ದೇಸಿ ನುಡಿಗಟ್ಟು - ಕುಂದಗೋಳ ಪ್ರಾಂತ್ಯ | ನಾ ಹೇಳಿದ್ ಕೂಡ್ಲೇ ನೀವು ರೊಟ್ಟಿ ಮಾಡಾಕ ಸಾಧ್ಯಿಲ್ಲ. ಆದ್ರೂ...

Jower Roti 5

ರೊಟ್ಟಿ ಮಾಡುವಾಗ ಹೊಮ್ಮ ನಾದ ಕೇಳುದ ಹಿತ. ಆದರ, ಒಮ್ಮೊಮ್ಮೆ ಈ‌ ನಾದ ಒಬ್ಬೊಬ್ಬರಿಗೆ ಒಂದೊಂದು ಸಂದೇಶ ರವಾನಿಸ್ತೈತಿ. ಸಿಟ್ಟಿಗೊಂದು ಹೊಡತ. ಖುಷಿಗೊಂದು ಹೊಡತ. ತಿಂಗಳ‌ ಹೊಟ್ಟೆನೋವಿಗೆ ಮತ್ತೊಂದ ಹೊಡತ. ಒಟ್ಟ, ರೊಟ್ಟಿ ಎಲ್ಲರ ಬಡತಾ ತಿಂದು ಸುಡು‌ಹಂಚಿನ ಮ್ಯಾಲಿಂದ ಎದ್ದು ಬಂದು ಹೊಟ್ಟಿಗೆ ಬೀಳುದ್ರಾಗ ಸಾಕಷ್ಟು ಲೋಕ ಕಂಡುಬರೂದಂತು ಹೌದು

ರೊಟ್ಟಿ ಮಾಡುದಂದ್ರ ಅದೇನು ದೊಡ್ಡ ವಿದ್ಯಾ ಅಲ್ಲಾ. ಯಾವ್ದ ಆಗ್ಲಿ, ಕಲಿಯುತನಕ ಬ್ರಹ್ಮವಿದ್ಯೆ, ಕಲತ ಮ್ಯಾಲ ಮಂಗ್ಯಾನಾಟ. ಬರ್‍ರಿ, ಒಂದು ರೊಟ್ಟಿ ಹಿಂದ ಏನೇನೆಲ್ಲ ಅಡಗಿರ್ತದ ನೋಡುಣ, ಎಷ್ಟೆಲ್ಲ ನೈಪುಣ್ಯತೆ ಇರ್ತತಿ ತಿಳಿಯುಣ.

ಮದಲ, ಜ್ವಾಳ ಹಸನ ಮಾಡಿ ಗಿರಣಿಗೆ ಕಳಸಬೇಕು. ಗಿರಣಿಗೆ ಹೋಗರು ಸಲಪ ಶ್ಯಾಣೇರ ಇರ್ಬಕು. ಹಿಟ್ಟು ಉಳ್ಟ್ ಬೀಳಾಕತ್ತೇತೋ, ಏನ ಜಿನಗ ಬೀಳಾಕತ್ತೇತೊ ಒಮ್ಮೆ ಚೆಕ್ ಮಾಡಿಬಿಡಬೇಕು.‌ ಬಾಳ ಉರುಟು ಬಿದ್ದರ ರೊಟ್ಟಿ ವರಟಾಗ್ತವು. ಮೆತ್ತನ ರೊಟ್ಟಿ ಬೇಕಂದ್ರ ಎಷ್ಟು ಸಣ್ಣೇಗ ಹಿಟ್ಟ ಹಾಕಸ್ತೀರೊ ಅಷ್ಟ ಚಲೋ ರೊಟ್ಟಿ ಏಳತವು. ಹಂಗಂತ ಗಂಧದಂಗ ಹಾಕಿಸಿದ್ರ ರೊಟ್ಟಿ ಲೊಗು ಹೀಚಂಗಿಲ್ಲ; ರೊಟ್ಟಿ ಬಡಿಯೋರಿಗೆ ತ್ರಾಸ ಆಕ್ಕೇತಿ. ಹಿಂಗಾಗಿ‌, ಹಿಟ್ಟಿಗೆ ಒಂದು ಹದಾ ಐತಿ‌, ಅದು ಗಿರಣಿ‌ ಅಣ್ಣಗು ತಿಳಿದಿರ್ತೈತಿ. ನೀವು ಒಮ್ಮೆ ಚೆಕ್ ಮಾಡಿ ಎಷ್ಟ ನುಣ್ಣಗ ಬೇಕೊ ಹೇಳಿಬಿಡಬೇಕು.

