ದೇಸಿ ನುಡಿಗಟ್ಟು - ಕುಮಟಾ ಸೀಮೆ | ಬಂಡೆಗಲ್ಲ ಮೇಲೆ ಸುಮ್ಮನೆ ಕಣ್ಮುಚ್ಕಂಡಿ ಕೂತ್ಕಂಡ್ರೂ ಸ್ವರ್ಗನೇಯಾ ನಮ್ಮೂರು

ನಮ್ಮೂರ ಬೆಟ್ಟದ ಮ್ಯಾಲಿರೋ ಅಶೋಕೆಯಂತೂ ಚಂದದಲ್ಲಿ ಚಂದ. ಆ ಬೆಟ್ದಲ್ಲಿ ಸಿಗೋ ಈಚಲಹಣ್ಣು, ಮುಳ್ಳಣ್ಣು, ಕಾರೆ ಹಣ್ಣು, ಕರಿಸೂಜಿ ಹಣ್ಣು, ಕುಸಮಾಲಿ, ಬೋಕಳ, ಮುರಗಲ, ಗೇರು, ಗಜಗೆಂಡೆ, ತಗಟಿ... ಹಿಂಗೇ ಬ್ಯಾರೆ-ಬ್ಯಾರೆ ಹಣ್ಣು-ಸೊಪ್ಪು ತಿಂದ್ರೆ ಜೀವಕ್ ಮತ್ತೆಂತದ್ದೂ ಬ್ಯಾಡ. ಬೆಟ್ಟದ ಮೇಲೆ ಹತ್ತಿ ನಿಂತ್ರೆ ವಾಪಸ್ ಮನಿಗೆ ಹೋಗುಕೆ ಮನ್ಸಾಗುದಿಲ್ಲ

ತದಡಿ ನಮ್ಮೂರು... ಅಘನಾಶಿನಿ ನದಿ ಅರಬ್ಬಿ ಸಮುದ್ರ ಸೇರ್ಕಳು ಅಳಿವೆ ಜಾಗ. ಈಗ ಮೀನು ಹಿಡಿಯುಕೆ ಹೆಸರು ಮಾಡಿರೋ ನಮ್ಮೂರು, ಬ್ರಿಟೀಷರ ಕಾಲ್ದಿಂದ್ಲೂ ಬಂದರು ಅಂದ್ಕಂಡೇ ಹೆಸರ ಮಾಡಿತ್ತು. ತೀರ ಇಚೀಚೆ 1990ರವರ್ಗೂ ಡೆನ್ಮಾರ್ಕ್ ಸಂತಿಗೆ ನಮ್ಮ ತದಡಿ ಬಂದರ ಯೋಜನೆ ಇತ್ತು.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣ ಗ್ರಾಮದ ನಮ್ಮ ತದಡಿ ಸಮುದ್ರದ ಬೆಲೆ, ನದಿ, ಗಿಡ, ಮರ, ಬೆಟ್ಟ, ಗದ್ದೆ... ಎಲ್ಲದ್ರಲ್ಲೂ ಒಂದು ಕೈ ಮ್ಯಾಲೇಯಾ. ಇಲ್ಲಿರೋ ಐಸ್ ಫ್ಯಾಕ್ಟರಿನೂ ನಮ್ಮ ಕರ್ನಾಟಕದಲ್ಲೇ ಎಲ್ಲರಕಿಂತ ದೊಡ್ಡದಾಗಿತ್ತು. ಬ್ರಿಟಿಷರ ಕಾಲ್ದಲ್ಲಿ ಬರ್ತಿದ್ದ ದೊಡ್ಡ-ದೊಡ್ಡ ಸ್ಟೀಮರ್ ನಾವು ಸಣ್ಣೋರಿದ್ದಾಗೂ ಬತ್ತಿತ್ತು. ಅದನ್ನು ಒಡದು ಅದ್ರೊಳಗಿನ ಸಾಮಾನೆಲ್ಲ ತೆಗಿತಿದ್ದಿದ್ದು ಈಗೂ ನೆನಪದೆ ನಂಗೆ. ಈಗ್ಲೂ ನಮ್ಮೂರಿನ ಸಮುದ್ರ ಬೆಲೆ, ಗದ್ದೆಬಯಲು, ಬೆಟ್ಟದ ಮೇಲೆ ಹತ್ತಿ ನಿಂತ್ರೆ ಕಾಣು ನದಿ-ಸಮುದ್ರಗಳನ್ನು ನೋಡಿದ್ರೆ... ವಾಪಸ್ ಮನಿಗೆ ಹೋಗುಕೆ ಮನ್ಸಾಗುದಿಲ್ಲ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ದಕ್ಷಿಣ ಕನ್ನಡ ಸೀಮೆ ಹವ್ಯಕ | ಇಂದಿಂಗೂ ಊರು ಹೇಳ್ರೆ ಅಜ್ಜನ ಮನೆ‌ ನೆನಪೇ ಅಪ್ಪದು

ಇಡೀ ಕರ್ನಾಟಕಕ್ಕೆ ಮೀನು ರಪ್ತು ಮಾಡು ನಮ್ಮೂರಲ್ಲಿ ಬಂಗಡೆ, ತೋರಿ, ಇಸ್ವಾಣ, ಜಾಲಿ, ಬೊಂಡಾಸ್, ಸ್ವಾರಾ, ಬಣಗು, ಶೆಟ್ಲಿ ಪಾಪ್ಲೇಟು ಹಿಂಗೇ ಸಿಗ್ದೆ ಇರು ಮೀನೇ ಇಲ್ಲ. ತದಡಿ ಊರೊಳಗೆ ಹೊಕ್ರೆ ಎಲ್ಲಾ ಕಡಿಗೂ ಕಾಣುದು ನೀರು ಮತ್ತೆ ದೋಣಿನೇಯಾ. ನದಿ ಆಚಿಗೆ ಇರೋ ಊರು ಅಘನಾಶಿನಿ ಊರಿಗೆ ಬಿಡುಕೆ ಒಂದು ಡಿಂಗಿ ಇರ್ತದೆ ಯಾವಾಗೂವ.

