ದೇಸಿ ನುಡಿಗಟ್ಟು - ಬೀದರ್ ಸೀಮೆ | 'ನಮ್ಮವ್ವ ಹೋದಮ್ಯಾಲ ಅಕಿನ್ ಸಂಗಟೇ ಎಲ್ಲ ಹೋಯ್ತ್ ನೋಡು'

ಇಬ್ಬರು ಎಡ್ಡೆಡ್ ಹನಿ ಕಣ್ಣೀರ್ ಹಾಕಿ, ಒಬ್ಬರಿಗೊಬ್ಬುರು, "ಚಿಂತಿ ಮಾಡಬ್ಯಾಡ ಚಂದಿರು," ಅಂದೇವು. "ನಡಿ ಮತ್ ಮನಿಗಿ..." ಅಂತ ಅಕಿ ನನಗ, ನಾ ಅಕಿಗಿ ಕರ್ದೇವು. "ಈಗ ಭ್ಯಾಡ, ಮತ್ಯಾವರಗರ ಭೇಟಿ ಆಗಾಮಿ," ಅಂತ್ಹೇಳಿ ಫೋನ್ ನಂಬರ್ ಇಸ್ಗೊಂಡು ಮನೀಗಿ ಹೋಗ್ಲಾಕ ಆಟೋ ಹಿಡ್ಕೊಂಡು ಹೋದೇವ್ ಖರೆ, ಯಾಕೋ ಏನೋ ಎದಿ ಒಜ್ಜಿ ಆಯ್ತು

"ಏಯ್ ಪಾರು ಆರಾಮಾ? ಗೊತ್ತಹಿಡ್ದಿ ?" ಅಂತ ಸುಧಾ ಹಾದ್ಯಾಗ ಸಿಕ್ಕು ಕೇಳ್ದುಳು.

ಅದಕ್ ನಾ, "ಅರೇ ಸುಧಾ... ಹ್ಯಾಂಗದ್ದಿ? ನಾ ಆರಾಮ್ ನೋಡು. ಮಕ್ಕಳೆಲ್ಲ ಆರಾಮ ಹರಾ? ಏನೇನ್ ಮಾಡ್ಲತರ? ಯವ್ವಾ... ಏಸ್ ವರ್ಷದ್ ಬಾದ್ ಭೇಟಿ ಆಯ್ತಲ! ಮತ್ತೇನ್ ನಡ್ದುದ?" ಅಂತ ಉಸುರ್ ಬಿಡಲ್ದಪ್ಲೆ ಕೇಳ್ದಕಿಗಿ.

ಅಕಿ ಮಾರಿ ಸಪ್ಪುಗ್ ಮಾಡ್ಕೊಂಡು, "ಏನ್ ಛಂದ್ ನೋಡು... ಮಾಡಿ-ಮಾಡಿ ಹಣ್ಣಾಗಿ ಹೋಯ್ತು ಜಿವಾ. ಇಗೋತ ಯಾರ್ಬಿ ಕೇಳಲ್ಲ ಹೊಂಟಾರ. ಅಕ್ಕ-ತಂಗಿ, ಅಣ್ತಮ್ದೇರಂತ ಬಡ್ದಾಡಿ ಸತ್ತ. ಹಮೇಶ್ಯಾ ಬರೋರು ಹೋಗೋರು ಇದ್ದಿಂದು ಇದ್ದಪ್ಲೇನೆ ಇರ್ತಿತ್ತು. ದವಾಖಾನಿ ಅದು ಇದು ಅಂತ ಬಂದಾಗ ಖಡೀ ನಿಂತು ಅಡ್ಗಿ ಮಾಡ್ತೀದ. ಓದ್ಲಾಕ್ ಬರಿಲಾಕ್ ಅಂತ ನನ್ನ ಬಲ್ಲೇ ಇರ್ತೀರು..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಸೀಮೆ | ತಂಗಿ ಅಮ್ಮಾಯುನುಕ ಕೊಡದೆ ಉಳಿಸಿಕೊಂಡ ನಾಲ್ಹಾಣ

