
ಮದವಿ ಆದರಿಗೆ ತವರಮನಿಯರು ಸಕ್ಕರಿ ಆರತಿ ದಂಡಿ ತರತಾರ ಅಂತ ಖುಷಿ. ಮದವಿ ನಿಶ್ಚಯ ಆದ ಹೆಣ್ಣಮಕ್ಕಳಿಗೆ ಭಾವಿ ಅತ್ತಿ ಮನಿಯೋರ ಸಕ್ಕರಿ ಆರತಿ ದಂಡಿ, ಸೀರಿ ತರತಾರ ಅನ್ನು ಖುಷಿ. ಇನ್ನು, ಸಣ್ಣ ಮಕ್ಕಳಿಗೆ ಅವರ ಅಮ್ಮಾರ (ಅಜ್ಜಿ) ಹೊಸ ಅಂಗಿ, ಆರತಿ, ದಂಡಿ, ಕೋಲುಂರಾ (ಕೋಲಾಟದ ಕೋಲು) ಅನ್ನು ಖುಷಿ. ಒಟ್ಟ ಗೌರಿ ಹುಣವಿ ಒಂತರಾ ವಿಶೇಷ
ಹೋದ ಸರತಿ ಶೀಗಿ ಹುಣವಿ ಲೇಖನದಾಗ ನಿಮಗ ನಾ ಗೌರಿ ಹುಣವಿ ತಯಾರಿ ಬಗ್ಗೆ ಹೇಳಿದ್ನಿ. ನೋಡ್ರಿ, ಈಗ ನಮ್ಮ ಊರ ತುಂಬ ಗೌರಿ ಹುಣವಿ ಭಾರಿ ಜೋರ್ ನಡದದ. ಎಲ್ಲಾ ಹಬ್ಬಾನು ಹೆಣ್ಣಮಕ್ಕಳಿಗೆ ವಿಶೇಷನ. ಆದ್ರ, ಗೌರಿ ಹುಣ್ಣವಿ ನಮ್ಮ ಕಡೆ ಹೆಣ್ಣಮಕ್ಕಳಿಗೆ ಭಾರಿ ಸ್ಪೇಷಲ್.
ಮದವಿ ಆದರಿಗೆ ತವರಮನಿಯರು ಸಕ್ಕರಿ ಆರತಿ ದಂಡಿ ತರತಾರ ಅಂತ ಖುಷಿ. ಮದವಿ ನಿಶ್ಚಯ ಆದ ಹೆಣ್ಣಮಕ್ಕಳಿಗೆ ಭಾವಿ ಅತ್ತಿ ಮನಿಯೋರ ಸಕ್ಕರಿ ಆರತಿ ದಂಡಿ, ಸೀರಿ ತರತಾರ ಅನ್ನು ಖುಷಿ. ಇನ್ನು, ಸಣ್ಣ ಮಕ್ಕಳಿಗೆ ಅವರ ಅಮ್ಮಾರ (ಅಜ್ಜಿ) ಹೊಸ ಅಂಗಿ, ಆರತಿ, ದಂಡಿ, ಕೋಲುಂರಾ (ಕೋಲಾಟದ ಕೋಲು) ಅನ್ನು ಖುಷಿ. ಒಟ್ಟ ಎಲ್ಲಾರಿಗೂ ಗೌರಿ ಹುಣವಿ ಒಂದ ಒಂದತರಾ ವಿಶೇಷ ಆಗಿರತೈತಿ.
ಈ ಹುಣವಿಗಷ್ಟ ಸಕ್ಕರಿ ಆರತಿ ಬೆಳಗೋದು. ಸಕ್ಕರಿ ಆರತಿ ಅಂದ್ರ, ಸಕ್ಕರಿನಾ ಕರಗಿಸಿ ಅಚ್ಚನ್ಯಾಗ ಹಾಕಿ, ಬ್ಯಾರೆ-ಬ್ಯಾರೆ ಗೊಂಬಿ ತಯಾರಿ ಮಾಡಿರ್ತಾರ. ಅಂದ್ರ, ಒಂದು ಆರತಿ ಸಟ್ನ್ಯಾಗ ತೆರ, ಆರತಿ, ಶಿವ, ಬಸವಣ್ಣ, ನವಿಲು, ಗಿಳಿ, ಕುದರಿ, ಪಲ್ಲಕ್ಕಿಯಂತಾವ ಬ್ಯಾರೆ-ಬ್ಯಾರೆ ಗೊಂಬಿ ಇರತಾವ. ಒಂದು ದೊಡ್ಡ ತಾಟ ಇಲ್ಲಾ ಪರಾತದಾಗ ಮಂಡಕ್ಕಿ ಹಾಕಿ, ಸಕ್ಕರಿ ಗೊಂಬಿ ಬೀಳದಂಗ ಅದರಾಗ ಹೊಂದಿಸಿಡತಾರ. ಸೋತಿಕಾಯಿ, ಮುಳಗಾಯಿ ಇಲ್ಲಾ ಉಳ್ಳಾಗಡ್ಡಿ, ಹೀರಿಕಾಯಿ ದುಂಡಗ ಹೆಚ್ಚಿ ಅದರ ಮ್ಯಾಲೇ, ತುಪ್ಪಾ ಇಲ್ಲಾ ಎಣ್ಣಿ ಒಳಗ ಎದ್ದಿದ ಬತ್ತಿ ಇಟ್ಟ್ರ ಸಕ್ಕರಿ ಆರತಿ.

