ದೇಸಿ ನುಡಿಗಟ್ಟು - ಕುಂದಾಪುರ ಸೀಮೆ | ದೋಣಿಗೆ ಹೊಯ್ಯಿಂಗಿ ತುಂಬುವತಿಗೆ ದೋಣಿ ಅಲ್ಲಾಡ್ತಿದಿತ್ ನಮ್ಗೆ ಹೆದ್ರಿಕಿ ಆತಿದಿತ್

Kundapu Doni

ನಾ ಚಣ್ಣರ್ ಇಪ್ಪತೆಂಗೆ ಬ್ಯಾಸಿಗಿ ರಜಿಗೆ ಅಜ್ಜಿಮನಿಗೆ ಹೋಪುಕೆ ಹೊಯ್ ಈಗ ಬಾಲ್ಯದ ನೆನ್ಪ ಮಾಡ್ಕಂಡ್ರೆ ನೂರಾರ್ ಚಂದದ ನೆನ್ಪ ಬತ್ತೋ. ಬಾಲ್ಯದ ನೆನಪೇ ಚಂದ. ಈಗಿನ ಕಾಲ್ದ್ ಮಕ್ಕಳ್ ಸಮ್ಮರ್ ಹಾಲಿಡೇಸ್ ಕ್ಯಾಂಪ್ ಅಂದ್ಹೇಳಿ ದುಡ್ ಕೊಟ್ ಹೊಯ್ ಸೇರ್ಕಂತ್ರ್. ಅಜ್ಜಿಮನಿಗೆ ಹೊತೆ ಇಲ್ಲ. ಅವರಿಗೆ ಈ ತರಹದ ಅನುಭವಗಳ್ ಸಿಕ್ಕುದಿಲ್ಲಾ ಅಲಾ ಅಂದ್ಹೇಳಿ ಬೇಜಾರ್

ಆಗಳಿಕೆ ಬ್ಯಾಸಿಗಿ ರಜಿ ಸಿಕ್ಕುಕು ಎಲ್ಲ ಮಕ್ಕಳಿಗೂ ಅಜ್ಜಿ ಮನಿಗೆ ಹೊಪ್ದ ಅಂದ್ರೆ ಖುಷಿ. ನನ್ನ ಅಜ್ಜಿಮನಿ ಊರ್ ಹಟ್ಟಿಯಂಗಡಿಗೆ ಬ್ಯಾಸಿಗಿ ರಜಿ ಸಿಕ್ಕುಕು ಹೊತಿದಿದಿ. ನನ್ ಮನಿಯಿಂದ ಹಟ್ಟಿಯಂಗಡಿಗೆ ಹೊಪುಕೆ ಹತ್ರದ್ ದಾರಿ ಅಂದ್ರೆ ಬಸ್ರೂರಿಗೆ ಹೊಯ್ ಅಲ್ಲಿಂದ ದೋಣಿಯಂಗೆ ಹೊಳಿದಾಟಿ ಹಟ್ಟಿಕುದ್ರಿಗೆ ಹೊಯ್ ಅಲ್ಲಿಂದ ನೆಡ್ಕ ಹೊಯ್ಕಿದಿತ್. ಈಗ ಹಟ್ಟಿಯಂಗಡಿಗೆ ಬೇಕಾದಷ್ಟ್ ಬಸ್ ಇದ್ದೋ. ಮುಂಚೆ ಬಸ್ರೂರ್ - ಹಟ್ಟಿಯಂಗಡಿ ಹೊಳಿಗೆ ಇದ್ದದ್ದೇ ಒಂದ್ ದೋಣಿ. ಹಟ್ಟಿಕುದ್ರಿಂದ ಕುಂದಾಪ್ರಕ್ಕೆ ಹೊಯ್ ಬಪ್ಪರ್ ಎಲ್ಲರೂ ಇದೇ ದೋಣೆಂಗೆ ಹೊಳಿ ದಾಟಿ ಹೊಯ್ ಬರ್ಕಿದಿತ್. ಇಲ್ಲಿನರಿಗೆ ಹತ್ರದ ಪ್ಯಾಟಿ ಅಂದ್ರೆ ಬಸ್ರೂರ್. ಕೆಲವರ ಮನೆಂಗೆ ಅವರ ಸ್ವಂತಕ್ಕೆ ಒಂದೊಂದ್ ಚಣ್ ದೋಣಿ ಇದಿತ್. ಬಸ್ರೂರ್ - ಹಟ್ಟಿಕುದ್ರು ದೋಣೆಂಗೆ ಹೊಪ್ಕೆ ಆಗಿನ್ ಕಾಲದಂಗೆ ಎರಡ್ ರೂಪಾಯಿ ಚಾರ್ಜ್ ಇದೀತ್. ನಂಗೆ ಚಣ್ಣನ್ ಇಪ್ಪತೆಂಗೆ ದೋಣೆಂಗೆ ಕೂಕ ಹೊಪ್ದ್ ಅಂದ್ರೆ ಖುಷಿ. ಅಮ್ಮನೊಟ್ಟಿಗೆ ಅಜ್ಜಿಮನಿಗೆ ಪ್ರತಿಸಲ ಹೊತಿದಿದಿ. ಹಟ್ಟಿಕುದ್ರಂಗೆ ದೋಣಿ ಇಳ್ಕಂಡ್ ಬೈಲಂಗೆ ನೆಡ್ಕ ಹೊರೆ ಸಿಕ್ಕುದೆ ವಾರಾಹಿ ಹೊಳಿ ಬದೆಂಗೆ ಇಪ್ ಚಣ್ ಊರ್ ಹಟ್ಟಿಯಂಗಡಿ. 

