ದೇಸಿ ನುಡಿಗಟ್ಟು - ರಾಣೇಬೆನ್ನೂರು ಸೀಮೆ | ಶ್ರಾವಣದ ನೆನಪ, ಅದರ ಮ್ಯಾಲ ಒಂದ್ ಭಜನೀ ಪದ...

Shravana

ರೋಹ್ಣಿ ಮಿರಗನ ಮಳೀ ಆಗಿ, ಅದ ವ್ಯಾಳಾಕ ಬಿತ್ತಿಗಿ ಆಗಬೇಕು. ಆದ್ರಿ ಮಳೀಗೆ ಮೆಣಸಿನ ಗಿಡ ಹಚ್ಚಿರಬೇಕು. ಹೀರೆಪುಷ್ಯ ಮಳೀಗೆ ಶೇಂಗಾ ಬಿತ್ತಿಗಿ ಆಗ್ಬೇಕು. ಹಿಂದ ಎಡೇನೂ ಹೊಡೆ ಬೇಕು ಆವಾಗ ಶ್ರಾವಣ ಬರಬೇಕು. ಮುಗಿಲ ತುಂಬಿ ಬರುವ ಮೋಡ, ಹಸಿರು ಆಚ್ಛಾದಿತ ಭೂಮಿ, ಒಂದಿಷ್ಟು ಬಿಡುವು, ಮನೆಯಲ್ಲಿ ಸಿಹಿಯೂಟ ಸಂಜೆಗೆ ಭಜನೆ ಅದೇ ತತ್ವಪದಗಳ ಗುಂಗು...

ಶ್ರಾವಣ ಬಂತಂದ್ರ ಊರಿಗೇ ಒಂದ್ನಮೂನೀ ಉಮೇದು. ಅದೇನೋ ಸಡಗರ, ಸಂಭ್ರಮ. ಇದು ಯಾವಾಗ್ಲಿಂದನೂ ಹೀಂಗ. ಆದ್ರ, ಐನಾತಿ ವೇಳಾಕ ಮಳೀ ಕೈ ಕೊಟ್ರ ಶ್ರಾವಣಕೂ ಗ್ರಾಣ ಹಿಡ್ದಂಗ ಆಗಿರ್ತೈತಿ. ಶ್ರಾವಣ ಬರೋದ ಎಲ್ಲ ಬಿತ್ತಿಗಿ ಮುಗದ ಒಂದ್ ಮೈ ಎಡೆ ಹೊಡದಾಗ, ಅಲ್ಲಿಗೆ ರೈತರು ಅರ್ಧ ಗೆದ್ದಾಂಗ.

ಆದ್ರ, ಒಮ್ಮೊಮ್ಮೆ ಬಿತ್ತೋ ತಿಥಿಯ ಮಳೀನ ಕೈಕೊಟ್ಟು ಬಿತ್ತಿಗೀ ಹಿಂದ ಆಗಿರ್ತಾವು. ಪಂಚಮಿ ಬಂದರೂ ಬಿತ್ತಿಗೀ ಮುಗಿದಿರಲ್ಲ. ಆವಾಗ ಯಾರ್ಗೂ ಹಬ್ಬ ಮಾಡು ಉಮೇದರಿನ ಇರಲ್ಲ. ಮತ್ತೊಮ್ಮೆ ಹಿಂಗ ಆಕ್ಕತಿ. ಬಿತ್ತಿಗಿ ಸರಿಯಾಗಿನ ಆಗಿರ್ತಾವು ಫೀಕೂ ಚೆನ್ನಾಗಿ ಹುಟ್ಟಿರ್ತಾವು. ಆನಂತರ ಮಳಿ ಕೈ ಕೊಟ್ಟು ಬಿಡ್ತಾವು. ಶ್ರಾವಣ ಏನ ಬಂದಿರ್ತೈತಿ. ಹಬ್ಬದ ಖುಶೀನ ಇರಲ್ಲ. ಫೀಕೆಲ್ಲ ಬಿಸಿಲಿಗೆ ಬಾಡಿ ಜೋತಮುಕ ಹಾಕ್ಯಂಡಿರ್ತಾವು. ರೈತರೆಲ್ಲ ಯಾವಾಗ ನಾಕ ಹನಿ ಉದುರ್ತಾವೋ ಅಂತ ಮುಗಿಲ ನೋಡ್ತಿರ್ತಾರ. ಇಂಥ ವ್ಯಾಳ್ಯಾಕ ಮಳಿ ಬರಬೇಕು. ಮಳಿ ಬರ್ತೈತೋ ಇಲ್ಲವೋ ಅಕ್ಕ ಸತ್ರ ಅಮಾಸಿ ನಿಲ್ಲತೈತ್ಯಾ? ಅಂತ ಗಾದೇನ ಐತಿ. ಶ್ರಾವಣ ಬಂದ ಬಿಡತೈತಿ. ಅವಾಗ ನೋಡಬೇಕು ನಮ್ಮ ಜನ್ರ ಪಡೀಪಾಟಲಾನ.

