ದೇಸಿ ನುಡಿಗಟ್ಟು - ಹೆಗ್ಗಡದೇವನಕೋಟೆ ಸೀಮೆ | ನನ್ನವ್ವೆಯಾ ಕಾಲ್ದ ಹೆಂಗ್ಸ್ರು ಜಗತ್ನಾ ಗೆದ್ದಂತ್ಯಾ ಕುಟುಂಬ್ವಾ ಗೆದ್ದೋರು

village Women

ಹೆಂಗ್ಸ್ರು ಕಷ್ಟಪಡ್ವುದೇ ಸರಿ ಅನ್ನೋದ್ ಅಪ್ರಾಧ. ಈಗ್ನ ಹೆಣ್ಮಕ್ಳನ್ನೋಡ್ದಾಗ ಹೆಣ್ಣು ಜಗತ್ತ್ನಲ್ಲಿ ಎಷ್ಟೆಲ್ಲಾ ಬದ್ಲಾವಣೆ ಆಗದಾ. ಹೆಂಗಳೆಯರು ಎಲ್ಲಾ ದಿಕ್ನಾಗ್ ಬೆಳೆದಿರ್ವಾ - ಮೆಚ್ಬೇಕನವೇ. ಆದ್ರಾ ಈಗ್ನಾ ಕಾಲ್ದ ಹೆಂಗ್ಸ್ರಲ್ಲಿ ಬಂಡೆದೈತವ್ವೆ ಆದ್ರಾ ನನ್ನವ್ವೆನ ಕಾಲ್ದ ಹೆಂಗ್ಸ್ರಲ್ಲಿದ್ದ ದೈರ್ಯದ್ ತರವಲ್ವೇ ಯವ್ವಾ ಅದು. ನನ್ಗೆ ನನ್ನವ್ವೆನ ಕಾಲ್ದ ಹೆಂಗಸ್ರು ಕಡ್ಮೆ ಆಗ್ತಾವ್ರೆ ಅನಸ್ತಾದ

ನನ್ನವ್ವೆ ಅವಗವಾಗ ಒಂದ್ ಮಾತ್ನ ಹೇಳ್ತಿದ್ಲು ಕವೈ! ಬಡ್ಡಿಕೂಸೈ ಬಲಾ ಇಲ್ಲಿ. ನನ್ನಾ ನಿನ್ನ ಅಜ್ಜ - ಅಜ್ಜವ್ವೆ ಸೂರ್ಗಟ್ ಇಲ್ದಿರ್ವ ಒಂದ್ ಗುಡ್ಸ್ಲಿಗಾ ಮದ್ವೀ ಮಾಡಿ ಕಳ್ಸಿಕೊಟ್ಟದ್ದು ಕನಾ. ಲೋ ಕುಸು ನಾನ್ ನಿನ್ ಅಪ್ಪಯ್ಯನ್ನ ಮದ್ವಿ ಆಗ್ವಾಗ ಒಂದ್ ಬಿಡ್ಗಾಸು ಇಲ್ದೋಯ್ತು; ನಿಮ್ಮ ಅಪ್ಪಯ್ಯನ ಕಿಸ್ನಾಗ. ನಾನೋ ಆ ಮುರ್ಕ್ಲು ಗುಡಿಸಲ್ನಾ ಸೇರ್ಯೋ ಒಕ್ಕಲ್ತನ ಮಾಡಿ ಇವತ್ ಹಿಂಗ್ ಆಗದಾ. ಈ‌ ಗುಡ್ಸ್ಲು ಅಂಗಾರ ಹೋಗಿ ಬಂಗಾರ ಆಯ್ತಂತ ಸೊಲ್ಲಾಡ್ತಿದ್ಲು...

