂಡರ್ ಕಣ್ಣೀರ್ ಈ ಮಳಿಗಿಂತ ಚೂರ್ ಹೆಚ್ಚೇ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಪ್ರಾಂತ್ಯ | ಗಾಂಧೀ ತಾತುನು ಕಟ್ಟೆ ಪುರಾಣಮು

ಕಾರ ತಿಂಗ್ಳಂಗೆ ಎರಡ ಮಳಿ ಆಪ್ಕು ಕಡಲ ನೀರ್ ಕೆಂಪ್ ಬಣ್ಣ ಆಯಿರತ್. ಹೆಚ್ಚುಕಮ್ಮಿ ಕೆಸರ್ ನೀರ್ ಓಕುಳಿಯೇ ಅನ್ಲಕ್ಕ. ಆಸಾಡಿ ತಿಂಗ್ಳಂಗೆ ಕಡಲ ಅಬ್ಬರ ಇನ್ನೂ ಜೋರ್ ಆತ್. ನೀರ್ ಜಾಸ್ತಿ ಆದ್ದೇ ಸೈ ಅಲೆಗಳ ರಭಸ ಹೆಚ್ಚಾಯ್, ಕಡಲ "ಗೌವ್..." ಅಂದ್ಹೇಳಿ ಕೂಗುದ್ ಹತ್ತ್ ಕಿಲೋಮೀಟರವರೆಗೂ ಕೇಂತತ್. ಕಡಲ ಅದರ ಮಾಮುಲಿ ಗಡಿ ದಾಟಿ ಪೂರ್ತಿ ಮುಂದ ಬಂದಿರತ್. ಈ ರಣ ಮಳೆಂಗೆ ಕಡಲ ಬದೆಂಗೆ ಮನಿ ಮಾಡ್ಕಂಡರ್ ಇಪ್ಪುದೇ ಕಷ್ಟ. ಕಡಲ ಬದಿಯಿಂದ ಹಿವಾರ್ ಬೀಸ್ತಿರತ್. ಮನಿಗೋಡಿಗೆ ಹಿವಾರ್ ಹೆಚ್ಚಾಯ್ ಗೋಡಿ ಕುಸಿದೇ ಇರ್ಲಿ ಅಂದ್ಹೇಳಿ ಮನಿ ಗೋಡಿಗೆಲ್ಲ ಹನೆಗರಿ ಅಲ್ದೀರೇ ಮಡ್ಲ ಹೆಡಿ ಜಿಡ್ಕಿ ಕಟ್ಟಿ ಬೆಚ್ಚತ್ರ.

ಕಡಲ ತನ್ ಒಡಲಂಗೆ ತನಗೆ ಬ್ಯಾಡದೇ ಇಪ್ಪುದ್ ಯಾವುದನ್ನೂ ಬೆಚ್ಕಂತಿಲ್ಲಾ ಕಾಣಿ. ನಾವ್ ಬಿಸಾಕದ್ ಕಸ, ಚೀಲ, ಚಪ್ಪಲ್, ಬ್ಯಾಗ್, ಪ್ಲಾಸ್ಟಿಕ್ ಬಾಟಲಿ... ಅದ್-ಇದ್ ಎಲ್ಲಾ ಕಡಲ ವಾಪಸ್ ತಂದ ಬಿಸಾಡತ್. ಮಳೆಗಾಲದಂಗೆ ಕಡಲ ಬದಿ ಹೊಯ್ ಕಂಡ್ರೆ ಗೊತಾತ್ ಕಾಣಿ - ಕಡಲ ವಾಪಸ್ ಕೊಟ್ಟ ಕಸದ ರಾಶಿ ಎಷ್ಟ ಇತ್ ಅಂದ್ಹೇಳಿ. ಕಡಲಿನ ಗುಣವೇ ಹಾಂಗೇ ಏನೋ; ಪ್ರತಿ ಮಳೆಗಾಲದಂಗೆ ನಾವ ಬ್ಯಾಡ ಅಂದ್ಹೇಳಿ ಬಿಸಾಡದ್ ವಸ್ತುಗಳನ್ನಾ ತನಗೂ ಬ್ಯಾಡ ಅಂದ್ಹೇಳಿ ವಾಪಸ್ ಬಿಸಾಡಿ ಅಬ್ಬರ ಮಾಡಿ, ತನ್ನ ಸಿಟ್ಟನ್ನಾ ನಮಗೆ ತೋರ್ಸಿ ಬಿಡತ್.

ನಿಮಗೆ ಏನು ಅನ್ನಿಸ್ತು?
5 ವೋಟ್