ದೇಸಿ ನುಡಿಗಟ್ಟು - ರಾಣೇಬೆನ್ನೂರು ಸೀಮೆ | ಯಾದ ಹಬ್ಬ ಇರ್ಲಿ, ಊಟಕ್ಕ ಅಕ್ಕಿ ಹುಗ್ಗಿ ಇರಾಕ ಬೇಕು‌

ದಬರಿ ತುಂಬ ಸುಮಾರು ಒಂದೂವರೆ ಕೆ.ಜಿ ರವಾದ ಉಪ್ಪಿಟ್ಟು ತಂದಿಟ್ಟರು. ಬೀಗರ ಕಡೆಯ ಭೀಮಕಾಯ ಎಲ್ಲರೂ ಸೋಜಿಗಪಡುವಂತೆ ಉಪ್ಪಿಟ್ಟನ್ನೆಲ್ಲ ಗುಳುಂ ಅನಿಸಿಬಿಟ್ಟ! ಈ ಕಡೆ ಹುಡುಗ್ರ ಮ್ಯಾಳಕು ಅದರ ಬಿಸಿ ತಟ್ಟಿ, ಪೆಚ್ಚುಮೋರೆ ಹಾಕ್ಕೊಂಡು ತಮ್ಮ-ತಮ್ಮ ಕೆಲಸ ಹಿಡದ್ರೂ, ಏನಾರ ಮಾಡಬೇಕಲ್ಲ ಅನ್ನೋ ವಿಚಾರ ಅವರೆಲ್ಲರ ತಲೆ ಹೊಕ್ಕಿದ್ದು ಮಾತ್ರ ಸುಳ್ಳಾಗಿರಲಿಲ್ಲ

ನಂ ಉತ್ತರ ಕರ್ನಾಟಕದ ಹಬ್ಬದೂಟದ ವಿಶೇಷ ಅಂದ್ರ, ಅದು ಅಕ್ಕಿ ಹುಗ್ಗಿ. ಯಾದ ಹಬ್ಬ ಇರ್ಲಿ, ಅಲ್ಲಿ ಊಟಕ್ಕ ಅಕ್ಕಿ ಹುಗ್ಗಿ ಇರಾಕ ಬೇಕು‌. ಅಕ್ಕಿಯಿಂದ ಅನ್ನ ಮಾಡೋದು, ಅದ್ರಲ್ಲಿ ಚಿತ್ರಾನ್ನ, ಪಲಾವ್, ಪುಳಿಯೊಗರೆ, ರೈಸ್ಬಾತ್ ಹೀಂಗ ಹಲ ನಮೂನಿ ಖಾದ್ಯ ಮಾಡೋದು ಎಲ್ರೂಗೂ ಗೊತ್ತು. ಆದ್ರ, ಈ ಅಕ್ಕಿ ಹುಗ್ಗಿ ಮಾತ್ರ ಭಾಳ ಮಂದಿಗೆ ಗೊತ್ತಿರಲಿಕ್ಕಿಲ್ಲ ಅನಸ್ತದ. ಪ್ರತೀದಿನದ ಊಟಕ್ಕ ಬೇರೆಲ್ಲ ಇವೇ ಪದಾರ್ಥಗಳಿದ್ದರೂ ಹಬ್ಬದಾಗ ಮಾತ್ರ ಅಕ್ಕಿ ಹುಗ್ಗಿ ಮಾಡ್ಕೊಂಡು ಉಣ್ಣೋದು ಇಲ್ಲಿನ ವಿಶೇಷತೆ.

