ದೇಸಿ ನುಡಿಗಟ್ಟು - ರಾಣೇಬೆನ್ನೂರು ಸೀಮೆ | 'ಅಕ್ಷರ ಅಂದ್ರ ಬೆಂಕೀ, ಅದು ಎದ್ಯಾಗ ಬಿದ್ದು ಉರದ್ರನ ತಲ್ಯಾಗ ಹೊಸಾ ಇಚಾರ'

ಈ ದೊಡ್ಡ ಚಿಲುಮಿ ತಗೊಂಡು ನನ್ನ ತಾಕ ಯಾಕ ಬಂದೀಂಪಾ ಅಂತ ಅನುಮಾನದಾಗ ಇದ್ದೆ. ನಾ ಏನರ ಕೇಳಿದ್ರ, ಅಂವಾ ಏನರ ಹೇಳೋನು. ಹೋಗ್ಲೀ ಬಿಡು ಅತ್ಲಾಗ ಅಂತ ನಾ ಸುಮ್ಮನಾಗೋ ಅಟೊತ್ತಿಗೆ ಅಂವ್ನ ಮತ್ತ ಸುರು ಹಚ್ಕೊಂಡ; "ನಿಂತಾವ ನಂದೊಂದೀಟ ಕೆಲ್ಸ ಇತ್ತು. ಈ ಚಿಲುಮೀ ಮ್ಯಾಲ ಬರಿಯಾಕ ಏನರ ನಾಕ್ ಸಾಲ ಅಕ್ಷರ ಗೀಚಿ ಕೊಡು," ಅಂದ

ಚಿಕ್ಕಣ್ಣ ಒಂದ್ ದಿನ ನನ್ನ ತಾಕ ಮೊಳ ಉದ್ದದ ಚಿಲುಮಿ ಹಿಡ್ಕೊಂಡು ಬಂದ.

Eedina App

"ಏನ್ ಚಿಕ್ಕಣ್ಣ ಇದು... ಉಗಿಬಂಡಿ ಇದ್ದಂಗೈತೀ?" ಅಂದೆ.

"ಹೌದು ಮಾರಾಯಾ... ಅದು ಉಗಿಬಂಡೀನ. ಕಲ್ಲಿದ್ದಲು ಇದ್ದಾಗ ಉಗಿಬಂಡಿ ಇದ್ದವು. ಅವು ಅರ್ಧ ಊರು ಮುಣುಗೋ ಹಂಗ ಹೊಗೀ ಬಿಡಾವು; ಆದ್ರೂ 'ಕೂ...ಕೂ' ಅಂತ ಕೂಗೋದು, 'ಚುಕುಬುಕು ಚುಕುಬುಕು' ಅಂತ ಒಡೋದು ಅದೊಂಥರಾ ಮಜಾನ ಇತ್ತು ನೋಡು. ಈಗೆಲ್ಲ ಡಿಜೇಲಿಂಜಿನ್ನು, ಕರೆಂಟಿಂಜಿನ್ನು ಬಂದು ಅವೆಲ್ಲ ಹೋಗೆಬಿಟ್ಟವು."

AV Eye Hospital ad

"ಹೌದು, ಅದ್ ಖರೇ ಬಿಡು, ನಿನ್ನ ಕೈಯಾಗಿರೋದು ಇದು ಯಾವ ಇಂಜಿನ್ನು?"

"ನೋಡಪಾ... ಇದು ಒಂಥರಾ ಮೋಬೈಲಿಂಜಿನ್ನು! ಒಳಗ ಗುರುಬೋಧೆ ಆದ್ರ ಹೊರಗ ಶಿಷ್ಯ ಮಾತಾಡ್ತಾನ; ಹೊರಗ ಗುರು ಮಾತಾಡಾಕ್ಹತ್ಯಾನ ಅಂದ್ರ ಒಳಗ ಶಿಷ್ಯ ಪ್ರಶ್ನೆ ಕೇಳಾಕ್ಹತ್ಯಾನ ಅಂತ ಅರ್ಥ..."

"ಇದೇನಪಾ ನಿನ್ನ ಮಾತಿನ ತಲೀಬುಡಾನೂ ತಿಳೀವಲ್ದು ನನಗ..."

