ದೇಸಿ ನುಡಿಗಟ್ಟು - ಆನೇಕಲ್ ಪ್ರಾಂತ್ಯ | ಬಾಡೂಟಾಂದ್ರೆ - ಇಟ್ಟು, ನಾಕ್ ಪೀಸು, ಒಂದಷ್ಟು ನೀರ್ಸಾರು ಹಾಕುದ್ರೂ ಸಾಕು

ಹುಡುಗ್ರುಡುಗ್ರು ಸೇರ್ಕೊಡ್ ಪಂಕ್ಷನ್ ಮಾಡೋ ಮಜಾನೆ ಬ್ಯಾರೆ. ಒಬ್ರು ಮನೆಯಿಂದ ಕಾರ ಅರ್ಸೊಂಕ್ ಬಂದ್ರೆ, ಇನ್ನೊಬ್ಬರು ಅಕ್ಕಿ-ಅಸೀಟು, ಇಟ್ನುಕೋಲು ತರೋದು, ತಪ್ಲೆ, ಗಿನ್ನೆ, ಬಟ್ಲು ಏನೇನು ಬೇಕೋ ಎಲ್ಲ ಅವಣಿಸಿಕೊಂಡು ಪಾರ್ಟಿ ಮಾಡೋ ಕತೇನೆ ಬ್ಯಾರೆ, ಊರ ಮನೆಗಳಲ್ಲಿ ಜಾತಿ ಪಾಲನೆ ಮಾಡೋ‌ ಜನ, ಮಿಷೀನ್ ಮನೆ ಒಳಗೆ ಎಲ್ಲ ಒಂದೇ ಆಗಿರ್ತಾರೆ

ಮನುಷ್ರನ್ನ ಒಂದಾಗಿಡೋಕೆ ಎಷ್ಟೋ ಕಾರಣಗಳಿರಬೋದು. ಜಾತಿ, ಧರ್ಮ, ಒಕ್ಲು, ನಮ್ಮೋರು, ನಿಮ್ಮೋರು ಅಂತಲ್ದೆ ಕೂಡ ಮನ್ಷ-ಮನ್ಷ ಒಂದಾಗಿರ್ಬೋದು. ಹೌದು, ನಮ್ ಕಡೆ ಶಾನೆ ಜನಾನ ಒಂದಾಗಿಟ್ಟಿರೋದೆ ಬಾಡು.

ಬಾಡೂಟ ಅಂದರೆ ನನ್ಮಗಂದು ಎಲ್ಲಿಲ್ಲದ ಆಸೆ ನಮ್ಮೋರ್ಕ. ಮಾಮೂಲಿ ಸೀ ಊಟ, ಅನ್ನ ಪಾಯ್ಸ, ಒಬ್ಬಟ್ಟ್ ಗಿಂತ, ಈ ಬಾಡು ಅನ್ನೋದು ಏನದೇ ಅದರ ತಾಕತ್ತೇ ಬೇರೆ. ಗುಡ್ಡೆ ಬಾಡು, ಬ್ಯಾಡ ಅಂದರೂ ಜನಾನ ತಂದು ಗುಡ್ಡೆ ಹಾಕ್ತದೆ ಒಂದ್ಕಡೆ. ನಿಜವಾಗಿ 'ಸರ್ವರಿಗೂ ಸಮಪಾಲು' ಅನ್ನೋ ಕವಿ ಮಾತು ನಿಜ ಆಗ್ತಿರೋದು ಕೂಡ ಈ ಗುಡ್ಡೆ ಮಾಂಸದ ವಿಷಯದಲ್ಲಿ ಮಾತ್ರ. ಕುಯ್ದ ಕುರೀದೋ, ಮ್ಯಾಕೇದೋ ಎಲ್ಲ ಪಾರ್ಟು, ಬೋಟಿ-ಗೀಟಿ, ದೊಮ್ಮೆ, ಬೀಜ-ಗೀಜ ಎಲ್ಲ ಕೂಡ ಎಲ್ಲರ ಪಾಲಿಗೆ ಸೇರೋ ಅಂತ ಪ್ರೋಗ್ರಾಮ್ ಅದು. 

