ದೇಸಿ ನುಡಿಗಟ್ಟು - ಗದಗ ಸೀಮೆ | ದೊಡ್ಡ ಗುಡ್ಯಾಗ್‌ ಬಿಡ್ಲಿಲ್ಲ... ಬರಮಪ್ಪನ ಗುಡ್ಯಾಗ ಗಣಪ್ಪನ್ನಿಟ್ವಿ

Ganapatibappa

ಗಣಪ್ಪನ್ ತರಾಕ ಬೆಳ್ಳಟ್ಟಿಗೆ ಇಬ್ರ ಹೋಗಿದ್ರು. ಉಳದೊರದು ಪೆಂಡಲ್ ರೆಡಿ ಮಾಡು ಕೆಲ್ಸಾ. ಸಂಜಿ ಆರ್ ಆದ್ರು ಗಣಪ್ಪ ಬಂದಿರಲಿಲ್ಲ. ಎಂಟ ಗಂಟೆಕ್ ಪೂಜೆ ಮಾಡುದು ಅನಕೊಂಡಿದ್ರು. ಅಂತು ಇಂತು ಯೋಳುವರಿಗೆ ಬಂದಾ ಗಣಪ್ಪ. ಹುಡಕಿ ಚಂದ ಇರೋ ಗಣಪ್ಪನ್ನ ತಂದಿದ್ರು. ಗಣಪ್ಪನ್ನ ಇಟ್ಟಾವ ಅಂತ್ಹೇಳಿ ಊರಾಗಿನೊರೆಲ್ಲಾ ಸಣ್ಣ ಹುಡುಗುರು ನೋಡಾಕ ಬಂದಿದ್ರು

ಗಣಪತಿ ಹಬ್ಬಾ ಎಲ್ಲಾ ಕಡೆ ಜೋರ್ ನಡದದ; ನಮ್ಮ ಮನ್ಯಾಗೂ, ಮತ್ ಊರ್ ಗುಡ್ಯಾಗ್ ಗಣಪ್ಪನ ಕುಂದ್ರಿಸ್ಯಾರ್. ಆದ್ರ, ನಾವ್ ಸಣ್ಣೊರ್ ಇದ್ದಾಗ ಹುಬ್ಬಳ್ಯಾಗ್ ಮಾಡ್ತಿದ್ದ ಗಣಪ್ಪನ ಹಬ್ಬಾ ನೋಡಿ, ನಾನ್ ನಮ್ಮ ಡ್ಯಾಡಿಗೆ ನಾವು ಗಣಪ್ಪನ್ನ ತರುಣು ಅಂತಾ ಭಾಳಾ ಹಠಾ ಮಾಡ್ತಿದ್ಯಾ. ಆದರ ಅವ್ರು, "ಹಂಗೆಲ್ಲಾ ಸುಮ್ಮನಾ ಇಡಾಕ್ ಬರಂಗಿಲ್ಲ ಸುಮ್ಮನಿರ್," ಅನ್ನೋರ್.

ನಮ್ಮ ಅಮ್ಮಾರ್ ಊರಾಗೂ ಅಷ್ಟ, ಯಾರು ಊರಾಗ ಇನ್ನು ಓಣಿ ಗಣಪ್ಪನ ಇಟ್ಟಿರಲಿಲ್ಲ. ನಾನು ನಮ್ಮ ಅಣ್ಣಾರೆಲ್ಲಾ ಗಣಪ್ಪನ್ನ ನೋಡಬೇಕ್ ಅಂದ್ರ ಯಾರರೆ ಬ್ರಾಮಂಡ್ರ ಮನಿಗ ಹೋಗಬೇಕಿತ್. ಇಲ್ಲಾ ಅಂದ್ರ ಆಜುಬಾಜು ಊರಿಗೆ. ಅಲ್ಲಿ ಗಣಪ್ಪನ್ನ ಕುಂದ್ರಿಸಿ, ಅಲಂಕಾರ ಮಾಡಿ, ಹಾಡು ಕುಣತಾ ನೋಡಿ, ನಮ್ಮ ಅಣ್ಣಾರ್ ಒಂದು ನಿರ್ಧಾರ ಮಾಡಿದ್ರು - ನಾವು ಹಿಂಗ್ ಊರಾಗ ಗಣಪ್ಪನ್ನ ಇಡುಣ ಅಂತ.