ಹಿಟ್ಟ ಹಾಕಿಸ್ಕೊಂಡ ಬಂದ ಕೂಡ್ಲೆ ಹಿಂದಗೂಟನ ಡಬ್ಬಿಗೆ ತುಂಬಿ ಮುಚ್ಚಳ ಬಿಗಿಬಾರ್ದು. ಹಿಟ್ಟಾರುಮಟ ಒಂದೀಟ ಹೊತ್ತು ಬಾಯಿ ಹಾರಿಹೊಡದ ಇಡಬಕ - ಹಿಟ್ಟಿನ ಡಬ್ಬಿದು. ಆರಿಂದ ಡಬ್ಬಿಗೆ ತುಂಬ ಬೇಕು. ಹತ್ತ-ಹನ್ಯಾಡ ದಿನಕ್ಕ ಏಟ ಬೇಕೊ ಆಟ ಹಿಟ್ಟಾಕಿಸಿ ಇಡಬಕ. ಬಾಳ ಹಳೆ ಹಿಟ್ಟಾದ್ರ ಜಿಗಟ ಉಳಿಯುದಿಲ್ಲ, ಹಿಟ್ಟಿನ್ಯಾಗ ರೊಟ್ಟಿ ರುಚಿನು ಆಗೂದಿಲ್ಲ, ಬಡಿಯರಿಗು ಪರಾಪರಾ ಹರದ್ರ, ರೊಟ್ಟಿ ಮ್ಯಾಲೆ - ತಿನ್ನರ ಮ್ಯಾಲೆ ಸಿಟ್ಟ ಬರ್ತೇತಿ. ಅದಕ್ಕಾಗಿ ಸ್ವಲ್ಪ-ಸ್ವಲ್ಪ‌ ಹಿಟ್ಟಾಕಿಸಿ ಇಟಕೊಬೇಕು. ಜ್ಬಾಳದವಂದು ಅಷ್ಟೂ ಗಿರಣಿಗಿ ಹಾಕಸುದಲ್ಲ.

Image
Jower Roti 1

ರೊಟ್ಟಿಗೆ ಎರಡ ತರ ಜಿಗಟ ಹಾಕ್ಕೊಬೋದು. ಮದ್ಲನೇದ್ದು - ಕೊಣಮಿಗಿಗೆ ಹಿಟ್ಟ ಹಾಕಿ ಆಂಚು ಕಟ್ಟಿ (ನಾವು ಅವ್ವಗ, "ಎವ್ವಾ ನಡುವೆ ಬಾವಿ ಮಾಡು," ಅಂತಿದ್ವಿ), ನಡುವೆ ಕುದಿ ಎಸರು ಹಾಕಿ, ಒಂದು ಚಮಚದ್ದೊ ಚುಚಗದ್ದೊ ತುದಿಯಿಂದ ತಿರುವಿ ಜಿಗಟಿನುಂಡಿ ಮಾಡೂದು. ಎರಡನೇದ್ದು - ಕುದಿ ಎಸರಿಗೆ ಒಣ ಹಿಟ್ಟು ಸುರುವಿ, ಅದೇ ಚುಚಗದ ಹಿಂದ್ಲಿಂದ್ ಸಣ್ಣ ಉರಿ ಇಟ್ಟು ತಿರುವಿ ಜಿಗಟಿನುಂಡ ತಯಾರಿ ಮಾಡೋದು. (ಈ ಎಸರಿಗೆ ಎರಡ ಕಲ್ಲುಪಿನ‌ ಹರಳ ಹಾಕೋ ಪದ್ಧತಿನು ಕೆಲವ ಕಡೆ ಐತಿ).

ಇದರೊಳಗ ಹೆಂಗ ಮಾಡಕೊಂಡ್ರು ರೊಟ್ಟಿ ಅಂತು ಆಗ್ತವು. ನಿಮಗ ಯಾದು ಚಲೋ ಅನಸ್ತೈತೋ ಅದನ್ನ ಆರಸ್ಕೊರ್ರಿ.