ಮೊದಲೆಲ್ಲ ಹಳ್ಳಿ ಕಡೆ ಕುರಿ ಬಾಡ್ಗಿಂತ, ಹಂದಿ ಬಾಡನ್ನೇ ಬಾರ್ಸೋರು. ಈವಾಗ ನಯ ನಾಜೂಕು, ತಳಕು-ಪಳಕು ಅನ್ಕೊಂಡು ಹಂದಿ ಬಾಡು ತಿನ್ನೋದನ್ನ ಕಡಿಮೆ ಮಾಡ್ಕಂಡವ್ರೆ. ಕುರಿ, ಕೋಳಿ‌ ತಿನ್ನೋರು ಹಂದಿ ಮಾಂಸ ತಿನ್ನೋರ್ನ ಒಂಥರಾ ನೋಡ್ತಾರೆ!. ನಮ್ ತಾತನೋರ ಕಾಲದಲ್ಲಿ ಒಂದು ಇಡೀ ಹಂದೀ ಹಂದೀನೆ ಬರೀ ಐದೋ ಹತ್ರೂಪಾಯಂತೆ, ಎಂಟಾಣಿ ಕಾಸು ಕೊಟ್ರೆ ಮನೆ ಮಕ್ಳು ತಿನ್ನೋಷ್ಟು ಹಂದಿ ಬಾಡು ಕೊಡೋರಂತೆ. ''ನಿಮ್ ತಾತ್ನು ಹಂದಿ ಮಾಂಸಕ್ಕ ಮಾಡಿರೋ ಖರ್ಚನ್ನ ಉಳ್ಸಿದ್ರೆ ಆವಕ್ಕೆ ಆನೇಕಲ್ ಕಡೆ ಸೈಟ್ ತಕಂಬೋದಿತ್ತು,'' ಅಂತ ನಮ್ಮಜ್ಜಿ ಯಾವಾಗಲೂ ಹೇಳ್ತಾನೆ ಇರ್ತಾಳೆ‌. ನಮ್ ದೊಡ್ಡತಾತ ಜರ ಬಂದು ನಾಲಿಗೆ ಕೆಟ್ಟಾಗ ''ಇಟ್ಟು, ಸೊಪ್ಪು ಬ್ಯಾಡಮ್ಮ, ಬಾಡು ಬೇಕಮ್ಮ,'ʼ ಅಂತ ಹಾಡೋರಂತೆ!.

Image
ಗುಡ್ಡೆ ಮಾಂಸದ ಚಿತ್ರ

ಇನ್ನೂ ಈ ಕುರಿ ಮಾಂಸದ ಕಥೇನೆ ಬ್ಯಾರೆ. ಅದ್ರಾಗೂ ಹೊಸ್ತಡಕು ಹಿಂದಿನ‌ ರಾತ್ರಿ, ಇಡೀ ಊರೋರೆಲ್ಲ ಜಾತಿ ಗೀತಿ ಮರ್ತು ಕುರಿ ಕೊಯ್ಯೋ ಕೆಲಸಕ್ಕೆ ನಿಂತ್ಕಂಬಿಡ್ತಾರೆ. ಕುರಿ ಚರ್ಮಾನ ಸಾಬಿಗಳು ತಕೊಂಡ್ ಹೋತಾರೆ. ಈವಾಗ ನೂರೆಂಟು ಕಾನೂನು ಬಂದು ಪಾಪ ಅವರು ಕೂಡ ಚರ್ಮ ಯಾಪಾರ ಕಮ್ಮಿ ಮಾಡವ್ರೆ‌‌. ಹಂಗಾಗಿ ಚರ್ಮಕ್ಕೂ‌ ಡಿಮ್ಯಾಂಡ್ ಕಮ್ಮಿ ಆಗೋಗದೆ.