"...ಪಾಪ ನನಗಂಡ ಏಟ್ ಗರೀಬ್ ಇತ್ತ್ ಅಂಬಾದು ನಿನಗರ ಗೊತ್ತೇ ಅದಾ. ದೇವರಂತ ಗಂಡುಗ 'ಉಂಡೇ? ಉಪ್ಪಾಸಿದ್ದೆ?' ಅಂತ ಒಂದೀನ ಕೇಳಿಲ್ಲ ನಾ. ಅವರ್ಬಿ ಯಗೋತ್ಬಿ ಮನಸ್ ಸಣ್ಣುದ್ ಮಾಡ್ಕೋಂಡಿಲ್ ನೋಡು. ನನ್ ಖುಷಿದಾಗೇ ಅವರ್ ಖುಷಿ ಅಂತೀರು. ಎಲ್ಲರೂ ದೊಡ್ಡೋರ್ ಆಗಾತನ ನನ್ಬಲ್ಲೇ ಇದ್ದೋರು. ಈಗ ಯಾರ್ದವರು ನೌಕರಿ ಚಾಕರಿ ಹಿಡ್ದಾರ. ಒಂದಿನರಾ ಹ್ಯಾಂಗಿದ್ದಿ ಎಕ್ಕಾ ಅಂತ ಕೇಳಲ್ಲ ನೋಡು. ಎಲ್ಲರಿಗಿ ಫಂಕಾ ಬಂದುವು. ಭುರ್ ಅಂತ ಹಾರಿ ಹೋದುರ್. ಇವರಿಗಿ ಮಾಡದ್ರಾಗ ಒಂದು ರೂಪಾಯಿ ಹಿಂದ್ ಹಾಕಿಲ್ಲ ನಾ. ಈಗ ಅವರೇ ಹಂಗ್ಸಿ ಮಾತಾಡ್ತಾರ ಇದರಬಲ್ಲಿ ಏನದಾ, ಬಂಗಾರಿಲ್ಲ ಬೆಳ್ಳಿಯಿಲ್ಲಾ ಅಂತಾರ. ಯಾವುದಕ್ ಬಿ ಕಿಸಮತ್ ಬೇಕ್ ನೋಡು. ಮಾಡಾದು ಅನ್ಸಕೋಮಾದು ನನ್ ಕಿಸ್ಮತ್‌ದಾಗ ಬರ್ಕೋಂಡು ಬಂದಿದ...."

"...ಅವ್ವ-ಅಪ್ಪ ಹೋದ್ ಮ್ಯಾಲ ತವರ್ ಮನಿ ಅಂಬಾದೆ ದೂರಾಯ್ತು. ಪಂಚಮಿ ಹಬ್ಬಕ್ ಬಿ ಒಂದು ಕುಬ್ಸಾ ಕಳ್ಸಲ್ಲ. ಏನಂದುರ್ ಬಿ ಈಗಿನ ಮಂದಿ ಬಲ್ಲಿ ಕಳ್ಕಳಿ ಅಂಬಾದೇ ಉಳ್ದಿಲ್ ನೋಡು ಪಾರು. ನಾವು ಸಣ್ಣೋರಿದ್ದಾಗ ಏಟ್ ಚಂದ್ ಇತ್ತೇ! ಮಂದಿ ಕಳ್ಳ ಕಾಳ್ಜಿ ಅಂತಿತ್ತು. ಈಗಿನ ಮಂದಿಗಿ ಅದು ಏನ್ಬಿ ಇಲ್ಲ ನೋಡೆ..." ಅಂತಾ ಉಸುರು ಬಿಡಲ್ದಪ್ಲೆ ಅಕಿನ ಹೊಟ್ಯಾಗಿದ್ದುದೆಲ್ಲ ನನ್ನ್ ಮುಂದ ಕಾರ್ದುಳು.