"ನೆರುಲ್ಲು ವಡ್ಕಾ-ತಡ್ಕಾ ಮಟ್ಟಾಳ ಗರಿಯಿಂದ ಕವ್ಚಿದ್ದ ಚಾವ್ಣಿ ಗುಡ್ಸಲ್ನಾ ಮಣ್ಣೆಂಚಿನ್ ಸೂರ್ನಲ್ಲಿ ಇಟ್ಟೀವ್ನೀ. ತೂತ್ ಮಡ್ಕಿಗೂ ಗತಿ ಇಲ್ದಾ ಇರ್ವಾ ಅಟ್ಟಿಗ್ ಬಂದ್, ಆ ತುರಕ್ ಸಾಬಿ ತರ್ವಾ ಸ್ಟೀಲ್ನಿಂದ್ ಹಿಡ್ದು ಒಂದ್ ತಾಮ್ರದ್ ಹಂಡ ಕಂಚ್ಮುರ್ಕು ಇತ್ತಾಳಾ ದೇವ್ರ್ ಪಾತ್ರಾ ಪಗ್ಡೆ ತೆಗ್ದು ಇಟ್ಟೀವ್ನೀ. ಉಟ್ಟು ಬಟ್ಟೆಯ್ಲೇ ಬಂದ್ ಒಂದೇ ಸೀರ್ನಾಗ ನಾಲ್ಕೈದ್ ವರ್ಷ ಜೀವ್ನಾ ಸಾಗ್ಸೀಸ್ವಿ. ಆಸರ್ಕ್ಕಾ ಬ್ಯಾಸರ್ಕಾ ಕಳೆದ್ವ್ನೀ. ಸೊಪ್ಪುಸೊದ್ನೀರು, ರಾಗಿಗಂಜಿ, ಅಂಬ್ಲಿ ಕುಡ್ಕಂಡು ಈ ಹಾಳಾದ್ ಹೊಟ್ಟೆ ವರೆದೀವ್ನೀ. ಅದೂ ಸಾಲ್ದೇ ಆ ಕೆಟ್ಟ ದಿಕ್ಕೆಟ್ಗತಿಯಾಗ ನಿಮ್ಮಪ್ಪಯ್ಯನ್ಕೂಡಿ ನಿಮ್ನಲ್ಲಾ ಹಡ್ದು ಜೀವಾ ಬಸ್ದು ಸುಟ್ಟು ಸುಣ್ಣಾ ಆಗೀವ್ನೀ..."

"ಒಂದ್ ಶಾಸ್ತ್ರ್ವಿಲ್ಲ, ಬಾಣಂತನಾ, ಬಸುರ್ತಾನ ಇಲ್ಲಾ, ಆರೈಕಾ ಇಲ್ಲಾ ಕುಸೂ. ಎರ್ಮಣ್ಣು ಸೋಸ್ತಿಂದು ನೀರ್ ಕುಡ್ದು ನಿಮ್ಗಳಿಗಾ ರಕ್ತ ಬಸ್ದೀವ್ನೀ. ತವ್ರು ನಂಟ್ನಾ ಕಳ್ಕೊಂಡು ಯಾರಾದ್ರುವೇ ನಿಗರ್ಕಂಡಾಗೋಗಿ ಅತ್ತೂ ಕರ್ದೂ ಬಂದೀವ್ನೀ. ಎಲ್ಕಾ ಇದ್ರೂ ನನ್ನವ್ರು ತನ್ನವ್ರು ಅಂತ ಯಾರೂ ಇಲ್ದಾ ಬೇವರ್ಸಿಯಂಗ್ ಈ ಬದ್ಕಿನ್ ಕಷ್ಟ್ಗಳ ಸಾಲು ಸಾಲ್ವಾಗಿ ಹೆದರ್ಸೀವ್ನೀ. ಯಾರ್ ಹೊಲ್ಯಾ ಗದ್ದ್ಯಾ ಬಿಟ್ಟಿಲ್ಲ್ನೋಡು ನನ್ ಕೂಸೇ. ಬಿಸ್ಲು ಮಳಾ ಅಲ್ದಾ ಕೂಲಿನಾಲಿ ಮಾಡಿ ಒಂದು ಆಣಿಯಿಂದ ಹಿಡ್ದು ದೊಡ್ಡ್ ನೋಟ್ನಾ ಈ ಕೈಚೀಲ್ದಾಗ್ ಕಾಣ್ವೋರ್ಗೂ ಜೀತಮಾಡೀವ್ನೀ. ಒಂದ್ಹಬ್ಬಕಾಣಿ ಮುಂಜಿಯಾಕಾಣಿ ಎಲ್ಲಾ ದಿವಸ ಒಂದ್ಯಾ. ನನ್ ಬದ್ಕಿಗಾ ಹೊಸ್ತನಾನೇ ಇಲ್ಲಾ..."