ತ್ವಾಟದ‌ ಮಿಷೀನ್ ಮನೆಗಳಾಗ ಹುಡುಗ್ರುಡುಗ್ರು ಸೇರ್ಕೊಡ್ ಪಂಕ್ಷನ್ ಮಾಡೋ ಮಜಾನೆ ಬ್ಯಾರೆ. ಒಬ್ರು ಮನೆಯಿಂದ ಕಾರ ಅರ್ಸೊಂಕ್ ಬಂದ್ರೆ, ಇನ್ನೊಬ್ಬರ ಮನೆಯಿಂದ ಅಕ್ಕಿ-ಅಸೀಟು, ಇಟ್ನುಕೋಲು ತರೋದು, ತಪ್ಲೆ, ಗಿನ್ನೆ, ಬಟ್ಲು ಏನೇನು ಬೇಕೋ ಎಲ್ಲ ಅವಣಿಸಿಕೊಂಡು ಪಾರ್ಟಿ ಮಾಡೋ ಕತೇನೆ ಬ್ಯಾರೆ, ಊರ ಮನೆಗಳಲ್ಲಿ ಮಾತ್ರ ಜಾತಿ ಪಾಲನೆ ಮಾಡೋ‌ ಜನ, ಮಿಷೀನ್ ಮನೆ ಒಳಗೆ ಎಲ್ಲ ಒಂದೇ ಆಗಿರ್ತಾರೆ. ಎಲ್ರೂ ಸೇರ್ಕಂಡು ಹಂದೀನೋ, ಕೋಳಿನೋ, ಕುರಿ ಬಾಡೋ ಮಾಡ್ಕಂಡ್ ಬಯಲ ಮೇಲೆ, ಟೇಕ್ ಎಲೆ ಮ್ಯಾಲೆ ಹಾಕಂಡ್ ತಿಂತಾಯಿದ್ರೆ, ಕೇಜಿಗಟ್ಲೇ ತಿನ್ಬೋದು.

ಮನೆಯಾಗ ಮಾಡಿದ್ರೆ ಅಷ್ಟು ರುಚಿ ಅನ್ಸದೇ ಇರೋ ಊಟ ಕೂಡ ಬಯಲ ಮ್ಯಾಲೆ ತಿನ್ನೋಕ ಸಖತ್ತಾಗಿರ್ತಾದೆ‌. ಅಲ್ಲಮ ಪ್ರಭುಗಳು ಹೇಳಿದ ಬಯಲಿನ ಮಹತ್ವವನ್ನು ಹಿಂಗೂ ಅನ್ಕೊಂಬೋದೇನೇಪಾ‌. 

ಈ ಲೇಖನ ಓದಿದ್ದೀರಾ? ದೇಸಿ ನುಡಿಗಟ್ಟು - ಮಾಲೂರು ಪ್ರಾಂತ್ಯ | ನಮ್ಮೂರುಗ್ ಬಂದಿದ್ದ ಮುನೆಸ್ಪುರನ ಮಹಾತ್ಮೆ

ಆ ಕಟ್ಟು, ಈ ಕಟ್ಟು ಅಂತ ತಲೇಕಾ ಉಳ ಬಿಟ್ಕಳ್ದೆ ಹೊಟ್ಟೆಕಾ ಬಾಡು ಬಿಟ್ಕೊಳೋರು ನಮ್ ಕಡೆ ಜನ. ಹೇಳಬೇಕೆಂದ್ರೆ ನಮ್ ಆನೇಕಲ್ ಕಡೆ ಕಬಾಬ್ ಫೇಮಸ್. ಅದ್ರಾಗೂ ಸಾಹೇಬ್ರು ಬೀದಿಲಿ ಸಿಗೋ ಕಬಾಬ್ ರುಚೀನೇ ಬ್ಯಾರೆ. ಬಂದೋರೆಲ್ಲಾ ಕೇಜಿಗಟ್ಲೆ ತಿನ್ನೋದೆ‌. ನಾವೂ ಈವತ್ಗೂ ಬೇಜಾರಾದ್ರೆ, ಆನೇಕಲ್ ಕಡೆ ಹೋಗಿ ಕಬಾಬ್ ತಿಂದರೆ ಆಗೋ‌ ನಿರಾಳಾನೆ ಬ್ಯಾರೆ. ಯಾವತ್ತೂ ನಾವು ಅವರು ಸಾಬ್ರು, ಅದು ಮಾಡ್ತಾರೆ, ಇದು ಮಾಡ್ತಾರೆ ಅಂತ ಅನುಮಾನ ಪಟ್ಟೋರಲ್ಲ‌. ಹೋಗಿ ಖುಷಿಯಿಂದ ತಿನ್ಕಂಡ್ ಬತ್ತೀವಿ. 

