ದೇಸಿ ನುಡಿಗಟ್ಟು - ಗದಗ ಸೀಮೆ | 'ಪಾಪ ಹುಡಗಿ... ಸೂಟಿಗೆ ಅಂತ್ಹೇಳಿ ಊರಿಗ ಬಂದಿತ್ತು, ಹಿಂಗಾತು...!'

ಈ ಮದ್ಲ ಗಿಡಾ ಹತ್ತಿದ್ವ ಹುಡುಗೂರು, "ಯಪ್ಪೋ… ಯವ್ವೋ… ಜೇನ್ ಹುಳಾ ಎದ್ದಾವ್ ಲೇ ಓಡ್ರಿ…" ಅಂದ್ರು. ಆಜುಬಾಜು ಇದ್ದ ಹುಡುಗೂರು-ನಾವು ಎಲ್ಲಾ ದಿಕ್ಕೇಟ್ ಓಡಾಕತ್ವಿ. ಆದ್ರ, ನಾವ್ ಎಲ್ಲಿ ಹೊಕ್ಕೇವಿ ಅಲ್ಲೇ ಬರಾಕತ್ವು ಹುಳಾ. ಏನ್ ಮಾಡಬೇಕ ಯಾರಿಗೂ ಗೊತ್ತಿಲ್ಲ. ಓಡಿದ್ವಿ… ಓಡಿದ್ವಿ… ನೋಡಿದ್ರ ನಾ ಒಬ್ಬಕೀನ ಅದೀನಿ, ಬಾಕೀರೆಲ್ಲ ತೆಂಗಿನ ತ್ವಾಟದಾಗ ಅದಾರ!

ಇನ್ನೊಂದ ಸ್ವಲ್ಪ ದಿನಾ ಬ್ಯಾಸಗಿ ಶುರುವಕ್ಕೇತಿ. ಎಲ್ಲಾರ ಶಾಲಿನೂ ಸೂಟಿ ಅಕ್ಕಾವ್. ರಜೆ ಬಂತಂದ್ರ ನಮ್ಮ ಮನ್ಯಾಗ ಎಲ್ಲಾರಿಗೂ ಒಂದ ಘಟನೆ ಅಂತ್ರು ಭಾರಿ ನೆನಪಿಗೆ ಬರತೈತಿ ಬ್ಯಾಸಗಿ ಬಿಸಲಗತೆ.

ಆ ವರ್ಷ ನಮ್ಮ ಡ್ಯಾಡಿ ಶಾಲಿ ಇನ್ನು ರಜೆ ಕೊಟ್ಟಿರಲಿಲ್ಲ. ನಮ್ಮ ಶಾಲಿ ಸೂಟಿ ಆಗಿದ್ವು. ನಮ್ಮ ತಮ್ಮಾ ಇನ್ನೂ ಸಣ್ಣಾವ ಇದ್ದ; ಅದಕ, ನನ್ನ ಅಷ್ಟ ಅಮ್ಮಾರ ಊರಿಗೆ ಕಳಸಿದ್ರು. ಊರಿಂದ ಮೊಮ್ಮಕ್ಕಳ ಬಂದ್ರ ಅಜ್ಜಿಗಳ ಉಪಚಾರ ಜೋರ ಇರತೇತಿ.

ನಮ್ಮ ಅಮ್ಮಗ ನಾವ್ ಅಂದ್ರ ಭಾರಿ ಜೀವ. ಮುಂಜಾನೆ ಜಲ್ದಿ ಎಬ್ಬಸಂಗಿಲ್ಲ, ಹಾಲ ಹಿಂಡಾಕತ್ರ ಮದ್ಲ ನಮಗ ವಾಟೆದಾಗ ಹಿಂಡಿಕೊಡಾಕಿ, ಮಜ್ಜಿಗಿ ಮಾಡಾಕ ಹೆಪ್ಪ ಹಾಕಿದ ಮಸರ ಮ್ಯಾಲಿನ ಕೆನಿ ಮಸರ ನಮಗ, ಮಜ್ಜಿಗಿ ಕಡ್ಯಾಕತ್ರ ಕಡಗೋಲಿಗೆ ಹತ್ತತಿದ್ದ ಬೆಣ್ಣಿ ನಮ್ಮ ಹೆಸರಿಲೆ ಮೀಸಲು. ಅವಾಗ ಹಬ್ಬದಾಗ ಬಿಟ್ರ ಬ್ಯಾರೆ ದಿನ ಅನ್ನ ಮಾಡ್ತಿರಲಿಲ್ಲ. ಆದ್ರ, ಪ್ಯಾಟ್ಯಾಗಿಂದ ಬಂದ ಹುಡುಗೂರು ರೊಟ್ಟಿ, ನವಣಕ್ಕಿ ಕಿಚಡಿ, ಜ್ವಾಳದ ಸುಚ್ಚಿನ ಸಂಗಟಿ ಏನ್ ತಿಂತಾವ ಅಂತ ನಮ್ಮ ಅಮ್ಮ ನಮಗ ಅಂತ ಅಕ್ಕಿ ತರತಿದ್ಲು. ಇಲ್ಲಾ ಅಂದ್ರ, ಕಂಟ್ರೋಲ್ ಅಕ್ಕಿನ ನಾಕೈದ ಸಲಾ ತೊಳದ ಅನ್ನಾ ಮಾಡತಿದ್ಲಿ.