Image
village life

"ನಿಮ್ಮಪ್ಪಯ್ಯನಾ ಹೆಂಡ್ದಾಸೆ, ನನ್ನ ಊರ್ ಪುಂಡ್ರ ಕೆಟ್ಟ ಕಣ್ಗೆಲ್ಲಾ ಗುರಿ ಮಾಡೇಯ್ತೀ. ನಾನೋ, ಕುಸೂ ಮಾರಿ ಕನ್ಲಾ ಕಡ್ಪಾಪಿಗಳ್ಗಾ ಹೆಮ್ಮಾರಿ. ಒಂದ್ಕೂ ಜಗ್ಲಿಲ್ಲಾ ಕೆಟ್ಟ್ಕಣ್ಣಿನವ್ರ್ಗಾ ಕೆರ್ದಲ್ ಹೊಡ್ದು ಎಲಾ ಅಡ್ಕಿ ಸಮೇತ್ವೇ ಉಗ್ದು ಜನ್ಮ್ವಾ ಜಾಲಾಡಿ ಬಡಿದೋಡ್ಸೀವ್ನೀ. ನಿಮ್ಮಪ್ಪಯ್ಯನ್ಕೂಡ ಸೀತ್ಮಾತಾ ಗರಿತಿ ಆಗೀವ್ನೀ. ಕುಡುಕ್ನಾಗ್ಲಿ, ಕುಂಟ್ನಾಗ್ಲಿ, ತಿರುಕ್ನಾಗ್ಲಿ ಅವ್ನೇ ಎಲ್ಲಾ ಅನ್ಕೊಂಡ್ ಬಾಳ್ವೆ ಮಾಡೀವ್ನೀ. ನಿಮ್ಮ ಚಿಕ್ಕಪ್ದೀರ್, ದೊಡ್ಡಪ್ದೀರ್, ಮಾವ್ದೀರ್ ಕೂಟ ಕಿಸಾತಿರ್ದು ನೆಸಾತಿರ್ವಿ ಕೋಳಿಕುಕ್ಕರ ಆಡು, ದನಾ, ಕರ, ಕೊಟ್ಗಾ, ನೊಗಾ ಉಳಿಸ್ಕಂಡೀ ಕನಾ ಕುಸೂ. ಅಕ್ಪಕ್ಕದ್ ಗರ್ತೀರೋ ನನ್ಕೂಟ ಬಾವಿ ನೀರ್ ಸೇದ್ವಾಗ ಗಂಟ್ಲಾಕಿರ್ಚಿ ನನ್ ಬಾಳ್ವೇನೆಲ್ಲಾ ಹಾಡ್ಕೋಳ್ಳೋರು ಬಾಯ್ತುಂಬಾ ಕಿಸಿಯೋರು ಮುಂಡಾರು ನನ್ ಸವ್ತೀರೂ..."

"ಆದ್ರಾ, ನಾ ಹಾಡ್ಕೋಳೋರ್ ಮುಂದಾ ಬದ್ಕಿ ತೋರ್ಸೀವ್ನೀ ಕುಸೂ. ಎಡ್ವಿ ಬೀಳ್ದಂಗಾ ಗೆದ್ ನಿಲ್ತೀವ್ನೀ ಮೊಗ. ನನ್ ಮೂಗ್ ಮೇಲ್ ಬಡ್ದ್ರಾ ಮೂರ್ ಅಕ್ಷರಾ ಬರ್ವಲ್ದು, ಬರೆಯಾಕ್ ಬರ್ವಲ್ದು. ನಾ ಪಟ್ಕಷ್ಟ ನನ್ ಮಕ್ಳಿಗ್ ಬೇಡ್ವೇ ಮಾರವ್ವ ಅಂತ, ನನ್ನ ಕೂಟ್ವೇ ಈ ಕಷ್ಟ್ವೆಲ್ಲಾ ಮಣ್ಣಾಗ್ಲೀ ಅಂತಾ ನಿಮ್ನೆಲ್ಲಾ ಶ್ಯಾಲಿಗ್ ಸೇರ್ಸಿ ಒಂದೆರೆಡು ಅಕ್ಷ್ರ ಕಲ್ಯೋ ಮಟ್ಟ್ಗಾದ್ರೂ ಮಾಡೀವ್ನೀ. ಬದ್ಕಿ ಬಾಳಿ ತೋರ್ಸುರ್ಲಾ ಕುಸು ಸಾಕಷ್ಟಾ ನನ್ಗಾ. ನಾ ಹುಟ್ಟಿ ಕಂಡವ್ರಾ ಮನಾ ಸೇರಿ ಇಷ್ಟೆಲ್ಲಾ ಪಟ್ ಪಾಡ್ಗಾ ಒಂದರ್ಥ ಬರ್ತೈತಿ..."

ಈ ಲೇಖನ ಓದಿದ್ದೀರಾ?: ಬಹು ಕರ್ನಾಟಕ - ಬುಡಕಟ್ಟು ಮರಾಟಿ | ಗೊಂದೊಳು ಪುಜ, ಭೈರವಸ್ ಕೆರ್ತನ ಡುಕ್ರ- ಕೊವುಂಡೆ ಕೆರ್ತೊ...

