ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಎರಿಸೀಮಿ ಮಂದಿಯ ಗೋಧಿ ಕೂಳಿನ ಕತಿ

ಗೋಧಿ ಕೂಳು ಬಾಳ ಗಟ್ಟಿ. 'ಕಸುವಿನ ಕೂಳು' ಅಂತನ ಕರೀತಾರ ಗೋಧಿ ಕೂಳಿಗೆ. ಇದನ್ನ ತಿನ್ನರ ಗಟ್ಟಿ ಇರಬಕ ಯಾಕಂದ್ರ, ಡೈಜೆಷನ್ ಸಿಸ್ಟಮ್ಮು ಚಲೋ ಇದ್ದರಷ್ಟ ಮನಷಾ ಈ ಕೂಳಿಗೆ ತಡಿತಾನ. ಇಲ್ಲಂದ್ರ, ಕಠಿಣಾಕ್ಕತಿ ಪರಿಸ್ಥಿತಿ. ಜತಿಗೆ ಉಂಡದ್ದು ಕರಗಿಸುವಷ್ಟು ದುಡಿಬಕು, ಬೆವರ ಇಳಸಬಕು, ಸಾಕಷ್ಟ ನೀರನೂ ಕುಡಿಬಕು. ಇದೆಲ್ಲಾ ಸಾಧ್ಯಾಗುದು ಎರೆಸೀಮಿ‌ ಕಡೆ

ಚಪಾತಿ, ಶಾವ್ಗಿ, ಸೌತಿ ಬೀಜ, ಪರಡಿ, ಮಾದ್ಲಿ, ಗೋಧಿ ಹುಗ್ಗಿ, ಉಪ್ಪಿಟ್ಟು, ಗೋಧಿ ನುಚ್ಚಿನ ಹುಗ್ಗಿ, ಗೋಧಿ ಹಾಲಿನ ಹಲ್ವಾ, ಚೊಂಗ್ಯಾ, ಗುಳ್ಳಡಕಿ ಉಂಡಿ, ಗೋಧಿ ಹಿಟ್ಟಿನ ದ್ವಾಸಿ... ಏನ ಎವ್ವಾ ಇದ ಲಿಸ್ಟ್ ಮುಗಿಯವಲ್ದ್! ಹಿಂಗ ಹೇಳಕೊಂತ ಹೋದರ, ಎಲ್ಲಾ ನಮೂನಿ ಪದಾರ್ಥಾನೂ ಗೋಧ್ಯಾಗ ಮಾಡೂದಾಕ್ಕೆತಿ. ಹಂಗ ನೋಡಿದ್ರ ಗೋಧಿ ಬಹುಪಯೋಗಿ ಧಾನ್ಯ. ಇತ್ತಾಗ ಸ್ವೀಟ್ ಅಡುಗಿಗೂ ಸೈ, ಅತ್ತಾಗ ಖಾರದ ಅಡುಗಿಗೂ ಸೈ.

