ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಚಳಿಗಾಲ, ಮಳಿಗಾಲದಾಗ ಬಾಣಂತನ ಆದ್ರ ಕುಪ್ಪಡಿಗಿ ಆರುಮಟಾನು ಸರಿತಿರ್ಲಿಲ್ಲ

ಸಾಲಿ ಬಿಟ್ಟ ಕೂಡಲೇ ನಮ್ಮಕ್ಕ-ನಾನು ಈ ಕೆರಿಗೆ ಅರಬಿ ತುಂಬಕೊಂಡು ಒಗ್ಯಾಕ ಬರ್ತಿದ್ವಿ. ಇದು ನಮ್ಮ ಪಾಲಿಗೆ ಅಗದೀ ಖುಷಿ ಕೆಲಸ. ಓಣ್ಯಾಗ ಅರಬಿ ಬುಟ್ಟಿ ಹೊತಗೊಂಡು ವೈಯ್ಯಾರದಲೇ ನಾಕೋಣಿ ದಾಟಗೊಂಡ ಬಂದ, ತಾಸಗಟ್ಲೆ ನೀರಾಗ ನಿಂತ ಅರಬಿ ಒಕ್ಕೊಂಡ ಚಲೋ ಕಲ್ಲ ಹುಡುಕಿ, ಕಾಲ-ಕೈ ತಿಕ್ಕಿ-ತಿಕ್ಕಿ ತೊಳಕೊಂಡ ಮತ್ತ ಅಷ್ಟ ವೈಯ್ಯಾರದಲೇ ಮನಿಗೆ ಹೋಗುದ

ಫೋನ್ ಮಾಡಿದ್ದೆ ಅವ್ವಗ, "ಎಂಟ ಮುಗದ್ವನ?" ಅಂದಳು. "ಇಲ್ಲ ಇನ್ನೂ... ಯಾಕ?" ಅಂದೆ. "ಈ ಸಲ ಬಾಣಂತನಕ್ಕ ಇಲ್ಲೆ ಬಂದಬಿಡು," ಅಂದ್ಲು. "ಎವ್ವಾ ಬ್ಯಾಡ ಎವ್ವಾ... ಮದಲ ಬ್ಯಾಡಾ. ಬೇಕಾರ ನೀನ ಬಾ ಇಲ್ಲೆ ಬಾಣಂತನ ಮಾಡು ಆಸೆ ಇದ್ದರ," ಅಂದೆ. ನಮ್ಮವ್ವಗ ತುಸು ಬ್ಯಾಸರಾತು.

ನಮ್ಮಿಬ್ಬರ ಮಾತು ಒಂದ್ಯಾಡು ದಶಕದ ಹಿಂದಿನ ಬ್ಯಾಸರ, ನೋವು, ಅಸಹನೆ, ಬಿಸಿಲು, ಬರಗಾಲದ ಬರೆ, ದನಾ-ಕರಾ ಎಲ್ಲಾನು ಹೊಂದಿದ್ವು. ತಾಯಿ-ಮಗ್ಳು ಇಬ್ರು ಒನ್ನಿಮಿಷ ಸುಮ್ಮನಿದ್ವಿ. ಸುಮ್ನ ಇದ್ವಿ ಅಂದ್ರ... ಧ್ವನಿ ಇರ್ಲಿಲ್ಲಷ್ಟ; ತಲ್ಯಾಗ ನೆನಪಿನ ಹೆಡಗಿ ಬಾಯ್ತಕ್ಕೊಂಡು ತಲಿತುಂಬ ಕೂದಲ ಹಾರದಂಗ ಹಾರಾಡಾಕಂತಿದ್ವು ನೆನಪಗಳ ಎದ್ದು.