ಈಗ ಜಿಗಟಿನುಂಡಿಗೆ ಅದರ ಎರಡರಷ್ಟು ಒಣ ಹಿಟ್ಟು ಹಾಕ್ಕೊಂಡು, ಜಿಗಟಿನ ಜೋಡಿ ಒಣ ಹಿಟ್ಟ ಚಲೋತ್ನೇಗ ಕೂಡಿಕೊಳ್ಳುಹಂಗ ಹದಡ ಹಚ್ಚಿ ನಾದ್ರಿ. ನಡುನಡುವೆ ನೀರು ಚಿಮುಕಿಸಿಕೊಳ್ರಿ. ರೊಟ್ಟಿ ಬಡಿಯು ಹದಕ್ಕ ಬಂದ‌ ಮ್ಯಾಲ ಉದ್ದಕ ಹೊಸದ ಕ್ವಾಣಮಗಿ ಅಂಚಿಗೆ ಆನಿಸಿ ಇಟ್ಕೊಂಡು, ಒಂದೊಂದ ಉಳ್ಳಿ ಹರ್ಕೊಂಡು ಎಡಗೈ ಕಿರುಬೆರಳ ಅಂಚಲೇ ಅಂಚ ಕಟ್ಕೊಂತ ಬಲಗೈಲೇ ಬಡಕೋತ ಹೋದ್ರ ರೊಟ್ಟಿ ಅಗಲ ಆಕ್ಕೋಂತ ಹೊಕ್ಕತಿ.

ಕಲಕಿಯೋರು ಸ್ವಲ್ಪ ಜಿಗಟ ಮುಂದ ಮಾಡ್ಕೊಬೇಕು, ಇಲ್ಲಂದ್ರ ರೊಟ್ಟಿ ಹರಿತಾವು. ಕೆಲವೊಮ್ಮೆ ದೊಡ್ಡವಾದಂಗ ತಿರಗಂಗಿಲ್ಲ. ಸಾಮಾನ್ಯವಾಗಿ ಗ್ಯಾಸ್ ಕಟ್ಟಿ ಮ್ಯಾಲ ರೊಟ್ಟಿ ಬಡಿಯು ಮುಂದ ಹೀಂಗಾಗು ಚಾನ್ಸಸ್ ಐತಿ. ಅವಾಗ ಒಂದಿಷ್ಟು ದೊಡ್ಡವಾದ ಕೂಡಲೇ ದಪ್ಪ ಐತಿ‌ ಅನ್ನಿಸಿದ‌ ಕಡೆ ಹಗರನ ಲಟ್ಟಣಗಿ ತಗೊಂಡು ಉದ್ದಿಬಿಡ್ರಿ; ರೊಟ್ಟಿ ಅಗ್ದಿ ಜಲ್ದಿ ನೀವಂದ್ಕೊಂಡಷ್ಟು ದೊಡ್ಡದಾಗಿಬಿಡ್ತೇತಿ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಪ್ರಾಂತ್ಯ | ಗಾಂಧೀ ತಾತುನು ಕಟ್ಟೆ ಪುರಾಣಮು

ಬಡಿಯೋದು ಅಥವಾ ಉದ್ದೋದನ್ನ ಬಾಳ ಲೊಗು ಕಲಿಬೋದು. ಆದರ, ಬೇಯಿಸುದರಾಗ ರೊಟ್ಟಿಯ ಗಮ್ಮತ್ತು ಅಡಗೇತಿ. ಬೇಯಿಸುದ್ರಾಗ ಸಲಪ ಹೆಚ್ಚು-ಕಡಿಮೆ‌ ಆದ್ರು, ರೊಟ್ಟಿ ಎಷ್ಟ ಚೆಂದ ಬಡದ್ರು ಉಪಯೋಗ ಬೀಳಲ್ಲ.

ಬಡಿದ ರೊಟ್ಟಿನ ನಾಜೂಕಿಲೇ ಎಡಗೈಲೇ ಸರಿಸಿ, ಬಲಗೈ ಅಂಗೈ ಮೇಲೆ ಹಾಕ್ಕೊಬೇಕು. ಈಗ ಕೊಣಮಿಗಿ ಮ್ಯಾಲಿದ್ದ ರೊಟ್ಟಿ, ಹಂಚಿನ ಮ್ಯಾಲ ಡಬ್ಬ ಬೀಳಬೇಕು... ಹಂಗ ಹಾಕ್ರಿ. ಒಂದು ಮೈ ಕಾಟನ್ ಬಟ್ಟಿಲೇ ನೀರೊರಸಬಕು - ಒಣ ಹಿಟ್ಟಿನ ಕಣ್ಣ ಕಣ್ಣ ಕಾಣದಂಗ. ಅದು ಪೂರ್ತಿ ಆರೊ ಮದಲ ಸಣ್ಣ ಗುಳ್ಳಿ ಬಂದಾಗ ಹೊಳ್ಳಿಸಿ ಹಾಕಬೇಕು; ಹಿಂಗ ಮತ್ತೆರಡ ಸಲ ಹೊಳ್ಳಿಸಿ ಹಾಕಿದ್ರ ರೊಟ್ಟಿ ರೆಡಿ. ನೀವು ಹೆಚ್ಚ ತೆಳ್ಳಗ ಮಾಡಿದ್ರ ರೊಟ್ಟಿ ಕುರುಕುರು ಆಗ್ತವು. ದಪ್ಪ ಬಡದಿದ್ರ ಮೆತ್ತಗಾಗ್ತವು. ಬೇಯಿಸುವಾಗ ಜ್ವಾಕೀಲೆ ತಿರುವಿ ಹಾಕಬೇಕು. ಇಲ್ಲಂದ್ರ ಹರಿಯು ಸಾಧ್ಯಾತಾ ಇರ್ತೈತಿ.