Image
Shravana
ಸಾಂದರ್ಭಿಕ ಚಿತ್ರ

ಹಬ್ಬದ ಸಂತೀ ಮಾಡೋದೆಂಗ ಹೀಂಗಾದ್ರ. ಆದ್ರೂ, ಮಾಡಾಕ ಬೇಕ. ಹತ್ತು ಕೆಜಿ ಬೆಲ್ಲ ತರಬೇಕಂದಾಂವ ನಾಕ ಕೇಜಿಗೆ ಬಳಗ ಹೊಡಕಂತಾನ. ಐದ ನಮೂನೀವು ನಾಕ-ನಾಕ ಉಂಡಿ ಕಟ್ಟಿ ಪಂಚಮಿ ಸಾಗ ಹಾಕ್ತಾರ. ಶ್ರಾವಣ ಅಂದ್ರನ ಹಬ್ಬದ ಸಾಲು. ಅದ್ರಾಗ ಬೇರೆ ಸೋಮಾರಕ್ಕೊಂದು ಹಬ್ಬ. ಸಣ್ಣ ಸೋಮಾರ, ಯಾಡನೇ ಸೋಮಾರ, ದೊಡ್ಡ ಸೋಮಾರ ಕಡೇ ಸೋಮಾರಂತ. ಇಂಥ ಶ್ರಾವಣದಾಗ ಮಳೀ ಇಲ್ಲಾಂದ್ರ ಮುಗೀತು ಶ್ರಾವಣಾನೂ ರಣರಣ ಅನ್ನಾಕ ಹತ್ತತೈತಿ. ಯಾರ ಮುಕದಾಗೂ ಶ್ರಾವಣದ ಸುಖಾನೂ ಇರಲ್ಲ, ಸಂಭ್ರಮಾನೂ ಇರಲ್ಲ. ಸಂಜೀಕ ಗುಡ್ಯಾಗ ಭಜನಿ ಹಚ್ಯಾರ ಅಂತ ಅಲ್ಲಿ ಹೋದ್ರ ಭಜನೀ ಮಾಡೋರ ಗಂಟಲದಾಗ ದನೀನ ಇರಂಗಿಲ್ಲ.

ರೋಹ್ಣಿ ಮಿರಗನ ಮಳೀ ಆಗಿ, ಅದ ವ್ಯಾಳಾಕ ಬಿತ್ತಿಗಿ ಆಗಬೇಕು. ಆದ್ರಿ ಮಳೀಗೆ ಮೆಣಸಿನ ಗಿಡ ಹಚ್ಚಿರಬೇಕು. ಹೀರೆಪುಷ್ಯ ಮಳೀಗೆ ಶೇಂಗಾ ಬಿತ್ತಿಗಿ ಆಗ್ಬೇಕು. ಹಿಂದನ ಎಡೇನೂ ಹೊಡೆಯೋದು ಮುಗೀಬೇಕು. ಆವಾಗ ಶ್ರಾವಣ ಬರಬೇಕು. ಜಿಟಿ ಜಿಟಿ ಮಳಿ ಹಿಡ್ಕೋಬೇಕು. ಅವಾಗ, ಅದೇನ ರಂಗು ಬರ್ತೈತಿ ಶ್ರಾವಣಕ್ಕ‌ ಅಬ್ಬಬ್ಬಾ ಆ ಖುಶೀನ ಬ್ಯಾರೇ. ಮನ್ಯಾಗ ಹಬ್ಬದಡಗೀ ಮಾಡೋರ್ದ ಒಂದ್ ಸಂಭ್ರಮ, ಊರಾಗ ಭಜನೀ ಮಾಡರ್ದ ಒಂದ್ ಸಂಭ್ರಮ. ಹೊಲದಾಗ ಕೆಲಸ ಮಾಡೋರ್ದು ಒಂದ್ ಸಂಭ್ರಮ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಬಂಡೆಗಲ್ಲ ಮೇಲೆ ಸುಮ್ಮನೆ ಕಣ್ಮುಚ್ಕಂಡಿ ಕೂತ್ಕಂಡ್ರೂ ಸ್ವರ್ಗನೇಯಾ ನಮ್ಮೂರು 

