ದೇಸಿ ನುಡಿಗಟ್ಟು - ಕೊರಟಗೆರೆ ಸೀಮೆ | ಮುದ್ದೆ ನೋಡುದ್ರೆ ಈಟೀಟೇ ದಪ್ಪ, ಎರಡೇ ತುತ್ತಿಗೆ ನುಂಗಂಗಿದ್ವು!

"ಓಹೋಹೋ... ಏನ್ಲಾ ಈ ಪಾಟಿ ಅದ್ದೂರೆಗೆ ಮಾಡವ್ರೆ," ಎಂದ ಈರ್ಗಾಮ. "ಊಕಣ್ಲಾ... ಬೋ ವೈನಾಗೈತೆ," ಎಂದ ಪಿಳ್ ಕಾವಲ್ಲಿ. ಯಾಕಂದ್ರೆ, ನೆಂಟ್ರು ಮನೆವ್ರು ಶಾಮಿಯಾನ ಹಾಕ್ಸಿ ಬಟ್ರುನ ಕರ್ಸಿದ್ರು. ಊಟಕ್ ಕೂಕಂಡ್ರು. ಮೊದ್ಲಿಗೆ ಅಡಿಕೆ ಎಲೆಯಿಂದ ತಯಾರಿಸಿದ ಎಲೆ, ಬಟ್ಟಲು ಕೊಟ್ರು. ಪಿಳ್ಳ ಹೇಳಿದ; "ಇಲ್ ನೋಡ್ಲ ಈರ, ಸುಳ್ ಪಟ್ಟೆಯಲೆ ಯಂಗ್ ಗೂಂಡೂರ್ಕೆ ಐತೆ!"

ಪ್ರತಿ ವರ್ಷದಂಗೆ ಈ ವರ್ಷನು ಆಸಾಡದಾಗೆ ಕೊರಟ್ಗೆರೆ ಕೋಟೆ ಮಾರಮ್ಮನ ಪರ್ಸೆ ಸಾಗ್ತು. ಕೋಟೆ ನಾಯಕ್ರು ತಮ್ಮ ನೆಂಟ್ರು ನಿಷ್ಟರಿಗೆಲ್ಲಾ ಮಾರಿಪರ್ಸೆಗೆ ಹೇಳುದ್ರು. ಅಕ್ಕಿರಾಂಪುರ ಸಂತೆಗೋಗಿ ವೈನಾಗಿರೋ ಎರಡ್ ಮೇಕೆವಾತಗಳ್ನ ತಂದಿದ್ದು ಆಯ್ತು. ಈ ವರ್ಷ ಹಿರೇ ಮೈಲಾರದಾಗೆ ಮಳೆ ಸ್ಯಾನೆ ಅಂತ ಹೇಳತೆ, ಇಲ್ಲಿ ಗುಪ್ಪಟ್ಣದ ದೊಡ್ಡಮ್ಮ ಸಂತೃಪ್ಪಿ ಮಳೆ ಅಮ್ತ ಪಟ್ಟ ಹೇಳಿತ್ತು. ಇದ್ನೆಲ್ಲಾ ಯೋಚ್ನೆ ಮಾಡ್ದ ತಳವಾರ ನಾಯ್ಕ ಮರ್ಕಾವಲ್ಲಿ ಗಟ್ಟಿ ನಿರ್ಧಾರ ಮಾಡಿದ್ದ. ವರ್ಷೋರ್ಷ ಯಂಗೋ ಕತೆ ಹಾಕಿದ್ದಾಯ್ತು, ಈ ಸತಿ ಮಳೆ ಬಂದ್ರೆ ಕೆಲ್ಸ ಕೆಡ್ತತೆ. ಅದ್ಕೆ ಶಾಮಿಯಾನ ಹಾಕ್ಸಿ, ಬಂದ ಬಳಗಕ್ಕೆ ತೊಂದರೆಯಾಗದಂತೆ ವ್ಯವಸ್ತೆ ಮಾಡುವ ಯೋಜನೆ ಮಾಡಿದ.

