ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಬಾವಿಕಟ್ಟಿ ಮ್ಯಾಲ ಪಟಗದ ಅಜ್ಜ, ಬಾವಿ ಒಳಗ ಮೈ ಮ್ಯಾಲ ದೆವ್ವ ಬರ್ತಿದ್ದ ಸೊಸಿ

ಮೆಣಸಿನಹಣ್ಣಿನ ಸುಗ್ಗಿ ಟಾಯಮ್ಮದಾಗ ಕೆಂಪ ಹಿಂಡಿ ಅರದ ಇಟ್ಟಿರ್ತಾರ. ಅದರ ಜೋಡಿ‌ ಉಳ್ಳವರು ಅಚ್ಚೇರು ಬೆಣ್ಣಿ, ಇಲ್ಲದವರು ಎಣ್ಣೆ ಹಾಕ್ಕೊಂಡು ಬಿಸಿ ಬಿಸಿ ರೊಟ್ಟಿ ತಿಂದು ಏಳತಾರ. ಈ ಖಾರದ ಹಿಂಡಿಗೆ ಹಳಕ‌ ಉಪ್ಪು, ಜೀರಿಗೆ, ಕೊತಂಬ್ರಿ, ಬೆಳ್ಳುಳ್ಳಿ ಎಸಳು ಹಾಕಿ ತಿರ್ವಿರ್ತಾರ. ಇದಕ್ಕೊಂತರಾ ಘಮ ಇರ್ತತಿ. ಆ ಘಮಕ್ಕ ಎಂತವರಿಗೂ ಒಂದು ರೊಟ್ಟಿ‌ ಹೆಚ್ಗಿ ಇಳಿತೇತಿ‌

ರೊಟ್ಟಿ ಜೋಡಿ‌ ಪಟ್ಟಂತ್ ಏನೇನೆಲ್ಲ ತಿನಬೋದ ಅನ್ನೋದನ್ನ ಹೇಳ್ತನಿ ಅಂದಿದ್ದೆ. ಅದಕೂ ಮದ್ಲ ರೊಟ್ಟಿ ಬಡಿಯೋ ಸೊಸೆಯಂದಿರದೊಂದು‌ ದೆವ್ವದ ಕತಿ ಐತಿ ಅದನ್ನ ಕೇಳ್ರಿ.

ಮೊದಲೆಲ್ಲ ದೊಡ್ಡ-ದೊಡ್ಡ ಮನೆತನಗಳು. ಈಗೀನಂಗ ಗಂಡಾ-ಹೆಂಡತಿ‌, ಎರಡ ಮಕ್ಕಳು ಇರ್ತಿರ್ಲಿಲ್ಲ. ಅತ್ತಿ ಮಾವ, ಅಜ್ಜ, ಅಮ್ಮಾ, ನಾದಿನಿರು‌, ಮೈದನರು,‌ ನೆಗೆಣ್ಣೇರು, ಅವರ ಮಕ್ಕಳು, ಇವರ ಮಕ್ಕಳು, ಕಾಕಾ, ಚಿಗದೊಡಪ್ಪನ ಮಕ್ಕಳು-ಮೊಮ್ಮಕ್ಕಳು... ಹಿಂಗ ಎಲ್ಲ ಸಂಬಂಧಗಳು ಒಂದ ಮನಿಯೊಳಗ ಇರ್ತಿದ್ವು. ಇವಕ್ಕ ನಾವ ದೊಡ್ಡ ಕುಟುಂಬ ಅನ್ನೂದು. ಇಂತಾ ಕುಟುಂಬಕ್ಕ ಬಂದ ಸೊಸ್ತರು ಎಲ್ಲ ಕೆಲಸ ಮಾಡಬೇಕು, ಮುಖ್ಯವಾಗಿ ಚೆಂದಗ ರೊಟ್ಟಿ ಬಡಿಬೇಕ.