ನಮ್ಮ ಅಣ್ಣಾರ ಮತ್ ಅವರ ದೋಸ್ತಗುಳ ಸೇರಿ ಗಣಪ್ಪನ್ನ ಇಡಾಕ ತಯಾರಿ ಸಡಸಿದ್ರು. ಗಣಪ್ಪನ್ನ ಹಬ್ಬಕ್ಕ ಶಾಲಿ ಸೂಟಿ ಇದ್ವು. ತಾವ್ ತಾವ್ ಗಣಪ್ಪನ್ನ ಪಟ್ಟಿ ಹಾಕಿದ್ರು. "ಒಬ್ಬಬ್ರು 50 ರೂಪಾಯಿ ಹಾಕುನು. ಐದ ಮಂದಿ ಅದಿವಿ, 250 ರೂಪಾಯಿ ಅಕ್ಕೇತಿ. ಅದರಾಗ, 50 ರೂಪಾಯಿ ಗಣಪ್ಪನ್ನ ತರುಣು, 50 ರೂಪಾಯಿ ಪಟಾಕ್ಷಿಗೆ ಇಡುಣು, ಇನ್ನ 50 ರೂಪಾಯಿದು ಡೆಕಾರೇಷನ್ ಮಾಡಾಕ ಸಾಮಾನ್ ತರುಣು, ಉಳದ ರೊಕ್ಕಾ ಗಣಪ್ಪನ್ನ ಕಳಸೋದಿನ ಬರತಾವು," ಅಂತಾ ಪ್ಲಾನ್ ರೆಡಿ ಮಾಡಿದ್ರು. ತಾವ ಪಟ್ಟಿ ಹಾಕೊಂಡು ತಯಾರಾದ್ರು. ಮತ್ ಗಣಪ್ಪನ್ನ ಎಲ್ಲಿ ಕುಂದ್ರಸೋದು? ದೊಡ್ಡ ಗುಡಿಯೊಳಗ ಸಣ್ಣ ಹುಡುಗುರಿಗೆ ಬಿಡಂಗಿಲ್ಲ. ಯಾವದರ ಸಣ್ಣ ಗುಡಿ ಹುಡಕುನು ಅಂದು, ನಮ್ಮ  ಮನಿ ಮುಂದ ಇದ್ದ ಬರಮಪ್ಪನ ಗುಡ್ಯಾಗ ಗಣಪ್ಪನ್ನ ಕುಂದ್ರುಸೋದ್ ಅಂತ್ ಫೈನಲ್ ಆತು.

Image
Ganesha

ಅಲಂಕಾರಕ್ಕ ನಾವ್ ತರಸಿದ ಸಾಮಾನು ಸಾಲಲಿಲ್ಲ, ಏನ್‌ ಮಾಡುದು? ಹಾ... ಊರಾಗ ಯಾರವ ಚೊಲೊ ಸೀರಿ ಅದವಾ ಅವನ್ನ ಇಸಕೊಂಡ ಬಂದ್ ಇನ್ನು ಜಾಸ್ತಿ ಅಲಂಕಾರಾ ಮಾಡುನು ಅಂದಕೊಂಡ್ವಿ. ಊರಾಗ ಅಡ್ಡಾಡಿ ಅವರಿವರ ಮನ್ಯಾನವ್ ಸೀರಿ ಇಸ್ಕೊಂಡ ಬಂದಿದ್ದಾತು. ನಮ್ಮ ಅಮ್ಮಾ, ನಮ್ಮ ದೊಡ್ಡಮ್ಮನೂ ಸೀರಿ ಕೊಟ್ಟಿದ್ರು. ತಂದು ಸೀರಿಯಲ್ಲಾ ಆ ಕಡೆ, ಈ ಕಡೆ ಹಾಕಿ, ಮ್ಯಾಲ ಒಂದು ಹೊಚ್ಚಿ ನಮ್ಮ ಗಣಪ್ಪನ್‌ ಪೆಂಡಾಲ್‌ ಅಲಂಕಾರ ಮಾಡಿ ಮುಗಸಿದ್ವಿ.

