ದೇಸಿ ನುಡಿಗಟ್ಟು - ನಂಜನಗೂಡು ಸೀಮೆ | ಮರ್ವಾದಿ ಅನ್ನದು ಅದೆಷ್ಟುದ್ದ ಅದ್ಯಾಪಾಟಿ ಇದ್ದದು?

"ಅಲ್ಲ ಕಂಡ್ರಲ, ನೀವೆಲ್ಲ ಇಂಗ ಮಾತಾಡ್ತಿದರೆಲ್ಲ... ನಮ್ ತಾತನ ಕಾಲದಂಗ ಈಗ್ಲೂ ಮಾನ ಹೊಯ್ತು, ಮರ್ವಾದಿ ಹೊಯ್ತು ಅಂತ ಕೂತ್ಕಂಡ್ರ ಆದದ? ಮಗಳ ಸಾಯ್ಸಿ ಎನ್ ಸಾದುಸ್‍ಬುಟ್ನ ಈಗ ಅವ? ಕೊಲ ಮಾಡಿ ದೊಡ್ಡವ್ನಾಗ್‍ಬುಟ್ನ? ಅವನ ಜೀವನ ಏನ ಈಗ? ಹೋಗಿ ಜೈಲಲಿ ಮುದ್ದ ಮುರಿತ ಕೂತ್ಗತನ. ಅವನ ಹೆಂಡ್ತಿ-ಮಕ್ಕಳ ಸಾಕವರ್ಯಾರ?"

ದಿನ ಅಳ್ಳಿಮರತವು ಕೂತ್ಕತಿದ್ದ ನಂಜಪ್ಪ ಇವತ್ತು ಇಸ್ಕೂಲ್ ತವು ಇರೋ ಪರಸುರಾಮನ ಅಟ್ಟಿತವು ಕೂತಿದ್ದ. ಬ್ಯಾಡ ಅಂದ್ರು ಅವನ ಯೋಚ್‍ನೆ ಇಲ್ಲದೆ ಇರ ಅಳ್ಳಿಮರದಿಕ್ಕೆ ಹೊಯ್ತಿತ್ತು. ನಮ್ಮೂರ್ಗ ಅಳ್ಳಿಮರ ಒಂದು ಲಕ್ಷ್ಣ.  ಊರೊಳಕ್ಕ ಬರವರ್ಗ ಊರು ಸುರವಾಯ್ತು ಅಂತ ಹೇಳಕಾರ ಒಂದು ಮರ ಬ್ಯಾಡ್ವ. ಊರ್ ಚೆಂದಕಾಣಕಾರ ಒಂದ್ ಅಳ್ಳಿ ಮರ ಬೇಡ್ವ. ಪಾಪಿ ಮುಂಡೆಮಕ್ಕಳು, ಮರ ಶ್ಯಾನೆ ಅಳೆದಾಯ್ತು, ಮರದ ದೊಡ್ ದೊಡ್ ಬೇರು ಸುತ್ತಮುತ್ತ ಇರ ಅಟ್ಟಿಗಳ ಒಳಕ್ಕೇ ಹೊಂಟಗವ ಅಂತ ಅಪಾಟಿ ಇದ್ದ ಮರನ ಕಡ್ದ್‍ಬುಟ್ರು. ಮರ ಅಳೆದಾಯ್ತು ಸರಿ ಹೊಸ ಸೊಸಿ ನೆಡವು ಅಂದ್ರ ಯಾರೂ ಕೇಳದೆಯಿಲ್ಲ. ಯಾದ್ರ್ಯಾರ ಮೂರ್ತಿ ನಿಲ್ಸವು ಅಂತರ. ಯಾರ ಮೂರ್ತಿ ನಿಲ್ಸಿರಿ ಅಂದ್ರ ಬಸವಣ್ಣ, ಅಂಬೇಡ್ಕರ್‍ದ ಇಲ್ಲ ಅಂದ್ರ ಸಿದ್ರಾಮಯ್ಯನೇ ನಿಲ್ಸತಿವಿ ತಕ್ಕ ಅಂತರ.