ಬ್ಯಾಸಿಗಿ ರಜಿಗೆ ಹೋದಾಗಳಿಕೆ ನಾನು, ಪ್ರಮೋದ, ಶ್ರೀಪಾದ, ಪರಿಕ್ಷಿತ, ಗೋಪಿ ಅಣ್ಣ, ರಾಧಾಕೃಷ್ಣ ಅಣ್ಣ, ನಟೇಶ್ ಅಣ್ಣ ಎಲ್ಲಾ ಸೇರ್ಕಂಡ್ ಗೆದ್ದಿ ಬೈಲಂಗೆ ಕ್ರಿಕೆಟ್ ಆಡ್ತಿದಿತ್. ಆಗಳಿಕೆ ನಮ್ ಮನೆಂಗೆ ಮೊಬೈಲ್, ಟಿವಿ ಎಂತದೂ ಇರ್ಲಾ. ನಮ್ಗೆ ಆಡುದ್ ಬಿಟ್ರೆ ಬೇರೆ ಎಂತದೂ ಗೊತ್ತಿರ್ಲಾ. ಬೆಳಗಾತ ತಿಂಡಿ ತಿಂದ್ಕಂಡ್ ಮನಿಯಿಂದ ಹೊರೆ ಮಧ್ಯಾಹ್ನ ಹಸು ಆಪ್ಕು ಉಂಬುಂಕೆ ಬತ್ತಿದಿತ್. ಉಂಡ್ಕಂಡ್ ಮತ್ ಆಡುಕೆ ಹೊರೆ ಬಪ್ಪುದ್ ಕತ್ತಲಿ ಆರ್ ಮೇಲೆ. ಕ್ರಿಕೆಟ್ ಆಡುವತಿಗೆ ಬಾಲ್ ಕಳ್ದ ಹೊಯ್ ಸಿಕ್ದಿರೆ ನಾವ್ ಕಣ್ಣಾಮುಚ್ಚಾಲಿ ಆಡ್ತಿದಿತ್. ಇಡೀ ಹಟ್ಟಿಯಂಗಡಿ ಊರಂಗೆ ಎಲ್ ಹೊಕ್ಕಂಡರು ಹುಡ್ಕಿ ತೆಗಿತಿದಿತ್. ಸಾಯಂಕಾಲ ಊರ್ ಮೇಲೆ ತಿರ್ಗಿ, ಆಡ್ಕಂಡ್ ಬಂದ್ ಹಂಡೆಂಗೆ ಕಾಸಿ ಇಟ್ ಬಿಸಿ ನೀರಂಗೆ ಸ್ನಾನ ಮಾಡ್ಕಂಡ್ ದೇವರಿಗೆ ಕೈ ಮುಗ್ದ ಊಟ ಮಾಡ್ಕಂಡ್ ತಂಗಿ ಮತ್ತೆ ಚಿಕ್ಕಮ್ಮನೊಟ್ಟಿಗೆ ಚನ್ನಮಣೆ ಆಡಿ ನಿದ್ದೆ ಬಪ್ಕು ಮನ್ಕಂತಿದಿದಿ. ದಿನಾ ಹಿಂಗೇ ಗಮ್ಮತ್ ಆಪ್ಕ ಹೊಯ್ ಅಜ್ಜಿಮನಿಗೆ ಹೋದಾಗಳಿಕೆ ಹೊತ್ ಹೋದ್ದೆ ಗೊತ್ತಾತಿರಲ್ಲ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಬಾವಿಕಟ್ಟಿ ಮ್ಯಾಲ ಪಟಗದ ಅಜ್ಜ, ಬಾವಿ ಒಳಗ ಮೈ ಮ್ಯಾಲ ದೆವ್ವ ಬರ್ತಿದ್ದ ಸೊಸಿ