ಆದ್ರ, ಗಣಪ್ಪನ ತರಾಕ್‌ ನಾವ್ ಹಾಕಿದ್ ಬಜೆಟ್ ಲೆಕ್ಕಾಚಾರ ಸರಿ ಇರಲಿಲ್ಲಾ. 50 ರೂಪಾಯಿ ಗಣಪ್ಪು ಯಾಡ್ನೋರ್ ಆತು, ಡೆಕಾರೇಷನ್‌ಗ 80 ರೂಪಾಯಿ ಸಾಮಾನ್ ಆದ್ವು. ಯಾಕಂದ್ರ, ಗಣಪ್ಪನ ಹಿಂದ ತಿರುಗು ಚಕ್ರಕ್ ರೊಕ್ಕ ಭಾಳ ತಗೊಂಡಿದ್ದ ಅಂಗಡಿಯಾಂವ. 50 ರೂಪಾಯಿ ಪಟಾಕ್ಷಿ... ಇಷ್ಟು ಸಂತಿ ಮಾಡಿದ್ರು.

ಗಣಪ್ಪನ್ ತರಾಕ ಬೆಳ್ಳಟ್ಟಿಗೆ ಇಬ್ರ ಹೋಗಿದ್ರು. ಉಳದೊರದು ಗಣಪ್ಪನ್ ಪೆಂಡಲ್ ರೆಡಿ ಮಾಡು ಕೆಲ್ಸಾ. ಸಂಜಿ ಆರ್ ಆದ್ರು ಇನ್ನು ಗಣಪ್ಪ ಬಂದಿರಲಿಲ್ಲ. ಎಂಟ ಗಂಟೆಕ್ ಪೂಜೆ ಮಾಡುದು ಅನಕೊಂಡಿದ್ರು. ಅಂತು ಇಂತು ಯೋಳುವರಿಗೆ ಬಂದಾ ಗಣಪ್ಪ. ನಮ್ಮ ಅಣ್ಣಾರ ಹುಡಕಿ ಚಂದ ಇರೋ ಗಣಪ್ಪನ್ನ ತಂದಿದ್ರು. ಊರಾಗಿನೊರೆಲ್ಲಾ ಸಣ್ಣ ಹುಡುಗುರು ಗಣಪ್ಪನ್ನ ಇಟ್ಟಾವ ಅಂತ್ಹೇಳಿ ನೋಡಾಕ ಬಂದಿದ್ರು. "ಎಂತಾ ಚಂದನ ಗಣಪ್ಪನ ತಂದ ಇಟ್ಟರಿ! ಚೊಲೊ ಅದಾ ನಿಮ್ಮ ಗಣಪ್ಪ..." ಅಂತ ನಮ್ಮನ್ನ ಹೊಗಳಿದ್ದು ನಮಗ ಭಾರಿ ಖುಷಿ ಆಗಿತ್ತು.

ಮನ್ಯಾಗ್ ಕಾಡಿ ಬೇಡಿ ನಮ್ಮ ಗಣಪ್ಪಗ್ ದೊಡ್ಡ-ದೊಡ್ಡ ಮೂರ ಉಂಡಿ ಮಾಡಸ್ಕೊಂಡ್ ಬಂದಿದ್ದ ನಮ್ಮ ಅಣ್ಣ. ನಮ್ಮ ಮಾಮಾರ್ ಹೊಲದಾಗಿದ್ದ ಪ್ಯಾರಲ ಗಿಡದಾಗಿಂದ ಪ್ಯಾರಲಕಾಯಿ, ಬಾಳಿ ತೋಟದಾಗಿಂದ ಬಾಳೆಹಣ್ಣು ನಮ್ಮ ಗಣಪ್ಪಗ ಫಲಾಹಾರ. ಮುಂದ ಐದ ದಿನ ಗಣಪ್ಪನ್ ಮುಂದಿನ ಉಂಡಿ, ಹಣ್ಣು ಕಾಯೋದು ಪಾಳಿ ಮ್ಯಾಲೆ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೆ ಆರ್ ಪೇಟೆ ಸೀಮೆ | ನಮ್ ಕೇರ್ಪೇಟೆ ಸೀಮೆಲೀ ಗಣಪತಿ ಹಬ್ಬುದ್ ಸಂಬ್ರಮ ಇಂಗ್ ಇರ್ತದೆ

