ದೇಸಿ ನುಡಿಗಟ್ಟು - ಕುಮಟಾ ಸೀಮೆ | 'ನಿನ್ನ ಈ ಊರಿಗೆ ಕೊಟ್ಟರಾ ಅಮ್ಮ?' ಎನ್ನುತ್ತ ಅಂಗ್ಳದಲ್ಲಿ ಕೂತೇಬಿಟ್ಟ...

ಅತ್ತೆ-ಮಾವ ಅವನ ಜೊತಿಗೆ ಪ್ರೀತಿಯಿಂದೇ ಮಾತಾಡ್ತ ಕೂತಿದ್ರೂ, ನಂಗೆ ಒಳ್ಗೊಳಗೆ ಅಳಕು. ನನ್ನ ಅಕ್ಕ, ತಂಗಿ, ಅಪ್ಪ ಎಲ್ರ ಸುದ್ದಿ ತೆಗೀತ, "ಇವರ ಮನೆಲೇ ಎಷ್ಟೋ ಸಲ ಉಂಡಿದ್ದೀನಮ್ಮ..." ಎಂದು ಪದೇಪದೆ ಹೇಳ್ತಿದ್ದರಿಂದ, ಎಷ್ಟು ಹೊತ್ತಿಗೆ ಹೋಗ್ತಾನೋ ಎನ್ನುವಂಗಾಗಿತ್ತು ನಂಗೆ. ಪಾಪ ಉಣ್ಣು ಟೈಮಾಗದೆ, ಆದ್ರೂ, "ಉಂಡ್ಕಂಡಿ ಹೋಗಿ," ಅನ್ನು ಧೈರ್ಯ ಇಲ್ಲ

ಹಿಂದನ ಕಾಲ್ದಲ್ಲಿ ನಮ್ಮ ಮನಿ ಸಣ್ಣದಾದ್ರೂ ದೊಡ್ಡ-ದೊಡ್ಡ ಮಣ್ಣಿನ ಅಂಗ್ಳ - ನಮ್ಮ ಪುಟ್ಟ-ಪುಟ್ಟ ಹೆಜ್ಜಿಂದ ಹಿಡಿದು ಮದುವಿಯಾಗಿ ಆ ಅಂಗ್ಳ ದಾಟುವರ್ಗೂ ಬದ್ಕಿನ ಎಲ್ಲ ಮಜಲಗೂ ಸಾಕ್ಷಿಯಾಗಿರ್ತಿತ್ತು. ಆವಾಗೆಲ್ಲ ಕುರಕುರ ಮಾಮಾಗಳು, ಬಾವಾಜಿಗಳು, ಮಾರಿಯಮ್ಮಗಳು  ಪಿಯಾನೋ ಪೆಟ್ಟಿಗಿ, ತಂಬೂರಿ, ಜೋಳಿಗಿ ತಕಂಡಿ ಮನಿಮನಿಗೆ ಭಿಕ್ಷೆಗೆ ಬತ್ತಿದ್ರು.

Eedina App

ಅವರಲ್ಲಿ ಭಿಕ್ಷೆ ಬೇಡು ಸ್ಥಿತಿ ಕಂಡುಬರ್ದೇ ಏನೋ ಗೌರವ ಅನಸ್ತಿತ್ತು. ನಾವು ಅಷ್ಟೇ ಖುಷಿಂದ ಮತ್ತೆ ಪ್ರೀತಿಂದ ಗೆರಸಿಲೋ ಸಿದ್ದಿಲೋ ಮೊಗದು ಹಾಕಿದಷ್ಟ ಅಕ್ಕಿನಾ ಜೋಳಿಗೆಯೊಡ್ಡಿ ತಕಂಡಿ, ಸ್ವಲ್ಪ ಹೊತ್ತು ನಮ್ಮ ಅಂಗ್ಳದಲ್ಲಿದ್ದ ಚಿಟ್ಟಿ ಮೇಲೆ ಕೂತ್ಕಂಡಿ ಪಂಚತ್ಗಿ ಮಾತಾಡೇ ಹೋತಿದ್ರು.

ಪ್ರತೀ ವರ್ಷ ತಪ್ದೇ ಬರ್ತ್ತಿದ್ದ ಇವ್ರಿಗೆ, ಉಣ್ಣು ಟೈಮಾದ್ರೆ ಕೇಳ್ದೇ ಊಟಕ್ಕೆ ಬಾಳೆಲೆಯಿಡೋ ಪದ್ಧತಿ  ಇತ್ತು. ಉಂಡಾದ ನಂತ್ರ ಅಪ್ಪನ ಪೆಟ್ಟಿಗೆಲ್ಲಿದ್ದ ಎಲೆ, ಅಡ್ಕೆ, ಸುಣ್ಣ ತಕಂಡು ತಿಂದ್ಕಂಡಿ ಸಮಾದಾನ್ದಲ್ಲಿ ಹೊರಟ್ರೆ ನಮ್ಮ ಹರಸಿ ಹೋದಂಗೆ ಅನಿಸ್ತಿತ್ತು.