"ನಿನ್ಕುಡ್ಕಪ್ಪನ್ ಹೆಸ್ರೇಳಿ ವಂಶ ಬೆಳಿಸ್ರ್ಲಾ  ನನ್ ಸೊಸಾ ಬಂದ್ರಾ ನನ್ ಅಟ್ಗಾ ನಾ ಮದ್ವೆ ಆಗ್ಬಂದ್ ಹೊಸದ್ರಲ್ಲೀ ಬೋದ್ನಲ್ಲಾ ನಮ್ಮ ಅತ್ತೀ ಮುಂಡ ಏನೂ ಮಾಡ್ಲಿಲ್ಲಾ ಅಂತಾ. ಅಂಗಾ ನೀ ಕಟ್ಕಳ್ವಾ ಗರ್ತಿ ನನ್ ಸರಿಸಮ್ಕವ್ರ ಮುಂದಾ ಬೈದೇ ಇರ್ವಾ ಹಾಂಗ್ ಮಾಡ್ಬಿಟ್ಟೀವ್ನೀ. ನೀವಾದ್ರೂ ನಿಮ್ಮ ಅಪ್ಪಯ್ಯನ್ ಅಂಗಾಗ್ದೇ ನಿಮ್ಮ ಹೆಂಡ್ರು ಮಕ್ಕಳ್ನಾ ಚಂದಗಾ ನೋಡ್ಕಳ್ಳಿ. ಇಷ್ಟೆಲ್ಲಾ ನಾ ಮಾಡದ್ದು ಹೇಳದ್ದು ಎಲ್ಲಾ ನಿಮಗಳ್ಗೋಸ್ಕರಾ ಕನಾ. ತಪ್ ತಿಳ್ಕಬ್ಯಾಡ ಕುಸು..."

- ನನ್ನವ್ವೆ ನನ್ಗೆ ಹೇಳಿದ್ ಆ ಮುಗ್ಧ ಮಾತ್ಗಳೆಲ್ಲಾ ನನ್ಗೆ ಈಗ ನೆನ್ಪಾಗ್ತಾವು. ನನ್ನವ್ವೆನ ಆ ಕಾಲ್ದ ಹೆಂಗಳೆಯರಲ್ಲೀ ಅಥ್ವಾ ಹೆಂಗ್ಸರಲೀ ಬದ್ಕನಾ ಹಸ್ನಾಗ್ಸಿಕೊಳ್ವಾ ಒಂದ್ಛಲ್ವಿತ್ತು ದೈರ್ಯ್ವಿತ್ತು. ಈಗ್ನ ಹೆಣ್ಮಕ್ಳನ್ನೋಡ್ದಾಗ ಹೆಣ್ಣು ಜಗತ್ತ್ನಲ್ಲಿ ಎಷ್ಟೆಲ್ಲಾ ಬದ್ಲಾವಣೆ ಆಗದಾ ಅಂತಾ ಗೊತ್ತಾಯ್ತಾದ. ಹೆಂಗಳೆಯರು ಎಲ್ಲಾ ದಿಕ್ನಾಗ್ ಬೆಳೆದಿರ್ವಾ ಒಂದ್ರೀತಿಯಾ ಮಾತ್ಲಿ ಮೆಚ್ಬೇಕನವೇ. ಆದ್ರಾ ಈಗ್ನಾ ಕಾಲ್ದ ಹೆಂಗ್ಸ್ರಲ್ಲಿ ಬಂಡೆದೈತವ್ವೆ ಆದ್ರಾ ನನ್ನವ್ವೆನ ಕಾಲ್ದ ಹೆಂಗ್ಸ್ರಲ್ಲಿದ್ದ ದೈರ್ಯದ್ ತರವಲ್ವೇ ಯವ್ವಾ ಅದು. ನನ್ಗೆ ನನ್ನವ್ವೆನ ಕಾಲ್ದ ಹೆಂಗಸ್ರು ಕಡ್ಮೆ ಆಗ್ತಾವ್ರೆ ಅನಸ್ತಾದ. ನನ್ನವ್ವೆನ ಕಾಲ್ದ ಹೆಂಗ್ಸ್ರಲ್ಲಿ ಈ ನೆಲ್ದಾ ಶಕ್ತಿ ಇರ್ವುದು ಕಾಣ್ತಿತ್ತು. ದೈವೀ ಶಕ್ತಿ ಕಾಣ್ತಿತ್ತು. ನಿಜ್ಕೂ ನನ್ನವ್ವೆನ ಕಾಲ್ದ ಹೆಂಗ್ಸ್ರು ಜಗನ್ಮಾತೆಯರೇ.

ನಿಮಗೆ ಏನು ಅನ್ನಿಸ್ತು?
1 ವೋಟ್