ಸ್ಯಾವಂತಿ, ಚಂಡಹೂವು, ಮಲ್ಲಿಗಿ ಹೂವಿನ ದಂಡಿ ಹೆಣಿತಾರ. ಇವಾಗ ಬಿಡ್ರಿ, ಸಂತ್ಯಾಂಗ ಎಲ್ಲಾ ಸಿಗತಾವ, ತರತಾರ. ಆದ್ರ, ನಮ್ಮ ಮನ್ಯಾಗ ನಾವ ದಂಡಿ ಹೆಣಿತೀವಿ ಮಕ್ಕಳಿಗೆ ಹಾಕಾಕ. ದಂಡಿ ತಯಾರ ಆಗಿಂದ ಹೊಸಾ ಅಂಗಿ ಹಕ್ಕೊಂಡು ಹುಡಗ್ಯಾರ, ಹೊಸ ಸೀರ ಉಟ್ಟ ಹೆಣ್ಣಮಕ್ಕಳು ಆರತಿ ಹಿಡಕೊಂಡ ಓಣಿಗುಂಟ, "ಗೌರಿ ಗೌರಿ ಮ್ಯಾಣಾ ಗೌರಿ… ಕುಂಕುಮ ಗೌರಿ… ಅಣ್ಣಾನಂತಾ ಅವರಿಕೋಲ… ತಮ್ಮಾನಂತ ತವರಕೋಲ…" ಅಂತಾ ಹಾಡಕೋತ, ಗೌರಿ ಕುಂದ್ರಿಸಿರೊ ಮನಿಗ ಹೋಗತಾರ. ಹೀಂಗ ತಯಾರಾಗಿ ಹೊಂಟಿರೋ ಹೆಣಮಕ್ಕಳ ಆರತಿ ತಾಟನ್ಯಾಗಿನ ಸಕ್ಕರಿ ಗೊಂಬಿ ಕದಿಯಾಕ ಓಣ್ಯಾಗಿನ ಹುಡುಗುರು ಕಾಯತಿರತಾವ. ಯಾರ ಲಕ್ಷ್ಯ ಆರತಿ ತಾಟ ಮ್ಯಾಲೆ ಪುರಾ ಇರಂಗಿಲ್ಲೊ, ಅವರ ಸಕ್ಕರಿ ಗೊಂಬಿ ಕಣ್ಣಮುಂದ ಕಳವಾಗ್ತಾವ. ನಾವ ಆರತಿ ಬೆಳಗಾಗ ಹೊಕ್ಕಿದ್ದಾಗ, ನನ್ನ ಆರತಿ ತಾಟಿಂದ ನಮ್ಮ ಅಣ್ಣಾರ ಭಾಳ ಆರತಿ ಕದ್ದಾರ. ಈಗ ನೆನೆಸ್ಕೊಂಡ್ರ, ನಾವ ಸಣ್ಣೊರಿದ್ದಾಗಿನ ದಿನಮಾನ ಭಾಳ ಚಲೋ ಇತ್ತು ಅನ್ನಸ್ತ್ಯೇತಿ.
