ದೇಸಿ ನುಡಿಗಟ್ಟು - ದಕ್ಷಿಣ ಕನ್ನಡ ಸೀಮೆ ಹವ್ಯಕ | 'ಮನುಷ್ಯನಷ್ಟು ದುರಾಸೆ ಇಪ್ಪ ಮತ್ತೊಂದು ಪ್ರಾಣಿಯ ನೋಡಿದ್ದೆಯೋ?'

ಊರಿಂಗೆ ಹೋದರೆ, ಅಪ್ಪನೊಟ್ಟಿಂಗೆ ನಡೆವ ಪಟ್ಟಾಂಗಕ್ಕೆ ಅಮ್ಮನ ಕಾಫಿ ಸ್ಪರ್ಧೆ. ಎರಡರಲ್ಲಿ ಏವದಕ್ಕೆ ಹೆಚ್ಚು‌ ಅಂಕ ಕೇಳಿರೆ, ಉತ್ತರ ಕೊಡ್ಲೆ ಕಷ್ಟ. ಇನ್ನೊಂದರಿ ಊರಿಂಗೆ ಹೋದಿಪ್ಪಗ, ಪ್ರದೀಪ ಹೇಳಿದ ಸಿನೇಮ ಕಾಂಟ್ರೊವರ್ಸಿ ವಿಷಯ ಅಪ್ಪನೊಟ್ಟಿಂಗೆ ಚರ್ಚೆ ಮಾಡೆಕ್ಕು ಹೇಳಿ ಆಲೋಚನೆ ಮಾಡುವಗ, ಕಳೆದ ವರ್ಷ ಊರಿಲಿ ಇಪ್ಪಗ ನಡೆದ ಒಂದು ವಿಷಯ ನೆಂಪಾತು...

"ಇತ್ತೀಚಿಗೆ ಸಿನೇಮ ಹೆರಬಂದು ರೆಜ ಹೆಸರು ಮಾಡಿತ್ತು ಹೇಳಿಯಪ್ಪಗ ಕಾಂಟ್ರೊವರ್ಸಿ ಅರಸಿಕೊಂಡು ಬತ್ತು ಮಾರಾಯ್ತಿ..." ಹೇಳಿದ ಎನ್ನ ಗೆಂಡ ಪ್ರದೀಪ.

Eedina App

"ಏವ ಸಿನೆಮದ ಬಗ್ಗೆ ಹೇಳ್ತಾ ಇದ್ದೆ?" ಕೇಳಿದೆ.

"ಕಾಂತಾರ ಮಾರಾಯ್ತಿ. ಎನಗೆ ಸಿನೆಮಾ ಇಷ್ಟ ಆತು. ಆದರೆ, ಎಲ್ಲದರಲ್ಲೂ ತಪ್ಪು ಹುಡುಕುವಕ್ಕೆ ಎಂತ ಹೇಳುದಾ?" ಕೇಳಿದ.

AV Eye Hospital ad

ಆನು, "ನೀನು ನಮ್ಮ ಅಭಿಪ್ರಾಯ ಹೇಳಿದ ಹಾಂಗೆ ಅವರವರದ್ದು..." ಹೇಳಿ ಅಡುಗೆಕೋಣೆಗೆ ನಡೆದೆ.

