ದೇಸಿ ನುಡಿಗಟ್ಟು - ಚಿತ್ರದುರ್ಗ ಪ್ರಾಂತ್ಯ | ಇಂತ ಅಜ್ಜೀರು ರಷ್ಯಾದಲ್ಲೋ ಉಕ್ರೇನಲ್ಲೋ ಇದ್ದಿದ್ರೆ ಬರೀ ಪ್ರೀತಿ ಬೆಳೇನೆ ಬೆಳ್ದಿರೋರು

Nudigattu June 14

ಹೊಲ್ದಲ್ಲಿ ಬೆಳ್ದ ಹೀರೆ, ಬೆಂಡೆ, ಹಾಗ್ಲ, ಮೆಣ್ಸು; ಹಾಲು, ಗಿಣ್ಣಾಲು, ಮೊಸ್ರು, ಮಜ್ಗೆಯೆಲ್ಲವ - ಊರ್ನಾಗಿರೊ ದಾಸ್ರು, ದೊಂಬ್ರು, ದಕ್ಲರು, ಸಾಬ್ರು, ಸುಕಾಲ್ರು, ನಾಯ್ಕ್ರು, ಗೊಲ್ರು, ಲಿಂಗಾಯ್ತ್ರು, ಐನೋರು, ಮಣ್ಣೊಡ್ರು, ಕಲ್ಲೊಡ್ರು... ಎಲ್ರಿಗೂ ಕೊಡೋಳು. ಇಲ್ದಾಗ ಎಲ್ರತ್ರಾನೂ ಇಸ್ಕೊಳೋಳು. ಇದ್ನ ಕಲ್ಸೋಕೆ ಒಂದೊಂದ್ಸರ್ಕಾರ ಬಂದಾಗ ಒಂದೊಂದ್ಪಠ್ಯ ಬದ್ಲು ಮಾಡ್ಬೇಕಾ?

ನಮ್ಮೂರು ಅತ್ವಾ ಹಳ್ಳಿಮನ್ಗೆಳೆಂದ್ರೆ ಹಾಗೇನೆ; ಅಲ್ಲಿ ಮಕ್ಳು-ಮರಿ, ದನ-ಕರ, ಬೆಕ್ಕು-ನಾಯಿ, ಗಿಡ-ಮರ, ದೇವ್ರು-ದಿಂಡ್ರು ಎಲ್ಲವುಗಳ ಜೊತೇನೂ ಮಾತು, ಮುನ್ಸು, ಸಿಟ್ಟು-ಸೆಡವಿರ್ತಾವೆ.

ಊರು ಸೊಂದಿಗೊಂದಿ ಸುತ್ತಾಡಿ ಕಳ್ಬೆಕ್ಕ್ನಂಗೆ ಮನೆಯೊಳಕ್ಕೆ ಬರ್ತ್ದಿಂಗೆ, ಒಂಚೂರು ಸಿಟ್ಟು ಮಾಡ್ಕೊಂಡ ಅವ್ವ, “ಹೇ! ಊರ್ಮಾರಿ, ಅಜ್ಜಿ  ಯಾಕೋ ಮಾಡ್ಯಾಗೆ ಕೂಗ್ತಾಳೆ ನೋಡು,” ಅಂದ್ಲು.  ಎನೂ ತಿನ್ನೋಕೆ ಕೊಡ್ದೆ ಅಜ್ಜಿ ನೋಡಾಕೆ ಹೇಳಿದ್ಕೆ, "ಈ ವಜ್ಜಿ ಒಳ್ಳೇದು!" ಅಂತ ಗೊಣಗ್ತಾ ಹೋಗಿ ನೋಡಿದ್ರೆ, ಕೊಟ್ಕ್ಯಾಗೆ ಅಜ್ಜಿ, "ಎ ಮಂಜಿ ಸರ್ಕ ಅಕ್ಕಾಡಿಕೆ; ಹಸಿ ಮೇವು ಅಂದ್ರೆ ಬಾರ್ಯಾಡ್ತಾಳೆ. ಬೆಳ್ಗ್ನೊತ್ತು ತರ್ಕಂಡು ತಿನ್ಲಿ ಅಂತಾ ಬಿಟ್ರೆ ಮುಗ್ಲಿಗೆ ಮಕಾ ಎತ್ಕಂಡು ಆ ಮಾಳೆ ಬೀಳತಂಕ ದೂಳೆ ಬ್ರಿಸ್ಕೊಂಡು ಬಾಲ ಎತ್ಕಂಡು ಅರಿಗ್ಗಾಲು ಕೀಳ್ತತೆ. ಈಗ ನೋಡು ದೊಕ್ದೊಕ್ಕೆ ಬಡ್ದಾತವೆ...” ಅಂತ ಬಯ್ದ್ರೂನೆ, ಅದು ಕರೆಯೋ ಎಮ್ಮೆ ಆಗಿದ್ರಿಂದ ಚೂರು ಜಾಸ್ತಿನೇ ಮೇವು ಹತ್ರಕೆ ದಬ್ಬಿದ್ಲು.