"ಮದ್ಗುರು, ನಿನಗ ತಿಳೀವಲ್ಲದ್ದು ಯಾದ ಐತೀ? ಇದು ಚಿಲುಮಿ, ಅದರೊಳಗ ತಂಬಾಕು ತುಂಬಿ ಬೆಂಕೀ ಹಚ್ಚಿದ್ರ ಆತೇನು? ಅದನ ನಾವು ಉಣಬೇಕು, ಉಸಿರಾಡಬೇಕು. ಆವಾಗ ಅದು ನಮ್ಮನ್ನ ಮೈಮರಸ್ತೈತೀ ಬ್ಯಾರೇ ಲೋಕಕ ಕರ್ಕೋಂಡ್ ಹೋಕ್ಕತೀ.‌.. ಇದಕ ನಾವು ಗುರುಬೋಧೆ ಅಂತೀವೀ. ಆದ್ರ ಇದನ ತಿಳೀಲಾರದ ಮತಿಗೇಡಿ ಮಂದಿ, 'ಇದೇನು ಈ ಕಲ್ ಸೇದಿ ಹೊಗೀ ಬಿಡ್ತಾನ ಮೂಳಾ' ಅಂತ ಬೈಯ್ಕೆಂಡ್ ತಿರಗ್ತಾವು. ನಾವು ಶರೀಫಜ್ಜ, ಗೋವಿಂಬಟ್ರ ಕುಲದವ್ರು‌. ನಮ್ ಇಚಾರ, ಬಾಸೆ ಇದ ಯಾವ್ದೂ ಇವ್ರಿಗೆ ಅರ್ಥ ಆಗದಿಲ್ಲ..." ಅಂತ ವಿವರಣೆ ನೀಡಿದ ಚಿಕ್ಕಣ್ಣ‌.

ಈ ದೊಡ್ಡ ಚಿಲುಮಿ ತಗೊಂಡು ನನ್ನ ತಾಕ ಯಾಕ ಬಂದೀಂವಾ ಅಂತ ನಾನೂ ಏನೋ ಅನುಮಾನದಾಗ ಇದ್ದೆ. ನಾ ಏನರ ಕೇಳಿದ್ರ, ಅಂವಾ ಏನರ ಹೇಳೋನು. ಹೋಗ್ಲೀ ಬಿಡು ಅತ್ಲಾಗ ಅಂತ ನಾ ಸುಮ್ಮನಾಗೋ ಅಟೊತ್ತಿಗೆ ಅಂವ್ನ ಮತ್ತ ಸುರು ಹಚ್ಕೊಂಡ.

"ಅಲ್ಲ ಮದ್ಗುರು, ನಿಂತಾವ ನಂದೊಂದೀಟ ಕೆಲ್ಸ ಇತ್ತು. ಅದ್ಕ ಬಂದಿದ್ದೆ. ಈ ಚಿಲುಮೀ ಮ್ಯಾಲ ಬರಿಯಾಕ ಏನರ ನಾಕ್ ಸಾಲ ಅಕ್ಷರ ಗೀಚಿ ಕೊಡು," ಅಂದ.

"ಅಲ್ಲೋ ಚಿಕ್ಕಣ್ಣ, ಅದರ ಮ್ಯಾಲ ಹೆಂಗ್ ಬರೀತಿಯೋ? ಎಂಥ ಚಂದ ಚಿಲುಮೀ ಐತಿ. ನೀ ಏನರ ಕೆತ್ತಾಕ ಹೋದ್ರ ಅದು ಪಟ್ ಅಂತ ಒಡೀತು ಅಂದ್ರ, ಆವಾಗ ಏನ್ ಮಾಡ್ತೀ? ಹೋಗ್ಲೀ ಬಿಡು. ಅಕ್ಷರಾ ತಗೊಂಡ್ ಏನ್ ಮಾಡ್ತೀ?" ಅಂತ ಕೇಳ್ದೆ.

"ಅದು ಹಂಗಲ್ಲ ಮದ್ಗುರು, ಅಕ್ಷರ ಅಂದ್ರ ಬೆಂಕೀ, ಅದು ಎದ್ಯಾಗ ಬಿದ್ದು ಉರದ್ರನ ನಮ್ ತಲ್ಯಾಗ ಹೊಸಾ ಇಚಾರ ಹುಟ್ಟೋದು, ಒಂಥರಾ ಅದ ಬೆಳಕು ಈ ಲೋಕಕ್ಕ. ನಿನಗ ಗೊತ್ತಲ್ಲ ಮದ್ಗುರು, ಅದ್ಕ ಏನರ ನಾಕ ಸಾಲ ಚಂದಗ ಬರ್ದ ಕೊಡು. ನಿನಗ ಹೇಳೋದೇನೈತೀ, ಅದನ ಹಿಡದಂವಾ ಅದರ ಹುಚ್ಚ ಹಿಡಿಸ್ಕೆಬೇಕು. ಇಲ್ಲಾಂದ್ರ ಅದನ ಬಿಟ್ಟು ಶರಣಪಾ ಅಂತ ಕೈಮುಗಿದಿರಬೇಕು - ಅಂತಾದ್ದೇನರ ಬರೀ, ಚಿಲುಮೀ ಮ್ಯಾಲ ಬರೇಯೋದು ನನಗ ಬಿಡು," ಅಂದ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ದಕ್ಷಿಣ ಕನ್ನಡ ಸೀಮೆ ಹವ್ಯಕ | 'ಮನುಷ್ಯನಷ್ಟು ದುರಾಸೆ ಇಪ್ಪ ಮತ್ತೊಂದು ಪ್ರಾಣಿಯ ನೋಡಿದ್ದೆಯೋ?'