ಕೆಲವ ದಿನ ನಾವ್ ದೋಸ್ತಿಗಳೆಲ್ಲಾ ಹಟ್ಟಿಯಂಗಡಿ ಹೊಳಿಗೆ ಈಜುಕೆ ಹೋತಿದಿತ್. ಬೆಳಗಾತಿಂದ ಮಧ್ಯಾಹ್ನವರೆಗೂ ಈಜಾಡಿ ಗಮ್ಮತ್ ಮಾಡ್ತಿದಿತ್. ಹೊಳೆಂಗೆ ಮಳೆಗಾಲದಂಗೆ ಚೆಪ್ಪಿ ನೀರ್, ಬ್ಯಾಸಿಗಿಯಂಗೆ ಉಪ್ಪ್ ನೀರ್. ಈ ಉಪ್ಪನೀರ್ ಹೊಳೆಂಗೆ ಈಜಾಡ್ರೆ ಮೈಯೆಲ್ಲಾ ಒಂದ್ ನಮೂನಿ ಉರಿ ಮತ್ತೆ ಗಿಂಡುದ್ ಅದ್ಕೆ ನಾವ್ ಮನಿಗೆ ಬಂದ ಶಾಬನ್ ಹಾಯ್ಕಂಡ್ ಮೀತಿದಿತ್. ಆ ಹೊಳೆಂಗೆ ಹೊಯ್ಯಿಂಗಿ (ಮರಳು) ತೆಗಿತಿದಿರ್. ಹೊಯ್ಯಿಂಗಿ ತೆಗುಕೆ ಸುಮಾರ್ ದೋಣಿ, ಸುಮಾರ್ ಜನ ಇರ್ತಿದಿತ್. ನಾವ್ ಈಜುಕೆ ಹೊದಾಗಳಿಕೆ ದೂರದಂಗ ನಿಂತ್ಕಂಡ್ ಕಾಂತಿದಿತ್. ನಮ್ ಮನಿ ಹತ್ರದ ಜನ್ನಣ್ಣ, ಶೇಖರಣ್ಣ, ಸುಬ್ಬಣ್ಣ ಎಲ್ಲಾ ಹೊಂಯ್ಯಿಗಿ ತೆಗುಕೆ ಇರ್ತೀದಿರ್. ನಾವ್ ಮಕ್ಕಳೆಲ್ಲಾ ಬೆಳಗಾತ ಬೇಗ ಎದ್ ಹೊಳಿ ಹತ್ರ ಹೊಯ್ ಅವರ ಹೊಂಯ್ಯಿಗಿ ತೆಗುಕೆ ಹೊಪು ದೋಣಿ ಹತ್ತಿ ಕೂಕಂತಿದಿತ್. ಜನ್ನಣ್ಣ ನಮ್ಮನ್ ಕಂಡ ಮಕ್ಕಳ್ ಪಾಪ ಅಂದ್ಹೇಳಿ ಅವರೊಟ್ಟಿಗೆ ಕರ್ಕ ಹೊತಿದಿರ್.

