ದೇಸಿ ನುಡಿಗಟ್ಟು - ಔರಾದ್ ಸೀಮೆ | ಎದ್ಯಾಗ್ ನಾಕ್ ಅಕ್ಷರ್ ಇಲ್ಲ ಖರೇ, ಅವರೋಟ್ ಶ್ಯಾಣೆ ಯಾರ್ಬಿ ಇಲ್ಲ

ಹಳ್ಳಿ ಮಂದಿಗ್ ತಮ್ಮ ಭಾಷಾ ಮ್ಯಾಲ್ ಅದೆಷ್ಟ್ ಪ್ರೇಮ್ ಅಂತೀರಾ? ಮನ್ಯಾಗ್ ತೆಲುಗು, ಮರಾಠಿ, ಉರ್ದು, ಹಿಂದಿ ಆಡ್ದುರ್ ಬಿ, ಹೊರಗ ಬಂದುರ್ ಸಾಕ ಕನ್ನಡ ಭಾಷ್ಯಾದಗೇ ಮಾತಾಡ್ತಾರ್. ಅವರ ಆಡೋ ಭಾಷಾ ಅವರಿಗ್ ಬರೀಲಕ್ ಬರಲೋದ್ರು ಬಿ ಅವರು ಮಾತಾಡೋದ್ ಬಿಟ್ಟಿಲ್ಲ. ಮಾತಿನಾಗೇ ಪದ ಕಟ್ಟಿ ಹಾಡಿ ಖುಶಿದಿಂದ ಸಂಸಾರ ಮಾಡ್ಯಾರ

ನಮ್ಮೂರಾಗಿಂದ ಹಿಂದ್ಕಿನ್ ಮಂದಿ ಯಾಗೊತ್ಬಿ ಶಾಳಿಗೇ ಹೋಗಿಲ್ಲ. ಈಗಿನಾಂಗ ಆಗ ಎಲ್ಲ ಮಾತಿಲ್ಲಿ ಸವಲತ್ತು ಬಿ ಇದ್ದಿಲ್. ಹಿಂಗಾಗಿ ಅವ್ರಿಗ್ 'ಅ' ಅಂಬಾ ಅಕ್ಷರ ಬರಲ್ಲ. ಅಕ್ಷರ ಅಂಬದೇ ಖುನಾ ಇಲ್ಲಾ ಅಂದ್ಮ್ಯಾಗ್ ಅವ್ರು ಪೇಪರ್ ಎಲ್ಲಿಂದ ಓದ್ತಾರ್... ಟಿವಿ ಎಲ್ಲಿ ನೋಡ್ತಾರ್...! ಇಂಥ ಜಮಾನಾದಾಗ ಹುಟ್ಟಿ ಜಿಂದಗಿ ಮಾಡಿದ ನಮ್ಮಾಯಿ ಮುತ್ತ್ಯಾಗ್ ಏನ್ ಬಿ ಖುನಾ ನೇ ಇಲ್ಲ; ಆದುರ್, ಅವ್ರು ಭಾಳ್ ಹಿಂದ್ಕಿಂದ್ ಮೊಗಲಾಯಿ ಮಂದಿ ಅಂತೇನ್ ತಿಳಿಬ್ಯಾಡ್ರಿ. ಅವ್ರ್ ಯದ್ರಾಗ್ ಬಿ ಕಮ್ಮ್ ಇಲ್ಲ. ಭಜನದಾಗ ತಕೋರಿ, ಕಿರ್ತನದಾಗ ತಕೋರಿ, ಪದಕಟ್ಟಿ ಕುಣಿಲಾಕ ಛಿಡಿಲಾಕ್... ಎಲದ್ರಾಗ್ ನಾ ಮುಂದ್ ತಾ ಮುಂದ್ ಅಂತಾರ್.

Eedina App

ಸೀಮಿ ಹೊಲಾ ಬಿತ್ಲಾತುರ್, ಹಂತಿ ಹೊಡಿಲತುರ್, ಮೊಹರಂದಾಗ, ಹಬ್ಬ-ಹುಣ್ಣಿಗ್, ಗುಡ್ಯಾಗ ಭಜ್ನಿ ಮಾಡ್ಲಾತುರ್, ಬಸವ ಜಯಂತಿ, ಬಾರ್ಸಿ ಹಬ್ಬಕ್, ಕೋಲ್ ಆಡ್ಲಾತುರ್. ಸಣ್ಣಾಟ, ದೊಡ್ಡಾಟದಾಗ ಪಾರಟ ಹಾಕಿ ಹೆಜ್ಜಿ ಹಾಕೋತಾ ತಕಥೈ ಅಂತ ಕುಣಿಲತುರ್. ಅಂದುರ್ ನಾಟಕ ನೋಡ್ಲಾಕ್ ಅಂತ ಬಂದಿಂದ್ ಸುತ್ತಾ ಏಳೂರಿಂದ ಮಂದಿ ಬೆಳಗನ್ ನಿದ್ದಿ ಕಟಾಸಿ ಕೂಡತಿದ್ರು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೊರಟಗೆರೆ ಸೀಮೆ | 'ಅಗಳೇ ಅಮಯ, ಮರುತ್ಬಿಟ್ಟಿದ್ದೆ... ಬೆಳ್ಳುದ್ದದೋವು ನಾಕು ಪುಳ್ಳೆ ಮುರ್ಕಂಡ್ ಬಾ...'