"ಆತ್ ಬಿಡು ಚಿಕ್ಕಣ್ಣಾ... ನಾ ಏನರ ಬರ್ದು ಕೊಡ್ತನೀ. ಆದ್ರ ಒಂದ್ ಶರ್ತು... ಮತ್-ಮತ್ ನೀ ನನಗ ಮದ್ಗುರು ಅನಬ್ಯಾಡ..." ಅಂದೆ.

ಚಿಕ್ಕಣ್ಣ "ಆಂ...?" ಅಂತ ಕಣ್ಣಗಲಿಸಿದ. ಅಂವಾ ಬಂದಾಗೊಮ್ಮೆ ಬೆಟ್ಟಿ ಆದ್ರ ಸಾಕು, "ಮದ್ಗುರು..." ಅನ್ನೋದು ನನಗೂ ಒಂಥರಾ ಕಿರಿಕ್ ಆದಂತಾಗಿ ಈ ಶರ್ತ್ ಹಾಕಿದ್ದೆ. ಅದಕ ಚಿಕ್ಕಣ್ಣ ಗೋಣು ಹಾಕ್ಯಂತ, "ಆತಪಾ ಮದ್ಗುರು, ಹಂಗ ಆಗಲಿ ತಗಾ, ನೀ ಬರದ್ರ ಕೊಡು," ಅಂದ. "ಅಲಾ ಇವ್ನ ಮತ್ತೂ ಹಂಗ ಅಂತಿಯಲ್ಲೋ ಚಿಕ್ಕಣ್ಣ!" ಅಂದೆ.

"ಹೌದಪಾ, ಇವತ್ತಿನ ಕಾಲದಾಗ ಸುಳ್ಳು ಹೇಳೋ ಕಳ್ರು ಸದ್ಗುರು ಅನಿಸ್ಗೆನಾಕ ಹತ್ಯಾರ. ಆದ್ರ ನೀ ಹಂಗಲ್ಲ ನೋಡು. ಮತ್ತ-ಮತ್ತ ನಿನ್ನ ಮಾತ ಕೇಳಬೇಕನಿಸ್ತೈತೀ. ಅದಕ ನೀ ಮದ್ಗುರು!" ಅಂದ. ಈಗ ನನಗ ಮೂರ್ಚೆ ಹೋಗೋದೊಂದ ಬಾಕಿ ಅನುಸ್ತು‌. ಸರಿ, ಬರ್ದ ಕೊಡ್ದ ಬಿಡ ಆಸಾಮಿ ಅಲ್ಲ ಇದು ಅಂದ್ಕೊಂಡು, "ಆತು, ಬರ್ದು ಕೊಡ್ತೀನಿ ತಗಾ ಚಿಕ್ಕಣ್ಣ..." ಅಂದೆ. "ಹಂಗ ಬಾ ದಾರೀಗೆ ಮದ್ಗುರು... ನೀನಲ್ದ ಯಾರ್ ಬರಿಯೋರದಾರ ಇಲ್ಲೆ..." ಅಂತ ಗೆಲುವಿನ ನಗೆ ನಕ್ಕ.

ಒಂದ್ ವಾರೊಪ್ಪತ್ತು ಯೋಚ್ನೆ ಮಾಡಿ, ಹಂಗೂ ಹಿಂಗೂ ಕಷ್ಟಪಟ್ಟು, ಚಿಕ್ಕಣ್ಣಗ ನಾಕು ಸಾಲು ಬರ್ದು ಕೊಟ್ಟೆ. ಅವನ್ನ ಅದ್ಹೆಂಗರ ಚಿಲುಮೀ ಮ್ಯಾಲ ಬರಿತಿದ್ದಾನು ಅಂತ ನನಗೂ ಸೋಜಿಗವಾಗಿತ್ತು. ಆ ನಾಕು ಸಾಲು ಒಯ್ದಂವ, ನಾಕು ದಿನದ ನಂತರ ಬಂದ. "ಬರಿಯಾಕ ಹೋಗಿ ಚಿಲುಮೀನ ಒಡೀತು ಮದ್ಗುರು," ಅಂತ ಬ್ಯಾಸರದಲ್ಲಿ ಹೇಳಿದ. ನನಗೂ ಬ್ಯಾಸರ ಆತು.