ಮರ ಇದ್ರ ಒಂದಿಷ್ಟು ನೆಳ್ಯಾರ ಇರ್ತದ ಒಂದೆಡು ಹಕ್ಕಿಗಳರ ಓಡಾಡ್ತವ, ಕುಂತ್ಕತವ, ಬೇಜಾರ್ ಆದ್ರ ನಮ್ಮಂತವ್ರು ಅಳ್ಳಿಕಟ್ಟೆಲಿ ಕೂತ್ಕಂಡು ಗಟ್ಟಮನ, ಪಿಚ್ಚಿ ಆಡ್ಬೇದು, ಚಿಕ್ ಐಕ ಅಣ್ಣಕಲ್ಲಾಡಕತವ, ಗದ್ಗ, ಹೊಲ್ಕ ಹೋಗವರು ಒಂದ್ಗಳಗ ಕುತ್ಗ ತಳಾರ್‍ಸ್ಕ ಹೋದರು. ನಮ್ಮೂರ್ ಗಂಡೈಕ ನಮ್ಮೂರ ಹೆಣ್ಣಕೈಳ ನೋಡಕಾರ ಒಂದು ಜಾಗ ಬೇಡ್ವ. ಊರವರೆಲ್ಲ ಬಸ್ ಹತ್ತಕ ಇಲ್ಲೆ ಬತರ. ಬ್ಯಾಗು, ಸಾಮಾನು ಸರಂಜ ಎಲ್ಲಿ ಮಡುಗದು. ಬಸ್ ಏನ್ ಹೇಳ ಟೈಮ್‍ಗೆ ಬಂದವ? ಬಸ್ ಬರದು ತಡ ಆದ್ರ ಎಲ್ಯಾ ಕೂತ್ಕಳದು.  ಯಾರಟ್ಟಿ ಬಾಗಲ್ಗ್ಯಾರ ಹೋಗಿ ನಿಂತ್ಕಳದು ಚಂದ್ವ. ಇಲ್ಲೇ ನಿಂಗಿ, ಸಾಕಿ, ತಮ್ಮಶೆಟ್ಟಿ ಅಲಸ್ನಣ್ಣು, ಮಾವ್ನಣ್ಣು, ನೇರಳಣ್ಣು, ಎಲ್ಚೆಣ್ಣು, ಕಿತ್ಲಿಕಾಯಿ ಮಾರ್ಕಂಡು ನಾಕ್‍ಕಾಸ್ ಕಾಣರು.  ಅವರೆಲ್ಲ ಏನ್ ಮಾಡಬೇಕು ಈಗ?

-ಹಿಂಗ ನಂಜಪ್ಪನ ತಲೆಲಿ ಅರಳಿ ಮರ, ಮರದ ಸುತ್ತ ನೂರೆಂಟು ಯೋಚನೆಗಳು ಓಡಾಡ್ತಿದ್ವು. ಏನೋ ಕಳ್ಕಂಡವರಂತೆ ತನಗೆ ತಾನೆ ಮಾತಾಡ್ಕತಿದ್ದ. ಒಬ್ನೆ ಕೂತಿದ್ನಲ್ಲ ಹಲವಾರು ಚಿಂತೆಗಳು ಬಂದು ಅವನ್ನ ಮುತ್ಕತಿದ್ದವು. ಸುಮ್ನೆ ಕೂತಿದವ್ನ ದೃಷ್ಟಿ ಪಡಸಾಲೆ ಕೆಳಗಿದ್ದ ಮಣ್ಣಲ್ಲಿ ಇರ ಯಾವೋದೋ ಒಂದು ವಸ್ತುವಿನಲ್ಲಿ ಬಿದ್ದಿತ್ತು. ಏನೋ ಸಿಕ್ದವರ ತರ ಸಡನ್ನಾಗಿ ಬಂದು ಒಂದು ಅಂಚಿಕಡ್ಡಿ ತಕ್ಕಂಡ, ಕಡ್ಡಿಯಿಂದ ತನ್ ಕಾಲ್ ಮೇಲ ಏನೇನೋ ನಾಲ್ಕು ಮನಗಳ ಬರ್ದು ಅವಕ್ಕ ಏನೆನೋ ನಂಬರ್ನು ತುಂಬ್ದ.  ಅದು ಅವನ್ಬುಟ್ಟು ಯಾರ್ಯಾರ್ಗು ಅರ್ಥವಾಗಂಗೆ ಇರಲಿಲ್ಲ. ಅಷ್ಟೊತ್ಗೆ ಆಚ ಬೀದಿ ಶಂಕರಪ್ಪ, ಈಚ ಬೀದಿ ಸಿದ್ದಯ್ಯ, ಹೊಸಮಾಳದ ರಂಗಸ್ವಾಮಿ, ಚೆನ್ನಪ್ಪ ಎಲ್ರೂ ಬಂದ್ರು.