ಗೌರಿಗೆ ಆರತಿ ಮಾಡಿ, ಉಳದ ಸಕ್ಕರಿ ಗೊಂಬಿಗೆ ಮತ್ ಎರಡ ದೀಪಾ ಹಚ್ಚಿ, ಮನಿ ಬಾಗಲಿಗೆ, ಎತ್ತಿನ ಗ್ವಾಲದಿಗೆ, ಗ್ವಾಲದಿ ಮ್ಯಾಲಿನ ಗುಣದಾಗ ಇರೋ ಬರಮಪ್ಪಗ ಆರತಿ ಬೆಳಗುದು. ಹಿಂಗ್ ಬ್ಯಾರೆ-ಬ್ಯಾರೆ ತರಕಾರಿ ಇಲ್ಲಾ ಹಿಟ್ಟಿನ ದೀಪಾ ಮಾಡಿ ಐದ ದಿನಾ ಗೌರಿಗೆ ಆರತಿ ಬೆಳಗತಾರ. ಆಮ್ಯಾಲೆ ಗೆಳತ್ಯಾರ ಕೂಡ ಮನಿಮನಿಗೆ ಕೋಲ್ ಹೋಯ್ಯಾಕ ಹೋಗತಾರ. ಹುಡಗ್ಯಾರೆಲ್ಲಾ ಸೇರಿ ನಾಕ ಮಂದಿ, ಆರ ಮಂದಿದ ಗುಂಪ ಮಾಡಕೊಂಡು, ಓಣ್ಯಾಗ ಎಲ್ಲಾರ ಮನಿ ಮುಂದ ಹಾಡ ಹೇಳಕೋತ್ ಕೋಲ್ ಹಾಕತಾರ. ಕೋಲ ಹಾಕೋ ಹುಡಗ್ಯಾರಗೆ ಮನಿಯೋರ ಬಕ್ಷೀಸ ಕೊಡತಾರ. ರೊಕ್ಕಾ ಕೊಡತಾರ, ಇಲ್ಲಾಂದ್ರ ಏನಾರ ಉಡಗೊರೆ ಕೋಡತಾರ.
ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೊರಟಗೆರೆ ಸೀಮೆ | 'ಅಗಳೇ ಅಮಯ, ಮರುತ್ಬಿಟ್ಟಿದ್ದೆ... ಬೆಳ್ಳುದ್ದದೋವು ನಾಕು ಪುಳ್ಳೆ ಮುರ್ಕಂಡ್ ಬಾ...'
ಹುಣವಿ ದಿನಾ ಮನಿಮುಂದ ಕೋಲ್ ಹಾಕಾಕತ್ತಿದ್ದ ಮಕ್ಕಳನ್ನ ನೋಡಿ, ನಮ್ಮ ಅಮ್ಮ ಅಕಿ ಸಣ್ಣಕಿ ಇದ್ದಾಗ ಕೋಲ ಹಾಕತಿದ್ದಿದ ನೆನಸಕೊಂಡ ಹೇಳತಾಳ: "ನಾವ್ ಸಣ್ಣೊರ್ ಇದ್ದಾಗ ನಮ್ಮ ಅಪ್ಪ ಜಗ್ಗಷ್ಟ ಸ್ಯಾವಂತಿಗಿ ಹೂವ್ ತರಾಂವ್. ಅದರದ ಮಾಲಿ ಮಾಡಿ ಮರಕ್ ಇಟ್ಟ ದೊಡ್ಡ-ದೊಡ್ಡ ದಂಡಿ ಹೆಣಿತಿದ್ದವಿ. ಈಗ ಅಂತಾ ದಂಡಿ ಹೊತಗೊಳಾಕ ಆಗಂಗಿಲ್ ನಿಮಗ, ಅಷ್ಟ ವಜ್ಜ್ ಇರತಿದ್ವು. ಕೋಲುಂರಾ ಪ್ರತಿ ವರ್ಷಾ ಹೊಸಾವ ನಮ್ಮ ಮನ್ಯಾಗ. ಗೆಳತ್ಯಾರ ಕೂಡ ಮನಿಮನಿಗೆ ಕೋಲ್ ಹಾಕಾಕ ಹೊಕ್ಕಿದ್ವಿ. ಗೌರಿ ಮ್ಯಾಲೆ, ಎತ್ತಿನ ಮ್ಯಾಲೆ, ಹೊಲದಾಗಿನ ಬೆಳಿ ಮ್ಯಾಲೆ ಹಾಡ ಹೇಳಿ ಚಂದ ಕೋಲ್ ಹಾಕತಿದ್ವಿ..." - ಅಂದು ಹಿಂಗ್ ಹಾಡ ಹೇಳತಾಳ...
ಒಂಟೆತ್ತು ಇದ್ದಲ್ಲೇ ಎರಡೆತ್ತು ಆಗಲಿ
ಅಣ್ಣಾ ನಿನ್ನ ಭೂಮಿ ಬೆಳೆಯಲೇ…
ಕೋಲ್ ಮಲ್ಲಿಗಿ ಕೋಲಣ್ಣ…
ಹರಕೀಯ ಕೊಡ್ರೆವ್ ಹರಿಚ್ಚಂದ್ರ ರಾಯರಿಗೆ
ವರ್ಷಕ್ ಬರುವಂತಾ ಗೌರೇರಿಗೆ
ಕೋಲ್ ಮಲ್ಲಿಗಿ ಕೋಲಣ್ಣ…