ದೇಸಿ ನುಡಿಗಟ್ಟು - ಕುಂದಗೋಳ ಪ್ರಾಂತ್ಯ | ಹಂಗ ನೋಡಿದ್ರ ಗಂಡಸರು ಎಲ್ಲಾ ಕಡೇನು ಸೋಮಾರಿಗಳ ಮತ್ತ

Desi Nudigattu Kundagol 1

ನಾ ಇವತ್ತ ಹೊಸದಾಗಿ ಅಂಕಣ ಚಾಲು ಮಾಡಾಕತ್ತಿನೀ. ಅದು ಖುದ್ದು ಎರಿಸೀಮಿ (ಬಯಲುಸೀಮಿ) ಕೂಳಿನ (ಅಡುಗೆ) ಕುರಿತ ಬರೀಬೇಕಂತ ಮಾಡಿನಿ. ಅದರಾಗ, ನಮ್ಮ ಅಡ್ಗಿಮನಿ ಪಾಕದೊಳಗೆ ಅಗ್ರಗಣ್ಯ ಸ್ಥಾನ ರೊಟ್ಟಿಗೆ ಕೊಟ್ಟಿವಿ. ಆ ಕಾರಣಕ್ಕ ರೊಟ್ಟಿಯಿಂದನ ಹೊಂಡುಣನಂತ. ನೀವೆಲ್ಲ ಜೊತೆಗಿದ್ದು ರೊಟ್ಟಿ ಬಡಿಯಾಕ ಬಲ‌ ತುಂಬಬೇಕು ನೋಡ್ರಿ

ಉತ್ತರ ಕರ್ನಾಟಕದ ಹಳ್ಳಿಗಳ್ಗೆ ಬೆಳಗಂದ್ರೆ ಬೆಳ್ಳಿ ಕೋಲು ಆಗಸ್ದಾಗ ಮೂಡಬೇಕಂತೆನಿಲ್ಲ. ಯಾವಾಗಂದ್ರ ಅವಾಗ ಕೋಳಿ ಕೂಗಿಸಿಬಿಡ್ತಾರ. ಹೊಗಿ ಮಾಡದಾಗ ಸಣ್ಣಕ ಹೊಗಿ ಆಡಾಕ ಸುರುವಾದ್ರ, ಅರ್ಧಾ ಊರು ಎದ್ದತಂತಲೇ ಲೆಕ್ಕಾ.

ಅದಕೂ ಮುಖ್ಯವಾದ ವಿಚಾರ ಅಂದ್ರ, ಈ ಕಡೆ ಭಾಗದಾಗ ಸಿಸನ್ವೈಸ್ ಬೆಳಗ ಸೈತ್ ಆಕ್ಕೇತಿ. ಹೆಂಗಂದ್ರ, ಬಿತ್ತು ಸುಗ್ಯಾಗ ಅಗದೀ ಲೊಗು ಅಂದ್ರ, ಲೊಗು ನಾಕಕ್ಕ ಎದ್ದು ರೈತರು ತಮ್ಮ ದಿನಚರಿ ಚಾಲು ಮಾಡ್ತಾರ. ಮತ್ತ ಕೂಲಿ ಹೋಗರು ಇಡೀ ದಿನಕ್ಕಾಗಂಗ ಗಂಡ, ಮಕ್ಕಳಿಗೆ ಅಡಗಿ ಕುಚ್ಚಿ, ಹಸ ಮಾಡವ, ಗಿರಣಿಗೆ ಹಾಕ್ಸವ, ಕಟಗಿ ಕುಳ್ಳು ಎಲ್ಲ ಜ್ವಾಣ್ಣಿ ಮಾಡಿಟ್ಟು ಕೂಲಿಗೆ ಹೊಕ್ಕಾರ. ಇನ್ನ ಬಿತ್ಗಿ ಮುಗದಿಂದ ಮೆಣಸಿನಗಿಡಾ ಹಚ್ಚಾಕ, ಹತ್ತಿಕಾಳ ವೂರಾಕ, ಕಳೆವು ತೆಗಿಯಾಗ, ಗೊಬ್ಬರಾ ಕಟ್ಟಾಕ, ಎಡಿ‌ಕುಂಟಿ ಹೊಡ್ಯಾಕ ಹೋಗು ಮುಂದ ಅಷ್ಟೇನ ಅರ್ಜೆಂಟ್ ಬೆಳಕ ಹರೆಂಗಿಲ್ಲ.