* * *

ಬಾಣಂತನ‌ ಅಂದ್ರ ನಮಗ ದೊಡ್ಡ ಖುಷಿ. ಅತ್ತೆವ್ವರ ಬಾಣಂತನ, ಅವ್ವನ ಬಾಣಂತನ... ವರಷಕ್ಕೊಂದರ ಬಾಣಂತನ ಮನ್ಯಾಗ. ಬಾಣಂತನದಾಗ ಊಟ ಅಗದೀ ಸಂಪಿರ್ತಿತ್ತು. ಕೊಬ್ರಿಕಾರ, ಅಮ್ಲೆಟ್ಟು, ಸಂಜಿಕ ಶ್ಯಾವಿಗಿ ಉಪ್ಪಿಟ್ಟು, ಬಸದ ಶ್ಯಾವಿಗೆ ಬೆಲ್ಲಾ-ತುಪ್ಪಾ-ಹಾಲು, ಕೆಂಪಗೋಧಿ ಚಪಾತಿ, ಕೆಂಪಖಾರ ಹಾಕಿ ಮಾಡಿದ ಪಲ್ಯವು. ರವಾ ಉಪ್ಪಿಟ್ಟಿಗೆ ಸೈತ ಕೆಂಪಖಾರ... ಒಂತರಾ ಮಸ್ತ್ ಟೇಸ್ಟ್ ಇರ್ತಿತ್ತು. ತುಪ್ಪದಾಗ ಕೈತೊಳದಂಗ ಗಂಗಾಳ ಚಿಗಟ ಜಿಗಟು. ಕುಪ್ಪಡಿಗಿ ಒಲಿ ಮುಂದ ಕುಂತ್ರ ಎಂತಾ ಸುಖಾ ಚಳಿಗಾಲ ಇಲ್ಲಾ ಮಳಿಗಾಲದಾಗ ಬಾಣಂತನ ಆದ್ರ ಕುಪ್ಪಡಿಗಿ ಆರುಮಟಾನು ಅಲ್ಲಿಂದ ಸರಿತಿರ್ಲಿಲ್ಲಾ. ಬಾಣಂತನ ಮುಗದ ಅತ್ತೆವ್ವ ತೊಟ್ಲ-ಬಟ್ಲ ತೊಗೊಂಡ ಹೋಗುಮಟಾನು ಬಾಣಂತಿ ಊಟನ ಮನಿ ಮೊಮಕ್ಕಳಿಗೂ ಕೊಡುದ ನಮ್ಮಮ್ಮನ ಅಘೋಷಿತ ರೂಲ್ಸು. ಬಾಣತಿ ಕ್ವಾಣ್ಯಾಗ ಕರ್ದು ಒಂದು ಮೂಲ್ಯಾಗ ಕುಂದರ್ಸಿ, "ಲೊಗು ಲೊಗು ತಿಂದ ಹೊರಗ ಹೋಗ್ರಿ..." ಅನ್ನಕಿ ಅಮ್ಮಾ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಾಡವರ ಕನ್ನಡ | 'ನಂಕೋಡೆ ಒಲಿ ಮ್ಯಾನೆ ಇತ್ತೂಕಾದ್ರ ನಿಂಕೋಡೆ ಎಂತಕೆ ಹೇಳ್ತದೆ?'

ಬ್ಯಾಸಗ್ಯಾಗ ಬಾಣಂತನ ಆದ್ರ ಮಾತ್ರ ನಮ್ಮ ಪರಿಸ್ಥಿತಿ ಕೇಳಂಗಿರ್ತಿರ್ಲಿಲ್ಲ. ಒಂದ ಕಡೆ ಉಣ್ಣು ಸುಖಾ ಆದ್ರ, ಇನ್ನೊಂದ ಕಡೆ ಉಂಡಿದ್ದನ್ನ ಸರಳ ಕರಗಸ ಸುಖಾ.