ನಮ್ಗೆ ದೋಣೆಂಗೆ ಒಂದ್ ರೌಂಡ್ ಹೋಪುಕ್ ಆತ್ ಅಲಾ ಅಂಬು ಖುಷಿ. ಜನ್ನಣ್ಣ ಹುಟ್ ಹಾಕ್ತೆ ದೋಣಿನ ನಡು ಹೊಳಿಯಿಂದ ಮುಂದ್ ತಕ ಹೊತಿದಿರ್. ದೋಣಿ ನಡ್ಸು ಹುಟ್ಟನ್ನಾ (ತೆಮಿ ಕೊಲ್) ನ ನೀರಂಗೆ ವತ್ತಿ ಹೊಯ್ಯಿಂಗಿ ಇತ್ತಾ ಅಂದ್ಹೇಳಿ ಅಂದಾಜ್ ಮಾಡ್ತಿತಿದಿರ್. ಅದ ಅಲ್ದಿರೇ ನೀರಿಗೆ ಇಳ್ದ ಹೊಯ್ಯಿಂಗಿ ದಿಬ್ಬಾ ಇತ್ತಾ ಅಂದ್ಹೇಳಿ ಕಾಂತಿದಿರ್. ಸುಮಾರ್ ಹೊಯ್ಯಿಂಗಿ ಇತ್ ಅಂದ್ಹೇಳಿ ಗೊತ್ತಾರೇ ಎರಡ್ ತೋರದ ಕೋಲ ಆಚೀಚೀ ಹುಗ್ದ್ ದೋಣಿ ನಿಲ್ಸಿ ನೀರಿಗೆ ಇಳ್ದ ವಟ್ಟಿ ಬಕೆಟ್, ಬಿದಿರಿನ ಬುಟ್ಟಿ ತಕಂಡ ನೀರಂಗೆ ಮುಳ್ಗಿ ಹೊಯ್ಯಿಂಗಿ ತುಂಬ್ಕಂಡ್ ಅದನ್ನಾ ದೋಣಿ ಒಳಗೆ ತುಂಬ್ತಿದಿರ್. ದೋಣಿಗೆ ಹೊಯ್ಯಿಂಗಿ ತುಂಬುವತಿಗೆ ದೋಣಿ ಅಲ್ಲಾಡ್ತಿದಿತ್ ನಮ್ಗೆ ಹೆದ್ರಿಕಿ ಆತಿದಿತ್. ದೋಣಿ ತುಂಬಾ ಹೊಂಯ್ಯಿಗಿ ತುಂಬರ ಮೇಲೆ ದೋಣಿನ ಒಂದೇ ಲೆಕ್ಕದಂಗೆ ಹುಟ್ಟ ಹಾಕಂತ ದೋಣಿ ಆಚೀಚಿ ತೇಲದಿದ್ದಂಗೆ ಮುಳ್ಗದಂಗೆ ದಡಕ್ಕೆ ತೆಕ ಬಪ್ಪಂಗೆ ಒಂದ್ ಬದೆಂಗೆ ಹೊಯ್ಗಿಯಿಂದ ಇಳದ್ ನೀರನ್ನಾ ಅಂಡೆಂಗೆ ತುಂಬಿ ಹೊರ್ಗೆ ಹಾಕ್ತೆ ಬತ್ತಿದಿರ್.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ದಕ್ಷಿಣ ಕನ್ನಡ ಸೀಮೆ ಹವ್ಯಕ | ಇಂದಿಂಗೂ ಊರು ಹೇಳ್ರೆ ಅಜ್ಜನ ಮನೆ‌ ನೆನಪೇ ಅಪ್ಪದು