ದೀಪಾವಳಿ ಬಂತಿದ. ಊರಿಂಗೆ ಹೋಗಿತ್ತಿದ್ದರೆ ಅಮ್ಮನ ಪಾಕ ಸೇಮಗೆ ಕಾಯಿಹಾಲು ಸರೀ ಹೊಡೆವಲಾವುತಿತ್ತು. ಈ ಸರ್ತಿ ಊರಿಂಗೆ ಹೋಪಲಾಯಿದಿಲ್ಲೆ. ಬೆಂಗಳೂರಿನ ಪಟಾಕಿ ಮಿಶ್ರಿತ ಗಾಳಿ ನುಂಗಿಯೊಂಡು ಹಬ್ಬ ಆಚರಣೆ ಮಾಡುವ ಗವುಜಿಲಿ ಇತ್ತಿದ್ಯ. ಸೇಮಗೆ, ಕಾಯಿಹಾಲು‌ ಅಲ್ಲದ್ರೂ ಸೇಮಗೆ‌ ಪಾಯಸ ಆದರೂ ಮಾಡುವ ಹೇಳಿ ಹಬ್ಬದ‌ ಹುಮ್ಮಸ್ಸಿನ ಉಳಿಶಿಕೊಂಡಿತ್ತಿದ್ದೆ. ಪಾಯಸದ ಪಾಕದ ಒಟ್ಟೊಟ್ಟಿಂಗೆ ಅಪ್ಪನ ನೆಂಪಾತು.

ಸೇಮಗೆ-ಕಾಯಿಹಾಲು

ಊರಿಂಗೆ ಹೋದರೆ ಅಪ್ಪನೊಟ್ಟಿಂಗೆ ನಡೆವ ಪಟ್ಟಾಂಗಕ್ಕೆ ಅಮ್ಮನ ಕಾಫಿ ಒಂದಕ್ಕೊಂದು ಸ್ಪರ್ಧೆ. ಎರಡರಲ್ಲಿ ಏವದಕ್ಕೆ ಹೆಚ್ಚು‌ ಅಂಕ ಹೇಳಿ ಕೇಳಿರೆ, ಉತ್ತರ ಕೊಡ್ಲೆ ಕಷ್ಟ. ಇನ್ನೊಂದರಿ ಊರಿಂಗೆ ಹೋದಿಪ್ಪಗ, ಪ್ರದೀಪ ಹೇಳಿದ ಸಿನೇಮ ಕಾಂಟ್ರೊವರ್ಸಿ ವಿಷಯ ಅಪ್ಪನೊಟ್ಟಿಂಗೆ ಚರ್ಚೆ ಮಾಡೆಕ್ಕು ಹೇಳಿ ಮನಸ್ಸಿಲ್ಲಿ ಆಲೋಚನೆ ಮಾಡುವಗ, ಕಳೆದ ವರ್ಷ ಆನು ಕರೋನ ಕಾರಣಕ್ಕೆ ಊರಿಲಿ ಇಪ್ಪಗ ನಡೆದ ಒಂದು ವಿಷಯ ನೆಂಪಾತು.

ಎನ್ನ ಅಪ್ಪನ ಮನೆ ಕುತ್ಯಾಡಿ (ಎನಗೆ ಈಗಲೂ ‌ಎನ್ನ‌ ಮನೆ ಹೇಳುವ ಭಾವ. ಕೂಸುಗವಕ್ಕೆ ಮದುವೆ ಆದ ಮೇಲೆ ಗೆಂಡನ ಮನೆಯೇ ಮನೆ. ಆದರುದೇ. ಅಪ್ಪನ‌ ಮನೆಯ ವ್ಯಾಮೋಹ ಹೋಕ? ಅದುವೇ ಎನ್ನ ಮನೆ ಹೇಳುದು ಅಷ್ಟು ಪಕ್ಕಕ್ಕೆ ಮನಸ್ಸಿಂದ ಹೋಗ ಇದ...). ಕುತ್ಯಾಡಿ ಇಪ್ಪದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಡಾರು ಹೇಳುವ ಜಾಗೆ ಹತ್ತರೆ. ಇಲ್ಲಿನ ಚಾವುಡಿ ಬಾಗಿಲು ಹೇಳುವ ಜಾಗೆಲಿ 'ಶಿರಾಡಿ ಭೂತ' ಸ್ಥಾನ ಇದ್ದು. ಇಲ್ಲಿನ ಜನಂಗೊಕ್ಕೆ‌ ನಮ್ಮ ಜಾಗೆಯ ನಮ್ಮ ಈ ದೈವ ಕಾಪಾಡ್ತು ಹೇಳುವ ನಂಬಿಕೆ. ಎನ್ನ ಅಪ್ಪನ ಅಜ್ಜ ಸುಬ್ರಾಯ ಭಟ್ಟರು ಈ ಭೂತಸ್ಥಾನದ ಮೊಕ್ತೇಸರರಾಗಿತ್ತಿದ್ದವಡ. ಹಾಂಗಾಗಿ, ಕುತ್ಯಾಡಿಯ ಹಳೇಮನೆಲಿ (ಮೇಲ್ಮನೆ ಹೇಳಿ ಎಂಗೊ ಹೇಳುದು) ಭೂತಕ್ಕೆ ಸಂಬಂಧಪಟ್ಟ ಕೆಲ ವಸ್ತುಗೊ ಇದ್ದತ್ತಡ. ಅಲ್ಲಿಗೆ ಪ್ರತಿ ವರುಷ ಕುತ್ಯಾಡಿ ಮನೆಂದ‌ ತಂಬಿಲ ಕೊಡೆಕ್ಕು ಹೇಳಿ‌ ಆಗಿತ್ತು ಕಾಣ್ತು. ಹಾಂಗೆ‌ ನಡಕ್ಕೊಂಡು ಬಂದುಗೊಂಡು ಇತ್ತು.