ಇಂತಾ ಮನೆತನದ ಸೊಸೆ ಒಬ್ಬಕಿಗೆ ಗಂಡನ ಮನಿಗೆ ಬಂದ ಕೂಡಲೇ ಮೈಯ್ಯಾಗ ದೆವ್ವ ಬರೂದ. ಹುರ್ರೆ ಅಂತ ಕೂದಲಾ ಬಿಟ್ಕೊಂಡ ಸೀರೆ ಸೆರಗ ಟೊಂಕಕ್ಕ ಕಟಗೊಂಡ ಬಿಚ್ಚಿದ ಕೂದಲಾ ಬೆನ್ನಿಗೊಮ್ಮೆ ಎದಿಗೊಮ್ಮೆ ಹಿಂದ ಮುಂದ ಬರೂಹಂಗ ಚೆಂಡ ತಿರಗಿಸಿ ದೆವ್ವ ತನ್ನ ರೌದ್ರಾವತಾರ ತೋರತಿತ್ತು. ಹಂಗ ನೋಡಿದ್ರ ಸೊಸಿ‌ ಸಂಭಾವಿತಳ‌; ಈ‌ ದೆವ್ವನ ಭಾಳ ಭಯಂಕರ ಇತ್ತು. ಈಗ ಸೋಸಿಗೆ ಹಿಂಗ ದೆವ್ವ ಬಂದ್ರ ಎಷ್ಟಂತ ಸಂಭಾಳಸ್ತಾರ ಇಷ್ಟು ಜನ‌ ಇರು ಮನೆತನದಾಗ? ಅದಕ್ಕ ವರಸದಾಗ ಎಂಟ ತಿಂಗಳ ಅಕೀ ತವರಿನ್ಯಾಗ ಟಿಕಾಣಿ ಹೂಡತಿದ್ಲು. ಪಾಪ ಗಂಡ ಅಮಾಸಿಗೆ ಹುಣ್ವಿಗೆ ಅಂಜಕೋತ ಅಂಜಕೋತ ಹೆಂಡತಿ ಮನೆಗೋಗಿ, ಯಾಡ ದಿನ ಇದ್ದು ಅಕಿಯ ಬೇಕು-ಬ್ಯಾಡ ನೋಡ್ಕೊಂಡ ಬರ್ತಿದ್ದ. ಮತ್ತ ಅರಾಮಾಗ್ಯಾಳ ಬಾಳ‌ ದಿನಾ ಆತು ದೆವ್ವ ಬಂದಿಲ್ಲಂತ ಗಂಡನ ಮನಿಗೆ ಕರ್ಕೊಂಡ ಬಂದ್ರ, ದೆವ್ವ ಧುತ್ತನ ಬಂದ ಬಿಡೂದ ಹಿಂದಗುಟನ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಸುಕ್ಕಿನುಂಡಿಗೆ ಇಪ್ಪು ಡಿಮ್ಯಾಂಡ್ ಯಾವತ್ತಿಗೂ ಕಮ್ಮಿ ಆತಿಲ್ಲ

ಇಂತಾ ದೆವ್ವಾ ಓಡ್ಸಾಕ ಗಟ್ಟಿ ಧೋತ್ರದ, ಹಳದಿ ಪಟಗದ ಅಜ್ಜ ಒಬ್ಬ ಇದ್ದ. ಈ ಇಂತ ಸೋಸಿನ ಅವನ ಹಂತೇಲಿ ಕರ್ಕೊಂಡ ಹೋಗಿದ್ರು. ಅಜ್ಜ ಎಲ್ಲಾರ್ನ ಹೊರಗ ಕಳಿಸಿ, "ನಾ ದೆವ್ವದ ಜೋಡಿ ಮಾತಾಡೂದೈತಿ," ಅಂದು, ದೆವ್ವ ಬರ್ತಿದ್ದ ಸೋಸಿ ಜತಿಗೆ ಮಾತಾಡ್ಕೋತ ಹಿತ್ಲಕ್ಕ ಕರ್ಕೊಂಡ‌ ಬಂದು, ಅಕೀ ಸೊಂಟಕ್ಕ ಒಂದು ಬಿಂದಿಗೆ ಕೊಳ್ಳಿಗೆ ಕಟ್ಟುವಂತ ಹಗ್ಗ ಕಟ್ಟಿ ಬಾವ್ಯಾಗ ಬಿಟ್ಟಬಿಟ್ಟಾ.