ಅಕ್ಕಿ ಹುಗ್ಗಿ ಅಂದ್ರ ಅದೇನೂ ಸವಿಖಾದ್ಯಾನೂ ಅಲ್ಲ, ಖಾರದ ಖಾದ್ಯಾನೂ ಅಲ್ಲ. ಹಂಗಂತ ಅದು ಸಪ್ಪೇನೂ ಇರಲ್ಲ‌. ಅನ್ನಕ ಕುಸುಬಿ ಹಾಲು ಹಿಂಡಿ ಮಾಡಿರ್ತಾರ ಅಷ್ಟ. ಅಕ್ಕಿ ಹುಗ್ಗ್ಯಾಗ ತುಪ್ಪ ಹಾಕ್ಕೊಂಡ್ ಉಂಡ್ರ ಅದರ ಮಜಾನೇ ಬೇರೆ. ಊಟ ಏನೇ ಇರಲಿ, ಅಕ್ಕಿ ಹುಗ್ಗಿನ ಮೊದಲು ನೀಡೋದು. ಅದರ ಜತಿಗೆ ಪಚಡಿ; ಸವತಿಕಾಯಿ, ಕೊಬ್ರಿ, ಮೂಲಂಗಿ, ಕೊತಂಬ್ರೀ... ಹೀಗೆ ಹಲವು ತರಕಾರೀನ ಸಣ್ಣಗ ಹೆಚ್ಚಿ ಮಾಡೋದ ಪಚಡಿ, ಮತ್ತ ಮುಳಗಾಯಿ ಪಲ್ಯ ಇರ್ತೈತಿ. ಮುಳಗಾಯಿ ಪಲ್ಯ ನಂಜಿಕೊಂತ, ಪಚಡಿ ಚಪ್ಪರಿಸಿಕೊಂತ ಅಕ್ಕಿ ಹುಗ್ಗಿ ಉಣತಾರ. ಊಟಕ್ಕಿಂಥ ಮೊದಲ ಇದು ಯಾಕ ಅಂದ್ರ, ಪಚನ ಕ್ರಿಯೆಗೆ ಸಹಾಯಕಾರಿ. ಇದಾದ ನಂತರನ ಸಿಹಿಭಕ್ಷ್ಯ, ಅನ್ನಸಾರು, ಹಪ್ಪಳ ಶಂಡಿಗಿ ಎಲ್ಲಾನೂ ಬರ್ತಾವು.

ನಮ್ಮೂರಾಗ ಒಂದ್ ಅಡುಗೀ ಮ್ಯಾಳ ಇತ್ತು. ಊರಾಗ ಮದುವಿ, ಮತ್ತ ಗುಡ್ಯಾಗ ಪ್ರಸಾದ ಇತ್ತು ಅಂದ್ರ ಅಡುಗೆ ಮಾಡೋದು, ನೀಡೋದು ಈ ಮ್ಯಾಳದ್ದ ಜವಾಬ್ದಾರಿ ಆಗಿತ್ತು. ಎಲ್ಲಾ ಹುಡುಗ್ರ ಮ್ಯಾಳನ ಆಗಿದ್ರೂ ಒಂದಿಬ್ಬರು ಹೀರೆ ಯಜಮಾನ್ರೂ ಆ ಮ್ಯಾಳದಾಗ ಇದ್ರು. ಹೀಂಗ ಒಮ್ಮೆ ನಮ್ಮೂರಾಗ ಒಂದ್ ಮದುವೀ ಇತ್ತು. ಮದುವೀಗೆ ಬರೋ ಪರ ಊರಿನ ದಂಡಿನೊಳಗೂ ಇಂಥ ಹುಂಬ ಹುಡುಗರ ಒಂದ ಮ್ಯಾಳ ಇದ್ದ ಇರ್ತಿತ್ತು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಂಜನಗೂಡು ಸೀಮೆ | ಮರ್ವಾದಿ ಅನ್ನದು ಅದೆಷ್ಟುದ್ದ ಅದ್ಯಾಪಾಟಿ ಇದ್ದದು?

ಮದುವಿ ದಿನ ಬೆಳಿಗ್ಗೆ ಬೀಗರಿಗೆ ಉಪಹಾರ ಅಂತ ಉಪ್ಪಿಟ್ಟು ಮಾಡಿದ್ರು‌‌. ಬೀಗರು ಸಾಲಾಗಿ ಕೂತು ಉಪ್ಪಿಟ್ಟು ತಿಂತಾ ಇದ್ರು. ನಮ್ಮೂರಿನ ಹುಡ್ರು ಮ್ಯಾಳದವರು ಅವರನ ಸುಮ್ಮನ ಬಿಡಬೇಕಲ್ಲ. "ಒಂದು ದಬರಿ ಉಪ್ಪಿಟ್ಟು ತಿಂದೋರಿಗೆ ನೂರು ರೂಪಾಯಿ," ಅಂತ ಬೆಟ್ ಕಟ್ಟಿದ್ರು‌. ಬೀಗರ ಕಡೆ ಮಂದ್ಯಾಗ ಗುಸುಗುಸು, ಪುಸುಪುಸು ಸುರುವಾತು. ಒಪ್ಪಿಕೊಂಡ್ರ ಉಣ್ಣೋದ ಕಷ್ಟ, ಬಿಟ್ಟಕೊಟ್ರ ಸೋತಂಗಾಕ್ಕೈತಿ ಏನ್ ಮಾಡೋದು ಅಂತ ಅವರು ಮಾತಾಡಿಕೊಳ್ತಾ ಇದ್ರು‌. ಅಷ್ಟರಾಗ ಒಬ್ಬ ಭೀಮಕಾಯ ಎದ್ದು ನಿಂತ. "ನಾವ್ ರೆಡಿ ಅದವೀ, ತಂಬರೀ ನಿಮ್ಮ ದಬರಿ," ಅಂದಬಿಟ್ಟ‌.

