ದೇಸಿ ನುಡಿಗಟ್ಟು - ಉತ್ತರ ಕನ್ನಡ ಸೀಮೆ ಹವ್ಯಕ | 'ಕೊನೆ ಗೌಡ ಬತ್ತೆ ಹೇಳದವ ಬಂಜ್ನೆ ಇಲ್ಲೆ... ಹೋಗಿ ನೋಡಕಂಡೆ ಬತ್ತೆ'

ನವೆಂಬರ್ ಟೈಮ್ನಿಂದ ಅಡಿಕೆ ಕೊಯ್ಯೋ ಕೆಲಸ ಶುರುವಾಗ್ತು. ಅದರಲ್ಲಿ ಹಸಿ ಅಡ್ಕೆ, ಹಣ್ಣಡ್ಕೆ ಹೇಳು ಎರಡು ನಮನಿ ಇರ್ತು. ಕೆಲವರು ಹಸಿ ಇರಕಾರೆ ಕೊಯ್ತ. ಇನ್ನು ಕೆಲವರು ಹಣ್ಣ ಆದ್ಮೇಲೆ ಕೊಯ್ತ. ಹಣ್ಣಡ್ಕೆ ಕೊಯ್ದದ್ರೆ ಮನೆ ಹೆಂಗಸರಿಗೆ ಹನಿ ಕಡಿಮೆ ಕೆಲಸ. ಆದ್ರೆ ಕಾಯಿ ಅಡಿಕೆ ಕೊಯ್ಯೋದು ಅಂದ್ರೆ ಸರಿ ನಿದ್ದೆ ಇರ್ತಿಲ್ಲೆ. ತುರುಸ್ಕಂಬುಲು ಪುರುಸೊತ್ತಿಲ್ಲದ ಕೆಲಸ

"ಪಾರ್ವತಿ... ರಾಶೀ ದಿನಾತೆ ನೀ ನಮ್ಮನೆಗೆ ಬರೆದಿದ್ದೆಯಾ. 12 ವರ್ಷ ಆದ್ಮೇಲೆ ಸಂಬಂಧ ಕಳೆದುಹೋಗ್ತಡಾ... ಅದ್ರ ಒಳಗಡೆನಾದ್ರೂ ಒಂದು ಸಲ ಬಂದು ಹೋಗೆ," ಹೇಳಿ ಪಾರ್ವತಿಯ ಸೋದರತ್ತೆ ಬೆಂಗಳೂರಿನಲ್ಲಿ ರಾಶಿ ವರ್ಷದಿಂದ ಉಳಕಂಡಿದ್ದು ಕರತ್ತು.

"ಹೌದೇ ಬರ-ಬರ ಹೇಳಿ ಅಂದಕತ್ನೆ. ನಮ್ಮ ಹಳ್ಳಿ ಕೆಲಸ ಮುಗಿತೆ ಇಲ್ಲೆ ನೋಡು. ಜೂನ್ ಬಂತು ಅಂದ್ರೆ ಅಡಿಕೆಗೆ ಮದ್ದು ಹೊಡಿಯದು, ಕಳೆ ತೆಗಿಯದು ಒಂದಲ್ಲಾ ಒಂದು ಕೆಲಸ ಯಾವಾಗ್ಲೂ ಇತು೯. ಈಗಂತೂ ಜೋರ್ ಕೊನೆ ಕೊಯ್ಲು. ಎರಡು-ಮೂರು ತಿಂಗಳು ಮನೆ ಬಿಟ್ಟು ಹೋಪಲೆ ಆಗ್ತಿಲ್ಲೆ," ಅಂತು.

ಅದ್ಕೆ ಸೀತತ್ತೆ, "ಅದು ಹೌದೇ... ಎಲ್ಲಾ ಕೆಲಸ ಮುಗ್ದ ಮೇಲೆ ಆದ್ರೂವಾ ಮುದ್ದಾಂ ಒಂದ ನಾಲ್ಕು ದಿನಕ್ಕರೂ ಬಂದು ಹೋಗು. ಮನೇಲಿ ಇದ್ದವು ಮನೆ ಬದಿಗೆ ಮಾಡ್ಕತ್ತಾ..." ಹೇಳಿ ಪೋನ್ ಇಟ್ತು.

