ದೇಸಿ ನುಡಿಗಟ್ಟು - ಮಾಲೂರು ಸೀಮೆ | ಸಿಂತಮಾನು ತೋಪು ಮತ್ತು ಉಬೇದುಲ್ಲಾನ 'ಜೈ ಕರ್ನಾಟಕ'

ಒಂದ್ಕಿತ ಉಬೇದುಲ್ಲನು ಗೋಣಿ-ಗೋಣಿ ದುಡ್ಡು ದುಡೀತ್ತಿದ್ದ 'ಜೈ ಕರ್ನಾಟಕ' ಬುಟ್ಟು, ಹುಡುಗಿ ಕೂಡ ಪರಾರಿ ಆಗಿಬಿಟ್ಟ. ಜನಗಳು, "ಅಯ್ಯೊಯ್ಯೋ! ಎಂತ ಕೆಲ್ಸಾ ಆಗಿಬಿಡ್ತು! ಉಬೇದುಲ್ಲನ ಬಾಯಸ್ಕೂಪ್ ಮತ್ತೆ ಸಿಕ್ಕಾದ!" ಅಂತ ಪೇಚಾಡಿಬಿಟ್ರು. ಅವರು ಓಡಿಹೋದ್ದು ಜನಗುಳುಕ ಬೇಜಾರ್ ಆಗಿಲ್ಲೆ; ಬಾಯಸ್ಕೂಪ್ ಹೋಯ್ತಲ್ಲ ಅಂತ ಶಾನೆ ಪರಿಶ್ನೆ ಪಟ್ಟುಬಿಟ್ರು!

ಜಯಮಂಗಳ ಊರಾಗ ಒರು ಪಾತ ಸಿಂತಮಾನು ತೋಪು ಇತ್ತು. ಆ ತಾವು ಹುಟ್ಟಿ, ಬೆಳೆದು, ನಾಶವಾದ ಒರು ಟೆಂಟ್ ಕತೆ ಇದು.

ಈ ಸುತ್ತ ಪಲ್ಲೆಗಲಿಗೆಲ್ಲ ಉಬೇದುಲ್ನು ಚೆನ್ನಾಗಿ ಗೊತ್ತು. ಅವ್ನುಕ ಅಪ್ನು, ಅಮ್ಮನು ಅಂತ ಯಾರೂ ಇರಲಿಲ್ಲ. ಅವರಿವರ ಮನಿಗಳಾಗ ಅದು ಇದು ಮಾಡಿಕೊಂಡು, ಅವರಾಕುದ್ದ ತಿಂದಕಂಡು ರಾಮಾ ಅಂತ ಇದ್ದನು.

ಚಿನ್ನ ವಯಸ್ಸಲ್ಲಿ ಚಿನ್ನ-ಚಿನ್ನ ಚೋರಿ ಪಂಗ ಮಾಡ್ತಾ ಇದ್ದನು. ಜನುಂಗ ಅವನ್ನ ಸರೀಗ ದೊಂಚಿ ತೆಲಿವಿ ಬರೋಮಟ್ಟು ಮಾಡಿದ್ರು. ಆನೇಕೂ ಅವ್ನು ದೊಂಗಾಟ ಬಿಟ್ನಿಲ್ಲದೆ ತೆಲಿವಿತ್ಯಾಟ ಕಾನಿಸೋನು.

ಒರ್ಕಿತಾ ತ್ಯಾಂಗಾಯಿ ದೊಂಗತನದಲ್ಲಿ ಪಳ್ಳಿಗ್ರು ಕೈಲಿ ಸರೀಗ ತಿಂದುಬಿಟ್ಟ. ತರ್ವಾತ ಏನಾಯ್ತೋ ತೆರೀದು. ಸಡನ್ಆ ಪಲ್ಲೆನಾ ಬಿಟ್ಬಿಟ್ಟ.

ವರ್ಶುಗುಳ ಮ್ಯಾಲೆ ಒರ್ಕಿತಾ ಸಡನ್ಆ ತಿರುಮಿ ಪಲ್ಲಿಕಿ ಬಂದ. ಜನಗುಳು, "ಎನ್ನಪ್ಪಾ ಉಬೇದು ಇದು?" ಅಂತ ಕೇಳಿದ್ರು. ಅವ್ನು ಅದಕ ಏನೂ ಜವಾಬು ಕೊಡದೆ, "ಮೀರೂ ಒದ್ದು, ಮೀ ಸಾಹವಾಸಲೂ ವದ್ದು..." ಅನ್ನೋಅಟ್ಲು ಇದ್ದುಬಿಟ್ಟ.