ಈಗ ಬಾವಿಕಟ್ಟಿ ಮ್ಯಾಲ ಪಟಗದ ಅಜ್ಜ ಬಾವಿ ಒಳಗ ಮೈ ಮ್ಯಾಲ ದೆವ್ವ ಬರ್ತಿದ್ದ ಸೊಸಿ.

"ಹೇಳವಾ ಯಾರನೀ ನಮ್ಮ ಹುಡುಗಿ ಮೈ ಯಾಕ ಹಿಡಕೊಂಡಿ?" ಅಂದ ಅಜ್ಜ.

"ಎಜ್ಜಾ ನನ್ನ ಮ್ಯಾಲ ತಗೋರಯಪ್ಪ ಹೆದರ್ಕಿ ಬರಾಕತ್ತತಿ. ನನ್ನ ಮೈಯ್ಯಾಗ ಯಾ ದೆವ್ವ ಇಲ್ಲ..." ಅಂತಾಳ‌ ಸೊಸಿ.

"ಮತ್ಯಾಕ ನಿನಗ ಗಂಡನ ಮನಿಗೆ ಬಂದ ಕೂಡ್ಲೆ ದೆವ್ವ ಬಡಕೊಂತತಿವಾ?"

"ಎಜ್ಜಾ... ಇವರ ಮನ್ಯಾಗ ರೊಟ್ಟಿ ಬಡ್ಯಾಕ ಆಗೂದಲ್ಲಪಾ ನನಗ... ಅದಕ ದೆವ್ವ ಬಂದತೆಂದ್ರ ತವರ ಮನಿಗೆ ಕಳಸ್ತಾರ, ಅರಾಮ ಇರ್ಬೋದಂದ ನಾಟಕ್ಕ ಮಾಡಿದ್ನೇಪಾ. ಇನ್ನೊಮ್ಮೆ ಹಂಗ ಮಾಡಂಗಿಲ್ಲ. ಮ್ಯಾಲ ತಗೋರಪಾ," ಅಂತಾಳ.

ಪಟಗದ ಅಜ್ಜಾ ಬುದ್ಧಿವಾದ ಹೇಳಿ ಸೊಸಿನ ಕಳಸ್ತಾನ. ಅಕಿ ದೆವ್ವ ಬಿಡ್ಸಾಕ ಕರ್ಕೊಂಡ ಬಂದರಿಗೆ, "ಹುಡಗಿ ಇನ್ನೂ ಸಾಣದು. ಅಡಗಿ ಮನ್ಯಾಗ ಹೆಚ್ಚುದು, ತೋಳಿದು, ಮ್ಯಾಲಿನ‌ ಅಡಗಿ ಮಾಡುದು ಅಂತಾ ಕೆಲಸ ಕೊಡ್ರಿ‌. ಹೋಗ್ತ-ಹೋಗ್ತ ಎಲ್ಲ ಮಾಡ್ಕೊತ ಹೊಕ್ಕಾಳ. ಸದ್ಯಕ್ಕಂತು ದೆವ್ವ ಬಿಟ್ಟ ಹೋಗಿತಿ," ಅಂತ ಹೇಳಿ ಕಳಸ್ತಾನ.

ಇದು ಹೊಸ ಸೊಸ್ತರಿಗೆ ರೊಟ್ಟಿ ಬಡಿಯಾಕ ಆಗದಿದ್ದಾಗ ಬರ್ತಿದ್ದ ದೆವ್ವ. ಇದು ಎಷ್ಟ ಖರೆ, ಎಷ್ಟ ಸುಳ್ಳ ಗೊತ್ತಿಲ್ಲ. ಆದರ ನಮ್ಮೂರ ಕಡೆ ಇಂತದೊಂದು ಕತಿ ಅವರಿವರ ಬಾಯಾಗ ಐತಿ.

* * * * *

Image

ಇನ್ನು ರೊಟ್ಟಿ ಜೋಡಿ ಅರ್ಜೆಂಟಗೆ ಏನೇನ ತಿನಬೋದಂತ ಹೇಳ್ತೆನಿ.