ಇತ್ತ ಗುಪ್ಪಟ್ಣದಾಗಿದ್ದ ಮರ್ಕಾವಲ್ಲಿ ನೆಂಟ್ರಾದ ಪಿಳ್ಕಾವಲ್ಲಿ ಮತ್ತು ಈರ್ಗಾಮ ಬಾಡು ಇಟ್ಟಿನ ದಿನ ವತಾರೆನೆ ಎದ್ದು, ಸ್ಯಾನುಭೋಗ್ರು ದಿನ್ನೆ ಹೊಲದಾಗೆ ಕುಂಟೆ ಹೊಡ್ಯೋಕೆ ಹೋದ್ರು. ಅರ್ತೆ ಹೊಡಿತಾ-ಹೊಡಿತಾ, "ಲೇ ಪಿಳ್ಳ, ಕೊರಟ್ಗೆರೆಗೆ ಬತ್ಯನ್ಲ ಪರ್ಸೆಗೆ?" ಅಂದ ಈರ್ಗಾಮ. "ಊಕಣ್ಲ... ಮರ್ಕಾವಲ್ಲಿ ಹೇಳೋಗವ್ನೆ, ಬತ್ತೀನಿ," ಅಂದ. "ಅಂಗಾರೆ, ವಾಣಿ ಬಸ್ಸು ಮ್ಯಾಗಡಿಕೆ (ತೋವಿನಕೆರೆ ಕಡೆಗೆ) ಹೋಗೋವಾಗ ಊಟೆ ಬಿಟ್ಟು ದನನ ಕನ್ನಪ್ಪನ ಗುಟ್ಟನಾಗೆ ಕಟ್ಟಿ ಹೋಗನ," ಅಂತ ಮಾತಾಡ್ಕಂಡ್ರು.

ಈ ನುಡಿಗಟ್ಟು ಓದಿದ್ದೀರಾ?: ಬೀದರ್ ಸೀಮೆ | 'ನಮ್ಮವ್ವ ಹೋದಮ್ಯಾಲ ಅಕಿನ್ ಸಂಗಟೇ ಎಲ್ಲ ಹೋಯ್ತ್ ನೋಡು'

ದೊಡ್ ತಾಕು (ಜಮೀನಿನ ದೊಡ್ಡದಾದ ಒಂದು ಭಾಗ) ಅರಗಿದ್ದು ಮುಗಿತು ಬರಕದ ಗೇಟ್ನಾಗೆ 'ಲ್ಲಿಲ್ಲಿಲ್ಲಿಪ್ಪಿ... ಲ್ಲಿಲ್ಲಿಲ್ಲಿ... ಲ್ಲಿಲ್ಲಿಲ್ಲಿಪ್ಪಿ... ಲ್ಲಿಲ್ಲಿಲ್ಲಿ...' ಎಂಬ ಹಾರನ್ ಮಾಡುತ್ತ ಮ್ಯಾಗಡೆಕೆ ಹೋಗ್ತಿರದು ಕಾಣುಸ್ತು. ಇವರಿಬ್ರುನು ದನನ ಊಟೆ ಬಿಟ್ಟು ಕನ್ನಪ್ಪನ ಗುಟ್ಟೆನಾಗೇ ಕಟ್ಟಿ, ಜೇವಿನಗುಂಡಿ ಹಳ್ಳದಾಗೇ ಕೈಕಾಲ್ ತೊಳ್ಕಂಡು, ಹೆಗ್ಲು ಮ್ಯೆಲೆ ಪಂಚೆ ಯಸ್ಕಂಡು ಪ್ಯಾಟೆದಾರಿನಗಾಸಿ ಹೊರಟ್ರು. 

ಶರಣಮ್ಮನ ದಿನ್ನೆತಕೆ ಹೋಗೋವಷ್ಟತ್ಗೆ ನಾಕ್-ನಾಕ್ ಸವರನ್ ಬೀಡಿ ಮುಗ್ದಿದ್ವು. ಗೌಡನಕೆರೆಗಾಸಿ ಸೀದಾ ಕೊರಟ್ಗೆನಾಗೆ ಕಟುಗ್ರು ಬೀದಿಗೆ ಬಂದ್ರು. ಯಪ್ಪಾ-ಯಪ್ಪಾ... ಎಲ್ ನೋಡಿರು ಜನ್ವೋ ಜನ. ರಸ್ತೆ ದಾಟಕಾಗ್ದಂಗೆ ಗಾಡಿ, ಕಾರು ಬರಬರ ಬತ್ತಾವೆ. ಅಂಗಾಡಿಂಗಾಡಿ ಮಾರಮ್ಮನ ಗುಡಿತಾಕೋದ್ರು. ಪರ್ಸೆಗೋದ್ಮೇಲೆ ಪೂಜೆ ಮಾಡುಸ್ದಿದ್ರು ಕೊನೇಪಕ್ಷ ಕೈಯಾರ ಮುಗಿಬೇಕಂತ ನೋಡಿರೆ ಗುಡಿ ಸುತ್ತ ಹಗ್ಗ ಕಟ್ಟವ್ರೆ. ಪೋಲಿಸ್ನೋರು ಸರತಿನಾಗೆ ಜನನ ಕಳುಸ್ತಾವ್ರೆ. ಮಾರಮ್ಮನ ನೋಡೋಕೆ ಹೋದ್ರೆ ಹೊತ್ತಾಗ್ತತೆ ಅಂತೇಳಿ ದೂರ್ದಾಗ ಕೈ ಮುಗ್ದು ನೆಂಟ್ರು ಮನೆತಾವ ಬಂದ್ರು.