* * *

'ಕೊನೆ ಕೊಯ್ಲು ಅಂದ್ರೆ? ಅದೆಂತ ಮಹಾ...?' ಹೇ‌ಳೋ ಪ್ರಶ್ನೆ ಈಗ ನಿಂಗ್ಳ ತಲೆಲೂ ಗುಂಯ್ ಗುಡ್ತಾ ಇದ್ದನ ಅಲ್ದಾ? ಹೌದು, ಮಲೆನಾಡಿನ ಹಳ್ಳಿಗಳಲ್ಲಿ, ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಶಿವಮೊಗ್ಗದವರೆಗೂ ಎಲ್ಲರ ಮನೆಲ್ಲಂತೂ ಈಗ ಅದ್ರದ್ದೆ ಕೆಲಸ‌, ಅದೇ ಮಾತು. ಎಲ್ಲರ ಮನೆಯಂಗಳಕ್ಕೂ ಅಡಿಕೆ ರಾಶಿ.

ನವೆಂಬರ್ ಟೈಮ್ನಿಂದ ಅಡಿಕೆ ಕೊಯ್ಯೋ ಕೆಲಸ ಶುರುವಾಗ್ತು. ಅದರಲ್ಲಿ ಹಸಿ ಅಡ್ಕೆ, ಹಣ್ಣಡ್ಕೆ ಹೇಳು ಎರಡು ನಮನಿ ಇರ್ತು. ಕೆಲವರು ಹಸಿ ಇರಕಾರೆ ಕೊಯ್ತ. ಇನ್ನು ಕೆಲವರು ಹಣ್ಣ ಆದ್ಮೇಲೆ ಕೊಯ್ತ. ಹಣ್ಣಡ್ಕೆ ಕೊಯ್ದದ್ರೆ ಮನೆ ಹೆಂಗಸರಿಗೆ ಹನಿ ಕಡಿಮೆ ಕೆಲಸ. ಆಳ್ಗ ಬತ್ತ. ಕೊನೆ ಕೊಯ್ತ. ಮನೆ ಅಂಗಳಕ್ಕೆ ತಂದು ಹಾಕ್ತ. ಕೊನೆ ಕೊಯ್ಯವ, ಹಗ್ಗ ಹಿಡಿಯುವ, ಹೊರವಾ ಒಂದ ಮೂರ್ನಾಲ್ಕು ಜನ ಅಷ್ಟೇಯ. ಅವ್ಕೆ 11:00 ಗಂಟೆಗೆ ಒಂದ್ಸಲ ಆಸರಿ, ಕಡೆಗೆ ಊಟ-ಚಾ ಕೊಟ್ರೆ ಆತು. ಆದ್ರೆ ಕಾಯಿ ಅಡಿಕೆ ಕೊಯ್ಯೋದು ಅಂದ್ರೆ ಮಾತ್ರ ಸರಿ ನಿದ್ದೆ ಇರ್ತಿಲ್ಲೆ. ಇಡೀ ದಿನ ಮನೆಯಲ್ಲಿದ್ದವ್ಕೆ ಎಲ್ಲರಿಗೂ ಒಂದು ನಿಮಿಷವೂ ತುರುಸ್ಕಂಬುಲು ಪುರುಸೊತ್ತಿಲ್ಲದ ಕೆಲಸ.