ನಾ ಹೇಳಿದ ಕೂಡಲೇ ನೀವು ರೊಟ್ಟಿ ಪರ್ಫೆಕ್ಟ್ ಮಾಡಾಕ ಸಾಧ್ಯಿಲ್ಲ. ಇದೊಂತರಾ ಧ್ಯಾನ. ಬೈ ಪ್ರ್ಯಾಕ್ಟೀಸ್ ಸಿದ್ದಿಸ್ತೈತಿ.

ಇನ್ನು, ರೊಟ್ಟಿ ಒಳಗ ನಾನಾ ನಮೂನಿ ಅದಾವು. ಜ್ವಾಳದ‌ ರೊಟ್ಟಿ ಹಂಗ ಸಜ್ಜಿ‌ ರೊಟ್ಟಿ, ಅಕ್ಕಿ ರೊಟ್ಟಿ. ಒಂದೊಂದಕ್ಕೂ ವಿಧಾನದಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳದವು. ಆದರ, ಬಿಸಿ ಜೋಳದ ರೊಟ್ಟಿ ತಿಂದವರಿಗೆ ಗೊತ್ತದರ ಗಮ್ಮತ್ತು.

ಮನ್ಯಾಗ ರೊಟ್ಟಿ ಮಾಡಕೊಂಡ ತಿನ್ನಾಕ ಆಗದಿರೋರಿಗೆ ಇನ್ನೊಂದು ಸುಲಭ ದಾರಿ ಐತಿ. ರೊಟ್ಟಿ‌ ಊಟದ ಖಾನಾವಳಿಗಳು‌ ಈಗ ಎಲ್ಲಾ ಕಡೆನು ಅದವು. ಒಮ್ಮೆ ಉಂಡು ನೋಡ್ರಿ, ಮತ್ತ-ಮತ್ತ ರೊಟ್ಟಿ ತಿನಬೇಕು ಅನಸ್ತದ.

Image
Jower Roti 4

ಬಾಲ್ಯದೊಳಗ ಮೂರೊತ್ತು ರೊಟ್ಟಿ ಕೊಡೋರು. ಅವಾಗ ಬ್ಯಾಸರ ಅನಸೋದು - ನಮ್ಮವ್ವ ದಿನಾ ರೊಟ್ಟಿ ಮಾಡ್ತಾಳಂತ. ಈಗೀಗ ತಿಳ್ಯಾಕತ್ತತಿ, ರೊಟ್ಟಿ ತಿಂದದ್ದಕ್ಕ ಇನ್ನು ಗಟ್ಟಿ ಅದಿವಿ ಅಂತ.

ರೊಟ್ಟಿ ಮಾರತಾರಲ್ಲ... ಜ್ವಾಳ ಹಿಟ್ಟ ಮಡ್ಸುವಾಗ ದಪ್ಪಕ್ಕಿ ಸೇರಸ್ತಾರ, ಹಿಡಿ ಉದ್ದಿನಬೇಳೆ ಹಾಕ್ತಾರ ರೊಟ್ಟಿ ಹೀಚಲಿ ಅಂತ ಇತ್ಯಾದಿ‌ ಏನೇನೊ ಮಾತದವು. 'ಮಾರೂದ' ಅಂತ ಶಬ್ಧ ಬಂದ‌ ಕೂಡಲೇ ಅದೊಂದು ಪ್ಯೂರ್ ವ್ಯಾಪಾರ, ಅದಕ್ಕ ನನ್ನದೇನು ವ್ಯಾಖ್ಯಾನ ಇಲ್ಲ. ಅದು ಅವರ ಬದಕಿನ ದಾರಿ.  ಇದರಾಗ ಅಗದೀ ಪ್ರಾಮಾಣಿಕರು ಇದ್ದದ್ದನ್ನು ನಾ ಕಂಡೀನಿ.