ಹೊಟ್ಟೆ ತುಂಬ್ದೋರಷ್ಟೇ ಅದು ಇದೂ ಅಂತ ತವಡು ಕುಟ್ತಾರೆ. ಹಸ್ದೋನ್ಗೆ ಇದೆಲ್ಲಾ ಏನೂ ಅನ್ಸಲ್ಲ‌. ಹೊಟ್ಟೆ ಮುಂದೆ ಯಾವ ಧರ್ಮ ಸ್ವಾಮಿ!.

Image
ಸಾಂದರ್ಭಿಕ ಚಿತ್ರ

ಹಂಗಾಗಿನೇ ಜನಾ ಮದುವೆ ತಪ್ಸುದ್ರೂ ಮರೂಳಿ (ನೆರವಿ) ತಪ್ಸಲ್ಲ. ಮಕ್ಳ ನಾಮಕರಣದ ದಿನ ಒಬ್ಬಟ್ಟಿನ ಊಟದ ಮ್ಯಾಲೆ ಆಸೆ ತೋರ್ಸೋರ್ಗಿಂತ, ಕೂದ್ಲು ಕೊಟ್ಟು ದ್ಯಾವ್ರು ಮಾಡಿದ್ರೆ ಸಾಕು ಬಾಡೂಟ ಅಂತ ಜನ ಬತ್ತಾರೆ, ಊರಬ್ಬಕ್ಕೆ ಬಾಡೂ ಮಾಡಿ ನಾಲ್ಕು ಜನಾನ ಕರ್ದು ಊಟ ಹಾಕ್ಸೋ ನೆಮ್ದೀನೆ ಬ್ಯಾರೆ ಬಿಡಿ. ಅಲಲೆ ಅಂತ ಸೀ ಊಟಕ್ಕೆ ಏನೇನೋ ಮಾಡ್ಸಿದ್ರು 'ಓ' ಅನ್ನದ ಜನ, ಅದೇ ಬಾಡೂಟ ಅಂದರೆ ಇಟ್ಟು, ನಾಕ್ ಪೀಸು, ಒಂದಷ್ಟು ನೀರ್ಸಾರು ಹಾಕುದ್ರೂ ಸಾಕು ಗುಳುಂ‌-ಗುಳಂ ಅಂತ ಇಟ್ನ ನುಂಗ್ತಾರೆ. ತ್ವಾಟಕ್ಕ ಕೆಲಸಕ್ಕೆ ಬರೋ ಆಳುಗಳಿಗೆ ಅನ್ನ, ಶೇರ್ವ ಕೊಡುಸ್ಬುಟ್ರೆ ಸಾಕು ಅವರ ಆನಂದಾನ ಹೇಳಕಾಗಲ್ಲ‌. 

ಒಟ್ನಲ್ಲಿ ಹೇಳೋದಾದ್ರೆ ಬಾಡೂಟ ನಮ್ಮೋರ್ನ ಒಂದಾಗಿಡೋ ಒಂದು ಮ್ಯಾಜಿಕ್ ಅಂತಾನೆ ಹೇಳ್ಬೋದು‌.

ನಿಮಗೆ ಏನು ಅನ್ನಿಸ್ತು?
11 ವೋಟ್