ದೇಸಿ ನುಡಿಗಟ್ಟು - ಮಾಲೂರು ಸೀಮೆ | ನಮ್ಮೂರು ಸೀಗೆಪುರಕ ವರ್ಸುಕ್ಕೆ ಒಂದೇಕಿತ ಬರ್ತಿದ್ದ ಕರ್ಪು ಕಾರಿನ ಮರ್ಮು

"...ಆದ್ರ, ತಿಮ್ಮಾ ರೆಡ್ಡಿಕ ಒಂದು ಕಾದಲು ಇತ್ತು. ಅವಳ ಹೆಸರು ಯಾರ್ಕೂ ತಿಳಿದೂ. ಅಲ್ಲರೂ ಅವ್ಳನಾ ಬುಲ್ಲಮ್ಮ ಅನ್ನೋರು. ಒಂದ್ ಹೆಣ್ಣು ಪಾಪ ಇತ್ತು ಅವಳುಕ - ಬಂಗಾರಿ ಅಂತ. ಮಲ್ಲವ್ವನುಕ ಇದು ತಿಳಿಯದು ಅಂತಲ್ಲ, ತಿಳಿದು ತೆಪ್ಪಗೆ ಇರೋಳು. ಗಂಡ್ನು, 'ಏನಮ್ಮೀ ನಿನಗ ಕಮ್ಮಿ ಮಾಡಿರೋದು?' ಅಂತ ರೋಪ್ ಹಾಕುದ್ರೆ, ಯಾರ್ ಏನ ಮಾಡೋದು ಅಂತ!"

ನಮ್ಮೂರು ಸೀಗೆಪುರಕ ಕಾರು ಬಂದರೆ ಅದೇನೋ ಪಿಚ್ಚರ್ ಹೀರೋ ಬಂದಂಗೆ ಊರೂಕ ಊರೇ ಸೇರಿಬಿಡೋರು. ಅಂಗೆ ಕಾರು ಬತ್ತಿದ್ದು ಕೂಡ ಅಪೂರ್ವೆನೆ. ನನಕ ಗ್ಯಾನ ಬಂದಾಗಿಂದ ನಮ್ಮೂರು ಸೀಗೆಪುರಕ ಕಾರ್ ಅಂತ ಬತ್ತಿದ್ದು ವರ್ಸುಕ್ಕೆ ಒಂದೇಕಿತ. ಆ ಕಾರೋ ಕರ್ಪು ಕಾಕಿ ತರ ಇರೋದು. ಅದರಾಗ ಜನಗಳು ಅಂತ ಬರ್ತಿದ್ದು ಕೂಡ ನಮ್ಯಾರ್ಕೂ ತಿಳಿದವರು ಅಲ್ಲ!

ಒಂದ್ಕಿತ ಹಿಂಗೆ ಆ ಕರ್ಪು ಕಾರು ಬಂತು. ನನಗ ಅದು ಏನು ಅಂತ, ಅದರ ಮರ್ಮು ತಿಳಿಯೋ ಕೌತುಕ. ಯಾರ್ಣಾ ಕೇಕೂರ್ದು?

ಶಂಕ್ರಮ್ಮನು ಸೀಗೆಪುರನಾಗ ವಯಸ್ಸಾದ ಆಳು. ಊರನ ಎಲ್ಲ ಪಿಳ್ಳೆಗಳಿಂದ ಹಿಡಿದು ಉಕ್ ಪಾರಿನ್ ಗಂಟ ಎಲ್ರೂ ಪತ್ತಿ ಗೊತ್ತು!

ನಾ ಕ್ಯೇಲ್ದೆ: "ಅವ್ವೋ ಈ ಕಾರು ಎಕ್ಕಡಿದಿ?"

ಶಂಕ್ರಮ್ಮ: "ಅದೋಕ ಪೆದ್ದ ಕತ ನಾಯನ!" ಅಂತ್ಯೋಳಿ, ಹಿಂಗಿಂಗೇ ಅಂತ ಮುಂದಕ್ಕ ಹೇಳಿದ್ಲು...