Image
ಕಲಾಕೃತಿ ಕೃಪೆ: unsplash ಜಾಲತಾಣ

“ಯಾಕ್ ನಂಜಪ್ಪ ಹಿಂಗ್ ಕೂತಿದಯ್?” ಅಂದ ಶಂಕರಪ್ಪಂಗ, “ಏನಿಲ್ಲಕಣ ಸುಮ್ನೆ ಕೂತ್ಕಂಡಿ, ಗದ್ದತವ್ಕ ಹೋಗಿದ್ದಿ ಇಂಗ ಬಂದ್ನಲ್ಲ ಅಂತ ಇಲ್ಲೆ ಕೂತ್ಕಂಡಿ...” ಅಂದ. ಸಿದ್ದಯ್ಯ ಏನೋ ಹೇಳಕ್ಕೆ ಬಂದವನ ಹಾಗೆ, “ನಂಜಪ್ಪೋ ಇಷ್ಯ ಗೊತ್ತಾಯ್ತ? ನೆನ್ನ ರಾತ್ರಿ ಪಕ್ದುರಲ್ಲಿ ಒಂದು ಕೊಲೆಯಾಗಿದ್ದಂತಲ್ಲ, ಅಪ್ಪನೇ ಮಗಳ ಕತ್ ಕತ್ತುರ್ಸಾಕಿದನಂತ...” ಅಂತ ಮಾತು ಮುಗಿಸಕ್ಕ ಮುಂಚೆ ನಂಜಪ್ಪ, “ಹೂ ಕಲ ಸಿದ್ದ, ನೆನ್ನ ನಾನು ನಮ್ ಬೀದಿ ಐಕಳ್ ಜೊತೆಗೋಗಿದ್ದಿ. ಆ ಗೋಳ್ ನೋಡಕಾಗಲ್ಲ. ಹೊತ್ತಾರ ಅದೇ ಸುದ್ದಿ ಪೇಪರ್ಲು ಬಂದದ. ಅದೇನ್ ಮನ್ಸ್‍ನಾ ಅವ ಕಡ್ಕತ್ತಿ ತಕ್ಕಂಡು ವಟ್ಟಲುಟ್ಟಿದ ಮಗಳು ಅನ್ನದು ಕಾಣ್ದೆ ಕೊಚ್ಚಾಕನ...!” ಅಂದ ನಂಜಪ್ಪನ ಮಾತು ಕೇಳುದ್ದೆ ತಡ ರಂಗಸ್ವಾಮಿ ಬೈಯಾಕ ಸುರು ಮಾಡ್ಕಣ್ಣ: "ಈ ಐಕಳ ಓದಿ ನಾಲ್ಕಕ್ಷರ ಕಲಿಲಿ, ನಾವ್ಯಾರ ಓದ್ನಿಲ್ಲ ಅಂತ ಕಾಲೇಜ್‍ಗ ಕಳ್ಸುದ್ರ ಇವ್ಯಾಕಿಂಗಾಡಿವು? ಈ ವಯಸ್‍ಗ ಇವರ್ಗ ಪಿರೂತಿ ಗಿರೂತಿ ಬೇಕಾ, ನೀ ಏನಾರ ಅನ್ನಿ ನಂಜಪ್ಪ... ಕೊಲೆ ಮಾಡುದ್ದೆ ಸರಿ ಅನ್ನಿ. ಇವರೇನ ಯಾರ್ನಾರ ಕಟ್ಕಂಡು ಹೊಂಟೊಯ್ತರ ಅನ್ನಿ ಹುಟ್ಟುಸ್ದವರ ಕತ ಏನ? ಅವರು ತಲೆ ಎತ್ಕಂಡು ತಿರ್ಗಕಾದದ, ನಂಟ್ರು ಇಷ್ಟ್ರು ಏನನ್‍ಕಂಡರು, ಅವರೆಡಲಿ ಬಾಳಕಾದದ, ಮಕ್ಕಳು ಉಟ್ಟುದ್ರು ಪುಣ್ಯ ಬೇಕು ತಕಳಿ, ಅವ್ವ ಅಪ್ಪನ್ ಮರ್ವಾದಿ ತಗಿಯ ಐಕ ಇದ್ರೆಷ್ಟ ಸತ್ರೆಷ್ಟ...”