ಸಾಂದರ್ಭಿಕ ಚಿತ್ರ | ಕೃಪೆ: ಸಂಕಲನ್ ಬಾನಿಕ್

ಒಟ್ಟನ್ಯಾಗ ನಮ್ಮ ಬ್ಯಾಸಗಿ ರಜೆ ಪೂರಾ ಅಮ್ಮನ ಸೆರಗನ್ಯಾಗ ಕಳಿತಿತ್ತು. ಆದ್ರೂ, ನಮಗೂ ಕೆಲಸಾ ಇರತಿದ್ವು. ಹೊಲಕ್ಕ ಹೋಗಿರೊ ನಮ್ಮ ಮಾಮಾರಿಗೆ ರೊಟ್ಟಿ ಕೊಟ್ಟ ಬರೋದು, ನೀರಿನ ಬಾಟ್ಲಿ ಕೊಟ್ಟ ಬರೋದು - ಇವು ನಮ್ಮ ಪಾಲಿನ ಕೆಲಸ. ನಮ್ಮ ಅಜ್ಜಾರ ಹೊಲಕ್ಕ ಹೋಗತಿದ್ದಾಗ ತತ್ರಾಣ್ಯಾಗ ನೀರ್ ವೈತಿದ್ದ್ರಂತ. ಮಣ್ಣಿಂದ ಮಾಡಿರೊ ನೀರಿನ ಕ್ಯಾನ್ ಈ ತತ್ರಾಣಿ. ಭಾರಿ ಒಜ್ಜಿ ಇರತೇತಿ. ಹೊಲಕ್ಕ ಬುತ್ತಿ ಕೊಡಾಕ ಹೋದ್ರ ಆ ಬುತ್ತಿ ಗಂಟನ್ಯಾಗ ನಮಗೂ ಒಂದ ಒಂದ ರೊಟ್ಟಿ ಸೇರಸಿ ಕಟ್ಟಕಿ ನಮ್ಮ ಅಮ್ಮ, "ಹೊಲದಾಗ ಊಟ ಸವಿ ಹತ್ತತೇತಿ ತಿನ್ನ ಹೋಗ್ರಿ," ಅಂತಿದ್ಲು.

ಬುತ್ತಿ ನೀರು ಕೊಟ್ಟು, ಹಳ್ಳದ ದಂಡ್ಯಾಗ ಇದ್ದ ಹುಂಚಿಕಾಯಿ ಗಿಡದ ಬುಡಕ ಸಾಕಾನ್ನಮಟ ಆಡಿ ಸಂಜಿ ಕಡೆ ಮನಿ ದಾರಿ ಹಿಡಿತಿದ್ವಿ. ಒಂದ ಸಲ ಮನ್ಯಾಗ ಎಲ್ಲಾರೂ ಬ್ಯಾಡ ಅಂದ್ರೂ, ನಾನು ನಮ್ಮ ಅಣ್ಣಾರು ಗುಡ್ಡಾ ಸುತ್ತಾಕ ಹೋಗಿದ್ವಿ. ಅಡ್ಯಾಡಕೋತ್ ನಮ್ಮ ಹೊಲದ ಹತ್ರ ಬಂದಾಗ, "ಹಳ್ಳದ ಅಕ್ಕಡೆ ಮಲ್ಲಾಡ ಹುಂಚಿಕಾಯಿ ಸಿಗತಾವು, ಬರ್ರಿ ಹರಕೊಂಡ ಬರುಣು..." ಅಂದಾ ನಮ್ಮ ಅಣ್ಣ. "ಬ್ಯಾಡ ಲೇ... ಭಾಳ ಹೊತ್ತ ಆತ್ ನಾವ್ ಬಂದು. ಹಳ್ಳಾ ದಾಟಿ ಅಕ್ಕಡೆ ಬ್ಯಾರೆ ಹೋಗಬೇಕ. ಬರ್ರಿ ಇನ್ನೊಂದ ದಿನಾ ಬರಾಕ ಬರ್ತೇತಿ," ಅಂತಾ ನಮ್ಮ ದೊಡ್ಡ ಅಣ್ಣ ಬೈದಾ. ನಾವ್ ಕೇಳಬೇಕಲ್ಲ...! "ನೀ ಬರದಿದ್ದರ ಬಿಡ್, ನಾವ್ ಹೊಕ್ಕವಿ," ಅಂದ್ ನಮ್ಮ ದೊಡ್ಡ ಅಣ್ಣನ್ ಅಲ್ಲೇ ಬಿಟ್ಟ ಹಳ್ಳಾ ದಾಟಿ ಮಲ್ಲಾಡ ಹುಂಚಿಕಾಯಿ ಗಿಡದ ಹತ್ರ ಹೋದ್ವಿ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಾಡವರ ಕನ್ನಡ | 'ನಂಕೋಡೆ ಒಲಿ ಮ್ಯಾನೆ ಇತ್ತೂಕಾದ್ರ ನಿಂಕೋಡೆ ಎಂತಕೆ ಹೇಳ್ತದೆ?'