ಆದ್ರ ನಟ್ಟ ಕಡಿಯುದಿದ್ರ ಮತ್ತ ನಸಕಲೇ ಹೋಗಬೇಕ ನೋಡ್ರಿ ಇದನ್ನ ಹೆಂಗಸರು ಮಾಡಂಗಿಲ್ಲ, ಅಗದೀ ಜಟ್ಟಿಯಂತ ಗಂಡಸ್ರ ಮಾಡು ಕೆಲಸ‌ ಇದು. ತೋಳ್ಬಲ‌ಬಾಳ ಬೇಕ್ಕಾಕ್ಕೇತಿ ಅದಕ್ಕ ತಕ್ಕಂಗ ಹೊಟ್ಟಿಗೆ ಕೂಳು. ಗೋಧಿ ಹುಲ್ಲು, ಕುಸುಬಿ, ಕಡ್ಳಿ ಕೊಯ್ದು ವಕ್ಕಲಿ ಮಾಡಾಕ ಹೋಗುವಾಗ ನಡರಾತ್ರಿ ಯಾಡ ಗಂಟೆ ಅಂದ್ರ ಹೊಲದಾಗ ಇರ್ತಾರ. ಆ ಬೆಳಿಗಳಿಗೆ ಬಿಸಿಲೇರು ಮುಂಚೆನೆ ಕೆಲಸ ಮುಗಸ್ಬಕು ನೋಡ್ರಿ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಮೀನು ಪೇಟಿಗೆ ಪೈಸ ಹಾಕ್ಲೆಲ ಅಂದ್ರೆ ಕಡಲ ದಡದಲ್ಲಿ ಹುಟ್ಟಿದ್ದೇ ಸುಳ್ಳು

ಇಲ್ಲಿ ಭೂಮಿ ಗಂಡಭೂಮಿ. ಒಂದ ಮುಂಗಾರಿನ ಮಳಿ ಸಾಕು ಬೆಳಿ ತೆಗಿಯಾಕ. ಮತ್ತ ಹಿಂಗಾರಿನ ಚಳಿ ಸಾಕು ಅಕ್ಕಡಿಕಾಳು ನಿಟ್ಟ ವಟ್ಟಾಕ. ಮನಿ ತುಂಬ ದುಡಿಯು ಮಂದಿ ಇದ್ದರ 'ಬಂಗಾರ ಬಿತ್ತಿ ಬಂಗಾರ ಬೆಳೀತಾರ' ನೋಡು ಅನ್ನು ಮಾತು ಚಾಲ್ತಿಯೊಳಗ ಐತಿ. ನೆಲ ಹೂವಿದ್ದಂಗ. ನೀವು ಉತ್ತರ ಕರ್ನಾಟಕಕ್ಕ ಹೋದ್ರ, ಎರಿಮಣ್ಣು ಒಮ್ಮೆ ಬಗಸ್ಯಾಗ ತುಂಬಿ ನೋಡ್ರಿ; ನಾ ಯಾಕ‌ ಹೂವಿಗೆ ಹೋಲಿಸಿದೆ ಅಂತ ತಿಳಿತದ. ಮಳಿಗಾಲ್ದಾದ ಹೊಲದೊಳಗ ಹೋಗಬ್ಯಾಡ್ಯ್ರಾ ಮತ್ತ, ತುಳಕಲಾಗ್ತಾವು. ಹೊಲದ ಯಜಮಾನ್ರು ಬೈತಾರ ಹುಷಾರಿ.

ಇಲ್ಲಿ ಭೂಮ್ಯಾಗ ದುಡ್ಯಾಕ ಗಟ್ಟಿ ಇರಬೇಕು, ಹೆಂಗಸರಂತು ಇನ್ನೂ ಜ್ಯಾಸ್ತಿ ಗಟ್ಟಿರ್ಬೇಕು. ಯಾಕ ಹೇಳ್ರಿ? ನಮ್ಮ ಕಡೆ ಗಂಡಸರು ಸಲಪ ಸೋಮಾರಿಗಳು. ಗಡಮುಡ ಹೆಂಡ್ತಿ ಸಿಕ್ರ ಎಲ್ಲಾ ಅಕೀ ತೆಲಿಗೆ ಹೊರ್ಸಿ ಬಾಯ್ತುಂಬ ಅಡಕಿಎಲಿ ಹಾಕ್ಕೊಂಡು ಕಟ್ಟಿಗೆ ಕುಂತ ಬಿಡ್ತಾರ. ಇರ್ಲಿ... ಹಂಗ ನೋಡಿದ್ರ ಗಂಡಸರು ಎಲ್ಲಾ ಕಡೇನು ಸೋಮಾರಿಗಳ ಮತ್ತ. ಯಾರ ದುಡದ್ರೇನು, ಎಲ್ಲಾ ಅವರ ಮನೆತನಕ್ಕಾಅಲ್ರಿ? ಇಬ್ರು ಜತಿಲೆ ದುಡದ್ರ ಬ್ಯಾಸರ ಬರಂಗಿಲ್ಲ ದುಡಿಮಿ.

