ದೇಸಿ ನುಡಿಗಟ್ಟು - ಮಾಲೂರು ಸೀಮೆ | ಕತೆ ಕಮಲಕ್ಕನ ದಾಡಿಸಾಮಿ ಕತೆ

"ನಮ್ಮ ಅರಮನೆಕ ಒಂದ್ಕಿತ ಬಂದು ನಮ್ಮ ಸೇವೆ ಸ್ವೀಕರಿಸಬೇಕು," ಅಂತ ರಾಜನು ಬೇಡಲಾಗಿ, ದಾಡಿಸಾಮಿ ಆಗಲಿ ಅಂತ ದಯಮಾಡಿಸಿದ. ರಾಜನು ಬೆಲೆ-ಬಕ್ತಿ ತೋರಿಸಿ ಅವನಿಗೆ ಬೇಕಾದ ಹಾಗೆ ಸಾಮಾನು ತರಪಿಂಚಿ ನೆಲ್ಲಿ ಸಾಪಾಡು ಮಾಡಿಸಿದ. ಇಬ್ಬರು ಎದಿವಿದ ರಾಜನ ಸಿರ್ಕಿ ಮಕ್ಕಳು ದಾಡಿಸಾಮಿಗೆ ಗಾಳಿ ಸೇವೆ ಮಾಡುತ್ತಿರಲು, ಸಾಮಿಗೆ ಸಾಪಾಡು ಸೇರದಾಯ್ತು

ನಮ್ಮೂರುನಾಗ ಕಮಲಮ್ಮನುಗಳು ಮಸ್ತಾಗಿ ಇದಾರೆ. ಪುರದ ಕಮಲಮ್ಮುನು, ಗಾಣಿಗರ ಕಮಲಮ್ಮುನು, ಶೆಟ್ಟಿಗರ ಬೀದಿ ಕಮಲಮ್ಮುನು... ಹಿಂಗೆ ಲೆಕ್ಕಕ್ಕೆ ತಗಂಡ್ರೆ ಸುಮಾರು ಕಮಲಮ್ಮನುಗಳು ಶಿಗ್ತಾರೆ. ಅದರಾಗು 'ಕತೆ ಕಮಲಮ್ಮನು' ಅಂದ್ರೆ ಎಲ್ರಿಗೂ ನ್ಯಾಸ್ತ.

Eedina App

ಜನಗಳು ಅಂಗೆಯ... ಕಮಲಮ್ಮನು ಅಂದ್ರೆ ಯಾವ ಕಮಲಮ್ಮುನು ಅಂತಾರೆ. ಕತೆ ಕಮಲಮ್ಮನು ಅಂದ್ರೇನೆ ಅವೃಗೂ ಗ್ಯಪ್ತಿ ಬರೋದು; "ಓ ಅವಳಾ...!" ಅಂತ ಉದ್ಗಾರ ತೆಗೆಯೋದು.

ಈ ಕತೆ ಕಮಲಮ್ಮನು ಏನೇ ಪಲುಕುದ್ರು ಅದು ಕತೆನಂಗೆ ಇರ್ತದೆ. ಅವಳ ಮಾತು ಕೇಳಕ್ಕೆ ಕಮ್ಮಗ ಇರ್ತದೆ; ತಿಯ್ಯಗ ಇರ್ತದೆ. ಜನಗಳಕ ಅವಳು ಪಲುಕೋ ಟಯಾನಿಗೆ ನ್ಯಾರ ಇತ್ತೂ ಅಂದ್ರೆ ನೇರಾನೇರಾ ಅವಳ ಎದುರೂಗೆ ಕುಂತು ಕೇಳ್ಕತಾರೆ. ಅವಳ ಕತೆ ಹೇಳೋ ಕ್ರಮ ಅಂಗೆ.

AV Eye Hospital ad

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | 'ನಿನ್ನ ಈ ಊರಿಗೆ ಕೊಟ್ಟರಾ ಅಮ್ಮ?' ಎನ್ನುತ್ತ ಅಂಗ್ಳದಲ್ಲಿ ಕೂತೇಬಿಟ್ಟ...

ಒಂದ್ಕಿತ ನಮ್ಮ ಮನೆಗೆ ಬಂದವಳೇ, ನಮ್ಮ ಅಣ್ಣನುಕ ಕೇಳೋ ತರ ಒಂದು ಕತೆ ಹೇಳಿದ್ಲು.