ನಮಗಿಂತ ಮದ್ಲ ಒಂದಿಷ್ಟ ಹುಡುಗೂರು ಗಿಡಾ ಹತ್ತಿ ಬೋಟ್ ಕೀಳಾಕತ್ತಿದ್ರು. ನಾನ್ ಗಿಡದ ಕೆಳಗ ನಿಂತ, ನಮ್ಮ ಅಣ್ಣಾರಿಗೆ, "ಅಲ್ಲೆ ಅದಾವು... ಇಲ್ಲಿ ಅದಾವು... ಇವು ಹಣ್ಣ ಆಗ್ಯಾವು... ಅವು ಹಣ್ಣ ಆಗ್ಯಾವು," ಅನ್ನಾಕತ್ತಿದ್ದೆ. ಅಷ್ಟರಾಗ ನನ್ನ ಬಟ್ಟಿಗೆ ಯಾವದ ಹುಳಾ ಬಂದ ಕಡಿತು. ನಾ ಜೋರ ಬಾಯಿ ಮಾಡಿ ನಮ್ಮ ಅಣ್ಣನ ಕರದ್ಯಾ. ಒಬ್ಬಾಂವ ಗಿಡದಾಗ ಇದ್ದ, ಇನ್ನೊಬ್ಬ ಕೆಳಗ ಬಿದ್ದಿದ್ದ ಬೋಟ್ ಆರಸಕೊಳ್ಳಾಕತ್ತಿದ್ದ. ನಾ ಚೀರಿದ್ದ ಕೇಳಿ ಇಬ್ಬರೂ ಬಂದ್ರು. "ಅಯ್ಯ... ಜೇನ್ ಹುಳಾ ಬೇ ಅವ್ವಿ... ಏನೂ ಆಗಂಗಿಲ್ಲಾಳ..." ಅಂದು, ಬೆರಳಾಗ ನಟ್ಟಿದ್ದ ಜೇಜ ಹುಳದ ಮುಳ್ಳ ತಗದಾ ನಮ್ಮ ಸಣ್ಣ ಅಣ್ಣ.

ನಾವ್ ಇಷ್ಟ ಮಾಡಂಗಿಲ್ಲ, ಈ ಮದ್ಲ ಏನ್ ಗಿಡಾ ಹತ್ತಿದ್ವಲ್ಲ ಹುಡುಗೂರು, "ಯಪ್ಪೋ… ಯವ್ವೋ… ಜೇನ್ ಹುಳಾ ಎದ್ದಾವ್ ಲೇ ಓಡ್ರಿ…" ಅಂದ್ರು. ಆಜುಬಾಜು ಇದ್ದ ಹುಡುಗೂರು-ನಾವು ಎಲ್ಲಾ ದಿಕ್ಕೇಟ್ ಓಡಾಕತ್ವಿ. ಆದ್ರ, ನಾವ್ ಎಲ್ಲಿ ಹೊಕ್ಕೇವಿ ಅಲ್ಲೇ ಬರಾಕತ್ವು ಹುಳಾ. ಏನ್ ಮಾಡಬೇಕ ಅಂತ್ಹೇಳಿ ಯಾರಿಗೂ ಗೊತ್ತಿಲ್ಲ. ಓಡಿದ್ವಿ… ಓಡಿದ್ವಿ… ನೋಡಿದ್ರ ನಾ ಒಬ್ಬಕೀನ ಅದೀನಿ, ನಮ್ಮ ಅಣ್ಣಾರು-ಆ ಹುಡುಗೂರು ತೆಂಗಿನ ತ್ವಾಟದಾಗ ಅದಾರ. ನಾನ್ ಎಲ್ಲಿ ಹೋಗಲಿ ಗೊತ್ತಾಗವಲ್ದು. ಅಷ್ಟರಾಗ ಓಡಿ-ಓಡಿ ಒಂದ್ ಗೋದಿ ಹೊಲ ತಲಪಿದ್ಯಾ. ಮುಂದ ದಾರಿ ಗೊತ್ತಿಲ್ಲ, ಊರ ಯಾವ ಕಡೆ ಐತಿ ಗೊತ್ತಿಲ್ಲ...