ಒಲಿ ಮೂಲಿಗೆ ಒಂದು ಕುಡಿ ಒಲಿ ಇರ್ತೇತಿ. ರೊಟ್ಟಿಗೆ ಹಂಚ ಇಟ್ಟಕೂಡಲೇ ಈ ಕುಡಿ‌ ಒಲಿಮ್ಯಾಲ ಒಂದ ಮಣ್ಣಿನ ಕುಡಿಕ್ಯಾಗ ಬ್ಯಾಳಿನರ, ಹೆಸರ ಕಾಳರ, ಅಲಸಂದಿ‌ ಕಾಳರ, ಹಿಂಗ ಏನಾರ ಒಂದ ಕಾಳನ ಕುದಸಾಕ ಇಡ್ತಾರ. ರೊಟ್ಟಿ ತಿನ್ನಾಕ ನಡುನಡುವೆ ಬರೋರಿಗೆ ಕುದಿಕಾಳು ಹಾಕಿ ಅದರ ಮ್ಯಾಲ ಒಣಕಾರ, ಉಪ್ಪ, ಬೆಣ್ಣಿ/ ಎಣ್ಣಿ/ ತುಪ್ಪ, ಜವಾರಿ ಬೆಳ್ಳೊಳ್ಳಿ ಎಸಳು ಹಾಕಿ ಕೊಡ್ತಾರ.

ಬೆಳಿಗ್ಗೆ ರೊಟ್ಟಿ ಟೈಮಿಗೆ ಕೆನಿಮಸರ ಕಡದು ಬೆಣ್ಣಿ ತೆಗಿತಿರ್ತಾರ. ಬಿಸಿ ರೊಟ್ಟಿ ಮ್ಯಾಲ ಅಚ್ಚೇರ ಬೆಣ್ಣಿ ಉಂಡಿ ಉಪ್ಪು, ಖಾರ ಹಾಕಿ ಕೊಡ್ತಾರ. ಹಸಿಮೆಣಸಿಕಾಯಿ‌ ಸುಗ್ಯಾಗ ಹಸಿ‌ಮೆಣಸಿಕಾಯಿ ಹಿಂಡಿ, ಬೆಣ್ಣಿ/ ಕುಸುಬಿ ಎಣ್ಣಿ ಹಾಕ್ಕೊಂಡ ತಿಂತಾರ.

ಹಸಿಮೆಣಸಿಕಾಯಿ ಸುಗ್ಗಿ ಮುಗದಿಂದ ಮೆಣಸಿನಹಣ್ಣಿನ ಸುಗ್ಗಿ. ಆ ಟಾಯಮ್ಮದಾಗ ಕೆಂಪ ಹಿಂಡಿ ಅರದ ಇಟ್ಟಿರ್ತಾರ. ಅದರ ಜೋಡಿ‌ ಉಳ್ಳವರು ಅಚ್ಚೇರು ಬೆಣ್ಣಿ, ಇಲ್ಲದವರು ಎಣ್ಣೆ ಹಾಕ್ಕೊಂಡು ಬಿಸಿ ಬಿಸಿ ರೊಟ್ಟಿ ತಿಂದು ಏಳತಾರ. ಈ ಖಾರದ ಹಿಂಡಿಗೆ ಹಳಕ‌ ಉಪ್ಪು, ಜೀರಿಗೆ, ಕೊತಂಬ್ರಿ, ಬೆಳ್ಳುಳ್ಳಿ ಎಸಳು ಹಾಕಿ ತಿರ್ವಿರ್ತಾರ. ಇದಕ್ಕೊಂತರಾ ಘಮ ಇರ್ತತಿ. ಆ ಘಮಕ್ಕ ಎಂತವರಿಗೂ ಒಂದು ರೊಟ್ಟಿ‌ ಹೆಚ್ಗಿ ಇಳಿತೇತಿ‌ ಹೊಟ್ಟಿಯೊಳಗ.