ನಮ್ಮ ಗಣಪ್ಪನ್ನ ನೋಡಾಕ್ ಬಂದೊರ್ ಕೊಟ್ಟಿದ್ದ ದಕ್ಷಿಣೆ 50 ರೂಪಾಯಿ ಆಗಿತ್ತು. ಅದು ಮತ್ ನಮ್ಮ ಹತ್ರ ಉಳದಿದ್ದ 100 ರೂಪಾಯಿ ಸೇರಿ ಗಣಪ್ಪನ್ನ ಬಿಡೋದಿನ ಪಟಾಕ್ಷಿ ತಂದು ಮಸ್ತ ಗಣಪ್ಪನ್ನ ನಮ್ಮೂರ್ ಹಳ್ಳದಾಗ ಹೋಗಿ ಬಿಟ್ಟ ಬಂದ್ವಿ.

ಇನ್ನು, ಉಳದಿದ್ದ ಫಲಾಹಾರ ಏನ್ ಮಾಡುದು? ಹಣ್ಣ ಎಲ್ಲಾ ನಾವ ತಿಂದು, ಲಟ್ಟುನಾ ಹರಾಜಗೆ ಹಾಕಿದ್ವಿ ನಮ್ಮ-ನಮ್ಮ ನಡುವ. ಮೂರು ಉಂಡಿಗೆ 51 ರೂಪಾಯಿ. ಈ ವರ್ಷ ಯಾರ ಉಂಡಿ ತಗೋತಾರ್ ಮುಂದಿನ ವರ್ಷ ಅವರು ಗಣಪ್ಪನ ಪಟ್ಟಿ 51 ರೂಪಾಯಿ ಹಾಕುದು ಅಂತ. ಒಟ್ಟ ಹಿಂಗ್ ಮಾಡಿ 250 ರೂಪಾಯಿದಾಗ ನಮ್ಮ ಗಣಪ್ಪನ್ ಹಬ್ಬ ಮುಗದಿತ್ತು. ಇಷ್ಟ ಕಾರಬಾರ ಮಾಡಿದ ನಮ್ಮ ಅಣ್ಣಾರ ಬರಿ ನಾಕನೆತ್ತಾ ಇದ್ರು. 

ಮುಂದಿನ ವರ್ಷದಿಂದ ನಾವು ಅನ್ನ ಸಂತರ್ಪಣೆ ಮಾಡುನು ಅಂತಾ ಆ ವರ್ಷ ಪ್ಲಾನ್ ಮಾಡಿ ಇಟ್ರು. ಈಗ ಊರಾಗ ಇವರ ಗಣಪ್ಪ ಊರಿಗೆ ದೊಡ್ಡದು. ಮದ್ಲ ಗಣಪ್ಪನ್ ಪಟ್ಟಿ ಎತ್ತುತು ಚುರು ಕಷ್ಟ ಆಗುದು. ಈಗ ಎಲ್ಲರೂ ಪಟ್ಟಿ ಕೊಡತಾರ. ದೊಡ್ಡ ಗುಡ್ಯಾಗ್ ಕೂಡತಾನ ನಮ್ಮ ಗಣಪ್ಪ. ಗಣಪ್ಪನ್ನ ಹಬ್ಬ ಅಂದ್ರ ಈಗೂ ಅಷ್ಟ ಖುಷಿ ಅದ. ಆದ್ರ, ಒನ್ನೇಕ ನಾವು ಗಣಪ್ಪನ್ನ ಇಟ್ಟಾಗ ಸಿಕ್ಕ ಖುಷಿಗೆ ಬೆಲೆ ಕಟ್ಟಾಕ ಆಗಂಗಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್