ನಾವಂತು ಎರಿಸೀಮಿ ಮಂದಿ. ನಮಗ ಗೋಧಿ ಕೂಳು ಅಂದ್ರ ಬಾಳ ಹಿಡಸ್ತೈತಿ. ಒಂದು ಹೊತ್ತ ರೊಟ್ಟಿ ಬಿದ್ದರ, ಮತ್ತೊಂದ ಹೊತ್ತಿಗೆ ಚಪಾತಿ ಬೇಕ ಬೇಕು. ಇನ್ನ ಉಪ್ಪಿಟ್ಟು ನಮ್ಮ ಜೀವನಾಡಿ. ನಮ್ಮ ಕಡೆ ಯಾಡ ನಮೂನಿ ಗೋಧಿ; ಒಂದ ಅಮೃತ ಗೋಧಿ, ತುಸು ಬೆಳ್ಳಗಿರ್ತತಿ. ಮತ್ತೊಂದು, ಕೆಂಪ ಗೋಧಿ; ಹೆಸರ ಹೇಳುವಂಗ ಇದು ತುಸು ಕೆಂಪಗ ಇರ್ತತಿ. ನಾವು ಕೆಂಪ ಗೋಧಿ ಉಪ್ಪಿಟ್ಟ ಹೆಚ್ಚ ಉಪಯೋಗ್ಸದು. ಕೆಂಪ ರವಾ ತುಸು ತುಪ್ಪಾ ಹಾಕಿ ಹುರುದ ಹಸೆಮೆಣಸಿನಕಾಯಿ, ಉಳ್ಳಾಗಡ್ಡಿ, ಕರಿಬೇವ, ಕೊತಂಬ್ರಿ, ಟಮಾಟಿ ಹಣ್ಣ ಹಾಕಿ ಒಗ್ಗರಣಿ ಮಾಡಿದ್ರ, ಕೆಂಪಗೋಧಿ ಉಪ್ಪಿಟ್ಟಿನ ಮುಂದ ಬ್ಯಾರೆ ಯಾ ನಾಷ್ಟಾದ ಐಟಮ್ಮೂ ನಿಲ್ಲಂಗಿಲ್ಲ. ನಾವು ಇದಕ್ ಉಪ್ಪಿಟ್ಟ ಅನ್ನೂದಕ್ಕಿಂತ ಕಾಂಕ್ರೀಟ್ ಅಂದಿದ್ದ ಹೆಚಗಿ. ಮುಂಜಾನೆ ಹತ್ತಕ್ಕ ತಿಂದರ ಯಾಡ ಗಂಟೆಮಟ ಅಡಗಿಮನೆ ಕಡೆ ಹೊಳ್ಳಿ ನೋಡಂಗಿಲ್ಲ. ಹಂಗ ಕಾಂಕ್ರೀಟ ಕುಂತಂಗ ಕುಂತು ಹೊಟ್ಟಿ ಕಾಯತಾಯದು.

Image
ಗೋಧಿ ಹಲ್ವಾ

ಈ ರವಾ ಬದಲಿ ಶಾವಿಗೆ ಉಪ್ಪಿಟ್ಟ ಮಾಡ್ತೇವಿ. ಸೌತಿಬೀಜದ ಉಪ್ಪಿಟ್ಟ, ಬಾಣತೇರು, ಮೈನೆರೆದ ಹುಡ್ಗ್ಯಾರ ಇದ್ದರ ಮುದ್ದಾಮ ಶಾವಿಗಿ ಉಪ್ಪಿಟ್ಟ ಮತ್ತ ಸೋತಿಬೀಜದ ಉಪ್ಪಿಟ್ಟ ಮಾಡಿಕೊಡ್ತೇವಿ. ಮ್ಯಾಲೆ ಒಂದ ಚಮಚೆ ತುಪ್ಪಾ ಹಾಕೂದ ಮರೆಂಗಿಲ್ಲಾ ಮತ್. ದಿಢೀರ್ ಅಂತ ಅಳಿಯಾ ಬಂದ್ರ ಶಾವಿಗಿ ಬಸದ ಬೆಲ್ಲಾ-ಹಾಲು ಹಾಕಿಟ್ರ ಮುಗೀತ್ ಸ್ವೀಟ್ ಅಡಗಿ! ಸಲಪ ಟಾಯಮ್ಮ ಇದ್ರ ಕೀರ, ಸೋತಿ ಬೀಜದ ಹುಗ್ಗಿ ಪಿಕ್ಸ್.

ಈ ಗೋಧಿ ಕೂಳು ಬಾಳ ಗಟ್ಟಿ. ಇದನ್ನ ತಿನ್ನರ ಗಟ್ಟಿ ಇರಬಕ ಯಾಕಂದ್ರ, ಡೈಜೆಷನ್ ಸಿಸ್ಟಮ್ಮು ಚಲೋ ಇದ್ದರಷ್ಟ ಮನಷಾ ಈ ಕೂಳಿಗೆ ತಡಿತಾನ. ಇಲ್ಲಂದ್ರ, ಕಠಿಣಾಕ್ಕತಿ ಪರಿಸ್ಥಿತಿ. ಜತಿಗೆ ಉಂಡದ್ದು ಕರಗಿಸುವಷ್ಟು ದುಡಿಬಕು, ಬೆವರ ಇಳಸಬಕು, ಸಾಕಷ್ಟ ನೀರನೂ ಕುಡಿಬಕು. ಇದೆಲ್ಲಾ ಸಾಧ್ಯಾಗುದು ಎರೆಸೀಮಿ‌ ಕಡೆ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಬಂಡೆಗಲ್ಲ ಮೇಲೆ ಸುಮ್ಮನೆ ಕಣ್ಮುಚ್ಕಂಡಿ ಕೂತ್ಕಂಡ್ರೂ ಸ್ವರ್ಗನೇಯಾ ನಮ್ಮೂರು