ಜನುಂಗಾ ಕೂಡ ಇದು 'ಐಲ್ ಪಾರ್ಟಿ ಪನಿ' ಅಂದಕೊಂಡು ಕ್ಯಾರೆ ಮಾಡದೆ ಇದ್ದುಬಿಟ್ರು.

Image
ಕಲಾಕೃತಿ ಕೃಪೆ: ಕೃಸ್ಟಲ್

ಅಪ್ರು ನೋಡ್ತಾರೆ... ಉಬೇದುಲ್ಲಾ, ಕುಡಿಯಾನ್ರು ವೆಂಕಟಪ್ನು ಸಿಂತುಮಾನು ತೋಪುನಾ ಖರೀದಿಗೆ ತಕ್ಕೊಂಡ ಅಂತ ವಾರ್ತೆ ಎಲ್ಲ ತೊಟ್ಟು ಒಡಾಡ್ತದೆ. ಎಂಗಿನಿಂಚಿ ಬಂತು ಇಷ್ಟು ಪೈಸಾ ಅವನಿಗೆ? ಅಂತ ಮರ್ಮು ಎಲ್ಲ್ರುಕೂ!

ಕೆಲವರಂತೂ ಸೆಟ್ಟಿಗೊಳ್ಳ ವೀದಿನಾಗ ಇರೋ ವೆಂಟ್ರೋಣು ಸಾಮಿ ಕೊಯಿಲ್ನಾಗ ಆದ ಸಾಮಿ ಬಂಗಾರದ ತುಡುಗು ಇವಂದೇ ಅಂತ ಹೇಳೋರು. ಅದು ಆಮ, ಹಂಗೆ ಆಗಿರೋದು ಅಂತ ತಾವೇ ಪಾತ ಮಾದರಿ ಒಂದು ಕತೆ ಹೇಳೋರು.

ಅಮಾಸೆ ದಿನು ಉಬೇದುಲ್ನು ಸೆಟ್ಟಿಗೊಳ್ಳ ವೀದಿಗೆ ಹೋಗಿ, ಯಾರೂ ಇಲ್ಲದ ಟಯಾನು ನೋಡಿ, ವೆಂಟ್ರೋಣು ಸಾಮಿ ದಾಗೀನಕ್ಕೆ ಕೈ ಹಾಕಿದಾನೆ. ದಾಗೀನ ಕಾವಲಿಗಿದ್ದ ಸಿವ್ನಾಗನು ಎಲ್ಲಿತ್ತೋ ಸರ್ರನೆ ಅಟಕಾಯಿಸಿಕೊಂಡ. ಇವ್ನುಕ ದಿಕ್ಕು ತಪ್ಪಿತು. ಆದ್ರೂ, ಬುರ್ರೆ ಬಲು ಕ್ರಿಮಿನಲ್ ಇವ್ನುದು. ಸರಕ್ ಅಂತ ಅಲ್ಲೆ ಆಚಗೆ ಇದ್ದ ಸಗ್ನಿನಾ ಮೈಗೆಲ್ಲ ಪೂಸ್ಕೊಂಡು ಸಿವ್ನಾಗನ ಮುಂದೆ ನಿಂತ್ಕಂಡ. ಸಿವ್ನಾಗ ವಾಸ್ನೆಗೆ ತಲ್ಕಿಂದು ಮಾಡಿಬಿಡ್ತು! ಉಬೇದುಲ್ನು ಎಲ್ಲ ಸಾಮಿ ವಡವೆ ಗೋರ್ಬುಟ್ಟ. ಎಂಟ್ರೋಣು ಸಾಮಿ ಕೋಯಿಲ್ಕಾ ಸಿವ್ನಾಗ ಹೆಂಗೆ ಬಂದ? ಅಂತ ಯಾರಾದ್ರೂ ಕ್ವಚ್ಚನ್ ಮಾಡಿದ್ರೆ, ಜನಗಳು ತಾವ ಒರು ಬದಲು ಇತ್ತು: "ಎಂಟ್ರೋಣು ಸಾಮಿ ಕೊಯಿಲ್ ಕಿಟ್ಟೆ ಶಿವನ ಕೊಯಿಲ್ ಇರ್ಕೃದು!"