Image

"ವತಾರೆ ಒಂದ್ ರೊಟ್ಟಿ ತಿಂದಿದ್ದದ್ದು... ತಲೆ ತಿರುಗ್ದಂಗೆ ಆಯ್ತಾಯ್ತೆ," ಅಂದ ಈರ್ಗಾಮ. "ನೀ ಅದನ್ನಾರ ತಿಂದಿದ್ಯಾ. ನಾ ಏನೂ ತಿಂದಿಲ್ಲ, ಬರೆವಟ್ಟೆಗೆ ಬಂದಿದಿನಿ. ನಾನ್ ಯಂಗ್ ಇರ್ಬೋದು ನೋಡು..." ಅಂದ ಪಿಳ್ ಕಾವಲ್ಲಿ. ಎರಡೂವರ್ ಮೈಲಿ ಬಿಸ್ಲಾಗೆ ನಡ್ದು ಸುಸ್ತಾಗಿ ಬಂದಿದ್ರು.

"ಎಲೈ ಪಿಳ್ಳ, ಈರ್ಗಾಮ... ಈಗ ಬಂದ್ರೆನಲಾ ಬರ್ರಿ, ಬರ್ರಿ," ಅಂತ ನೆಂಟ ಮಾತಾಡುಸ್ದ. ಉಭಯ ಕುಶಲೋಪರಿ ನಡೆಯುತ್ತಿರುವಾಗ, "ಅವಾಂಕಿಂದ ಮಾತಾಡ್ತನೇ ಇದೀರ. ಜಾಗ ಕಾಲಿ ಐತೆ ಕಳ್ಸು, ಮೊದ್ಲು ಉಣ್ಲಿ. ಆಮ್ಯಾಕ್ಕಿಂದ ಮಾತಾಡಿವ್ರಂತೆ," ಅಂತ ಹೇಳುದ್ರು ಜಕ್ಲಮ್ಮ. "ಊಂ... ಅದೂ ಸರಿನೇ. ಮೊದ್ಲು ಉಣ್ ನಡ್ರಿ," ಅಂತ ಕಳುಸ್ದ ನೆಂಟ. ಇದಕ್ಕೆ ಚಾತಕಪಕ್ಷಿಗಳಂತೆ ಕಾದಿದ್ದ ಇಬ್ರೂ ಬಕೇಟೊಳಿಕೆ ಕೈ ಅದ್ದಿ, ಮಾಡಿ ಮ್ಯಾಕೇ ಹೋದ್ರು.

ಈ ನುಡಿಗಟ್ಟು ಓದಿದ್ದೀರಾ?: ದಕ್ಷಿಣ ಕನ್ನಡ ಸೀಮೆ ಹವ್ಯಕ | ಬನಾರಿ ಹೇಳುವ ಕಾಡಿನ ಮಧ್ಯೆ ಇಪ್ಪ ಯಕ್ಷಗಾನ ಕಲಾಸಂಘ

"ಓಹೋಹೋ... ಏನ್ಲಾ ಈ ಪಾಟಿ ಅದ್ದೂರೆಗೆ ಮಾಡವ್ರೆ," ಎಂದ ಈರ್ಗಾಮ. "ಊಕಣ್ಲಾ... ಬೋ ವೈನಾಗೈತೆ," ಎಂದ ಪಿಳ್ ಕಾವಲ್ಲಿ. ಯಾಕಂದ್ರೆ, ನೆಂಟ್ರು ಮನೆವ್ರು ಶಾಮಿಯಾನ ಹಾಕ್ಸಿ ಬಟ್ರುನ ಕರ್ಸಿದ್ರು. ಊಟಕ್ ಕೂಕಂಡ್ರು. ಮೊದ್ಲಿಗೆ ಅಡಿಕೆ ಎಲೆಯಿಂದ ತಯಾರಿಸಿದ ಎಲೆ ಮತ್ತು ಬಟ್ಟಲು ಕೊಟ್ರು. "ಇಲ್ ನೋಡ್ಲ ಈರ, ಸುಳ್ ಪಟ್ಟೆಯಲೆ ಯಂಗ್ ಗೂಂಡೂರ್ಕೆ ಐತೆ!" ಪಿಳ್ಳ ಆಶ್ಚರ್ಯದಿಂದ ಹೇಳಿದ. "ಇನ್ನೂ ಏನೇನ್ ಬತ್ತದೋ ನಾ ಕಾಣೆ!" ಮರುನುಡಿದ ಈರ.