"ಅವತ್ ಹೇಳಿದ್ದಿಲ್ಲ ನಾ? ಹೋಗ್ಲಿ ಬಿಡ ಮಾರಾಯ. ಆ ನಾಕಕ್ಷರಾ ತಗಂಡ್ ಏನ್ ಮಾಡ್ತೀ?" ಅಂದೆ. "ನೋಡ್ ಮದ್ಗುರು, ನೀ ಬರ್ದ ಕೊಟ್ಯಲ್ಲ ಅದ ನನಗ ಖುಶಿ. ನೋಡವಂತಿ ಇನ್ನೊಂದು ಚಿಲುಮೀ ಮಾಡ್ಕೊಂಡ್, ಅದರ ಮ್ಯಾಲ ನಿನ್ನ ಸಾಲ ಬರ್ಕೊಂಡ ಬಂದ ಮ್ಯಾಲನ ನಾ ನಿನಗ ನನ್ನ ಮಾರಿ ತೋರ್ಸೋದು‌. ಅಲ್ಲಿ ತಂಕ ನಿನ್ ತಾವ ಬಂದ್ರ ಕೇಳು..." ಅಂತ ಹ್ಯಾವಕ ಬಿದ್ದಂಗ ಮಾತಾಡಿದ.

"ಹೋಗ್ಲಿ ಬಿಡು ಚಿಕ್ಕಣ್ಣ..." ಅಂತ ನಾನು ಸಮಾಧಾನದ ಮಾತು ಹೇಳಿದೆ. ಆದ್ರ ಅವನೊಳಗ ಅವು ನಾಕು ಸಾಲು ಉರಿಯುತ್ತಿವೆಯೇನೋ ಎಂಬಂತೆ ಚಿಕ್ಕಣ್ಣ ಮತ್ತೆ ಹೇಳತೊಡಗಿದ: "ಇಲ್ಲ ಮದ್ಗುರು, ಅಕ್ಷರ ಅಂದ್ರ ಹಗುರ ತಿಳೀಬ್ಯಾಡ. ಅವು ಬೆಂಕೆಪಾ... ಅವು ನಮ್ ಎದ್ಯಾಗ ಉರ್ದ್ರ ಬೆಳಕು, ಅಕ್ಷರಾ ಅಂದ್ರ ಅರಿವು, ಅರಿವಿನ ಕಿಡಿ. ಅದಕ ಅಲ್ಲಮ ಹೇಳಿರೋದು - ಅರಿವೇ ಗುರು, ಮಾತೇ ಜ್ಯೋತಿರ್ಲಿಂಗ ಅಂತ..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಂಜನಗೂಡು ಸೀಮೆ | ನಾಲ್ಕಾಣಿ, ಎರಡು ಗರಿ ಬೇವುನ್ ಸೊಪ್ಪು ಮಾರಮ್ಮನ ತಲ ಮೇಲಿಟ್ಟು ಎಳ್ನೀರ್ ಸುರ್ದು...

ಇವ್ನು ಸುರು ಹಚ್ಕೊಂಡ್ರ ಬಿಡೊಲ್ಲ ಅಂತೆನಿಸಿ, "ಸರಿ ಬಿಡು ಚಿಕ್ಕಣ್ಣ. ಹಂಗ ಆಗಲಿ. ಬರ್ಕೊಂಡ ಬಾ, ಅದನೂ ನೋಡೋಣ," ಅಂತ ಹೇಳಿ ಕಳಿಸಿದ್ದೆ.

ಅಲ್ಲಿಂದ ಮೂರ್ನಾಲ್ಕು ತಿಂಗಳು ನಾಪತ್ತೆ ಆಗಿದ್ದ ಗಿರಾಕಿ ಒಂದಿನ, "ಮದ್ಗುರೂ..." ಅಂತ ಬಂದೇಬಿಟ್ಟ‌. "ನೋಡಿಲ್ಲೆ..." ಅಂತ ಚಿಲುಮೀ ನನ್ನ ಕೈಗಿಟ್ಟು ಕೇಳ್ದ... "ಹ್ಯಾಂಗೈತೀ ಶಿಲಾಶಾಸನ?"

ಲೋಕ ಒಂದು
ಬಾಗಿಲು ಇಲ್ಲದಾ ಮನೀ;
ಯಾಕೊ ಏನೊ
ಬರ್ತಾರಿಲ್ಲಿ ಸುಮ್ಮನೀ!

ಚಿಲುಮೆಯೊಳಗ
ಉರಿವ ಗುರುವೇ ದೈವ;
ಎಲ್ಲರೆದೆಯೊಳಗ
ಮಾತಾಡೋ ಮಹಾದೇವ!

ಚಿಕ್ಕಣ್ಣನ ಚಮತ್ಕಾರಕ್ಕೆ ಅಬ್ಬಾ ಎಂದು ಬೆರಗಾದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app