ಜ್ವಾಳ ಎಲ್ಲಿಂದ ಬಂತು‌, ಹೆಂಗ ಬಂತು, ಅದರಾಗ ಇದು ಯಾವ ಸ್ಪೇಸಿಜಿನ ಧಾನ್ಯ? ಇದರಾಗ ಜಿಂಕು, ವಿಟ್ಯಾಮಿನ್ನು, ಫೈಬರ್, ನ್ಯುಟ್ರಿಯೆಂಟ್ಸು ಎಷ್ಟೆಷ್ಟ ಐತಿ... ಅನ್ನೂದನ್ನ ನಿಮಗ ವಿಕಿಪಿಡಿಯಾ ಹೇಳ್ತತಿ. ನಾವಂತೂ ಇದನ್ನೆಲ್ಲ ಲೆಕ್ಕದಾಗಾಗಲಿ ತಲ್ಯಾಗಲಿ ಇಟ್ಕೊಂಡು ರೊಟ್ಟಿ ತಿಂದವರಲ್ಲ. ರೊಟ್ಟಿ ನಮಗ ಪರಮಪ್ರಿಯವಾದ ನಮ್ಮೂರಿನ ಮುಖ್ಯವಾದ ಆಹಾರ - ಇಷ್ಟ ಮಾತ್ರ ಪಕ್ಕಾ.

ರೊಟ್ಟಿ ಮಾಡುವಾಗ ಒಂದು ನಾದ ಹೊಮ್ಮತೈತಿ; ಅದನ್ನ‌ ಕೇಳುದ ಸೈತ ಬಾಳ ಹಿತ. ಆದರ, ಒಮ್ಮೊಮ್ಮೆ ಈ‌ ನಾದ ಒಬ್ಬೊಬ್ಬರಿಗೆ ಒಂದೊಂದು ಸಂದೇಶ ರವಾನಿಸ್ತೈತಿ. ಅತ್ತಿಗೆ ಕೇಳಸ್ಲಿ ಅಂತಾ ಸೊಸೆ ಬಡಿಯೋ‌ ರೊಟ್ಯಾಗ ಒಂದು ತಾಳ. ಗಂಡ ಯಾಕ ಇನ್ನು ಬರಲಿಲ್ಲ ಉಣ್ಣಾಕ‌ ಅನ್ನೊ ಶೃತಿ ಹಿಡಿದು ಬಡುಯೋ ನಾದದಾಗ ಬ್ಯಾರೆ ಧಾವಂತ ಕೇಳಿಸ್ತದ. ತವರ ಮನಿ ಆಸೆಯಾದ ಹೆಣ್ಣುಮಕ್ಕಳ ರೊಟ್ಟಿ ಸಂಗೀತನ ಬ್ಯಾರೆ. ಸಿಟ್ಟಿಗೊಂದು ಹೊಡತ, ಖುಷಿಗೊಂದು ಹೊಡತ. ತಿಂಗಳ‌ ಹೊಟ್ಟೆನೋವಿಗೆ ಮತ್ತೊಂದ ಹೊಡತ. ಒಟ್ಟ ರೊಟ್ಟಿ ಎಲ್ಲರ ಬಡತಾ ತಿಂದು ಸುಡು‌ಹಂಚಿನ ಮ್ಯಾಲಿಂದ ಎದ್ದು ಬಂದು ಹೊಟ್ಟಿಗೆ ಬೀಳುದ್ರಾಗ ಸಾಕಷ್ಟು ಲೋಕ ಕಂಡುಬರೂದಂತು ಹೌದು.

ಇನ್ನ, ರೊಟ್ಟಿ ಜೋಡಿ ಏನೆನೆಲ್ಲ ಕಾಂಬಿನೇಷನ್ನ ತಿಂದ್ರ ರುಚಿ ಹೆಚ್ಚಿಸಬೋದು ಅನ್ನುದನ್ನ ಮುಂದಿನ ಅಧ್ಯಾಯದಾಗ ನೋಡುಣ. ಅಲ್ಲಿತನ ರೊಟ್ಟಿ ಮಾಡುದ ಕಲಿರಿ. ನಮಸ್ಕಾರ.

ನಿಮಗೆ ಏನು ಅನ್ನಿಸ್ತು?
7 ವೋಟ್