ಕೊಟ್ಗ್ಯಾಗೆ ಅಜ್ಜಿ ತಣ್ಗಿದ್ದದನ್ನ ನೋಡಿ, "ಆ ಸಣ್ಕರಿಗೂ ಹಾಕವಾ ಒಂದಿಷ್ಟು," ಅಂದೆ. "ಅದ್ಕೇನಾಗ್ಯಾತೆ ವಟ್ಟೇದಾಗಂಗೆ ಆಗ್ಲೆನಾಗ ಕ್ವಾಣುನ್ತಲೆ ಅಂತದೊಂದು ಮುದ್ದೆ ಮುರ್ದು ತಿನ್ಸಿದಿನಿ; ಒಂದು ಗಿಳ್ಳು ನೀರ್ಕುಡ್ಸಿದ್ನೋ ಕಳ್ಳೂರ. ಆಗ್ಲೇ ಎತ್ತಾಕದ್ನ ಕಲ್ತಿದಾಳೆ..." ಅಂತ ಅದ್ರ ಮೇಲ್ನ ಪ್ರೀತಿ ಸುರ್ದ್ಲು. ಆ ಕರೆಯೊ ಎಮ್ಮೆ ಮುಂದಿನ್ದೆ ಒಂದಿಷ್ಟು ಕರ್ಕೆ ಪಸೆ ತಕ್ಕೊಂಡು ಅದ್ರ ಮುಂದ್ಕೊಗ್ದು, "ತಿನ್ನು ಲೌಡಿ..." ಅಂತಂದು, ಅದ್ರ ಮೈ ಮೇಲೆ ಕೈಯಾಡಿಸಿದ್ಲು.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಚಾಮರಾಜನಗರ ಪ್ರಾಂತ್ಯ | ಅಮೋಸ ಟೈಮ್ಗ ಉಲಿ ಕೆರ ಚೊರಿ ಓಡಾಡಿದಂತ

ಆ ಮಂಜಿನ, ಕರನಾ ಮಾತಾಡಿಸ್ಕೊಂಡು ಬರ್ತಿದಂಗೆ ಅದ್ರವ್ವಳಾದ ಕೋಡು ಮಾರಿ ಸಗಣಿ ಹಾಕೋಕೆ ಶುರು ಮಾಡ್ತಿದ್ದನ್ನ ನೋಡಿ ಅಜ್ಜಿ, “ಇದರ ಬಾಯಾಗ ಮಣ್ಣಾಕ! ಇಷ್ಟಾತ್ತಾಕ ಹೊರ್ಗೆ ಬಿಗ್ದಿದೀನಿ. ಚಳಿ ನಡ್ಗ್ತಾವೆ ಅಂತ ಒಳಕಟ್ಟಿದ್ರೆ ಏನಾಗ್ಯಾತ್ಬ್ಯಾನೆ ಇದ್ಕೆ...” ಅಂತಿದ್ದಂಗೆ, ದಪ್ದಪಾಂತ ಹಾಕ್ಬಿಡೋದು. ಈ ಅಜ್ಜಿ ಮಾತಿಗೆ ಅವು ಮರ್ಯಾದೆ ಕೊಟ್ಟಂಗೆ ಸರ್‍ಲಿ.