ಸರಿ, ಅವ್ನು ಕೈಗೂ ವಾಯ್ಗೂ ಸಿಗದೆ ಜನಗಳು ಮರ್ಮು ಇನ್ನೂ ಪೆರಿಗಿ ಅದು ಕರ್ಪು ಸಿಂತಮಾನೆ ಆಯ್ತು!

ತರ್ವಾತ... ಉಬೇದುಲ್ನು ಆ ಸಿಂತಮಾನು ತೊಪ್ನಾ ನೀಟ ಬೊಳಿಚ್ಚಿ ಪೇರಿ ಕಟ್ಟಡು ಕಟ್ಟೋಕೆ ಮುಂದಾದ. ಎಕ್ಕಡೊಳ್ಳು ಎಕ್ಕಡ ಪನಿ ಅಕ್ಕಡೆ ಬಿಟ್ಟು ಈ ಆಷರಿಕ್ಕು ನೋಡಿ, ತಮ್ ಕಣ್ಣುಗಳ ತಾಮೆ ನಂಬದೆ ಹೋದ್ರು!

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಪ್ರಾಂತ್ಯ | ಹಂಗ ನೋಡಿದ್ರ ಗಂಡಸರು ಎಲ್ಲಾ ಕಡೇನು ಸೋಮಾರಿಗಳ ಮತ್ತ

ಕೆಲವ್ರು ಕೆಟಾಂಗ ಕೂಡ:
"ಏಮಪ್ಪಾ ಉಬೇದು, ಸಿಂತಮಾನ್ಲು ಜವರಿ ಏಮ್ ಚೆಸೇನಟ್ಲು?" ಅಂತ. ಉಬೇದುಲ್ಲಾ, "ಏಮೋ ವಕಟಿ ಚೇಸಿ ಚಾವಾಲಿ ಕದ ಅನ್ನ!" ಅನ್ನೋನು ಕೇಟವರಿಗೆ. ಜನಂಗು ಕೂಡ ಅವ್ನು ಏನ್ ಮಾಡಿ ತ್ಯಾಲಿ ಆಕ್ತಾನೋ ನೋಡುಮಾ ಅಂತ ಪರಿಗೆತ್ತಿ ಪರಿಗೆತ್ತಿ ಅವ್ನು ಪಿನ್ನಾಲೆ ಸುತ್ತನಾಂಗ.

ಇಂಗೆ ದಿನಮಾಣುಗ ಪೋಗ್ತಾ ಪೊಗ್ತಾ ಒರ್ದಿನು ನೋಡಿದ್ರೆ, ಉಬೇದುಲ್ಲನು ಸಿಂತಮಾನುಗಳ ಜವರಿ ಕಟ್ಟಿದ್ದು ಏನಂದ್ರೆ ಒರು ಟೆಂಟು! ಬಾಯಸ್ಕೋಪ್ ಬಿಡೋ ಒರು ಟೆಂಟು!

ನಲ್ ನಲ್ಲಾ ಪಿಚ್ಚರುಂಗ ಹಾಕೋ ಟೆಂಟು ಆ ಸುತ್ತುಪಟ್ಟೆನಾಗ ಎಲ್ಲೂ ಇರ್ಲಿಲ್ಲ! ಈ 'ಕ್ರಿಮಿನಲ್ ಬುರ್ರೆ' ಇವ್ನುಕ ಹೆಂಗ್ ಬಂತು ಅನ್ನೋದು ಒರು ಮರ್ಮು! ಜನಂಗುಳುಕು.