ಕಸುವಿನ ಕೂಳು ಅಂತನ ಕರೀತಾರ ಗೋಧಿ ಕೂಳಿಗೆ. ಚಳಿಗೆ ಬೆಳಿಯೂ ಬೆಳಿ ಇದು. ಭಾರತ ಹುಣವಿ ಬೆಳಕನ್ಯಾಗ ತೆನೆ ಕೊಯ್ದು ಒಕ್ಕಲಿ ಮಾಡತಾರ. ಗೋಧಿ ತೆನಿ ಹಾಲ್ದೆನಿ ಬಂದಾಗ, ಒಂದಿಷ್ಟು ಮನೀಗೆ ತಂದು, ಉಪ್ಪ ಹಾಕಿ ಕುದಿಸಿ, ಒಳ್ಳಾಗ ಒಣಕಿಲೆ ಕುಟ್ಟಿ, ಮರದಾಗ ಕೇರಿ 'ಗೋಧಿ ಉಮಿಗಿ' ಅಂತ ಮಾಡ್ತಾರಾ; ತಿನ್ನಾಕ ಬಾಯಾಗ ಕಚಕಚ ಅಂತ ಬಾಳ ಮಸ್ತ್ ಇರ್ತತಿ. ಎಳೆ ಗೋಧಿಹಾಲು ಹದಾ ಕುದ್ದು ಉಪ್ಪು ಸಮೇತ ಒಂದ ವಿಶೇಷ ರುಚಿ ನಾಲಿಗಿಗೆ ಇನ್ನೂ ನೆನಪೈತಿ. 'ಹಸೆ ಉಮಗಿ' ಎಲ್ಲಾ ಟಾಯಮ್ಮಾದಾಗ ಮಾಡಾಕಾಗಂಗಿಲ್ಲ. ಗೋಧಿ ಎಳೆವು ಇರಬಾರದು, ಬಲತಿರಬಾರದು. ಈ ಹುಣಸಿ ಹಣ್ಣು ಕಿಟ್ಟಣ್ಣ ಆಗತೈತಲ್ಲ ಸೇಮ್‌ ಹಂಗ ಆ ಎರಡು ಗೆರೆಯ ನಡುವಿನ ಸೀಸನ್ನಿನ್ಯಾಗ ಉಮಗಿ ತೆನಿ ತರ್ಬಕು.