ಕೊನೆ ಕೊಯ್ಯವ, ಅವನ ಸಂತಿಗೆ ಕೊನೆ ಹಿಡಿಯುವ, ಹೊರವ ಎಲ್ಲರೂ ಬತ್ತ. ಅಡಿಕೆ ಕೊಯ್ತ. ಊಟ, ಆಸರಿಗೆ ಚಾ ಹೊತ್ತೊತ್ತಿಗೆ ಸರಿ ಮಾಡದೆಯಾ. ಅದಾದ್ಮೇಲೆ ಹಸಿ ಅಡಿಕೆ ಸುಲಿಯವು. ಊರಲ್ಲಿದ್ದ ಅಡಿಕೆ ಸುಲಿಯವು ಎಲ್ಲರೂ ಬಂದ್ರೆ ಅಡ್ಡಿಲ್ಲೆ. ಮನೆ ಯಜಮಾನಂಗೆ ಅಡಿಕೆ ಕೊಯ್ಲು ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಬೈಕ್ ತಗೊಂಡು, ಅಡಿಕೆ ಸುಲಿಯುವು ಎಲ್ಲಿದ್ದ ಹೇಳಿ ಹುಡುಕುವುದೇ ಕೆಲಸ. ಅಂಗಳ ತುಂಬಾ ಅಡಿಕೆ ತುಂಬಕಂಡಿದ್ದೆ.

"ನಾಲ್ಕು ದಿನ ಬಂದುಬಿಡ್ರೆ..." ಹೇಳದ್ರೆ, "ಅಯ್ಯೋ ಆಗತ್ಲೆ ಮಾರಾಯ್ರೆ ಭಟ್ರೆ. ನಂಗ ಶಂಕರ್ ಹೆಗಡ್ರ ಮನೆಗೆ ಬತ್ಯ ಹೇಳಿ ವಹಿಸಿಕಂಡಿಕಿದ್ಯ. ಅಲ್ಲಿ ಮುಗಿಯುವರೆಗೆ ಆಗ್ತೇ ಇಲ್ಲೆ," ಹೇಳ್ತ. ಹಿಂಗೆ ಅವರ ಮನೆ, ಇವರ ಮನೆ ಬಾಗಿಲು ಓಡಾಡಿ ಯಾರೋ ಒಬ್ಬರು ಸಿಕ್ಕರೆ ಅವನೊಬ್ಬನೇ ಸಿಕ್ಕದವಾ. ಎಂಥಾ ಮಾಡಿ ಅಡಿಕೆ ಸುಲಿದು ಮುಗಿಸುದನ ಹೇಳಿ ಮನೆ ಯಜಮಾನ ಜೋತುಮೋರೆ ಹಾಕ್ಕಂಡು ಮನೆಗೆ ಬಪ್ಪುದೆಯಾ. (ಈಗ ಕತ್ತಿಯಲ್ಲಿ ಸೊಲಿಯವು ಬಯಲುಸೀಮೆ ಬದಿಯವು ಬತ್ತಾ ಇದ್ದ. ಅವು ಒಬ್ಬೊಬ್ರು ಒಂದ ದಿನಕ್ಕೆ ಒಂದ ಕ್ವಿಂಟಲ್ವರೆಗೆ ಸುಲಿತ. ಅವ್ಕೆ ಈಗ ಸಿಕ್ಕಾಪಟ್ಟೆ ಡಿಮಾಂಡ್. ಆದ್ರೆ ಅವ್ರ ಡಿಮಾಂಡ್ ಪೂರೈಸಲೇ ಎಲ್ಲರತ್ರೆ ಆಗತ್ಲೆ.)

ಯಜಮಾನಂಗೆ ಮನೆಗೆ ಬಂದ ಮೇಲೆ ಅಡಿಕೆ ಬೇಯಿಸದು, ಒಣಗಸದು ಮಾಡಕಂಡು ಆಸರಿ ಕುಡಿಯುವಷ್ಟರಲ್ಲಿ ಕೊನೆ ಗೌಡನ ಗಾಡಿ ಬಂದ್ರೆ ಸರಿ; ಇಲ್ಲ ಅಂದ್ರೆ, ಆಸರಿ ಕುಡದ ಕೈ ತೊಳದಪ್ಪುವಷ್ಟರಲ್ಲಿ, "ಅರೇ... ಕೊನೆ ಗೌಡ ಬಂಜ್ನೆ ಇಲ್ಲೆ ಬತ್ತೆ ಹೇಳದವ. ಟೈಮ್ ಆತು. ಹೋಗಿ ನೋಡಕಂಡೆ ಬತ್ತೆ," ಹೇಳಿ ಬೈಕ್ ಚಾಲು ಮಾಡದೇಯಾ.