ಒಂದು ಊರನಾಗ ಒಬ್ಬ ಮೋಪಾದ ರಾಜನು ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಸಂತೋಷವಾಗಿ ಇದ್ನು. ಅವನ ರಾಣಿಕ ದೊಡ್ಡ ಪಿಳೇಕಿ ತಗುಲಿ ಸತ್ತೋಗಿದ್ಲು. ಅದೇ ಊರನಾಗ ಒಬ್ಬ ದಾಡಿಸಾಮಿ ಇದ್ನು. ರಾಜನುಕ ಈ ದಾಡಿಸಾಮಿ ಕಂಡಾಲೇ ಬಕ್ತೀ-ಬೆಮೆ.

"ನಮ್ಮ ಅರಮನೆಕ ಒಂದ್ಕಿತ ಬಂದು ನಮ್ಮ ಸೇವೆ ಸ್ವೀಕರಿಸಬೇಕು," ಅಂತ ರಾಜನು ಬೇಡಲಾಗಿ, ದಾಡಿಸಾಮಿ ಆಗಲಿ ಅಂತ ಒಂದ್ಕಿತ ದಯಮಾಡಿಸಿದನು. ರಾಜನು ಬೆಲೆ-ಬಕ್ತಿ ತೋರಿಸಿ ಅವನಿಗೆ ಬೇಕಾದ ಹಾಗೆ ಸಾಮಾನು ತರಪಿಂಚಿ ನೆಲ್ಲಿ ಸಾಪಾಡು ಮಾಡಿಸಿದ. ಇಬ್ಬರು ಎದಿವಿದ ರಾಜನ ಸಿರ್ಕಿ ಮಕ್ಕಳು ದಾಡಿಸಾಮಿಗೆ ಗಾಳಿ ಹಾಕುತ್ತಾ ಸೇವೆ ಮಾಡುತ್ತಿರಲು, ಸಾಮಿಗೆ ಸಾಪಾಡು ಸೇರದಾಯ್ತು.

ರಾಜನು, "ಏಮೈಂದಿ ಸಾಮೀ?" ಎನಲು, ದಾಡಿಯವನು ಮತ್ತೂ ಶಿಂತೆ ಪಟ್ಟವನ ಹಂಗೆ ಮೊಕ ಮಾಡಿದನು. ರಾಜನು ಬಲಂತ್ಮ ಕೇಳಿದ್ದಕ್ಕೆ, "ಏನು ಹೇಳಲಿ ರಾಜ..." ಎಂದು ಪೆರುಸುರು ಬುಟ್ಟು, "ಹೇಳುದ್ರೆ ನಿನ್ಗೆ ಬೇಜಾರು, ಮುಚ್ಚಿಟ್ರೆ ನನ್ಗೆ ಬೇಜಾರು," ಎಂದನು.

ರಾಜ, "ತಾವು ಮಾಹಾತ್ಮರು! ಎಷ್ಟೇ ಬೇಜಾರಿದ್ರೂ ಹೇಳಲೇಬೇಕು," ಎಂದು ಬೇಡಿಕೊಂಡ.

ದಾಡಿಸಾಮಿ, "ನಿನ್ನ ಈ ಶಿರ್ಕಿಗಳಿಂದ ನಿನ್ನ ಕುಲಕ್ಕೆ ಕುತ್ತು," ಎಂದವನೇ, "ಒಂದು ದೊಡ್ಡ ಮರದ ಪೆಟ್ಟಿನಾಗ ಇವರನ್ನು ಹಾಕಿ ಗಂಗೆನಾಗ ತೇಲಿಬಿಡು," ಎಂದ.

ರಾಜನು ಹಂಗೇ ಮಾಡಿದ...

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಔರಾದ್ ಸೀಮೆ | ಹೋಳ್ಗಿ ಉಣ್ಸಲಾಕ್ ಕೊಳ್ಳಾಗಿಂದ ಬಂಗಾರ ಮಾರ್ಯಾಳ ಬಾಯವ್ವ

ಅತ್ತ ತೇಲಿ ಬಂದ ಪೆಟ್ಟಿನಾ ಪಕ್ಕದ ರಾಜ್ಯದ ರಾಜನಿಗೆ ದೊರೆತು, ಅವನು ಬಿಚ್ಚಿ ನೋಡಲು, ಅದರಲ್ಲಿ ಎದಿವಿದ ಕನ್ನೆಕುಟ್ಟಿಗಳು ಇರಲು, ಮಂತ್ರಿಯ ಸಲಹೆ ಯಾಚಿಸಿದ. ಮಂತ್ರಿ, "ಇದರನಾಗ ಏನೋ ಹಿಕ್ಮತ್ತಿ ಐತೆ ಅಂತ ಆ ಕುಟ್ಟಿಗಳನ್ನ ಹೊರಡಿಸಿ, ಎರಡು ತಲಕಿಂದ್ಲು ಕೋತಿಗಳನ ಅದರನಾಗ ಮಡಗಿ, ಮೊದಲನಂಗೆ ತೇಲಿಬಿಟ್ಟ.