Image
ಗೋಧಿ ಅನ್ನ

ಅವಾಗೆಲ್ಲ ಬ್ಯಾಸಿಗಿ ಬಂದ್ರ ಬಾಗಲಾದಾಗ ನಾಕು ಹೊಸೆಯು ಮಣಿ ಇಟ್ಟು ಶ್ಯಾವಿಗಿ ಹೊಸೆತಿದ್ರು. ಚಿಗವ್ವ, "ಇವತ್ತ ನಿಮವು, ಮುಂದಿನ ವಾರಕ ನಮವು," ಅಂದು ಓಣ್ಯಾನರೆಲ್ಲ ಹಂಚಕೊಂಡ ಶ್ಯಾವಿಗೆ ಹೊಸಕೊಂತಿದ್ರು. ಮಣಿಮ್ಯಾಲ ಒಬ್ರು, ಶ್ಯಾವಿಗೆ ಕೋಲಿಗೆ ಒಬ್ರು ಕೂಂತ್ರ, ಬಳ-ಬಳ ಬಳ್ಳಿ ಹಂಗ ಶ್ಯಾವಿಗೆ ಇಳಿಯುದನ್ನ ನೋಡುದು ಚೆಂದ. ಕೋಲು ತುಂಬಿದ ಕೂಡಲೇ ಆ ಕಡೆ ಒಬ್ರು ಈ ಕಡೆ ಒಬ್ರು ಹಿಡದು ಒಣಗಾಕ ಇಟ್ಟ ಬರೂದು ಬಾಳ ಮೋಜಿನ ಕೆಲಸ ನಮಗ. ಮಣಿ ಕಾಲಿ‌ ಇದ್ದರ ಬರ್ರಂತ ಹತ್ತಿ ಕುಂತು ಹೆಬ್ಬಾವಿನಂತ ಶ್ಯಾವಿಗಿ‌ ಹೊಸ್ತು ಬೈಯ್ಯಿಸಿಕೊಂತಿದ್ದದ್ದು ಈಗ ನೆನಪಷ್ಟ. ಶ್ಯಾವಿಗೆ ಮಣಿ ಈಗ ನ್ಯಾಗೊಂದಿ ಬಿಟ್ಟು ಇಳಿಯೂದ ಅಪರೂಪಾಗೇತಿ.

ಪುಣ್ಯಕ 'ಗೋಧಿ ಹುಗ್ಗಿ' ಒಂದ ಎಲ್ಲಾ ಕಡೆ ಫೇಮಸ್ ಆಗಿ, ಗೋಧಿ ಪಾಯಸಂತ ಹೊಸಾ ಹೆಸರ ಪಡಕೊಂಡ, ಬೆಂಗಳೂರ‌-ಮಂಗಳೂರ ಕಡೆದೋರ ಸೈತ ತಿನ್ನಾಕತ್ತಾರ. ಆದರೂ ನಮ್ಮ ಕಡೆ ಮಾಡಿದ ರುಚಿ ಬರಂಗಿಲ್ಲ ಬಿಡ್ರಿ. ಒಡಗಟಗಿ ಇಟ್ಟ ತಪಾಲ್ಯಾಗ ಕುದಿಸಿದ ಗೋಧಿ ಹುಗ್ಗಿ ಮಾರನೇ ದಿನಕ ಪೇಢೆ-ಪೇಢೆ ಆದಂಗ ಆಗಿರ್ತತಿ.

Image
ಗೋಧಿ ದೋಸೆ

ಜಾತ್ರಿ, ಗಣಪ್ಪನ ಹಬ್ಬ, ಎಬ್ಬಸು ಕಾರೇವು, ಸೀರಿ ಮಾಡೂ ಕಾರೇ ಹಿಂಗ ಏನ ವಿಶೇಷ ಕಾರ್ಯಕ್ರಮ ಇದ್ರು ಸೈತ ಗೋಧಿ ಹುಗ್ಗಿ ಸಾಮಾನ್ಯ ಸಿಹಿ ಅಡಗಿ ನಮ ಕಡೆ. ಈ ಭಾಗದ ಮಠದಾಗ ಅನ್ನ ದಾಸೋಹ ಇದ್ದರ ಗೋಧಿ ಹುಗ್ಗಿ-ಮುಳಗಾಯಿ ಪಲ್ಯ ಮುಖ್ಯ ಅಡಗಿ.

ಮಕ್ಕಳ ಕೈಯ್ಯಾಗ ಕೆಂಪು ಗೋಧಿ ಚಪಾತಿಗೆ ತುಪ್ಪಾ ಸವರಿ ಬೆಲ್ಲದ ಪುಡಿ ಹಾಕಿ ಕೊಟ್ರ ಆಡಕೊಂತ ತಿಂದ ಮುಗಸ್ತವ. ಗೋಧಿ ಕುಳಿನ ಮಹಿಮಾ ಹೇಳಕೊಂತ ಹೋದ್ರ‌ ಮುಗಿಂಗಿಲ್ಲ ಬಿಡ್ರಿ ಉಂಡ ನೋಡ್ರಿ.

ನಿಮಗೆ ಏನು ಅನ್ನಿಸ್ತು?
0 ವೋಟ್