ಮನೆಲಿದ್ದವು ನಿನ್ನೆ ದಿನ ಸುಲಿದ ಅಡ್ಕೆ ಸಿಪ್ಪೆ ತೆಗೆದು ಹೊರಗೆ ಹಾಕುದು, ಅಡಿಕೆ ಒಲೆಗೆ ಬೆಂಕಿ ಹಾಕುದು, ದೊಡ್ಡ ಹಂಡೆಗೆ ಅಡ್ಕೆ ಬೇಯಿಸುಲೆ ಹಾಕುದು, ಅಷ್ಟೊತ್ತಿಗೆ ಅಡ್ಕೆ ಬೆಂದಿತ್ತ ನೋಡುದು.
ಬೆಂದಿತ್ತ ನೋಡುಲೆ ಒಂದು ಕ್ರಮ ಇದ್ದು, ಅದರ ಕಣ್ಣು ಉದುರುಲೆ ಶುರು ಆಗವು. ಹಂಡೆ ಮೇಲಿಂದ ಕಣ್ಣು ತೇಲುಲೆ ಶುರು ಆಗಿದ್ದನೆ ಬೆಂಕಿ ಆರಿಸಿ ತೋಡುದೆಯಾ. ತೋಡಿದ ಮೇಲೆ ಬಿಸಿಲಿಗೆ ಒಣ್ಸುದೆಯಾ. ಹಿಂಗೆ, ಒಂದಾದ ಮೇಲೆ ಒಂದು ನೂರೆಂಟು ಕೆಲ್ಸ.

ಇನ್ನು, ಹಸಿ ಅಡ್ಕೆ ಸುಲದವ್ರ ಕೈಯ್ಯಂತೂ ಹೇಳದ ಬೇಡ. ತಲೆಯ ಬಿಳಿ ಕೂದಲಿಗೆ ಬಣ್ಣ ಹಚ್ಚಕಂಡ್ರು ಅಷ್ಟ ಕಪ್ಪು ಆಗ್ತಿಲ್ಲೆ - ಅಷ್ಟು ಕಪ್ಪು ಆಗ್ತು. ಲಿಂಬುನೋ, ಯಾವ್ದಾದ್ರೂ ಹುಳಿ ಪದಾರ್ಥ ಹಾಕಿ ಕೈ ತೊಳದ್ರೆ ಸುಮಾರು ಹೋಗ್ತು. ಆದ್ರೂ ಅಡ್ಕೆ ಕೆಲ್ಸ ಮಾಡ್ತಾ ಇದ್ದಾ ಹೇಳಿ ಎಲ್ಲರಿಗೂ ಗೊತ್ತಪ್ಪಂಗೆ ಇರ್ತು. "ಅಯ್ಯೋ... ನನ್ನ ಕೈ ನೋಡುವಂಗ ಇಲ್ಯೆ..." ಹೇಳಿ ಎಲ್ಲ ಹೆಂಗಸ್ರೂ ಕೈ ಹಿಂದ ಅಡ್ಸಕತ್ತ.

ರಾತ್ರಿ ಸುಮಾರು ಹನ್ನೊಂದ-ಹನ್ನೆರಡು ಗಂಟೆವರೆಗೂ ಅಡ್ಕೆ ಸುಲಿತ. ಮರುದಿನ ಬೆಳಿಗ್ಗೆ ಆರ್ ಗಂಟೆಯಿಂದನೇ ಮತ್ತೆ ಕೆಲಸ ಶುರು. ಅಡಿಕೆ ಕೊಯ್ಲು ಅಂದ್ರೆ ಮನೆ ಜನ ಕನಿಷ್ಠ ಎರಡರಿಂದ ಮೂರು ಕೆಜಿ ತೂಕ ಇಳಿತ. ಗೊತ್ತಾತ ಹೆಂಗೀರ್ತು ಅಡಿಕೆ ಕೊಯ್ಲು ಹೇಳಿ?