Image
ಕಲಾಕೃತಿ ಕೃಪೆ: ಐಶ್ವರ್ಯಾ

ಅದಕ್ ನಾಬಿ, "ಹೊಯಿಂದೇ ಸುಧಾ... ಈಗಿನೋರ್ ಬಲ್ಲಿ ಸಣ್ಣೋರು-ದೊಡ್ಡೋರು ಅಂಬಾದೇ ಇಲ್ಲ. ಯಾರ್ ಯಾರಿಗ್ಬಿ ಕಿಮ್ಮತ್ ಕುಡಾಲ್ ಹೊಂಟಾರ. ಮತ್ಲಬಿ ಮಂದಿ ಆಗ್ಯಾವ. ಧಂದ್ಯಾ ಇರಾತನ್ಕ ಏಟ್ ನೆವರ್ಸತಾವಂತೀ ಕೇಳ್‌ಬ್ಯಾಡ.‌ ಕಾಲ್ ಬಿದ್ದು ಕಾಲುಂಗುರ್ ಕಸ್ಕೊಮಾ ಮಂದಿನೇ ಹೆಚ್ಚ ಆಗ್ಯಾವ್ ನೋಡು. ಮಾಡಿದ ಉಪ್ಕಾರ ಯಾರ್ಬಿ ನೆಪ್ಪ ಇಡಾಲ್ ಹೊಂಟಾವೆ. ಇಕಾ ಅವತರ್ದಬಿ ತಪ್ಪಿಲ್ಲೇ ಸುಧಾ. ಮನ್ಯಾಗ ಹಿರೇರಂಬಾದೇ ಇರಲ್ಹೊಂಟಾರ..."

"...ಅವಾಗ ನಮ್ಮ ಆಯಿ, ಮುತ್ಯಾ, ಸ್ವಾದರತ್ತಿ, ಕಾಕಾ, ಬಾಬಾಗೋಳು ಎಲ್ಲಾರೂ ಇರ್ತಿರು. ಹಿಂದ್ ಮಾಡಿದ ಉಪ್ಕಾರ ನೆನಪಿಡ್ತೀರು. ಮನ್ಯಾಗ ನಮ್ಮುಂದೆಲ್ಲ ಅಂಥಾವೇ ಮಾತಾಡ್ತೀರು. ಕಥಿಗೋಳು ಹೇಳ್ತೀರು. ನಮ್ ತಲ್ಯಾಗ ಉಳಿತಿತ್ತು. ಅವ್ರದ್ ನೋಡಿ ಕಲಿತೀದೇವು. ಮುಂಜಾನಿಡ್ದು ಸಂಜೀತನ  ಕಾಲಾಗಿಂದು ಮುಳ್ಳ ತೆಗ್ದೂರ್ಬಿ ನೆಂಪ್ ಇಡ್ಬೇಕು ಅಂತಿರು. ಹಿಂಗಾಗಿ ನಮಂಬಲ್ಲಿ ಥೋಡೆ ಏನಾರ ಉಳಿತು. ಈಗಿನೋರ್ ಬಲ್ಲಿ ಏನದ ಅಂತಿ... ಏನ್ಬಿ ಇಲ್ಲ. ಅದೊಂದು ಡಿಗ್ರಿ ಸರ್ಟಿಫಿಕೇಟ್ ಹಿಡ್ಕೊಂಡು ಓಡಾಡ್ತಾವ್; ಅದಕ್ ಬಿಟ್ಟುರಾ ಏನ್ ಮಣ್ಣಬಿ ಇಲ್ಲ ಅವತರ್ ಬಲ್ಲಿ..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಬೆಟ್ಟದ ಒರಗಿಂದ ಒಸರಿದ ಚೊಕ್ಕ ನೀರಲ್ಲಿ ಬಾವಿಗೆ ಬಿದ್ದ ಸೂಜಿನೂ ಕಾಣ್ತದೆ!