AV Eye Hospital ad

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ರಾಣೇಬೆನ್ನೂರು ಸೀಮೆ | 'ನೀ ಯೇನ ಅನ್ ಮಾವಾ... ಮೋಸಾ ಮಾಡೋರ್ಗೇ ಭಕ್ತರು ಭಾಳಾ!'

ಹಾಡೋರಾದ್ರೆ ಎರಡ ಎಲಿ-ಅಡ್ಕೆ ಜಾಸ್ತಿ ಕೊಟ್ಟು, ಎರಡ ಪದ್ಯ ಜಾಸ್ತಿ ಹಾಡ್ಸುದಲ್ದೇ, ನಾವು ಸಣ್ಮಕ್ಕಳು ಅವರ ಹಿಂದೆ-ಹಿಂದೆ ಮತ್ತೊಂದಿಷ್ಟ ಮನಿಗೆ ತಿರಗತೇ, ಸಾಕಾದ ಮೇಲೆ ಮನೆ ಕಡೆ ತಿರಗ್ತಿದ್ದೆವು. ಜೊತೆಗೆ...

ಕುರ್ ಕುರ್ ಮಾಮ
ಕೊಂಡದೇವತಾ
ಆದಕಾರಣಾ
ಕುಮಟಿ ನಾರಾಯಣಾ
ಹೊಲನಗದ್ದಿ ಜಟ್ಟಪ್ಪ
ಕಾಗಲಿ ಬೀರ
ಟೆಂವ್ ಟೆಂವ್ ಟೆಂವ್ ಟೆಂವ್...
ಎಂದು ಹಾಡ್ತ ಕುಣೀತ ವಾಪಸ್ ಬರ್ತಿದ್ದೆವು.

ಅಂತೋರಲ್ಲಿ ಕಾಯಂ ಬರೋರಲ್ಲಿ ಬಾವಾಜಿಗಳಿಗೂ, ಕುರುಕುರು ಮಾಮಗಳಿಗೂ ನಮ್ಮ ಕುಟುಂಬದ ಪರಿಚಯನೂ ಚಲೋನೇ ಇರ್ತಿತ್ತು. ಅವ್ರು ಬರುವ ಮೊದಲೇ, "ನಿನ್ನ ಅವ್ರಿಗೆ ಹಿಡದು ಕೊಡ್ತೆ ನೋಡು," ಎಂದು ಹೆದರ್ಸುದು ಸಾಮಾನ್ಯ ಅಗಿರ್ತಿತ್ತು. ಹಂಗೇ ಅವ್ರ ವೇಷಭೂಷಣ ನಮ್ಮಲ್ಲಿ ಸ್ವಲ್ಪ ಹೆದ್ರಿಕಿನೂ ಹುಟ್ಟಿಸ್ತಿತ್ತು‌. ಮಕ್ಕಳನ್ನು ಪ್ರೀತಿಂದ್ಲೇ ಮಾತಾಡಿಸ್ತಿದ್ದ ಅವರ ನಡವಳ್ಕೆನೂ ಚಲೋನೇ ಇರ್ತಿತ್ತು.

ಸಾಂದರ್ಭಿಕ ಚಿತ್ರ

ಅಪ್ಪನ ಮನೆಯಂಗೇ ತುಂಬಿದ ಕುಟುಂಬ ನನ್ನ ಗಂಡನ ಮನಿ. ನನ್ನ ಮದುವೆಯಾಗಿ ಎರಡೇ ತಿಂಗಳಿಗಿರ್ಬೇಕು. ನಾನಿನ್ನೂ ಹೊಂದಕಳ್ಳುವಷ್ಟು ಟೈಮೂ ಆಗಿರಲಿಲ್ಲಾ ಅನ್ನಿ. ಅಲ್ಲಿಯೂ ದೊಡ್ಡನೇ ಆಗಿದ್ದ ಅಂಗ್ಳದಲ್ಲಿ ರಾಶಿ ಹಾಕಿದ್ದ ಮೆಣಸಿನಕಾಯಿ ತೊಟ್ಟು ತೆಗೀತ ಕೂತ್ಕಂಡಿದ್ದೆ. ಮಟಮಟ ಮದ್ಯಾನ ಒಂದು ಗಂಟಿ ಆಗಿರಬೇಕ. ಪ್ರತಿವರ್ಷ ಶಿವರಾತ್ರಿ ಸಮಯಕ್ಕೆ ನನ್ನ ಅಪ್ಪನ ಮನಿಗೆ ತಂಬೂರಿ ಹಿಡ್ಕಂಡಿ ಶಕುನ ಹೇಳೋಕೆ ಬತ್ತಿದ್ದ ಕುರಕುರ ಮಾಮ ಅಲ್ಲಿ ಬಂದವ್ನು, ಅಲ್ಲೇ ಇದ್ದ ನನ್ನ ನೋಡಿ ಕುಸಿಂದ, "ನಿನ್ನ ಈ ಊರಿಗೆ ಕೊಟ್ಟರಾ ಅಮ್ಮ?" ಎಂದು ಲೋಕಾರೂಡಿ ಮಾತಾಡ್ತ ಅಂಗ್ಳದಲ್ಲಿ ಕೂತೇಬಿಟ್ಟ.