ಸಂಜಿಕ ಸಾಲಿಂದ ಬಂದ ಕೂಡ್ಲೇನ ಸಾಲಿ ಅಂಗಿ ತಗದ ಒಂದ ಪೇಟಿಕೊಟ್ಟು, ಮ್ಯಾಲೊಂದ ಬ್ಲೌಸ್ ಹಾಕ್ಕೊಂಡ ನೀರ ತರಾಕ ಓಡಬಕ. ಓಡುದಂದ್ರ ಎಂತಾ ಓಟಾ, ಮದಲ ಬ್ರಹ್ಮಾನಂದ ಅಜ್ಜನ ಮಠದ ಬೋರು ಅಲ್ಲೆ ಪಾಳೆ ಬಾಳಿದ್ರ ರಡ್ಡೇರ ಬೋರು, ಅವರ ಚಾಲು ಮಾಡಿಲ್ಲಂದ್ರ ಧರಣಿಯರ ಬೋರು, ನಮ್ಮ ಪಾಳೆ ಬರದಕೂ ಕರೆಂಟ್ ಹೋತು ಅಂದ್ರ ಕುಡಿಕೆರಿಗೆ ಬಂದು ನೀರ ತುಂಬಕೊಂಡ ಬರಬಕ. ಇಲ್ಲಿ ಬರದ ಮುಗಿಸಿದಂಗ ನಾಕ‌ ಸಾಲ್ನ್ಯಾಗದು ಮುಗಿತಿರ್ಲಿಲ್ಲ... ಕೆಟ್ಟ ರಣಬಿಸಲನ್ಯಾಗ ಹ್ಯಾಪ ಮಾರಿ ಹಾಕ್ಕೊಂಡ ದೂಡ ಗಾಡ್ಯಾಗ ಆರ ಕೊಡಾ ಇಟಗೊಂಡ ನಾನು-ನಮ್ಮಕ್ಕ ಓಡಿದ್ದ ಓಡಿದ್ದು.

ಒಮ್ಮೊಮ್ಮೆ ಬಾಳ ಲೊಗು ನೀರ ಸಿಗತಿದ್ವು, ಒಮ್ಮೊಮ್ಮೆ ಹನಮನ ಬಾಲದಂತಾ ಪಾಳೆ. ಆದ್ರೂ ಖುಷಿ‌ ಇರ್ತಿತ್ತು ಅದರಾಗನೂ. ಎಲ್ಲಾರ ಕೊಡಕ್ಕನೂ ಅವರವರ ಅಡ್ರೆಸ್ ಬಣ್ಣದಲೇ ಬರ್ದಿದ್ವ ಇರ್ತಿದ್ವು. ಪಾಳೆಕಿಟ್ಟು ಅಲ್ಲೆ ನುಣಪಂದ ಒಂದ ಕಟ್ಟಿ ಹುಡುಕಿ ಕುತಗೊಂಡ, ನಮ್ಮಂಗ ನೀರಿಗೆ ಬಂದ ಗೆಳತ್ಯಾರ ಜೋಡಿ ಚಕ್ಕಾ ಆಡೂದ, ಹುಲಿಮನಿ ಆಡೂದ ಇಲ್ಲಾ ಆಣಿಕಲ್ಲ, ಕುಂಟಾಪಿಲ್ಲಿ ಆಡಿ, ಪಾಳೆ ಬಂದಾಗ ನೀರ ತುಂಬಿ, ಆರೂ ಕೊಡಾ ಇಟಗೊಂಡು ಗಾಡಿ ದೂಡಕೊಂಡ ಬರೂದು. ಬಂದ ಕೂಡ್ಲೆ ಮನ್ಯಾನರ ಮಸಡಿ ಇಷ್ಟಗಲಾ ಆಗಿ, "ಅಯ್ಯ... ಎಷ್ಟ ಲೋಗು ಬಂದಿ! ಪಾಳೆ ಬಾಳಿಲ್ಲನ ಇನ್ಯಾಡ ಟ್ರಿಪ್ ತಂದಬಿಡು... ಹಿತ್ತಲದಾನ ಹೌಜೆ, ಬಚ್ಚಲದಾನ ಹೌಜೆ ಯಾಡ ತುಂಬಸಬಿಡ್ರಿ. ಎತ್ತಿನ ದೋಣಿಗೆ ಆಳಮಗಾ ಕೆರಿ‌ನೀರ ತಂದಹಾಕ್ತಾನ," ಅನ್ನೋರ. ಅಯ್ಯ ಒಂದ ಪಾಳೆಕ ಕುಂದ್ರಾಕ ಕುಂಡಿ ನೆಗ್ಗಿದ್ವು... ಇವ್ರು ಮತ್ತ ಹೋಗಂತಾರಲ್ಲಾ ಅಂದು ಸಿಟ್ಟ ಬರದು. ಮತ್ತ ಆಡಾಕ ಸಿಗೋ ಗೆಳತ್ಯಾರು, ಮತ್ತ ಪುಸ್ತಕದಿಂದ ಇನ್ನೊಂದೀಟ ಹೊತ್ತು ದೂರ ಇರದನ್ನ ನೆನೆಪಸ್ಕೊಂಡು, "ಆತ... ಲೊಗುನ ಸುರವಕೊಂಡ ತಂಬಾ ಕೊಡಾ," ಅಂದು, ಚಾವಣಿಗೆ ಕುಂತು ಮತ್ತ ನೀರಿಗೆ ಓಡತಿದ್ವಿ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕಲಬುರಗಿ ಸೀಮೆ | ಒಟ್ಟಿನಾಗ ಹೆಣ್ಣಮಕ್ಕಳಿಗಿ ಏನಾರ ಒಂದು ಅನಸಕೊಂಬದೆ ಅದಾ ದುನಿಯಾದಾಗ!