ತೀರಾ ದೊಡ್ಡದೂ ಅಲ್ಲ, ತೀರಾ ಸಣ್ಣದೂ ಅಲ್ಲ; ಸುಮಾರು ಒಂದು, ಒಂದೂವರೆ ಕೆ.ಜಿ ರವಾದ ಉಪ್ಪಿಟ್ಟಿಗೆ ಹವನಾದ ದಬರಿ ಅದು. ಅಂಥ ದಬರಿ ತುಂಬ ಉಪ್ಪಿಟ್ಟು ತಂದಿಟ್ಟರು. ಬೀಗರ ಕಡೆಯ ಭೀಮಕಾಯ ಎಲ್ಲರೂ ಸೋಜಿಗಪಡುವಂತೆ ಉಪ್ಪಿಟ್ಟನ್ನೆಲ್ಲ ಗುಳುಂ ಅನಿಸಿಬಿಟ್ಟ! ಈ ಕಡೆ ಹುಡುಗ್ರ ಮ್ಯಾಳಕು ಅದರ ಬಿಸಿ ತಟ್ಟಿ, "ಹೋ ನೂರು ರೂಪಾಯೀ ಕಳ್ಕೊಡ್ವೆಲ್ಲ," ಅಂತ ಪೆಚ್ಚುಮೋರೆ ಹಾಕ್ಕೊಂಡು ತಮ್ಮ-ತಮ್ಮ ಕೆಲಸ ಹಿಡದ್ರೂ, ಏನಾರ ಮಾಡಬೇಕಲ್ಲ ಅನ್ನೋ ಒಂದು ವಿಚಾರ ಮಾತ್ರ ಅವರೆಲ್ಲರ ತಲೆ ಹೊಕ್ಕಿದ್ದು ಸುಳ್ಳಾಗಿರಲಿಲ್ಲ.

Image

ಅಕ್ಷತಾರೋಪಣೆ ಮುಗುದು, ವಿವಾಹ ಭೋಜನಕ್ಕೆ ಕರೆ ಹೋಯ್ತು. ಬೇರೆ ಊರಿಂದ ಬಂದ ಬೀಗರಿಗೆ ಮೊದಲ ಪಂಕ್ತಿ ಮೀಸ್ಲು. ಎಲ್ರೂ ಸಾಲು-ಸಾಲು ಪಂಕ್ತಿಯಲ್ಲಿ ಕೂತಿದ್ರು. ಒಂದ ಕಡಿಯಿಂದ ಎಲೆ ಹಾಕುತ್ತ, ಲೋಟಗಳಿಗೆ ನೀರು ತುಂಬಿಸುತ್ತ ಬರುತಿದ್ದರು. ಮುಳಗಾಯಿ ಪಲ್ಯ, ಪಚಡಿ, ಚಟ್ನಿ ಎಲೆಗಳಿಗೆ ಬೀಳುತಿತ್ತು. ಅದೇ ಹೊತ್ತಿಗೆ ಘೋಷಣೆಯೊಂದು ಮೊಳಗಿತು: "ಯಾರಾದರೂ ಒಂದು ದಬರಿ ಶಿರಾ ಉಂಡರೆ ಅವರಿಗೆ ಇನ್ನೂರು ರೂಪಾಯಿ ಬಹುಮಾನ!"