ನಮ್ಮ ಅತ್ತೆ-ಮಾವ ಅವನ ಜೊತಿಗೆ ಪ್ರೀತಿಯಿಂದೇ ಮಾತಾಡ್ತ ಕೂತಿದ್ರೂ, ನಂಗೆ ಒಳ್ಗೊಳಗೆ ಅಳಕು. ನನ್ನ ಅಕ್ಕ, ತಂಗಿ, ಅಪ್ಪ ಎಲ್ರ ಸುದ್ದಿ ತೆಗೀತ, "ಇವರ ಮನೆಲೇ ಎಷ್ಟೋ ಸಲ ಉಂಡಿದ್ದೀನಮ್ಮ..." ಎಂದು ಪದೇಪದೆ ಹೇಳ್ತಿದ್ದ ಅಂವ, ಎಷ್ಟು ಹೊತ್ತಿಗೆ ಎದ್ದು ಹೋಗ್ತಾನೋ ಎನ್ನುವಂಗಾಗಿತ್ತು ನಂಗೆ. ಪಾಪ ಉಣ್ಣು ಟೈಮಾಗದೆ... ಅವನು ಉಣ್ಣುಕಾಗೇ ಅಲ್ಲಿ ಕೂತಿದ್ದಂಗೇ ಅನ್ಸಿದ್ರೂ, ಬಾಯ್ಬಿಟ್ಟು, "ಉಂಡ್ಕಂಡಿ ಹೋಗಿ," ಅನ್ನು ಧೈರ್ಯ ಅಂತೂ ನನ್ನ ಪಾಲಿಗೆ ಬಂದಿರ್ಲಿಲ್ಲ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಬೀದರ್ ಸೀಮೆ | 'ನಮ್ಮವ್ವ ಹೋದಮ್ಯಾಲ ಅಕಿನ್ ಸಂಗಟೇ ಎಲ್ಲ ಹೋಯ್ತ್ ನೋಡು'

ಹಂಗೇ ಅರ್ಧ ಗಂಟೆ ಹೋಯ್ತೇನೋ... "ನಾನಿನ್ನು ಬರುತ್ತೇನೆ..." ಎಂದು ತನ್ನ ಜೋಳಿಗೆ ತಂಬೂರಿ ಎರಡೂ ಎತ್ಕಂಡು (ನಂಗೆ 'ಅಯ್ಯೋ ಪಾಪ' ಅನ್ಸಿದರೂ) ಅಬ್ಬ... ಅಂತೂ ಹೊಂಟ ಅಂದಕಳ್ಳು ಹೊತ್ತಿಗೆ, ನಮ್ಮ ಅತ್ತೆ, "ಅಯ್ಯೋ... ಹಾಗೇ ಹೋಗುದ ಬ್ಯಾಡ. ಉಣ್ಣುಕೆ ಹಾಕೇಬಿಡ್ತೆ, ಉಂಡು ಹೋಗಿ..."
ಎಂದು ಗಡಿಬಿಡಿಲಿ ಎದ್ಳು. "ಇಲ್ಲಮ್ಮ... ಇವತ್ತು ಗುರುವಾರ. ಎರಡೂ ಹೊತ್ತು ನೀರು ಬಿಟ್ಟು ಏನನ್ನೂ ಮುಟ್ಟುವುದಿಲ್ಲ," ಅಂದಿ, ನಗ್ಯಾಡ್ತ, ತಂಬೂರಿ ಬೀಸ್ತಾ ಹೊರಟ ಅವನ ಬೆನ್ನನ್ನೇ ನೋಡ್ತ ಸುಮ್ನೆ ಕೂತ್ಕಬಿಟ್ಟಿದ್ದೆ.

ಈಗಂತೂ ಹೊಸಾ ಕಾಲಘಟ್ಟ. ಬದಲಾಗ್ತಿರೋ ಜನರ ಮನಸ್ಥಿತಿ, ನಮ್ಮವ್ರ ನಡುವೆನೇ ಕುಸಿತಿರೋ ನಂಬ್ಕೆ ಎಲ್ಲಾನೂ ನಿಲ್ಸಿದ್ದಷ್ಟೇ ಅಲ್ಲ. ಇಂತಾದ್ದೊಂದ ಕಾಲ ಇತ್ತಾ ಎಂದು ಕೇಳಿಕೊಳ್ಳೋಷ್ಟು ಕಾಲಮಾನ ದಾಟಿ ಬಂದ ಅನ್ಮಾನ ಹುಟ್ಟಿಸ್ಬಿಟ್ಟದೆ.

ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app