ಹೌದು, ಅವ್ರ ಎಷ್ಟೊತ್ನ್ಯಾಗರ ಏಳಲಿ, ಏನಾರ ಬಿತ್ತಲಿ‌, ಎಷ್ಟರ ದುಡಿಲಿ, ಅದನ್ಯಾಕ ಇಲ್ಲಿ ಹೇಳಾಕತ್ತನೀ ಅಂದ್ರಿ? ಯಾಕಂದ್ರ ಒಂದು ಪ್ರದೇಶದ ಅಡುಗೆ-ಊಟದ ವಿಚಾರ ಬರಿಯು ಮುಂದ ಅಲ್ಲಿ ಕೆಲಸ ಎಂತಾದು, ಭೂಮಿ ಎಂತಾದು, ಜನ ಎಂತರು, ಏನು ಬೆಳಿತಾರ... ಇತ್ಯಾದಿ‌-ಇತ್ಯಾದಿ ತಿಳಿದಿರ್ಬೇಕಲ್ಲಾ, ಅದಕ್ಕ ಇದೆಲ್ಲಾ ಟಿಪ್ಪಣಿ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಪ್ರಾಂತ್ಯ | ನಮ್ಮೂರುಗ್ ಬಂದಿದ್ದ ಮುನೆಸ್ಪುರನ ಮಹಾತ್ಮೆ

ಊರು ಬಿಟ್ಟು ಹೆಚ್ಚುಕಮ್ಮಿ ಹದಿನಾರ ವರ್ಷದ ಮ್ಯಾಲಾತು. ಮೂರೊರಷಕ್ಕೊಮ್ಮೆ ಟ್ರಾನ್‌ಸ್ಫರ್‌ ನೆಪದಾಗ ಗುಳೆ ಹೋಂಡುದ ಆಗೇತಿ‌. ಯಾವ ಊರಾಗು ನಾವು ಉಳಿಯುದಿಲ್ಲ. ಆದರ ಎಲ್ಲ ಊರು‌ ನಮ್ಮೊಳಗ ಉಳಕೊಂಡಬಿಡ್ತವು. ಅಲ್ಲಿ ಊಟ, ಉಡುಗೆ,‌ ಸಂಪ್ರದಾಯ, ನೆರೆಹೊರೆ, ನೆನಪು... ಹೀಂಗ ಆ ಊರಿನ‌ ಪ್ರತಿ‌ ಅಮೂಲ್ಯ ವಸ್ತುನೂ ನಮ್ಮ‌ ಲಗ್ಗೇಜ ಗಂಟಿನ ಜತೆಗೆ ಬಂದು ಹೊಸ‌ ಊರಾಗು ನಮ್ಮ ವಾಸ್ತವ್ಯನಾ ಸಹನೀಯ ಮಾಡಿಬಿಡ್ತಾವು. ಧಾರವಾಡ ಜಿಲ್ಲಾದ ನೆನಪುಗಳ್ನ ಅಡುಗೆ ನೆಪದಾಗ ಈಗ ಇಲ್ಲಿ ಬಿಚ್ಚಿಡಬೇಕು ನೋಡ್ರಿ.

ನಾವೀಗ ಮುಖ್ಯ ವಿಚಾರಕ್ಕ ಬರುಣ. ನಾ ಇವತ್ತ ಹೊಸದಾಗಿ ಅಂಕಣ ಚಾಲು ಮಾಡಾಕತ್ತಿನೀ. ಅದು ಖುದ್ದು ಎರಿಸೀಮಿ (ಬಯಲುಸೀಮಿ) ಕೂಳಿನ (ಅಡುಗೆ) ಕುರಿತ ಬರೀಬೇಕಂತ ಮಾಡಿನಿ. ಅದರಾಗ, ನಮ್ಮ ಅಡ್ಗಿಮನಿ ಪಾಕದೊಳಗೆ ಅಗ್ರಗಣ್ಯ ಸ್ಥಾನ ರೊಟ್ಟಿಗೆ ಕೊಟ್ಟಿವಿ. ಆ ಕಾರಣಕ್ಕ ರೊಟ್ಟಿಯಿಂದನ ಹೊಂಡುಣನಂತ ಮಾಡಿನಿ.

ನಮ್ಮ‌ ರೊಟ್ಟಿಯಿಂದ ಅಂಕಣ ಚಾಲು ಆಗ್ತದ ಇನ್ಮುಂದ. ನೀವೆಲ್ಲ ಜೊತೆಗಿದ್ದು ರೊಟ್ಟಿ ಬಡಿಯಾಕ ಬಲ‌ ತುಂಬಬೇಕು ನೋಡ್ರಿ.

ನಿಮಗೆ ಏನು ಅನ್ನಿಸ್ತು?
5 ವೋಟ್