"...ವಾಸಪ್ಪನು ಅಂತ ಒಂದು ಪಿಳ್ಳೆ ಇದೇ ಸೀಗೆಪುರದಾಗ ವರ್ಷಗಳ ಹಿಂದಕ ಇತ್ತಂತೆ. ಅದರ ಅಪ್ಪಯ್ಯನು ತಿಮ್ಮಾ ರೆಡ್ಡಿ ಅಂತ, ಅವ್ವನು ಮಲ್ಲವ್ವ. ವಾಸಪ್ಪನು ಬೆಲೆ ಸುರುಕು, ಓದ್ನಾಗ. ಅಪ್ಪನುಕ ಮಗನು ಬೆಂಗಳೂರುಕ ಒಗ್ಬೇಕು ಅಂತ ಆಸೆ. ವಾಸಪ್ಪನು 'ನಾಕೊದ್ದು ಬೆಂಗಳೂರು' ಅಂತ ಮೊದ್ಮೊದ್ಲು ಜಿದ್ದು ಮಾಡ್ದ. ಅಪ್ಪನು ಬಿಡ್ನಿಲ್ಲ."

"...ಮುಂದಕ ವಾಸಪ್ಪನು ಏನೇನೋ ಓದಿ ದೊಡ್ಡ ಆಫಿಸರ್ ಆದ್ನು. ಊರಕ ಬಂದ್ರೆ ಸಖತ್ ಟಿಪ್‌ಟಾಪ್ ಆಗಿ ಬರೋನು. ತಿಮ್ಮಾ ರೆಡ್ಡಿಕ ಮಗನ ನೋಡಿ ಕಣ್ ಗುಡ್ಡಿಗಳಾಗ ನೀರು ತುಂಬಿಕೊಳ್ಳೋದು. ಅವ್ವನುಕೂ ಅಂಗೆ ಆಗೋದು..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಾಡವರ ಕನ್ನಡ | 'ನಂಕೋಡೆ ಒಲಿ ಮ್ಯಾನೆ ಇತ್ತೂಕಾದ್ರ ನಿಂಕೋಡೆ ಎಂತಕೆ ಹೇಳ್ತದೆ?'

"...ದಿನಗಳು ವರ್ಷಗಳು ಓಡಿದಂಗೆ ವಾಸಪ್ಪನು ಬೇಜಾನ್ ದುಡ್ಡು ಮಾಡ್ಬಿಟ್ಟ. ಆಸ್ತಿಗಳು ಮ್ಯಾಗ ಆಸ್ತಿಗಳು ಮಾಡ್ಬಿಟ್ಟ. ಇಲ್ಲೀರೋ ಅಪ್ಪನು ಆಸ್ತಿಕೂ ಅವ್ನ್ ಒಬ್ನೆ ದಿಕ್ಕು. ತಿಮ್ಮಾ ರೆಡ್ಡಿ-ಮಲ್ಲವ್ವನುಕ ಬ್ಯಾರೆ ಪಿಳ್ಳೆಗಳು ಇರ್ನಿಲ್ಲ."

"...ಆದ್ರ, ತಿಮ್ಮಾ ರೆಡ್ಡಿಕ ಒಂದು ಕಾದಲು ಇತ್ತು. ಅವಳ ಹೆಸರು ಯಾರ್ಕೂ ತಿಳಿದೂ. ಅಲ್ಲರೂ ಅವ್ಳನಾ ಬುಲ್ಲಮ್ಮ ಅನ್ನೋರು. ಒಂದ್ ಹೆಣ್ಣು ಪಾಪ ಇತ್ತು ಅವಳುಕ. ಮಲ್ಲವ್ವನುಕ ಇದು ತಿಳಿಯದು ಅಂತಲ್ಲ, ತಿಳಿದು ತೆಪ್ಪಗೆ ಇರೋಳು. ಗಂಡ್ನು, 'ಏನಮ್ಮೀ ನಿನಗ ಕಮ್ಮಿ ಮಾಡಿರೋದು?' ಅಂತ ರೋಪ್ ಹಾಕುದ್ರೆ, ಯಾರ್ ಏನ ಮಾಡೋದು ಅಂತ!"