ಎಲ್ರೂ ಮುಖ-ಮುಖ ನೋಡಿಕೊಂಡರು. ಯಾರಿಗೂ ಧೈರ್ಯ ಬರಲಿಲ್ಲ. ಮತ್ತೆ ಎಲ್ಲರದೂ ಭೀಮಕಾಯನತ್ತ ದೃಷ್ಟಿ ನೆಟ್ಟಿತು. ಮುಂಜಾನೆ ದಬರಿ ಉಪ್ಪಿಟ್ಟು ಉಂಡು ದಾಖಲೆ ಬರೆದಿದ್ದ ಭೀಮಕಾಯ ಈ ಸವಾಲು ಒಪ್ಪದಿರುತ್ತಾನೆಯೆ? "ಸರಿ, ತಗೊಂಬನ್ನಿ," ಅಂದ ಆತ. ಒಂದು ದಬರಿ ಶಿರಾವನ್ನು ಅಗುಳೂ ಬಿಡದ ಹಾಗೆ ಅವನ ಎಲೆಗೆ ಬಡಿಸಿದ್ದಾಯ್ತು‌. ಮೊದಲು ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಮ್ಯಾಚಿನ ಆರಂಭದ ದಾಂಡಿಗರಂತೆ ಶಿರಾ ಚಚ್ಚಿದ ಭೀಮಕಾಯ. ನಂತರ ಒನ್ ಡೇ ಮ್ಯಾಚಿನ ದಾಂಡಿಗನಂತೆ ಒಂದೊಂದೇ ತುತ್ತು ನುಂಗತೊಡಗಿದ. ಅರ್ಧ ಎಲೆಯೇನೋ ಖಾಲಿಯಾಗಿತ್ತು.. ಇನ್ನೂ ಮ್ಯಾಚು ತನ್ನ ಕೈಯಲ್ಲೇ ಎಂಬಂತೆ ಉಣ್ಣತೊಡಗಿದ್ದ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಸೀಮೆ | ಕಣ್ಣದಂಗೆ ಮನ್ಕಂಡ್ ನಕ್ಷತ್ರ ಲೆಕ್ಕ ಮಾಡದ್ ನೆನಪ್

ಅಡುಗೆ ಮ್ಯಾಳದ ಹುಡುಗರಿಗೆ ಒಳಗೊಳಗೇ ಪುಕುಪುಕು ಸುರುವಾಗಿತ್ತು. ಮುಂಜಾನೆ ಉಪ್ಪಿಟ್ಟು ತಿಂದು ತೇಗಿದ ಹಾಗೆ ಶಿರಾನೂ ಗುಳುಂ ಮಾಡ್ತಾನೆ ಇವನು ಅನ್ನೋ ಭಯ ಸುರುವಾಗಿ, ಇನ್ನೂರು ರೂಪಾಯಿ ಎಲ್ಲಿ ಕೈಬಿಡ್ತಾವೇನೋ ಅನ್ನೋ ಚಿಂತೆ. ಜೊತೆಗೆ, ತಾವು ಹಾಕಿದ್ದ ಬೌನ್ಸರ್‌ಗೆ ಭೀಮಕಾಯ ಔಟಾಗದೇ ಇರಲಾರ ಅನ್ನೋ ವಿಶ್ವಾಸವೂ ಅವರಲ್ಲಿತ್ತು. ಕೊನೆ ಹಂತದಲ್ಲಿ ಭೀಮಕಾಯ ಟೆಸ್ಟ್ ಪಂದ್ಯದ ದಾಂಡಿಗನಂತೆ ಬೀಟ್ ಆಗುತ್ತ ಉಳಿದುಬಿಟ್ಟ. ಶಿರಾ ಹಾಗೇ ಉಳಿದುಬಿಟ್ಟಿತು. ಈ ಹುಡುಗರಿಗೆ ಮ್ಯಾಚು ಗೆದ್ದ ಹುಕಿಯೋ ಹುಕೀ!

ಇವರು ಹಾಕಿದ್ದ ಬೌನ್ಸರ್ ಏನಪಾ ಅಂದ್ರೆ... ಎಲ್ಲರಿಗೂ ಮಾಡಿದ್ದ ಶಿರಾದಲ್ಲಿ ಒಂದು ದಬರಿ ಶಿರಾ ತೆಗೆದಿಟ್ಟು ಅದಕ್ಕೆ ಅರ್ಧ ಕೆ.ಜಿ ಸಕ್ಕರಿಯ ಆಣ ಕುದಿಸಿ ಚೆನ್ನಾಗಿ ಕಲಸಿಬಿಟ್ಟಿದ್ದರು. ಬೀಗರ ಕಡೆಯ ಭೀಮಕಾಯ ಈ ಬೌನ್ಸರ್ ಎಸೆತಕ್ಕೆ ಸೋತು ಬಸವಳಿದುಬಿಟ್ಟಿದ್ದ. ನಮ್ಮ ಕಡೆ ಮದುವೆ ಸಮಾರಂಭಗಳಲ್ಲಿ ಇಂಥವೆಲ್ಲ ಸಾಮಾನ್ಯ. ನಮ್ಮ ಜನರ ಜೀವನಪ್ರೀತಿ, ಇಂಥ ಘಟನೆಗಳಲ್ಲೇ ಹೆಚ್ಚು ಫಳಫಳಿಸುವುದು.

ನಿಮಗೆ ಏನು ಅನ್ನಿಸ್ತು?
0 ವೋಟ್