ಚೆನ್ನಪ್ಪ ಮದ್ದೆದಲ್ಲಿ ಬಾಯಿ ಹಾಕ್ದ: “ಈಗುನೈಕುಳ್‍ಗ ನಾಲ್ಕಕ್ಷರ ಕಲ್‍ತ್ರ ಮುಗಿತು ನೆಲನೇ ಕಾಣಲ್ಲ ತಲಕಾಲು ನಿಲ್ಲಲ. ನಮ್ಮೂರ್ಗಳಗ ಹಾಳಾದ ಟಿ.ವಿ, ಮೊಬೈಲ್ ಬಂದು ಊರ್ಗ ಊರೆ ಹಾಳಾಯ್ತ ಕೂತದ ಕಣ. ಮಗಳು ಬೇರೆ ಜಾತಿಯವರ ಪಿರೂತಿ ಮಾಡ್ತವಳ ಅಂತ ಅವರವ್ವ, ಅವರಪ್ಪಂಗ ಆಗಲೇ ಗೊತ್ತಿತ್ತಂತ. ಏನ್ ಚಿಕ್ಕದು ಅಂಗಾಡ್ತದ ಆಮೇಲ ಸರಿಯೋಯ್ತದ ಅಂತ ಅನ್ಕಂಡ್ರಂತ. ಈ ಹೆಣ್ಣು ನೋಡುದ್ರ, ಪಿಯುಸಿ ಓದದು, ನೆಟ್ಗ ಓದದ್ ಬುಟ್ಟು ಬ್ಯಾರೆ ಜಾತಿಯವರ ಕಟ್ಟಂಡು ಹೊಂಟೋಗದ. ಅವರಪ್ಪ ಹೋದವ ಹೋದ ಅತ್ಲಗ ಸತ್ತೋದ ಅನ್ಕಂಡು ಸುಮ್ನಿದ್ರ ಆಗಿರದು. ಆ ಹೆಣ್ಣನ ಗ್ರಾಚಾರ ಕೆಟ್ಟಿತು ಅನ್ನಗದ ಈಗ ಹೆಣ ಆಗಿ ಮನ್ಗದ..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಬಾವಿಕಟ್ಟಿ ಮ್ಯಾಲ ಪಟಗದ ಅಜ್ಜ, ಬಾವಿ ಒಳಗ ಮೈ ಮ್ಯಾಲ ದೆವ್ವ ಬರ್ತಿದ್ದ ಸೊಸಿ