ಇನ್ನೂ ಚೆಂದ ಕೆಂಪ ಮೆಣಸಿನಕಾಯಿ‌ ಹರಕೊಂಡ ಬಂದು ರಂಜಕ ಅಂತ ಒಂದು ನಮೂನಿ‌ ಖಾರದ ಹಿಂಡಿ ಮಾಡಿಡ್ತಾರ. ಅದಕ್ಕ ಬೆಲ್ಲ, ಹುಳಿ‌ ಒಂದೀಟ ಮುಂದ ಮಾಡಿರ್ತಾರ. ಅದನ್ನ ಹಣ್ಣಿನ ಸುಗ್ಗಿ ಮುಗದಿಂದನೂ ಆರಾರು ತಿಂಗ್ಳ ಎತ್ತಿಟ್ಗೊಂಡು ತಿಂತಾರ. ಹುಳಿ‌ಬೆಲ್ಲದ ರಸ ಕುಡದು ಖಾರ ತನ್ನ ಅಸ್ತಿತ್ವ ಕಳಕೊಂಡ ಒಂತರಾ ವಿಚಿತ್ರ ರುಚಿ; ಅಂದ್ರ, ಈ ಜಾಮ್ ಅಂತಿರೆಲ್ಲ ಆ ಟೈಪ ಆಗಿರ್ತತಿ. ಹಿಂಗಾಗಿ, ಹುಡ್ರಗೆ ರೊಟ್ಟಿಗೆ ಸವರಿ ರೊಟ್ಟಿ ಸುತ್ತಿ ಕೊಟ್ರ ಆಡಕೊಂತ ತಿಂತಾರ.

ಸಣ್ಣ ಮಕ್ಕಳು ಖಾರ ಬ್ಯಾಡಂತಾವು. ಅವರಿಗೆ ಹುಳಿಯಿಲ್ಲದ ತಾಜಾ ಮಸರಿನ ಜತಿಗೆ ನಾಕ ಉಪ್ಪಿನ ಹಳಕ ಹಾಕಿ ಕೊಡ್ತಾರ. ಗುರಳ್ಳ ಚೆಟ್ನಿ-ಮೊಸರ, ಶೇಂಗಾ ಚೆಟ್ನಿ-ಮೊಸರು, ತುಪ್ಪಾ-ಉಪ್ಪು ಹಾಕಿ ಹಂಗ ಸುತ್ತಿ‌ಕೊಟ್ರ ಹುಡ್ರು ಆಡಕೊಂಡ ರೊಟ್ಟಿ ಸುಳ್ಳಿ ತಿಂತಾವು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಸೀಮೆ | ಸಿಂತಮಾನು ತೋಪು ಮತ್ತು ಉಬೇದುಲ್ಲಾನ 'ಜೈ ಕರ್ನಾಟಕ'

ಇನ್ನೂ ಒಂದ ಐಟಂ ಐತಿ‌. ಅದ ಸಾಮಾನ್ಯ ಎಲ್ಲಾರಿಗೂ ಫೆವರೆಟ್ ಅದು ಖರಿಂಡಿ ಇದು ಸೀಸನ್ ವೈಸ್. ಮೆಣಸಿಕಾಯಿ‌ ಸಿಸನ್‌ ನ್ಯಾಗ ಮಾತ್ರ ಸಿಗ್ತೇತಿ. ಖರಿಂಡಿ ಮೊಸರು/ ತುಪ್ಪ ಬಾಳ ಮಸ್ತ್ ಕಾಂಬಿನೇಷನ್ನು. ಮಾರನೇ ದಿನದ ಹೊಟ್ಟಿ ಗ್ಯಾರಂಟೀ ತಿಂದರಿಗೆ ಬಿಟ್ಟದ್ದು. ಅವರ ಹೊಟ್ಟಿಗೆ ಅವರ ಜವಾಬ್ದಾರರು. ಎಷ್ಟರ ಜವಾಬ್ದಾರಿ ಬೀಳಲಿ‌, ಈ ಖರಿಂಡಿ ತಿನ್ನೂ ಸುಖದಿಂದ ನಮ್ಮ ಕಡೆ ಮಂದಿ ತಪ್ಪಸ್ಕೊಳಂಗಿಲ್ಲ - ಅಂತಾ ಆಕರ್ಷಣೆ ಉಳಸ್ಕೊಂಡತಿ ಈ ಖರಿಂಡಿ ರುಚಿ.