ಆದರುದೇ, ಒಂದರಿ ಊರಿನವು ಪ್ರಶ್ನೆ ಮಡುಗಿಸಿ ಕೇಳಿಯಪ್ಪಗ ಗೊಂತಾದ ವಿಷಯ ಎಂತ ಹೇಳಿರೆ, ದೈವದ ಡಬ್ಬಿ, ಆಭರಣಂಗಳ ವಾಪಸ್ಸು ದೈವದ ಸ್ಥಾನಕ್ಕೆ ಎತ್ತುಸೆಕ್ಕು ಹೇಳಿ. ಹಾಂಗೆ ಕಳುದ ವರ್ಷ, ಕುತ್ಯಾಡಿ ಮೇಲ್ಮನೆಲಿ ದುರ್ಗಾ ಪೂಜೆ ಎಲ್ಲ ಕಳುಶಿ, ಮೆರವಣಿಗೆ ಮೂಲಕ ಭೂತಸ್ಥಾನಕ್ಕೆ ಸೇರಿದ್ದ ವಸ್ತುಗಳ ಎತ್ತಿಶಿಯೂ ಆತು. ಅಂಬಗ ಆನು ಅಪ್ಪನ ಮನೆಲಿ ಇತ್ತಿದ್ದೆ. ಹಾಂಗೆ ವಿಷಯ ಬಂದು ಅಪ್ಪನೊಟ್ಟಿಂಗೆ ದೈವ, ನಂಬಿಕೆಗಳ ಬಗ್ಗೆ‌ ಮಾತು ಹೊರಳಿತ್ತು.

ಮನೆಗೆಲಸಕ್ಕೆ ಬಪ್ಪ ಮೋಹನ, "ಬಾಳೆಗೊನೆ ಕಡುದಾಯಿದು. ಆನಿಂದು ಅಡಕ್ಕೆ ಕೊಯಿಲಿಂಗೆ ಬತ್ತಿಲ್ಲೆ..." ಹೇಳಿದ. "ಅರ್ರೆ...! ಎಂತಕೆ ಅಪ್ಪ?" ಹೇಳಿ ಕೇಳಿದೆ. "ಅದು ಊರಿನ‌ ಜಾತ್ರೆ ಸುರು ಅಪ್ಪ ಮೊದಲಿಂಗೆ ಬಾಳೆಗೊನೆ ಕಡಿತ್ತವು. ಮೊದಲೆಲ್ಲ ಬಾಳೆಗೊನೆ‌ ಕಡುದ ಮೇಲೆ ಊರಿಂದ ಜೆನ ಹೆರ ಹೋಪಲಾಗ ಹೇಳುವ ಕ್ರಮ ಇದ್ದತ್ತು. ಹಾಂಗೇ‌ ಮರ ಹತ್ತುತ್ತಿಲ್ಲೆ ಹೇಳುವ ಮತ್ತೊಂದು‌ ನಂಬಿಕೆ..." ಹೇಳಿ ಅಪ್ಪ ಹೇಳಿದವು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಬೀದರ್ ಸೀಮೆ | ಅದೇಸ್ ಮಂದಿ ಇಂಥ ಕನ್ಸು ಕಾಣ್ಕೋತಾನೇ ಜಿಂದಗಿ ತೆಗ್ದಾರೋ ಏನೋ!