ಹುಲ್ಲು ತಿನ್ತಾ ಎಲ್ಲಾ ಬಡಿದಾಡೋಕೆ ಶುರು ಮಾಡ್ತಿದ್ವು. ಅದ್ನ ನೋಡಿ ಅಜ್ಜಿಗೆ ಸಣ್ಣ ಸಿಟ್ಬಂದು, "ಆ ಕೋಡ್ಮಾರಿನ... ಬಿಗಿ ಅದ್ನ ಗೂಟ್ದತ್ತ ಮಕಾ ಎತ್ತಾಕ ಬರ್‍ದಂಗೆ. ಮಂಜಿ ಮುಂದ್ಲುದೆಲ್ಲಾ ಎಳ್ಕಂಡು ತಿನ್ತದೆ..." ಅಂದ್ಲು. ಕೂಡ್ಲೆ ಕರುಳ್ಚುರ್‍ಕೆಂದು, "ಅಗಾ... ನಾಳೀಕೆ ಸ್ಕೂಲ್ ಬಿಡ್ತುಲೆ ಬಂದ್ಬಿಡಪಾ ಎತ್ತಾಕಾಗೋಂತವು ಎಲ್ಡ್ವರೆ ಮಾಡಿಡ್ತೀನಿ," ಅಂತ ಅವುಗಳ ಹಾಹಾಕಾರ ನೋಡಿ ಕೂಡ್ಲೆ ಪರಿಹಾರಾನೂ ಕಂಡ್ಕೊಳ್ಳೋಳು.

ಏನೇ ಆದ್ರೂ ಅವ್ಳು ನ್ಯಾಯ ಪಕ್ಷಪಾತಿ. "ದೊಡ್ರಾಸು... ಅದ್ಕೆ ಎಷ್ಟಾದ್ರೂ ಸಾಲ್ದು," ಅನ್ನೋಳು. ಬೆಳ್ಗೆ ಎದ್ಕೂಡ್ಲೆ ಅವ್ಗಳ ಗಂಜ್ಲನೆಲ್ಲಾ ಬಳ್ದು, ಇಂಡಿ, ಮುಸ್ರೆ ಮುಂದಿಕ್ಕಿ ಹಾಲ್ಕರ್ಯೋಕೆ ಕೂತ್ರೆ, ಅದ್ರ ನಾದಾನ ಅಲ್ಲಾ-ಹನುಮ ಇಬ್ರೂ ಕೇಳುಸ್ಕೋಬೇಕು. ಅದ್ನ ಯಾವ್ ಡೆಸಿಬಲ್ನಲ್ಲಿ ಅಳ್ತೆ ಮಾಡಾನ ಹ್ಞಾಂ? ಕೊನೀಗೆ, "ಹೇ... ಒಂದ್ಮೊಲೆ ಪೂರಾ ಬಿಟ್ಟಿದ್ನಿ ಕುಡಿ. ಆಮೇಲೆ ಮುದ್ದೆ ತಿನ್ವಂತೆ. ಸಂಜೆ ಬರ್ವಾಗ ನಿನ್ಗೆ ಕಾಳ್ತೆನೆ, ಗಂಟ್ಗ್ಯಾ ಹುಲ್ತರ್ತಿರಿ," ಅಂತೇಳೋಳು. ಅವ್ಳು ಹೀಗೇ - ಒಡ್ಲು ಬರ್ದಾಗಿ ಬಂದದ್ನಾಕಾಣೆ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಪ್ರಾಂತ್ಯ | ಹಂಗ ನೋಡಿದ್ರ ಗಂಡಸರು ಎಲ್ಲಾ ಕಡೇನು ಸೋಮಾರಿಗಳ ಮತ್ತ