ಬಡಿಸುವರು ಚೋತೆಕಾಯಿ, ಈರುಳ್ಳಿ, ನಿಂಬೆಣ್ಣು ಹಾಕುದ್ರು. ಪಿಳ್ಳ ಪಟಕ್ಕಂತ ಚೋತೆಕಾಯ್ ತಗಂಡ್ ಕಚ್ಕ-ಪಚ್ಕ ಅಂತ ಮೇಕೆ ಸ್ಯಾಡೆಸೋಪ್ ಕಡ್ದಂಗೆ ಕಡಿಯಲು ಸುರುಮಾಡ್ದ. ಮುದ್ದೆ ಇಟ್ರು. ನೋಡುದ್ರೆ ಈಟೀಟೇ ದಪ್ಪ. ಇವ್ರು ಎರಡೇ ತುತ್ತಿಗೆ ನುಂಗಂಗಿದ್ವು. ಅಂತಾವ್ನ ಐದಾರಾದ್ರು ಉಣ್ಣೋರು ಈ ಜಟ್ಟಿಗಳು. ಹುರ್ದಬಾಡು ಹಾಕುದ್ರೂ. ಆಮ್ಯಾಲೆ ಜೊನ್ನೆ ಒಳೆಕೆ ಮಾಂಸದ ಪೀಸ್ ಹಾಕ್ತ ಒಬ್ಬ, ಮತ್ತೋಬ್ಬ ನೀರ್ ಸಾರ್ ಹಾಕ್ತಾ ಬಂದ್ರು.

Image

ಮಾಂಸದೂಟದ ಸಮಯದಲ್ಲಿ ಎಲ್ಲರೂ ನೋಡುವಂತೆಯೆ, ಯಾರ್ಗೆ ಸ್ಯಾನೆ ಬಿದ್ವೋ ಅಂತ ಇವ್ರು ನೋಡ್ತಿರೊವಾಗ್ಲೆನೇ ಈರನಿಗೆ ಒಂದ್ ಸೌಟ್ ತುಂಬಾ ಏಳೆಂಟ್ ಮೆತ್ತೊಂದ್‌ ತುಕ್ಡ, ಒಂದೆರ್ಡು ಬಿಳೆವು ಬಿದ್ವು. ಪಿಳ್ಳನಿಗೆ ಅದೇನ್ ಕತೆನೋ ಏನೋ... ಸೌಟಿನ ತುಂಬ ಒಂದೇ ಒಂದು ನಲ್ಲಿಯಮ್ಕೆನೇ ಕೂಕಂಡಿತ್ತು. ಬಡ್ಸೋನು ಅದನ್ನೆ ಹಾಕ್ದ. ನೋಡಿರೆ, ಜೊನ್ನೆ ತುಂಬ ಅದೊಂದೆ ಐತೆ, ಬ್ಯಾರೆ ಬಿಳೇ ಇಲ್ಲ. ಪಿಳ್ಳನಿಗೆ ಬೋ ನಿರಾಸೆ ಆಯ್ತು. ಆಟೋತ್ಗೆ, "ಸರ್ಯಾದ್ದೆ ಬಿತ್ತು ಕಣ್ಲ ಪಿಳ್ಳ ನಿಂಗೆ," ಅಂತ ಕಿಸುಕ್ಕಂದ ಈರ.

"ಅದ್ಯಾವ ನನ್ಮಗ ಕತ್ರಸಿನೋ ಯಮ್ಕೆನಾ? ಈಟ್ ದಪ್ಪನಾ ಹಾಕದು!" ಅಂತ ಬೇಸರ ತೋರಿಸಿದ ಪಿಳ್ಳ. "ಇದ್ ಬೀಳಿಲಿಲ್ಲ ಅಂದ್ರೆ ಒಂದ್ ನಾಲ್ಕ್ ತುಕ್ಡನಾದ್ರು ಬೀಳವು, ದರಿದ್ರ ನನ್ಮಗಂದು ಇದ್ ಬಂದೆತೆ," ಅಂತ ಮನದಲ್ಲೆ ಗೊಣಗಿದ ಪಿಳ್ಳ. ಪಾಲಿಗ್ ಬಂದದ್ದ್ ಪಂಚಾಮೃತ ಅಂತ ಹೊಟ್ತುಂಬ ನಾಲ್ಕ್-ನಾಲ್ಕ್ ಚೆಂಡ್ ಇಟ್ ಉಂಡು ಕೈ ತೋಳ್ಯಾಕೆದ್ರೆ, ಹೀರೆಬೆಟ್ಟದ ಮ್ಯಾಲೆ ಮಾಡ ಆಗಿತ್ತು. ಈಗ್ಲೋ ಆಗ್ಲೇ ಮಳೆ ಬರಂಗಿತ್ತು. ದನ ಗ್ಯಾಪ್ನುಕ್ಕೆ ಬಂದು ಇಬ್ರುನು ಎಲೆ ಅಡ್ಕೆನ ಬಾಸ್ಕಂಡು ಗುಪ್ಪಟ್ಣದ ದಾರಿ ಹಿಡುದ್ರು.

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್