ಈ ಟೆಂಟ್ಕ 'ಜೈ ಕರ್ನಾಟಕ' ಅಂತ ಹೆಸರಿಟ್ಟ ಉಬೇದುಲ್ಲಾ. ಮಣ್ಣುಕ ಒರ್ರೂಪಾಯಿ. ಮರದ ಬೆಂಚ್ಕ ರೊಂಡು. ಗಣ್ಣಸುರುಕ ಒಂದ್ಲೈನು. ಆಡಪಡಸುಗಳಕ ಒಂದ್ಲೈನು. ಪುಳ್ಳೆಕುಟ್ಟಿಗಳು ಇದ್ರೆ ಅವಕ್ಕೇನೂ ಚಾರ್ಜ್ ಇಲ್ಲ. ಮಣ್ಣುನೆಲದಾಗ ಯಾರು ಯಾರ್ ಕೂಡ ಪಿಚ್ಚರ್ರು ನೋಡ್ತಾರೆ ಅನ್ನೋದು ಕತ್ತಲಾಗ ಗೊತ್ತೆ ಆಗದು! ಪಿಳ್ಳೆಗಳೂ ಅಷ್ಟೆ;  ಎಲ್ಲಾ ಅಲ್ಲೆ!

ದಿನಾನು ನಾಲ್ಕು ಶೋ ಆಕೋನು ಉಬೇದುಲ್ಲಾಗುನು. ಬೆಳಗಿನ ಟಯಾನಿಗೆ ಒರು ಶೋ; ಮಧ್ಯಾನು ಅಲ್ಲಾಹು ಕೂಗೋ ಟಯಾನಿಗೆ ಒರ್ಕಿತ. ಸಾಯಂತೃ ಕೂಡ ಅಲ್ಲಾಹು ಕೂಗೊ ಟಯಾನಿಗೆ ಇನ್ನೊಂದುಕಿತ. ರೆತ್ರಿ, ಲಾಸ್ಟ್ ಒರ್ಕಿತ! ಪ್ರತಿ ಕಿತ್ತಾನು 'ನಮೋ ವೆಂಕಟೇಶ' ಕೂಗಿದ ಮೇಲೇನೆ ಪಿಚ್ಚರ್ರು ಸ್ಟಾಟಿಂಗು ಆಗೋದು!

Image
ಕಲಾಕೃತಿ ಕೃಪೆ: ವಿಶಾಲ್ ಗುರ್ಜರ್

ಉಬೇದುಲ್ಲಾನ ಈ 'ಜೈ ಕರ್ನಾಟಕ' ಟೆಂಟಕ ಸುತ್ತುಪಟ್ಟೆ ಇರೋ ಎಲ್ಲ ಪಲ್ಲೆಂಕಾರ್ರೂ ಸಾಲುವಚ್ಚಿಕ್ನು ಬರೋರು. ಈತ್ನು ಅಷ್ಟೆ - ಸಕತ್ತಾಗಿರೋ ಸಿನಿಮಾಗಳ್ನೆ ಹಾಕೋನು. 'ಮಾಯಾಬಜಾರ್,' 'ಎಂಗ ವಿಟು ಪಿಳ್ಳೈ,' 'ಅಡವಿ ರಾಮುಡು,' 'ಟಾಪ್ ಹೀರೋ,' 'ನಾಡೋಡಿ ಮಣ್ಣನ್,' 'ಮುಗ್ಗುರು ಮನಗಾಲ್ಲು,' 'ಜಗದೇಕವೀರ ಅತಿಲೋಕ ಸುಂದರಿ,' 'ತಾಯ್ ಇಲ್ಲಾಮೆ ನಾನಿಲ್ಲೈ,' 'ಸೋಗ್ಗಾಡು ಪೆಳ್ಲಾಂ,' 'ಪೋಕಿರಿ ರಾಜಾ',' 'ಪಾಯುಂಪುಲಿ,' 'ರಂಗಾ.'

ಜನಗಳು ಹುಚ್ಚೆದ್ದು ನೋಡೋರು. ಒರೋರ್ಕಿತ ಅಲ್, ಹತ್ತತ್ತುಕಿತ. ಇದರಿಂದ ದುಡ್ಡು ಗೊಣಿಗಳಾಗ ಕಾಣುವಂಗಾದ ಉಬೇದುಲ್ಲಾ, ಚೆನ್ನಾಗಿ ಕುದಿರುಕೊಂಡ.