ಇನ್ನು, ಮನ್ಯಾಗ ಕೋಳಿ ಇದ್ದರ, ಹನ್ನೊಂದ-ಹನ್ಯಾಡ ಆಗತಿದ್ದಂಗ ಕೋಳಿ ತತ್ತಿ‌ ಇಡ್ತವು. ಅಷ್ಟೊತ್ತಿಗೆ ರೊಟ್ಟಿ ತಿನ್ನಾಕ ಬರೋರಿಗೆ ಆಮ್ಲೆಟ್ಟ ರೊಟ್ಟಿ. ರಾತ್ರಿ ಮಾಡಿದ‌ ಕೋಳಿ‌ ಸಾರ, ಇಲ್ಲಾ ತತ್ತಿ‌ಸಾರ ಉಳದಿದ್ರ ಬೆಳಿಗ್ಗೆ ಮತ್ತೊಂದ ಕುದಿ‌ಕುದಿಸಿ ಬಿಸಿ‌ ರೊಟ್ಟಿ ಜೋಡಿ ಒಂದ ಬಟ್ಲಾ ಸಾರ ಕೊಡ್ತಾರ; ಅದರ ಗಮ್ಮತ್ತ ಬ್ಯಾರೆ ಇರ್ತತಿ.

ಎರಡ ಗಂಟೆ ಅಂದ್ರ ಎಲ್ಲ ಅಡಿಗೆ ಆಗಿರ್ತತಿ. ಅವಾಗ ಒಂದ ಕಾಳಿನ ಪಲ್ಯ ಒಂದ ತರಕಾರಿ ಪಲ್ಯ ಸಾರು ರೊಟ್ಟಿ ಅನ್ನ ಮೊಸರು ಹಿಂಗ ಎಲ್ಲ ಸಂಪಿರ್ತೇತಿ. ಆದರ ಬಿಸಿ ರೊಟ್ಟಿ ತುಪ್ಪ ಖಾರ ಹಸೆ ಉಳ್ಳಾಗಡ್ಡಿ ತಿಂದಾಗ ಸಿಗೋ ಟೇಸ್ಟು ಮದ್ಯಾಹ್ನ ಆರಿದ ರೊಟ್ಟಿ ಜತಿಗೆ ಎಷ್ಟ ನಮೂನೆ ಪಲ್ಯ ಹಚಗೊಂಡ ತಿಂದ್ರು ಸಿಗಂಗಿಲ್ಲ.

ಬಿಸಿ ರೊಟ್ಟಿಗೆ ಬಿಸಿ ರೊಟ್ಟಿನ‌ ಸಾಟಿ. ಒಗ್ಗರಣಿ‌‌ ಇಲ್ಲದ ತರಾವರಿ ಕುದಿ ಕಾಳು, ಅದರ ಕುದಿ‌ ಎಸರಿಗೆ ಜಿಟಿಗೆ ಉಪ್ಖಾರ ಬಿದ್ದರ ಹಸದ ಹೊಟ್ಟಿಗೆ ಅಮೃತ ಬಸದ ಕೊಟ್ಟಂಗ.

ರಾತ್ರಿ ಊಟಕ್ಕ ಮನ್ಯಾಗ ಹಲ್ಲಿಲ್ಲದ ಮುದಕರ ಇದ್ದರ ಮತ್ತ ಕ್ವಾಣಮಗಿ ಇಡ್ತಾರ. ಮತ್ತ ಬಿಸೆ-ಬಿಸೆ ಜಿಗಟಿನ ರೊಟ್ಟಿ ಎಣಗಾಯಿ ಪಲ್ಯ. ಇಲ್ಲಂದ್ರ ವಾರದಾಗ ಮೂರದಿನ ಚಪಾತಿ ಆಲೂಗಡ್ಡಿ ಪಲ್ಯ.

ಈ ಚಪಾತಿ ನಮ್ಮ ಕಡೆ ಎರಡನೇ ಮುಖ್ಯ ಆಹಾರ. ಮತ್ತ ಗೋಧಿ ಎರಡನೇ ಮುಖ್ಯ ಬೆಳೆ. ಹಿಂಗಾಗಿ ಚಪಾತಿ ಕುರಿತು ಮುಂದಿನ ಕಂತಿನ್ಯಾಗ ಬರಿತೇನಿ.

ನಿಮಗೆ ಏನು ಅನ್ನಿಸ್ತು?
13 ವೋಟ್