ದಿನಾ ಬೋಟುಗಟ್ಲೆ ಬರೋ ಮೀನು ಬೇರೆ ರಾಜ್ಯಕ್ಕೂ ಹೋಗಿ ಮತ್ತೂ ಹೆಚ್ಚಾದ್ರೆ ಬಂದರು ಪಕ್ಕಕ್ಕಿರೋ ದಕ್ಕೆಲಿ ಸಿಗಿದು ಒಣಗಿಸ್ತರು. ಉಳಿದ ವೇಸ್ಟ್ ಮೀನೆಲ್ಲ‌ ಒಣಗ್ಸಿ ಚಲೋ ಗೊಬ್ಬರ ಮಾಡತ್ರು.

ನಮ್ಮೂರ ಬೆಟ್ಟದ ಮ್ಯಾಲಿರೋ ಅಶೋಕೆಯಂತೂ ಚಂದದಲ್ಲಿ ಚಂದ. ಆ ಬೆಟ್ದಲ್ಲಿ ಸಿಗೋ ಈಚಲಹಣ್ಣು, ಮುಳ್ಳಣ್ಣು, ಕಾರೆ ಹಣ್ಣು, ಕರಿಸೂಜಿ ಹಣ್ಣು, ಕುಸಮಾಲಿ, ಬೋಕಳ, ಮುರಗಲ, ಗೇರು, ಗಜಗೆಂಡೆ, ತಗಟಿ... ಹಿಂಗೇ ಬ್ಯಾರೆ-ಬ್ಯಾರೆ ಹಣ್ಣು-ಸೊಪ್ಪು ತಿಂದ್ರೆ ಜೀವಕ್ ಮತ್ತೆಂತದ್ದೂ ಬ್ಯಾಡ. ಜನಪದ ಜೀವನ ರೂಡಿಸ್ಕಂಡಿರೋ ಹಾಲಕ್ಕಿ, ಗಾಬಿತ, ನಾಮದಾರಿ ಸಮಾಜದವ್ರೇ ಹೆಚ್ಚಿರೋ ಇಲ್ಲಿ ಮೀನು ಹಿಡಿಯುದು, ಗದ್ದೆ ನೆಡುದೇ ದೊಡ್ಡ ಉದ್ಯೊಗ.

Image

ಗೋಕರ್ಣಕ್ಕೆ ಹತ್ರ ಇರು ನಮ್ಮ ತದಡಿಲಿ ನೋಡುಕೆ ಚಂದ ಇರು ಸಮುದ್ರ ಬೆಲಿ ಗೋಕರ್ಣಕ್ಕಿಂತೂ ಹೆಚ್ಚೇ ಅದೆ. ಹಂಗಾಗಿ ಟೂರಿಸ್ಟು ನಂಬದಿಗೂ ಜಾಸ್ತಿ ಗಾಡಿ ಹೊಡುಕೆ ಸುರು ಮಾಡರೆ. ಸೂರ್ಯ ಮುಳಗುದು, ಸಮುದ್ರದಲ್ಲಿ ದೋಣಿಲಿ ಹೋಗುದು, ಗಾಳ ತಂಕಂಡಿ ಮೀನು ಹಿಡಿಯುದು, ಅಷ್ಟೇ ಎಂತಕೆ ಸುಮ್ಮನೆ ಬಂಡೆಗಲ್ಲ ಮೇಲೆ ಕಣ್ಮುಚ್ಕಂಡಿ ಕೂತ್ಕಂಡ್ರೂ ಸ್ವರ್ಗನೇಯಾ.

ಬೇಲೆಖಾನು ನಮ್ಮೂರ ಬಾರ್ಡರು. ತಪಸ್ಸಿಗೆ ಕೂತ್ರೆ ಸೀದಾ ದೇವ್ರೆ ಬರ್ಬೇಕು ಅಂತಾ ಚಂದಾ. ಮೂರು ದಿಕ್ಕಿಗೂ ಸಮುದ್ರ ಸುತ್ತುವರ್ದಿರೋ ಬಂಡೆಗಲ್ಲ ಹತ್ರ ಅರ್ದ ತಾಸು ನಿಂತ್ರೆ ಇಡೀ ಭೂಮಿನೇ ಕಂಡಂಗಾತದೆ. ಇನ್ನು ಯಾಕ ತಡ... ಬಂದೇ ಬಿಡಿ ನಮ್ಮೂರಿಗೆ; ಚರಿತ್ರೆ, ಭೂಗೋಳ,  ಕಲೆ, ವಿಜ್ಞಾನ ಎಲ್ಲನೂ ಒಂದೇ ಕಡಿ ನೋಡುಕಾತದೆ, ಕಣ್ ತುಂಬ್ಕಂಡ್ರಾಯ್ತು.

ಚಿತ್ರ ಕೃಪೆ: ಅಭಯ್ ಕನ್ವಿಂಡೆ
ನಿಮಗೆ ಏನು ಅನ್ನಿಸ್ತು?
1 ವೋಟ್