ಇಂಗ ಊರ ಮುಂದ ಜನ ಮಾತಾಡ್ತಿರದ್ನ ನೋಡಿ ಇನ್ನೊಂದಷ್ಟು ಜನ ಅಲ್ಲಿನ ಮಾತ್ಗ ಬಂದು ಸೇರ್ಕಂಡ್ರು. ಅಲ್ಲಿದ್ದವ ಒಬ್ಬ, “ಅದೆಲ್ಲಿ ಸಿಕ್ಕುದ್ಲಂತ ಅವ? ಅದ್ಯಾರ್ ಕರ್ಕ ಬಂದ್ರಂತ ಅಟ್ಟಿಗ ಅವಳ್ನ?" ಅಂತ ವಸಿ ಜೋರಾಗೆ ಮಾತಾಡುದ್ನ. ಅದಕ್ಕ ಗುಂಪಲ್ಲಿ ಇದ್ದ ಇನ್ನೊಬ್ಬ, "ಅದೆಲ್ಯ ಮೈಸೂರ್‍ಲಿ ಒಂತವು ಇದ್ಲಂತ ಪ್ರೀತ್ಸಿ ಮದ್ವ ಆದವನ್ ಜೊತೆಲಿ ಅವರಪ್ಪನೇ ಹೋಗಿ ಉಪಾಯ ಮಾಡಿ ಕರ್ಕ ಬಂದನ. ಈಗ ನೋಡುದ್ರ ಇಂಗ ಮಾಡನ...”

ಇಂಗೆ ಗುಂಪಲ್ಲಿ ಇನ್ನೊಬ್ಬ ಎಲ್ರೂ ಮಾತಾಡ್ತರ ನಾನ್ಯಕ ಸುಮ್ನೆ ನಿಂತರದು ಅಂತ ತಂದು ಎರಡು ಮಾತಿರಲಿ ಅಂತ ಎಸುದ್ನ... "ಇಗೊಂದು ನಾಲ್ಕೈದು ವರುಷದಿಂದ ಆ ತಿಪ್ಪುರಲ್ಲೂ ಹಿಂಗೆ ಆಗಿತ್ತು ಅಲ್ವರ? ಒಂದೇ ಊರೈಕ ಕಾಲೇಜ್‍ಗ ಹೊಯ್ತಿದವು ಬೇರೆ-ಬೇರೆ ಜಾತಿಯವು ಪ್ರೀತಿ ಮಾಡ್ಬುಟ್ಟು ಅವರಟ್ಟಿಗೆ ಗೊತ್ತಾಗೊಯ್ತು. ಊರ್‍ಗೆಲ್ಲ ಸುದ್ದಿ ಗೊತ್ತದ ಅಂತ ಹೆದರ್‍ಕಂಡು ಇಬ್ರು ಹೋಗಿ ರೈಲ್‍ಗ ತಲ ಕೊಟ್ಕಂಡು ಸತ್ತ. ವಾದ್ ವರ್ಸ ಆ ಚಂದಕವಾಡಿಲಿ ಮಗಳ ಬೇರೆ ಜಾತಿಯವರ ಪ್ರೀತ್ಸಳ ಅಂತ ಅವ್ವ, ಅಪ್ಪನೇ ಇಸ ಹಾಕಿ ಸಾಯ್ಸುದ್ರು...” ಅನ್ತಿರ್ಬೇಕಾದ್ರ ದೂರದಲ್ಲಿ ನಿಂತು ಮಾತ್ನೆಲ್ಲ ಕೇಳ್ಸಕತಿದ್ದವ ಹತ್ತಿರಕ ಬಂದು, "ಅಯ್ಯೋ ಆ ಚಾಮರಾಜನಗರದಿಕ್ಕ ಒಬ್ಬ ಕಾಲೇಜ್ ಮೇಡಂನ್ನೆ ಅವರಣ್ಣ ಇಂತ ವಿಷಯಕ್ಕ ಕೊಲ ಮಾಡ್ಬುಡ್ನಿಲ್ವ. ಮಂಡ್ಯದಲ್ಲು ಒಂದೆಣ್ಣ ಹಿಂಗ ಅವರಪ್ಪ ಸಾಯ್ಸ್‍ಬುಟ್ಟನ ಅಂತ ನೆನ್ನ ಹುಲ್ಲಳ್ಳಿಲಿ ಜನ ಮಾತಾಡ್ತಿದ್ರು. ಇದೇನ ಬರಿ ಇದೇ ಸುದ್ದಿಗಳ ಜಾಸ್ತಿ ಆಗವ ಅನ್ನಿ ಈಗ...”