ಮನ್ಯಾಗ ಬಾಣತೇರ ಇದ್ರ ನಮ್ಮ ಟ್ರಿಪ್ಪಿನ ಲೆಕ್ಕನ ತಪ್ತಿತ್ತು - ಹಂಗ ತಂದಿದ್ದ ತಂದಿದ್ದು, ಸುರುವಿದ್ದ ಸುರುವಿದ್... ಎಲ್ಲಿತನಕ ಅಂದ್ರ, ನಮ್ಮ ಸಹನೆ ಕಟ್ಟಿ ಒಡದು, ಈರಣ್ಣನ ಗುಗ್ಗಳದ ಸ್ಟೈಲ್‌ನ್ಯಾಗ, "ಖಡಖಡರುದ್ರಾ... ವೀರಭದ್ರಾ..." ಅಂತ ಮೈಮ್ಯಾಲೆ ಏರಿ, ಕಡೆಗಿ ಸಿಟ್ಟು ಕರಗಿ ಅಸಹನೆ ಅಮರಿ, ಅಳು ಬಂದು, ಬಿಸಲು-ದುಃಖ ಯಾಡು ಏಕಾಗಿ ಮುಸುಡಿ ಕೆಂಪೇರಿಂದ ಮನ್ಯಾನರ ದಾರಿಗೆ ಬರ್ತಿದ್ರು.