ಮಳೆಗಾಲ್ದಾಗೆ ಅಣಬೆ, ಕಾಸ್ಗೀರಿ, ಮಿಟ್ಟೆ... ಅವು ಸಿಗ್ಲಿಲ್ಲಾಂದ್ರೆ ಗೊರಿಜಿ ಕೋಲೆಣ್ಣೆ ಒಳೆಒಡ್ಕ, ನುಚ್ಚೋಣಿ, ಸೆಳ್ಳಾಯಿ, ಹತ್ತಿಹಣ್ಣು, ಈಚ್ಲಣ್ಣು, ನಾಯ್ನೇರ್ಳೆ, ಕೊನೇಪಕ್ಷ ಬಡ್ಮೆ ಹಣ್ಣಾದ್ರೂ ಇರೋವು. ತಲೆ ಮೇಲೆ ಕಾಳ್ತೆನೆ, ಗಂಟ್ಗ್ಯಾ ಗರ್ಕೆ, ಹಾಲ್ಗರ್ಕೆ ಹುಲ್ಲೊರೆ ಹೊತ್ಕೊಂಡು ಬರೋಳು.

ಬದ್ಕಿಗೆ ಎಷ್ಟು ಒಗ್ಗಿಹೋಗಿದ್ಲು ಅಂದ್ರೆ, ಬೆಲೆ ಏರ್ಕೆ, ಹಣದುಬ್ರ, ಜಿಎಸ್ಟಿ, ಷೇರ್ಪೇಟೆ ಕರ್ಡಿ, ನಿಪ್ಟಿ, ಬುಲ್, ಸೂಚ್ಯಂಕ… ಇಂತಹ ಅಭಿವೃದ್ಧಿ ಅರ್ಥಶಾಸ್ತ್ರದ ಯಾವ ಪರಿಭಾಷೇನೂ ಅವ್ಳತ್ರ ಸುಳೀತಿರ್ಲಿಲ್ಲ. ಇನ್ನೊಂದೂರ್ಗೆ ಹೋಗ್ಲಿಲ್ಲ. ಅನಾರೋಗ್ಯಾಂತ ಮಲ್ಗಿಲ್ಲ.

ಹೊಲ್ದಲ್ಲಿ ಬೆಳ್ದ ಹೀರೆ, ಬೆಂಡೆ, ಹಾಗ್ಲ, ಮೆಣ್ಸು; ಹಾಲು, ಗಿಣ್ಣಾಲು, ಮೊಸ್ರು, ಮಜ್ಗೆ, ಸಣ್ವಿನ್ಸೊಪ್ನೆಲ್ಲವ - ಊರ್ನಾಗಿರೊ ದಾಸ್ರು, ದೊಂಬ್ರು, ದಕ್ಲರು, ಸಾಬ್ರು, ಸುಕಾಲ್ರು, ನಾಯ್ಕ್ರು, ನಾಯಿನ್ದ್ರು, ಗೊಲ್ರು, ಗೋವಳ್ಗ್ರು, ಲಿಂಗಾಯ್ತ್ರು, ಐನೋರು, ಮಣ್ಣೊಡ್ರು, ಕಲ್ಲೊಡ್ರು... ಎಲ್ರ ಮನ್ಗೆ ಕೊಡೋಳು. ಇಲ್ದಾಗ ಎಲ್ರತ್ರಾನೂ ಇಸ್ಕೊಂಡು ತರೋಳು. ಇದ್ನ ಕಲ್ಸೋಕೆ ಒಂದೊಂದ್ಸರ್ಕಾರ ಬಂದಾಗ ಒಂದೊಂದ್ಪಠ್ಯ ಬದ್ಲು ಮಾಡ್ಬೇಕಾ?

ಏನೇ ಆಗ್ಲಿ... ಇಂತ ಅಜ್ಜೀರು ರಷ್ಯಾದಲ್ಲೋ ಉಕ್ರೇನಲ್ಲೋ ಇದ್ದಿದ್ರೆ ಬರೀ ಪ್ರೀತಿ ಬೆಳೇನೆ ಬೆಳ್ದಿರೋರು.

ಮುಖ್ಯ ಚಿತ್ರ ಕೃಪೆ: ಐಶ್ವರ್ಯಾ ಮುತ್ತುಕುಮಾರನ್
ನಿಮಗೆ ಏನು ಅನ್ನಿಸ್ತು?
4 ವೋಟ್