ಈ ಗಂಡುಸ್ರು ಹಿಂಗ ಮಾತಾಡ್ತಿದ್ರ ಇವರ ಮದ್ಯ ಪರಸರಾಮನ ಮಗ, “ಈ ಗಂಡುಸರ್‍ಗ ಮಾಡಾಕ ಬ್ಯಾರೆ ಕ್ಯಾಮೆ ಇಲ್ವ? ಮಾತಾಡಕ್ಕ ನಮ್ಮಟ್ಟಿತವೇ ಆಗಬೇಕ!" ಅಂತ ಗೊಣಕ್ಕಂಡು, ಮುಸರ ನೀರ ಚಕ್ರ್ಲಿ ತಂದು ಬೀದಿಗ ಎರಚ್‍ಬುಟ್ ಹೋದ.

Image
ಕಲಾಕೃತಿ ಕೃಪೆ: unsplash ಜಾಲತಾಣ

ಅರಳಿಮರ ಕಡ್ದಿರದ್ಕೆ ಚಿಂತೆ ಮಾಡ್ತಿದ್ದ, ನಾಲ್ಕಕ್ಷರ ಕಲ್ತ ನಂಜಪ್ಪ ಎಲ್ರೂ ತಲ್ಗೊಂದು ಮಾತಾಡದ್ನ ಕೇಳಸ್ಕಂಡು ಕೊನೆದಾಗಿ ಒಂದ್ ನಾಕ್ ಮಾತಾಡುದ್ನ: “ಅಲ್ಲ ಕಂಡ್ರಲ, ನೀವೆಲ್ಲ ಇಂಗ ಮಾತಾಡ್ತಿದರೆಲ್ಲ... ನಮ್ ತಾತನ ಕಾಲದಂಗ ಈಗ್ಲೂ ಮಾನ ಹೊಯ್ತು, ಮರ್ವಾದಿ ಹೊಯ್ತು ಅಂತ ಕೂತ್ಕಂಡ್ರ ಆದದ? ಮಗಳ ಸಾಯ್ಸಿ ಎನ್ ಸಾದುಸ್‍ಬುಟ್ನ ಈಗ ಅವ? ಕೊಲ ಮಾಡಿ ದೊಡ್ಡವ್ನಾಗ್‍ಬುಟ್ನ? ಅವನ ಜೀವನ ಏನ ಈಗ? ಹೋಗಿ ಜೈಲಲಿ ಮುದ್ದ ಮುರಿತ ಕೂತ್ಗತನ. ಅವನ ಹೆಂಡ್ತಿ-ಮಕ್ಕಳ ಸಾಕವರ್ಯಾರ? ಹೊಲ-ಮನ ನೋಡವರ್ಯಾರ? ಒಂದ್ಸತಿ ಸತ್ತೋದ್ರ ತಿರುಗ್ ಬಂದರ ಅನ್ನ ಗ್ಯಾನ ಬ್ಯಾಡ್ವ ಅವನ್‍ಗ? ಮೊನ್ನ ಮೇಗಲ್ ಬೀದಿ ನಿಂಗಪ್ಪನ ಮಗ ಮೈಸೂರಲ್ಲಿ ಅವಳ್ಯಾರ ಗಂಡಸತ್ತ ಮುಂಡ ಕಟ್ಕಂಡಿದನಂತ ಅವಳ್ಯಾವ ಜಾತಿ ಯಾವೂರ ಯಾರಿಗೊತ್ತು? ಅವ ನಾನೇನು ಮಾಡಿಲ್ಲ ಅನ್ನಂಗ ರಾಜಾರೋಸವಾಗೆ ಓಡಾಡ್ಕಂಡವನ. ಅವರಪ್ಪ ಅವನ್ನ ಕೊಚ್ಚಾಕಕ ಆದ್ದ, ಈಗ ನೆನ್ನ ನಮ್ಮಟ್ಟಿ ಮುಂದ ನಿಂತಿದ್ದಾಗ, 