ಇದು ನೀರ ತರದಾತು. ಇದಕ್ಕಿಂತ ಇಂಪಾರ್ಟೆಂಟ್ ಕೆಲಸ ಇನ್ನೊಂದಿರ್ತಿತ್ತು - ಅದು ಹುಡ್ರುವ ಹೇಲರಬಿ, ಉಚ್ಚಿ ದುಪಟಿ ಒಕ್ಕೊಂಡ ಬರದು. ಊರಾಗ ನಾನಾ ನಮ್ನಿ ಕೆರಿ ಇದ್ವು. ಒಂದು ಕುಡಿ ಕೆರಿ. ಇದು ಕುಡಿನೀರಿನ ಕೆರಿ ಅಂತ ಮಾತಿಗೆ ಕರಸ್ಕೊಂತಿತ್ತು. ಮತ್ತ ನಮ್ಮನಿಗೆ ಹತ್ತರನೂ ಇತ್ತು. ಪಂಚಾಯ್ತೇರು ಇಲ್ಲೊಂದ ಮುದಕನ್ನ ಸತತ ಕೆರಿ ಕಾಯಾಕ ಇಟ್ಟಿರ್ತಿದ್ರು, ಇಲ್ಲೆ ಅರಬಿ ಒಗೆಂಗಿಲ್ಲ ಆದ್ರ ಕೆರಿ ಒಂಡಿಗೆ ಜನಾ ಯಾಡಾಕ್ ಹೋಗ್ಬೋದಿತ್ತು! ಇಲ್ಲಿ ನೀರೊಯ್ದು ಕುಡದಿದ್ದ ಮಾತ್ರ ನಾ ನೋಡಿಲ್ಲ. ಬಹುಶಃ ನಳಾ ಇಲ್ಲದ ಕಾಲಕ್ಕ ಇದು ಕುಡಿಯು ನೀರಿನ ಕೆರಿಯಾಗಿತ್ತೇನೊ.

ಮತ್ತೊಂದು, ಈ ಕೆರಿಯ ಹಿಂಭಾಗಕ್ಕ ಹತ್ಕೊಂಡು ಈಜಕೋಳದ ಶೇಪನ್ಯಾಗ ಅಗಲನ ಗುಂಡಿ ಇತ್ತು. ಬ್ರಹ್ಮಾನಂತ ಮಠದ ಇಳಜಾರನ್ಯಾಗ ಜರದ್ರ ಸೀದ ಈ ಗುಂಡ್ಯಾಗ ಬೀಳಬೋದಿತ್ತು. ಇಲ್ಲೆ ನಮ್ಮೂರಿನ ಸಾಕಷ್ಟ ಮಂದಿ ಈಸ ಕಲಿತಿದ್ದು - ಮತ್ತ ರಜಕ್ಕ ತಾಯಿ ಮನೆಗಿ ಬರ್ತಿದ್ದ ನಮ್ಮೂರಿನ ಅಷ್ಟು ಹೆಣ್ಣಮಮ್ಮಕ್ಕಳೂನು.

ಮೂರನೇದ್ದು ಹಾರೂಬಾವಿ. ಇದು ದೊಡ್ಡ ಕೆರಿ. ಇಲ್ಲೆ ದನದ ಮೈ ತೋಳಿಯದು. ಯಾವಾಗ್ಲೂ ಹಸರ ನೀರ ಇರ್ತಿದ್ವು. ಸುತ್ತಲೂ ಗಿಡಾ-ಗಂಟಿ ಬೆಳ್ದಿದ್ವು. ಜೊತೆಗಿ, ಸಾಕಷ್ಟ ನೀರಹಾವು ಇರ್ತಿದ್ವು. ಆದ್ರ ಇದು ಒಣಗಿದ್ದು ಎಂದೂ ನಾ ಕಂಡಿಲ್ಲ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಹೊನ್ನಾಳಿ ಸೀಮೆ | ಹೊಳಿಮನ್ಸು ಅಳಾರಾತು ಗಂಗಿಪೂಜಿ ನೋಡಿ