"...ಆದ್ರ ವಾಸಪ್ಪನುಕ ಇದ ಮನಸಲ್ಲಿ ಇತ್ತೋ ಏನೋ ಯಾರ್ ತಿಳಿಬೇಕು - ಆ ಒಬ್ಬ ಕರಗದಮ್ಮ ಬುಟ್ಟು! ಸರಿ, ದಿನಗಳು ಹೋದ್ವು... ಮಲ್ಲವ್ವನು ಗೋಣು ಚೆಲ್ಲುದ್ಲು. ಹಿಂದಕಾ ತಿಮ್ಮಾ ರೆಡ್ಡಿಗುನು ಹೆಂಡ್ರು ನೆಳ್ಳು ಹಿಡಿದ್ನು."

"...ವಾಸಪ್ಪನು ಈಗ ಸಮಸ್ತ ಚರಾಚರ ಆಸ್ತಿಕಾ ಹಕ್ಕುದಾರನು ಆದನು. ಬುಲ್ಲಮ್ಮನು ಸ್ಯಾನೆ ಕಷ್ಟುಗಳುಕ ತೊಡರುಕೊಂಡ್ಲು. ವಾಸಪ್ಪನ, 'ಅಯ್ಯಾ... ಏಮೈನಾ ಇಯುವಯ್ಯ!' ಅಂತ ಬತಿಮಾಲಿದಳು. ವಾಸಪ್ಪನು ಹೀನಾಮಾನ ಬೋದು ಓಡಿಸಿಬಿಟ್ಟನು."

"...ಅತ್ತಕ ಬೆಂಗಳೂರುನಾಗ ವಾಸಪ್ಪನು ಮೂಟಿ-ಮೂಟಿಗಳು ದುಡ್ಡು ಮಾಡಿದನು. ಮದುವೆಗಳು, ಸಡಗರಗಳು ಮಾಡ್ತಾ ಎರಡು ಹೆಣ್ಣು ಕೂಸುಗಳನು ಪಡೆದು ಮೈ ಮರೆಯುವಷ್ಟು ಆನಂದವಾಗಿ ಇದ್ದನು."

"...ಆ ಎರಡು ಹೆಣ್ಣು ಕೂಸುಗಳಾಗ ಮೊದಲ್ದು ಒಬ್ಬ ತುರಕನ ಲವ್ವು ಮಾಡಿ ಅಪ್ಪ ವಾಸಪ್ಪನುಕ ಸಂಕಟ ತಂದಳು. ಇದಕ ಭಾರೀ ವಿರೋಧ ಮಾಡಿದ್ದರಿಂದ ಆ ಕೂಸು ಅಪ್ಪನು ಜಂಬರ ಮಾಡ್ತಿದ್ದ ಆಪಿಸ್ಕಾ ಹೋಗಿ, ಅಪ್ಪನುಕ ಪಾಠವ ಕಲಿಸ್ತೀನಿ ಅಂತವ ಅಲ್ಲೆ ಫ್ಯಾನಿಗೆ ತೂಗಿಕೊಂಡ್ಲು!"

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕಲಬುರಗಿ ಸೀಮೆ | ಒಟ್ಟಿನಾಗ ಹೆಣ್ಣಮಕ್ಕಳಿಗಿ ಏನಾರ ಒಂದು ಅನಸಕೊಂಬದೆ ಅದಾ ದುನಿಯಾದಾಗ!

"...ಇದು ವಾಸಪ್ಪನುಕ-ಅವನ ಹೆಂಡ್ರುಕ ಯುದ್ಧಗಳು ಆಗೋ ಹಂಗೆ ಮಾಡಿತು. ಈ ಮಧ್ಯ ಎರಡನೇ ಕೂಸು, ಅಕ್ಕನುಕ ಹಿಂಗೆ ಆಗಲು ಹೆತ್ತವರೇ ಕಾರಣ ಅಂತ ಕ್ವಾಪ ಮಾಡಿ, ಅಪ್ಪನುಕ-ಅಮ್ಮನುಕ  ಪಾಠವ ಕಲಿಸ್ತೀನಿ ಅಂತ ಅಕ್ಕನು ಲವ್ವು ಮಾಡಿದ ತುರುಕನ ತಮ್ಮನ ಮದುವೆ ಆಗಿಬುಟ್ಲು. ಇದು ವಾಸಪ್ಪನುಕ-ಅವನ ಹೆಂಡ್ರುಕ ಮನಸ್ತಾಪಗಳ ಹೆಚ್ಚಿಗೆ ಮಾಡಿ, ಅವ್ರು ಬೇರೆ-ಬೇರೆ  ವಾಸ ಮಾಡೋ ಹಂಗೆ ಆಯ್ತು!"