ಮುಂದುವರಿಸಿ, "ನೋಡು‌ ಮಗಳು... ಈ ದೈವ, ಭೂತ ಇದೆಲ್ಲದರ ಪರಿಕಲ್ಪನೆ ಮನುಷ್ಯ-ಪ್ರಕೃತಿ ನಡುವಿನ ಸಂಬಂಧ ಗಟ್ಟಿ‌ ಅಪ್ಪಲೆ ಬಂದ ನಂಬಿಕೆ. ಮನುಷ್ಯನಷ್ಟು ದುರಾಸೆ ಇಪ್ಪ ಮತ್ತೊಂದು ಪ್ರಾಣಿಯ ನೋಡಿದ್ದೆಯೋ? ಪ್ರಾಣಿಗ ಹಶು ಆದಪ್ಪಗ ಮಾಂತ್ರ ಮತ್ತೊಂದು ಜೀವಿಯ ತಿಂಗು. ಆದರೆ, ಮನುಷ್ಯ? ಮೋಜಿಂಗೆ, ಕುಶಾಲಿಂಗೆ ಪ್ರಾಣಿಗಳ ಮೇಲೆ ಶಿಖಾರಿ‌ ಮಾಡ್ತ. ಹಾಂಗಾಗಿಯೇ ಒಂದು ಪ್ರದೇಶದ ಕಾಡಿನ ಇಂತ ದೈವ ಕಾಯ್ತಾ ಇದ್ದು ಹೇಳುವ ನಂಬಿಕೆ ಮನುಷ್ಯನ ಮನಸ್ಸಿಲಿ ಬೆಳೆಶಿಯರೆ, ಅದೇ‌ ಮನುಷ್ಯ ಆ ಕಾಡಿನ ವಿನಾಶ ಮಾಡುಲೆ ಮುಂದೆ ಹೋಗ. ಇದೇ ಕಾರಣಕ್ಕೆ ಹೀಂಗಿಪ್ಪ ನಂಬಿಕೆಗೊ ಬೆಳೆದಿಕ್ಕು. ಇನ್ನು, ದೇವರ ಪರಿಕಲ್ಪನೆ ಹಿಂದೆಯುದೇ ಇದೇ ಕಾರಣ..."

"...ದೇವರಲ್ಲಿಯೂ ಪ್ರಕೃತಿಯೇ ಜೀವಾಳ. ಸುಬ್ರಹ್ಮಣ್ಯ ಹೇಳಿ ಹಾವಿನ ದೇವರು ಹೇಳ್ತು. ಮಂಗನೂ ಆಂಜನೇಯ ಆವ್ತ. ಈ ಮೂಲಕ ಮನುಷ್ಯ ಪ್ರಾಣಿ ಸಂಬಂಧ ಉತ್ತಮ ಆಗಲಿ ಹೇಳುದು ನಮ್ಮ ಪೂರ್ವಜರ ನಂಬಿಕೆ ಆದಿಕ್ಕು. ಹಾಂಗೆ ಹೇಳಿ ನಂಬಿಕೆಗಳ ನಡುವೆ ಮೌಢ್ಯ ಬೈಂದಿಲ್ಲೆ ಹೇಳಿ ಅಲ್ಲ." ಹೇಳಿ, ಅದಕ್ಕೊಂದು ಸಣ್ಣ ಕಥೆಯನ್ನುದೇ ಅಪ್ಪ ಹೇಳಿದವು:

"...ಒಂದೂರಿಲಿ ಒಬ್ಬ ಅವನ ಅಬ್ಬೆಯ ಶ್ರಾದ್ಧ ಕಾರ್ಯಕ್ರಮ ಏರ್ಪಾಡು ಮಾಡಿತ್ತಿದಡ. ಮನೆಲ್ಲಿ ಇದ್ದ ಪುಚ್ಚೆಯೊಂದು ಕಾರ್ಯಕ್ರಮಲ್ಲಿ ತಟಪಟ ಮಾಡುಗು ಹೇಳಿ ಅದರ ಚಾವುಡಿಯ ಬಾಗಿಲ ಹತ್ತರೆ ಕಟ್ಟಿಹಾಕಿತ್ತಿದ್ದ. ಅದೇ ಕಾರ್ಯಕ್ರಮಕ್ಕೆ ಬಂದ ಮತ್ತೊಬ್ಬ ಶ್ರಾದ್ಧ ಮಾಡುವಗ ಪುಚ್ಚೆಯೊಂದರ ಕಟ್ಟಿ ಹಾಕುದು ಕಾರ್ಯಕ್ರಮದ ಒಂದು ಭಾಗ ಹೇಳಿ ಧ್ಯಾನಿಸಿದ. ಅವನ ಮನೆಲಿ ಶ್ರಾದ್ಧ ನಡೆವಗ, ಎಲ್ಲಿಂದಲೋ ಪುಚ್ಚೆಯೊಂದರ ತಂದು ಮನೆಲಿ ಕಟ್ಟಿದ. ಅಂಬಗ ಮನುಷ್ಯ ಹಲವಾರು ಮೂಢನಂಬಿಕೆಗಳನ್ನುದೇ ಹುಟ್ಟುಹಾಕಿದ್ದ. ನಂಬಿಕೆ ಅವಕ್ಕವಕ್ಕೆ ಬಿಟ್ಟದು. ಆದರೆ‌, ಮೂಢನಂಬಿಕೆ ಸಮಾಜಕ್ಕೆ ಕುತ್ತು ಬಾರದ್ದರೆ ಆತು. ಉಳಿದ್ದೆಲ್ಲವೂ ಅವ್ವವ್ವು ಕಂಡುಕೊಂಡ‌ ಹಾಂಗೆ," ಹೇಳಿದವು ಅಪ್ಪ.

"ಅದು ಸರಿ ಅಪ್ಪ... ಉಳಿದವರು ಕಂಡಂತೆ," ಹೇಳಿದೆ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಂಜನಗೂಡು ಸೀಮೆ | ನಾಲ್ಕಾಣಿ, ಎರಡು ಗರಿ ಬೇವುನ್ ಸೊಪ್ಪು ಮಾರಮ್ಮನ ತಲ ಮೇಲಿಟ್ಟು ಎಳ್ನೀರ್ ಸುರ್ದು...

"ಪಟ್ಟಾಂಗ ದೊಡ್ಡ ಆತು. ಗಂಟೆ 11 ಕಳುದತ್ತು. ವರಗಲಾವುತ್ತಿಲ್ಯಾ? ಒಪ್ಪಣ್ಣೋ (ಅಮ್ಮ, ಅಪ್ಪನ ದಿನಿಗೊಳುದು ಹಾಂಗೆ) ಸುಮ್ಮನೆ ಮನುಗಿ," ಹೇಳಿ ಅಮ್ಮನ ಸ್ವರ ಬಂತು.

"ಇನ್ನು ಮಾತಿನ ನಾಳಂಗೆ ಉಳಿಶಿಕೊಂಬ ಮಗಳು..." ಹೇಳಿ ಅಪ್ಪ ಶುಭರಾತ್ರಿ ಹೇಳಿದವು.

ಈ ಪಟ್ಟಾಂಗಕ್ಕೆ ವರುಷ ಒಂದು; ಮತ್ತೆ ನೆಂಪಾದ್ದು 'ಕಾಂತಾರ‌' ಸಿನೇಮಂದ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app