ಇಂಗಿರುವಾ ಒಂದುಕಿತ ಏನಾಯ್ತು ಅಂದ್ರ, ಜನಗಳು ಗುರ್ತು ಮಡಗಿದಂಗೆ ಉಬೇದುಲ್ಲುನುಕಾ, ಪೂಕಾರರ ಸೊಣ್ಣಪ್ಪನ ಮಗಳು ಜಮುನುನುಕಾ ಏನೋ ಕನೆಕ್ಷನ್ ಇತ್ತು. ಅವಳು ಯಾವಾಗ 'ಜೈ ಕರ್ನಾಟಕ'ಕ ಬಂದ್ರೂ ಇವನು ಪುಕ್ಷಟ್ಟೆ ಪಿಚ್ಚರ್ ತೊರಿಸೋನು. ಈಗೆ ಹೇಗೋ ಎಲ್ಲ ನಡೀತಾ ಇರೋವಾಗ ಒಂದ್ಕಿತ ಈ ಉಬೇದುಲ್ಲನು ಗೋಣಿ ಗೋಣಿ ದುಡ್ಡು ದುಡೀತ್ತಿದ್ದ 'ಜೈ ಕರ್ನಾಟಕ' ಬುಟ್ಟು ಆ ಜಮುನನ ಕೂಡ ಪರಾರಿ ಆಗಿಬಿಟ್ಟ.

ಜನಗಳು, "ಅಯ್ಯೊಯ್ಯೋ! ಎಂತ ಕೆಲ್ಸಾ ಆಗಿಬಿಡ್ತು! ಉಬೇದುಲ್ಲನ ಮಾದರಿ ಬಾಯಸ್ಕೂಪ್ ಮತ್ತೆ ಸಿಕ್ಕಾದ!" ಅಂತ ಪೇಚಾಡಿಬಿಟ್ರು. ಅವರು ಓಡಿಹೋದ್ದು ಜನಗುಳುಕ ಬೇಜಾರ್ ಆಗಿಲ್ಲೆ;  ಬಾಯಸ್ಕೂಪ್ ಹೋಯ್ತಲ್ಲ ಅಂತ ಶಾನೆ ಪರಿಶ್ನೆ ಪಟ್ಟುಬಿಟ್ರು!

ಈಗ ಉಬೇದುಲ್ಲಾನ 'ಜೈ ಕರ್ನಾಟಕ' ಎಕ್ಕ ಹುಟ್ಟಿದ ಮನೆ ಆಗಿದೆ. ಪಾತ ಸಿಂತಮಾನು ತೋಪು ತಿರುಗ ಎದ್ದು ನಿಲ್ತಾ ಅದೆ. ಕುಡಿಯಾನ್ರು ವೆಂಕಟಪ್ನು ಉಬೇದುಲ್ನುಕ ತನ್ನ ಸಿಂತಮಾನು ತೋಪು ಮಾರಿದ್ರೂ ಈಗ ಅವ್ನೆ ಗಾಯಬ್! ದಿಕ್ಕು ದಿವಾಣಿ ಇಲ್ಲದ ಅದಕ್ಕ ವೆಂಕಟಪ್ನೆ ದಿಕ್ಕು. ಆತ್ನು ಮತ್ತೆ, 'ಜೈ ಕರ್ನಾಟಕ' ಟೆಂಟ್ನ ಸವರಿ ಹಾಕಿ, ತಿರುಗ ಸಿಂತಮಾನು ತೋಪು ಮಾಡಿದ್ನು.

ಎಂದಾದ್ರೂ ಉಬೇದುಲ್ಲನು ತಿರುಗಿ ಬರಬಹುದಾ ಪೂಕಾರರ ಸೊಣ್ಣಪ್ಪನ ಮಗಳು ಜಮುನುನ ಜೊತೆ - ಅಂತ ಜಯಮಂಗಳದ ಜನಗಳು ಸಿಂತಮಾನು ತೋಪಾಗ್ತಾ ಇರೋ 'ಜೈ ಕರ್ನಾಟಕ'ವ ನೋಡಿದಾಗೆಲ್ಲ ಪೇಸಿಕತೆ ಮಾಡ್ತಾ ಇರ್ತಾರೆ!

ಮುಖ್ಯ ಚಿತ್ರ ಕಲಾಕೃತಿ ಕೃಪೆ: ಯುರೋಪಿಯಾನಾ ಜಾಲತಾಣ
ನಿಮಗೆ ಏನು ಅನ್ನಿಸ್ತು?
5 ವೋಟ್