"...ವಾಸಪ್ಪನು ಎದೆನಾ ಕಲ್ ಮಾಡಿಕಂಡು ಕಾಲವಾ ಹಾಕ್ತಾ ಇದ್ದ. ಅತ್ಲಾಗೆ ಅವನ ಹೆಂಡ್ರು ಎದೆ ಕೊರಗು ಹಚ್ಚಿಕೊಂಡು ಸತ್ತೊದ್ಲು. ಅಮ್ಮನು ಹೆಣಾ ನೋಡೋಕ ಮಗಳು ಬಂದ್ರೆ, ಅಪ್ಪನು ನೋಡಗೊಡಲಿಲ್ಲ."

"...ವಾಸಪ್ಪನು ತನ್ನ ಆಸ್ತಿ ಪೂರಾ ಅಪ್ಪನ ಕಾದಲಿ ಬಲ್ಲಮ್ಮನ ಮಗಳು ಬಂಗಾರಿಕ ಬರ್ದುದ್ದುಕ, 'ಇದ್ಯಾಕ ವಾಸಪ್ಪ ಹಿಂಗ್ ಮಾಡಿಯಾ?' ಅಂತ ಸೀಗೆಪುರದ ನಾಲ್ಕು ಹಿರಿತಲೆಗಳು ಕೇಳಲಾಗಿ, 'ತುರುಕನು ಬೋಗಿಸೋಕಿಂತ ಇದು ವಾಸಿ ಕಣನ್ನ!' ಅಂದನಂತೆ. ಆಮ್ಯಾಕ ಒಂದ್ಕಿತ ವಾಸಪ್ಪನು ವಿಸ ಕುಡಿದು ಸತ್ತ ಅಂತಾರಪ್ಪಾ... ಏನೋ, ಜನಗಳ ಮಾತು! ಕಂಡವರು ಯಾರು?"

"...ಬುಲ್ಲಮ್ಮನ ಮಗಳು ಬಂಗಾರಿಕ ಈಗ ರಾಜವೈಬೋಹ. ಆದ್ರೆ ಇದೆ ನೋಡು ಇಚೆತ್ರ. ಬಂಗಾರಿ, 'ಈ ಆಸ್ತಿ ವಾಸಣ್ಣನು ತಂಗಿ ಅಂತ ತನಗ ಕೊಟ್ಟಿದ್ದಲ್ಲ, ಮಗಳ ಮ್ಯಾಲಿನ ತ್ವೆಸಕ್ಕ...' ಅಂತ ಅದನ್ನ ಪೂರ್ತಾ ವಾಸಪ್ಪನ ಮಗಳಿಗೆ ವಾಪಸ್ ಕೊಟ್ಟುಬಿಟ್ಳಂತೆ!"

"...ಮುಂದಕ ಬಲ್ಲಮ್ಮನು ಸತ್ಲು. ಯಾಕೋ ಬಂಗಾರಿ ಮದ್ವೆ ಆಗಣಿಲ್ಲವಂತೆ. ಹಂಗೆ ಕಾಲ ಕಳೆದು ಕಂತೆ ಒಗೆದ್ಲು ಅಂತಾರೆ. ಆ ಬಂಗಾರಿ ಸಮಾಧಿಕ ಪೂಜೆ ಮಾಡಾಕ ಅಂತಾನೆ ವಾಸಪ್ಪನ ಆ ಬದುಕಿರೋ ಮಗಳು ಕರ್ಪು ಕಾರ್ನಾಗ ವರ್ಷಕ್ಕ ಒಂದ್ಕಿತ ಬರೋದು!"

ನನಗ ಅನಿಸ್ತು, ಆಸ್ತಿಗಳು ದುಡ್ಡುಗಳು ಹೆಂಗೆಂಗೆ ಬರ್ತದೆ, ಹೆಂಗೆಂಗೆ ಹೋಗ್ತದೆ ಅನ್ನೋದು ಆ ಕರಗಮ್ಮನುಕ ಮಾತ್ರಾ ತಿಳಿತಾದೋ ಏನೋ!

ಕಲಾಕೃತಿಗಳ ಕೃಪೆ: Unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app