ನಾಕನೇದ್ದು ಕುಂಬಾರಗಟ್ಟಿ. ಇದು ಎಮ್ಮಿ ಮೈ ತೋಳ್ಯಾಕ ಪೇಮಸ್ಸು. ಮತ್ತೊಂದು ಕ್ವಾಟಿ ಬಾವಿ. ಇದು ಮಣ್ಣ ಅಗದು ಅಗದು ಮಾಡಿದ ಕೆರಿಹಂಗ ಇತ್ತು. ಅಲ್ಲಲ್ಲೆ ಕೆರಿ ಗುಂಡಿ ಚದುರಿದ್ವು. ಇಲ್ಲೆ ಅಗಸರು ಅರಬಿ ಒಗದು ಕಾಲಿಡಾಕ ಜಾಗಿಲ್ಲದ ಹಂಗ ಒಣಾಕ ಹಾಕಿರ್ತಿದ್ರು. ಇಲ್ಲೆ ಅರಬಿ ಒಗಿಬೋದಿತ್ತು. ಆದ್ರ ಪಾಳೆಕ ಕುಂತು ಕೆರ್ಯಾನ ಒಗಿ ಕಲ್ಲ ಹಿಡಿಬಕಿತ್ತು. ಸಾಲಿ ಬಿಟ್ಟ ಕೂಡಲೇ ನಮ್ಮಕ್ಕ-ನಾನು ಈ ಕೆರಿಗೆ ಯಾಡ ಕಬ್ಬಣ ಬುಟ್ಯಾಗ ಅರಬಿ ತುಂಬಕೊಂಡು ಒಗ್ಯಾಕ ಬರ್ತಿದ್ವಿ. ಇದು ನಮ್ಮ ಪಾಲಿಗೆ ಅಗದೀ ಖುಷಿ ಕೆಲಸ. ಓಣ್ಯಾಗ ಅರಬಿ ಬುಟ್ಟಿ ಹೊತಗೊಂಡು ವೈಯ್ಯಾರದಲೇ ನಾಕೋಣಿ ದಾಟಗೊಂಡ ಬಂದ, ತಾಸಗಟ್ಲೆ ನೀರಾಗ ನಿಂತ ಅರಬಿ ಒಕ್ಕೊಂಡ ಚಲೋ ಕಲ್ಲ ಹುಡುಕಿ, ಕಾಲ-ಕೈ ತಿಕ್ಕಿ-ತಿಕ್ಕಿ ತೊಳಕೊಂಡ ಮತ್ತ ಅಷ್ಟ ವೈಯ್ಯಾರದಲೇ ಮನಿಗೆ ಹೋಗುದ.

* * *

ಅವ್ವಾ ಬಾಣಂತನಕ್ಕ ಊರಿಗೆ ಬಾ ಅಂದಕೂಡಲೇ ನನಗ, ನಮ್ಮ ಊರಿನ ಬಾಣಂತನದ ಹಿಂದಿನ ಘೋರ ಕತಿ, ನೀರು, ಹೇಲರಬಿ ನಮ್ಮ ಗೋಳು-ಖುಷಿ ನೆನಪಾದ್ವು.

ಅವ್ವಾ ಮಾತು ಮುಂದವರಿಸಿದ್ಲು... "ನಮ್ಮೂರಾಗ ಈಗ ನೀರಿನ ಸಮಸ್ಯೆ ಇಲ್ಲವಾ. ಐದ ದಿನಕ್ಕೊಮ್ಮೆ ನೀರ ಬಿಡ್ತಾರ. ಮನ್ಯಾಗ ನಾವಿಬ್ರ ಗಂಡಾ-ಹೆಂಡ್ತಿ, ಹೆಚಿಗಿ ನೀರು ಬೇಕಾಗಂಗಿಲ್ಲಾ..." ಮುಂದವರದು, "ಕುಳ್ಳು ಹಚ್ಚಿಟ್ಟೇನ ಬಾ... ನಿನ್ನ ಮಗನ್ನ ಕುಪ್ಪಡಿಗಿ ಕಾವಲೇ ಕೆಳಗಿಳಸಂಗಿಲ್ಲ," ಅಂದಳು.

ನಾ ಏನೂ ಮಾತಾಡಲಿಲ್ಲ. ನಾ ಇನ್ನೂ ಅಲ್ಲೇ ಬ್ಯಾಸಗಿ ಬಾಣಂತನದ ಕೊಡಪಾಳೆಕ ಇಟಗೊಂಡ ಕುಂತಿದ್ದೆ...!

ಚಿತ್ರಗಳು - ಸಾಂದರ್ಭಿಕ | ಕೃಪೆ: Unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app