"...ಒಂದ್ ಮನ್ಯಾಗ್ ಗಂಡಾ-ಹೆಂಡ್ತಿ ಒಂದಿಲ್ಲ ಎಡ್ ಮಕ್ಕುಳು - ಈಟೇ ಸಂಸಾರ ಆಗಿ ಯಾರಿಗ್ಯಾರ್ ಬುದ್ಧಿ ಹೇಳೋರಿಲ್ಲ ಕೇಳೋರಿಲ್ಲ ಅಂದಪ್ಲೇ ಆಗ್ಯಾದ. ಅವ್ವಾ ಅಪ್ಪಗ ಹೊರಾಗ ಹಾಕ್ಲತಾವ. ಅಕ್ಕ ತಂಗೇರರ ಬಿಡು; ಶೋಕಿಗಿ ನಾಯಿ ಸಾಕ್ಲತಾವ. ತಾಯಿಗಿಂತ ನಾಯಿ ಮ್ಯಾಲೇ ಜಿವಾ ಅಂದಪ್ಲೇನೆ ಮಾಡ್ತವ. ನೀ ಎಲ್ಲರೀಗಿ ಮಾಡಾದಿತ್ತು ಮಾಡ್ದಿ. ಅವರ್ ನೆಪ್ಪ ಇಡ್ಲಿ ಬಿಡ್ಲಿ ಮನ್ಸಿಗಿ ಹಚ್ಕೊಬ್ಯಾಡ. ನನಗರ ಏನ್ ಕರಿತಾವಂತಿ? ನಮ್ಮವ್ವ ಇರಾತನ್ಕ ಕರಿತೀಳು; ಅಕಿ ಹೋದಮ್ಯಾಲ ಅಕಿನ್ ಸಂಗಟೇ ಎಲ್ಲ ಹೋಯ್ತ್ ನೋಡು..." ಅಂತಂದ ನನ್ ಗಂಟಲ್ ಬಿಗ್ದು ಕಣ್ತುಂಬಿ ಬಂದುವು. ಅಕಿ ನನಗ, ನಾ ಅಕೀಗಿ ಸಮಧಾನ ಹೇಳ್ಕೋಂಡೇವು.

ಇಬ್ಬರು ಎಡ್ಡೆಡ್ ಹನಿ ಕಣ್ಣೀರ್ ಹಾಕಿ, ಒಬ್ಬರಿಗೊಬ್ಬುರು, "ಚಿಂತಿ ಮಾಡಬ್ಯಾಡ ಚಂದಿರು," ಅಂದೇವು. "ನಡಿ ಮತ್ ಮನಿಗಿ..." ಅಂತ ಅಕಿ ನನಗ, ನಾ ಅಕಿಗಿ ಕರ್ದೇವು. "ಈಗ ಭ್ಯಾಡ, ಮತ್ಯಾವರಗರ ಭೇಟಿ ಆಗಾಮಿ," ಅಂತ್ಹೇಳಿ ಫೋನ್ ನಂಬರ್ ಇಸ್ಗೊಂಡು ಯಾರ್ದವರ್ ಮನೀಗಿ ಹೋಗ್ಲಾಕ ಆಟೋ ಹಿಡ್ಕೊಂಡು ಹೋದೇವ್ ಖರೆ, ಯಾಕೋ ಏನೋ ಎದಿ ಒಜ್ಜಿ ಆಯ್ತು. ತವರಮನಿ, ನಾವಾಡಿದ ಅಂಗುಳ ಎಲ್ಲಾ ನೆಪ್ಪಾಗಿ ಅಳು ಬರ್ಲತೀತು. ಆಟೋದವ್, "ಮೇಡಂಮ್ಮೋರೆ, ಅಂಬೇಡ್ಕರ್ ಚೌಕ್ ಬಂತು, ಇಳಿರಿ," ಅಂದುನು. ನಾ ಘಬ್ರಾಸಿ ಕೆಳಗಿಳ್ದು, ಅವನಿಗಿ ರೊಕ್ಕ ಕೊಟ್ಟು ಮನಿ ಕಡಿಗಿ ಹೆಜ್ಜಿ ಹಾಕ್ದ.

ಮುಖ್ಯ ಚಿತ್ರ: ಸಹ್ಯಾದ್ರಿ ನಾಗರಾಜ್
ನಿಮಗೆ ಏನು ಅನ್ನಿಸ್ತು?
4 ವೋಟ್