ಹೊಳಿ ದಡಕ್ಕೆ ತಂದ ಹಾಕದ್ ಹೊಂಯ್ಯಿಗಿನ ಟೆಂಪೋ, ಲೋರಿಯವರ ಬಂದ ದುಡ್ಡ್ ಕೊಟ್ಟ ಲೋಡ್ ಮಾಡ್ಕಂಡ್ ತೆಕ ಹೊತಿದಿರ್. ಜನ್ನಣ್ಣ ಬೆಳಗಾತ ನಾಕ್ ಗಂಟಿಗೆ ಎದ್ ಹೊಯ್ ದೋಣೆಂಗೆ ಹೊಯ್ಯಿಂಗಿ ತುಂಬ್ಕಂಡ ಬಂದ ಎಂಟ್ ಗಂಟಿಗೆ ಬಪ್ಪ್ ಲೋರಿಗೆ ಲೋಡ್ ಮಾಡ್ತಿದಿರ್. ನಿಜಕ್ಕೂ ಜನ್ನಣ್ಣ, ಶೇಖರಣ್ಣ, ಸುಬ್ಬಣ್ಣ ತುಂಬಾ ಶ್ರಮ ಜೀವಿಗಳ್, ತುಂಬಾ ಕಷ್ಟ ಪಡ್ತಿತಿದಿರ್. ಅವರ ಕಷ್ಟ ನಮ್ ಹತ್ರ ಹೇಳ್ಕಂಡಿದಿರ್: "ನಾವ್ ಇಷ್ಟ ಕಷ್ಟ ಪಟ್ ಹೊಳಿಯಿಂದ ಹೊಯ್ಗಿ ತಂದ ಹಾಕತ್, ಆರೇ ಇವರ ನಮ್ಗೆ ನಾಕ ಕಾಸ್ ಕೊಡ್ತ್ರ. ಅವರ ಅದ್ನ ಪ್ಯಾಟಿಗೆ ತಕ ಹೊಯ್ ಸಾವಿರಾರ ರೂಪಾಯಿಗೆ ಮಾರಾಟ ಮಾಡ್ತ್ರ್ ನಾವ್ ಇಷ್ಟ ಒದ್ಕಂಡರೂ ನಮ್ಗೆ ಸಿಕ್ಕುದ್ ಎಂತ ಇಲ್ಲ," ಅಂದ್ಹೇಳಿ. ಎಲ್ಲೆಲ್ಲೆಂದನೋ ಲೋರಿ, ಟೆಂಪ್ ಬತ್ತಿದ್ದೋ ಹೊಯ್ಯಿಂಗಿ ತಕ ಹೋಪುಕೆ. ರಸ್ತಿ ಮೇಲೆ ಬರೀ ಲೋರಿ ಹೊಪ್ದೇ ಗೌಜ್.

ನಾ ಚಣ್ಣರ್ ಇಪ್ಪತೆಂಗೆ ಬ್ಯಾಸಿಗಿ ರಜಿಗೆ ಅಜ್ಜಿಮನಿಗೆ ಹೋಪುಕೆ ಹೊಯ್ ಈಗ ಬಾಲ್ಯದ ನೆನ್ಪ ಮಾಡ್ಕಂಡ್ರೆ ನೂರಾರ್ ಚಂದದ ನೆನ್ಪ ಬತ್ತೋ. ಬಾಲ್ಯದ ನೆನಪೇ ಚಂದ. ಈಗಿನ ಕಾಲ್ದ್ ಮಕ್ಕಳ್ ಸಮ್ಮರ್ ಹಾಲಿಡೇಸ್ ಕ್ಯಾಂಪ್ ಅಂದ್ಹೇಳಿ ದುಡ್ ಕೊಟ್ ಹೊಯ್ ಸೇರ್ಕಂತ್ರ್. ಅಜ್ಜಿಮನಿಗೆ ಹೊತೆ ಇಲ್ಲ. ಅವರಿಗೆ ಈ ತರಹದ ಅನುಭವಗಳ್ ಸಿಕ್ಕುದಿಲ್ಲಾ ಅಲಾ ಅಂದ್ಹೇಳಿ ಬೇಜಾರ್.

ನಿಮಗೆ ಏನು ಅನ್ನಿಸ್ತು?
1 ವೋಟ್