ಇತ್ತ ದಾಡಿಸಾಮಿ ತನ್ನ ಶಿಷ್ಯರುನ ಕರೆದು, ಗಂಗೆನಾಗ ತೇಲಿ ಬರುವ ಪೆಟ್ಟಿನಾ ಎತ್ತಿ ತರಲು ಹೇಳಿದ. ಅದು ಬಂದಪ್ಪ, ಶಿಷ್ಯರುಕ ಅವನು ಈ ರೀತಿ ಹೇಳಿದ: "ನಾನು ಭಯಂಕರ ಪೂಜೆಯೊಂದ ಈ ರೆತ್ರಿನಾಗ ಮಾಡೋ ಪ್ಲಾನಿದೆ. 'ಅಯ್ಯೋ ಅಮ್ಮಾ... ಅಯ್ಯೋ... ಅಮ್ಮಾ...' ಅಂತ ಎಷ್ಟೇ ಕೂಗಿದ್ರು ಯಾರೋ ಕದ ತಿಯ್ಯಾರಾದು. ಅವೆಲ್ಲ ಭೂತಶೇಷ್ಟುಲು... ಕದ ಗಟ್ಟಿ ಹಾಕಿ ಹೊರಗಿರಿ."

ಶಿಷ್ಯರುಗಳು ಹಂಗೇ ಮಾಡಿದರು.

ದಾಡಿಸಾಮಿ ಪೆಟ್ಟಿನಾ ಮುಟ್ಟಿ, "ಆಹಾ! ಅಮ್ಮಾಯುಲು!" ಅಂತ ಆಸೆಮಡಗಿ ಅದನ್ನ ತೆಗೆದ. ಒರೇಕಿತ ಎರಡು ಕೋತಿಗಳು ಅವನ ಮೇಲೆ ಹಾರಿ, ಎಂಗಂದ್ರೆ ಹಂಗೆ-ಎಲ್ಲಂದ್ರೆ ಅಲ್ಲಿ ಕಚ್ಚಾಕಿಬಿಟ್ವು.  "ಅಯ್ಯೋ... ಅಮ್ಮಾ... ಅಯ್ಯೋ... ಅಮ್ಮಾ..." ಅಂತ ದಾಡಿಸಾಮಿ ಎತ್ನೆ ಕೂಕಂಡ್ರು ಶಿಷ್ಯರುಗಳು ಕದ ತೆಗೆದಿದ್ರೆ ಕೇಳಿ! ದಾಡಿಸಾಮಿ ಕೋತಿಗಳ ಕಾಟ ತಡಿನಾರ್ದೆ ಲಾಸ್ಟಕಾ ಸತ್ಹೋದ.

ಕತೆ ಕಮಲಕ್ಕನು ಈ ಕತೆ ಹೇಳಿದ್ದು ಯಾಕಂತ ನಮ್ಮ ಮನೆಯವರಿಗೆಲ್ಲ ತಿಳೀತು; ಇಂಪಾರ್ಟೆಂಟ್ಗಾ ನಮ್ಮ ಅಣ್ಣನುಕ ತಿಳೀತು. ಅವನು, "ನಂಗೆ ಮದುವೆ ಬ್ಯಾಡ. ಸಾಮಿ ಆಗ್ತೀನಿ... ಈ ಜೀವನದಾಗ ಸಾರ ಇಲ್ಲ," ಅಂತ ಅಲ್ಲಿ-ಇಲ್ಲಿ ಹೇಳ್ಕಂಡು ಓಡಾಡ್ತಿದ್ನಂತ. ಕಮಲಕ್ಕನುಕ ಈ ಇಚಾರ ತಿಳಿದು, ಸೀದಾ ನಮ್ಮ ಮನೆತಂಕಾ ಬಂದು ಈ ಕತೆ ಹೇಳಿ ಹೋದಳು. ಇದ ಕೇಳಿದ ಮ್ಯಾಲೆ ನಮ್ಮ ಅಣ್ಣನು ಮುಂದಲ ದಿನಗಳಾಗ ಸಾಮಿ ಆಗೋ ಮಾತೇ ತೆಗಿನಿಲ್ಲ; ಅಲ್ದೀರ ನೆಟ್ಟಗೂ ಮದುವೇನೂ ಆದ.

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app