ಬ್ಯಾಸಿಗೀಯಿಂದ ಪುರುಸೊತ್ತಿಲ್ದ  ಹೊಲ ಹೊಡ್ದ. ಎತ್ತಿಗೆ ಶ್ರಾವಣ ಬಂತಂದ್ರನ ವಿಶ್ರಾಂತಿ ಸಿಗೋದು. ಬರುವು ಕೆರೆಯೋದು, ರಂಟೀ ಹೊಡೆಯೋದು, ಹರಗೋದು, ಸೆರೆ ಹೊಡೆಯೋದು ಆಮ್ಯಾಲ ಬಿತ್ತಿಗಿ. ಹಿಂದನ ಎಡೆ ಹೊಡೆಯೊದು ಸುರುವಾಕ್ಕವು. ಒಮ್ಮೆ ಎಡೆ ಹೊಡದ್ರ ಫೀಕು ಎಷ್ಟ್ ಚಿನ್ನ ಆಗ್ತಾವು. ಯಾಡ ಸಲ ಎಡೆ ಹೊಡ್ದ, ಕಳೆ ತೆಗ್ದು, ಮತ್ತೊಮ್ಮೆ ಎಡೆ ಹೊಡದ್ರ ಅಲ್ಲಿಗೆ, ಹೊಲ ಹೊಡೆ ಕೆಲಸ ಮುಗೀತಾವು. ಅಲ್ಲಿ ತನಕ ಎತ್ತಿಗೆ ಬರೆ ಒಣಸೊಪ್ಪಿ, ಹೊಟ್ಟು ಮೈಸೋ ರೈತರು ಕೆಲಸ ಮುಗದ ಮ್ಯಾಲನ ಅವನ್ನ ಹಸಿರಿಗೆ ಬಿಡ್ತಾರ‌. ಅಂದ್ರ, ಹಸುರು ಹುಲ್ಲು, ಹಸೆ ಸೊಪ್ಪಿ ಮೇಯಿಸಲಿಕ್ಕೆ ಸುರು ಮಾಡ್ತಾರ.

ಇವೆಲ್ಲ ಕಮ್ತದ ಕೆಲಸ ಮುಗಿಯೋದಕ್ಕೂ ಶ್ರಾವಣ ಬರೋದಕ್ಕೂ ಬರೋಬರಿ ಆಕ್ಕತೀ. ಶ್ರಾವಣ ವೈಭವ ಅಂದ್ರ ಭಜನೀ. ಶ್ರಾವಣದಿಂದ ಸುರುವಾಗೋ ಭಜನೀ, ಮಾರ್ನಾಮಿ ಬಂದು ಬನ್ನಿ ಮುಡಿದ ಮ್ಯಾಲನ ನಿಲ್ಲೋದು. ಶ್ರಾವಣಕ್ಕ ಮೊದಲ ಬರೋದ ನಾಗರ ಪಂಚಮಿ‌. ಅದರ ಮ್ಯಾಲ ಒಂದ್ ಭಜನೀ ಪದ...

Image
Panchami
ಸಾಂದರ್ಭಿಕ ಚಿತ್ರ

ನಾಡ ಮೇಲಿನ ನಾಗರ ಪಂಚಮಿ
ನಾರಿಯರ ಹಬ್ಬ
ಏನ ಉಬ್ಬ! ಹಬ್ಬ ಮಾಡೋದಕ

ಸಂಜೀಕೇನ ಮಾಡಲೆವ್ವ
ವೆಚ್ಚ ತರುವುದಕ
ತಯಾರಾಗ್ಯಾಳ ನಾರಿ 
ಜೋಕಾಲಿ ಆಡೋದಕ!

ಗಂಗವ್ವ ಗೌರವ್ವ ಬಾರೆ
ನಿಂಗವ್ವ ನೀಲವ್ವ ಬಾರೆ
ಮಣ್ಣಗುಂಪಿ ಮಾಡೂಣು ಬರ್ರೆವ್ವಾ
ಗುಳ್ಳವ್ವನಾಡೂದಕ!

ಜೋಕಾಲೆಂಬುದು
ಜೋಲಿ ಹೊಡದು
ನಾಕು ಕಡೆಯ ದಿಕ್ಕನು ನೋಡಿ
ಜೋಲಿ ಹೋಗಿ ಬಿದ್ದಿಯವ್ವ ತಂಗಿ
ಎಚ್ಚರವಿರಬೇಕ!

ಆ ಜೋಲಿ ಈ ಜೋಲಿ
ಕಾಮನ ಜೋಲಿ ಭೀಮನ ಜೋಲಿ
ಜೋಲಿ ಹೋಗಿ ಬಿದ್ದಿಯವ್ವ ತಂಗಿ
ಎಚ್ಚರವಿರಬೇಕ

ಪಂಚತತ್ವದ ಮಿಂಚಿನ ಸೀರಿ
ತಿದ್ದಿ ಉಡುವದಕ
ನಾರೇರು ನೀಟಾಗಿರುವುದಕ
ಆದಿಶೇಷನ ಗುಡಿಗೆ ಹೋಗಿ 
ಹಾಲನು ಎರೆವುದಕ!

ಮುಗಿಲ ತುಂಬಿ ಬರುವ ಮೋಡ, ಹಸಿರು ಆಚ್ಛಾದಿತ ಭೂಮಿ, ಒಂದಿಷ್ಟು ಬಿಡುವು, ಮನೆಯಲ್ಲಿ ಸಿಹಿಯೂಟ ಸಂಜೆಗೆ ಭಜನೆ ಅದೇ ತತ್ವಪದಗಳ ಗುಂಗು...

ಇದು ಒಂದು ಕಾಲದ ಶ್ರಾವಣ. ಈಗ್ಗೂ ಅಲ್ಲಲ್ಲಿ ಹೀಗೇ. ಸ್ವಲ್ಪ ವ್ಯತ್ಯಾಸ ಇರಬಹುದಷ್ಟೇ.

ನಿಮಗೆ ಏನು ಅನ್ನಿಸ್ತು?
2 ವೋಟ್