'ಅವನಂಗ ಹುಟ್ಟೇ ಇಲ್ಲ ಅನ್ಕತಿನಿ ಬಡ್ಡೆದ ಎಲ್ಲರ ಹೋಗಿ ಸಾಯ್ಲಿ ಅಂತಿದ್ನ.' ಆದ್ರೂ ಮಗ ಅನ್ನ ವಾಂಚ ಅಲ್ವ ಜನಗಳ್ ಎದ್ರುಗ ಬೈಕಂಡು ಸುಮ್ನಾಯ್ತನ ಅಷ್ಟೇ. ಪೋಣಿ ಬೀದಿ ಚಿನ್ನಪ್ಪನ ಮಗ ಹಿಂಗ ಯಾವನ್ನ ಲವ್ ಮಾಡಿತಂತ, ಮನಬಿಟ್ಟು ಹೊಂಟೊಗಿತಂತ ಒಂದ್ ದಿನ ಅವಳ್ನ ಟೇಸನ್ಗ ಕರ್ಸಿ, ಅವಳ್ಗು ಆಸ್ತಿಗೂ ನಮಗೂ ಇನ್ಮುಂದ ಸಂಬಂಧ ಇಲ್ಲ ಅಂತ ಬರಸ್ಕಂಡು ಕಳ್ಸುದ್ರಂತ. ಒಂದಷ್ಟು ದಿನ ಆದ್ಮೇಲೆ ಈಗ ಮನಗ ಒಂದು ಹೋದಳಂತ. ಇದೆಲ್ಲ ಒಳೊಳ್ಗೆ ಗುಟ್ಟುಗುಟ್ಟಾಗಿ ಆಯ್ತು ಅನ್ನಿ. ಈಗ ಇಡೀ ಊರ್ಗ ಗೊತ್ತಾಗದ. ಹಿಂಗಾರ ಮಾಡದು ಬ್ಯಾಡ್ವ? ಮರ್ವಾದಿ ಅನ್ನದು ಅದೆಷ್ಟುದ್ದ ಅದ್ಯಾಪಾಟಿ ಇದ್ದದು? ಹೊಟ್ಟಲಿ ಹುಟ್ಟಿದ ಐಕಳ ನಾವೇ ಸಾಯ್ಸದು ಅಂದ್ರ ಏನ? ಮೊಖ ನೋಡಾಕ ಇಷ್ಟ ಇಲ್ಲ ಅಂದ್ರ ಅತಗ ಬುಟ್ಟುಡ್ಬೇಕು ಎಲ್ಯಾರ ಬದಿಕತವ...” ಹಿಂಗ ನಂಜಪ್ಪ ಮಾತಾಡ್ತಿದ್ರ ಅವನ ಮಾತು ಅಲ್ಲಿರೋರ್ಗ ವಿಚಿತ್ರವಾಗಿ ಕಾಣ್ತಿದ್ವು. ಈ ತಲೆಕಟ್ಟ ನಂಜಪ್ಪ ನಾಲ್ಕಕ್ಷರ ಕಲ್ತಿನಿ ಅಂತ ಅಂಗ್ ಮಾಡಿ ಇಂಗ್ ಮಾಡಿ ಅಂತನ ಅಂತ ಎಲ್ಲ ಒಳಗೊಳಗೆ ಗೊಣಿಕತಿದ್ರು. ಅಟ್ಟಿಲಿ ಏನ ಕೆಲಸ ಅವ ಅನ್ನಂಗ ಎಲ್ಲರೂ ನಿಧಾನಕ್ಕ ಅವರವರ ದಾರಿ ಹಿಡಿದಿದ್ರು.

ಮುಖ್ಯ ಚಿತ್ರ ಕಲಾಕೃತಿ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
13 ವೋಟ್