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕಲಬುರಗಿ ಸೀಮೆ | ಒಟ್ಟಿನಾಗ ಹೆಣ್ಣಮಕ್ಕಳಿಗಿ ಏನಾರ ಒಂದು ಅನಸಕೊಂಬದೆ ಅದಾ ದುನಿಯಾದಾಗ!

ಆ ಕ್ಷಣಕ್ಕೆ ಕೆಲಸ ಕಷ್ಟ ಅನಸದ್ರೂ, ಅಡಕೆ ಬೆಳೆಗಾರರು ಯಾವಾಗ್ಲೂ ಖುಷಿಯಾಗೇ ಇರ್ತ.
ಇದಕ್ಕೆ ಕಾರಣ, ಪ್ರತೀ ಕ್ವಿಂಟಲ್ಗೆ ಇರುವ ದರ. ಚೊಲೋ ಇರ್ತು. ರೈತ ಬೆಳೆದ ಇನ್ಯಾವ ಬೆಳೆಗೂ ಈ ಮಟ್ಟದ ದರ ಇಪ್ಪುದು ಅಪರೂಪ. ರಾಶಿ ದಿನದವರೆಗೆ ಇಟ್ಟಕಂಡು ದರ ಬಂದಾಗ್ಲೆ ಕೊಡಲಕ್ಕು. ಆದ್ದರಿಂದ ಅಡ್ಕೆ ಮಾಡುವಾಗ ಕಷ್ಟ ಅನಸದ್ರೂವಾ, ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಶ್ರೀಮಂತರೆಯಾ.

ಒಣಗಿಸಿದ ಅಡ್ಕೆಯ ಆರಿಸಿ ಚಾಲಿ, ಬೆಟ್ಟೆ, ರಾಶಿ ಹಿಂಗೆ ಬೇರೆ-ಬೇರೆ ಮಾಡಿ, ಮಾರ್ಕೆಟ್ಟಿಗೆ ಕಳಸುದೆಯಾ. ಬೇರೆ ಮಾಡುಲೆ ಸುಮಾರು ದಿನ ಬೇಕು. ಪಾರ್ವತಿ ಮನೆಲಿ ಈಗ ಒಂದನೇ ಕೌಯ್ಲು ಮುಗತ್ತು. ಅಂದ್ರೆ, ಒಂದ ಸಲ ಹಣ್ಣಾದ ಆಡ್ಕೆ, ಕಾಯಿ ಅಡ್ಕೆ ಎಲ್ಲ ಕೊಯ್ಯದಾತು. ಮತ್ತೊಂದು ಕೊಯ್ಲಿಗೆ ಒಂದು ತಿಂಗಳ ತಡ. ಅದ್ಕೆ ಪಾವ೯ತಿಗೆ ಸೀತತ್ತೆ ಕರದ್ದು ನೆನಪಾತು.

"ರೀ... ಒಂದ್ಸಲಾ ಎಲ್ಲ ಕೆಲ್ಸ ಮುಗತ್ತಲಿ. ನಂಗೂ ಬೇಜಾರು ಬಂದೋತು. ಸೀತತ್ತೆ ಬಾ ಹೇಳಿ ರಾಶಿ ಕರದ್ದು. ಒಂದ್ನಾಲ್ಕು ದಿನ ಹೋಗಬತ್ತೆ. ನೀವು ಮನೆ ಬದಿಗೆ ಸುಧಾರಸ್ಕಳಿ," ಹೇಳ್ತಾ, ಗಂಡನ ಒಪ್ಪಿಗೆಗೂ ಕಾಯ್ದೆ ಬಟ್ಟೆ ತುಂಬಕಂಬುಲೆ ಮನೆ ಒಳಗೆ ಹೋತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app