ಸಾಂದರ್ಭಿಕ ಚಿತ್ರ | ಕೃಪೆ: ನವೀನ್‌ರಾಜ್ ಗೌತಮನ್

ನಮ್ಮ ಚೀರಾಟ ಕೇಳಿ ಹಳ್ಳದ ಅಕ್ಕಡೆ ದಂಡ್ಯಾಗಿದ್ದ ನಮ್ಮ ದೊಡ್ಡ ಅಣ್ಣ ಬಂದಾ. ನನ್ನ ನೋಡಿದವನೇ, "ಅವ್ವಿ, ಓಡಬ್ಯಾಡ... ಗೋದ್ಯಾಗ ಕೆಳಗ ಕುಂದ್ರ," ಅಂದಾ. ನಾನ್ ಕೆಳಗ ಕೂತೆ. ನನ್ನ ಬೆನ್ನಹತ್ತಿ ಬಂದಿದ್ದ ಜೇನ ಹುಳಾ ಮುಂದ ಹಾರಿ ಹೋದ್ವು. ನಮ್ಮ ಅಣ್ಣ ಬಂದವನೇ, ಅವನ ಲಪಾಟಿ ಹೊಚ್ಚಿದಾ ನನಗ. ನನ್ನ ಕೈಮ್ಯಾಲೆ ಇನ್ನೂ ನಾಕ ಹುಳಾ ಕುಂತ ನನ್ನ ನೋಡಾಕತ್ತಿದ್ವು! ನಮ್ಮ ಅಣ್ಣ ಅವನ್ನ ಓಡಸಿ, ಎಲ್ಲಿ ಎಲ್ಲಿ ಜೇನಹುಳಾ ಕಡದಿದ್ವೋ ಅಲ್ಲಿನ ಮುಳ್ಳ ತಗದ. ನನ್ನ ಸಮಾಧಾನ ಮಾಡಿ, ಹತ್ತರದಾಗ ಒಂದ ಚೆಕ್‌ಪೋಸ್ಟ್ ಇತ್ತು, ಅಲ್ಲಿಗ ಕರಕೊಂಡ ಹೋದಾ ನೀರ ಕುಡಸಾಕ. ಅಲ್ಲಿ ನೋಡಿದ್ರ ನನ್ನ ಬಿಟ್ ಓಡಿ ಬಂದಿದ್ದ ನಮ್ಮ ಉಳದ ಅಣ್ಣಾರು, ಆ ಹುಡುಗೂರು ಆಗಲೇ ನೀರ್ ಕುಡ್ಯಾಕತ್ತಿದ್ರು.

ನಾವ್ ಸುಧಾರಸ್ಕೊಂಡ ಊರ ಮುಂದ ಬರೋದ್ರಾಗ ಈ ಸುದ್ದಿ ಊರ ತುಂಬಾ ಹರಡಿ, ಇಡೀ ಊರ ಮಂದಿ ನಮ್ಮೂರ್ ಬಸ್ಸಟ್ಯಾಂಡದಾಗ ಬಂದ ನಿಂತಿದ್ರು. ಎಲ್ಲಾರ ಬಾಯಾಗೂ ಒಂದ ಮಾತು... "ಪಾಪ ಹುಡಗಿ... ಅಪ್ಪಾ-ಅವ್ವನ ಬಿಟ್ ಸೂಟಿಗೆ ಅಂತ್ಹೇಳಿ ಊರಿಗ ಬಂದಿತ್ತು, ಹಿಂಗಾತು…" ನನಗ ಬಾಳ ಅಂದ್ರ ಹತ್ತ ಹದಿನೈದ್ ಜೇನಹುಳಾ ಕಡದಿದ್ವು ಅಷ್ಟ; ಆದ್ರ ನಮ್ಮ ಅಣ್ಣಾರ ಇಬ್ಬರೂ  ಹನಮಪ್ಪ ಆಗಿದ್ರು!

ಮುಖ್ಯ ಚಿತ್ರ - ಸಾಂದರ್ಭಿಕ | ಕೃಪೆ: ದೇವರಾಜ್ ಆನಂದ್
ನಿಮಗೆ ಏನು ಅನ್ನಿಸ್ತು?
0 ವೋಟ್
eedina app