AV Eye Hospital ad

ಮತ್ತ್ ಹೆಣ್ಮಕ್ಕಳ ಏನ್ ಕಮ್ಮ್ ಅಂತೀರಾ...? ಸೋಬಾನ್ ಹಾಡಾ, ಬಿಸ್ಲಾತುರ್, ಕುಟ್ಲಾತುರ್, ಮದ್ಯಾಗ್ ನೈಯಣ್ಣಿ ಹಾಡು, ಪಾರಗೋಳ್ ಅಳ್ಳಾತುರ್ ಅಂದೂರ್ ತೊಟ್ಟುಲದಾಗ ತೂಕೋತಾ ಹಾಡೋದ್, ಹೊಲ್ದಾಗ್ ಸದಿ ಕಳಿಲತೂರ್, ಪಂಚ್ಮಿ ಹಬ್ಬಕ್ಕ ಬುಲಾಯಿ ಹಾಡಾ... ಹಿಂಗ್ ಎಲ್ಲ ಕಡಿ ಪದ ಕಟ್ತಾರ್ ಅವರೇ. ಧಾಟಿ ಕೊಟ್ಟಿ ಹಾಡ್ತಾರು ಅವ್ರೇ, ನಮ್ಮ್ ಮೊಗಲಾಯಿ ಮಂದಿ ಅಷ್ಟು ಹುಶ್ಯಾರ್ ಬಿಡಿ.

ಎದ್ಯಾಗ್ ನಾಕ್ ಅಕ್ಷರ್ ಇಲ್ಲ ಖರೇ, ಅವರೋಟ್ ಶ್ಯಾಣೆ ಯಾರ್ಬಿ ಇಲ್ಲ. ಇವ್ರು ಮುಂದ್ ಡಬಲ್ ಡಿಗ್ರಿ ಮಾಡಿನೋರ್ ಎದುಕ್ ಬರಲುರ್. ಮತ್ ಅವರಿಗ್ ಇದ್ದಷ್ಟ್ ದಯಾ, ಮಾಯಾ, ಮಮಕಾರ ಭಾಳ್ ಓದಿಂದ ಮಂದಿಗ್ ಇರಲ್ಲ ಅಂಬೋದು ಖರೇ ನೇ ಅದಾ.

ಹಳ್ಳಿ ಮಂದಿಗ್ ತಮ್ಮ ಭಾಷಾ ಮ್ಯಾಲ್ ಅದೆಷ್ಟ್ ಪ್ರೇಮ್ ಅಂತೀರಾ? ಮನ್ಯಾಗ್ ತೆಲುಗು, ಮರಾಠಿ, ಉರ್ದು, ಹಿಂದಿ ಆಡ್ದುರ್ ಬಿ, ಹೊರಗ ಬಂದುರ್ ಸಾಕ ಕನ್ನಡ ಭಾಷ್ಯಾದಗೇ ಮಾತಾಡ್ತಾರ್. ಅವರ ಆಡೋ ಭಾಷಾ ಅವರಿಗ್ ಬರೀಲಕ್ ಬರಲೋದ್ರು ಬಿ ಅವರು ಮಾತಾಡೋದ್ ಒಟ್ಟಾ ಬಿಟ್ಟಿಲ್ಲ. ಹಿಂಗಾಗಿ, ಅವರ ಆಡೋ ಮಾತಿನಾಗೇ ಪದ ಕಟ್ಟಿ ಹಾಡಿ ಖುಶಿದಿಂದ ಕುಣಕೋತ ಸಂಸಾರ ಮಾಡ್ಯಾರ. ಯಾ ಯಾ ಹಬ್ಬಗೋಳ ಹ್ಯಾಂಗ್ ಮಾಡ್ತಿದ್ರು, ಪದಕಟ್ಟಿ ಹ್ಯಾಂಗ್ ಹಾಡಿದ್ರು ಅಂತ ನೋಡರಿ.

ಕಲ್ಯಾಣದಲ್ಲಿ ಬಸವಣ್ಣ ಇರುವಾಗ
ಕಲ್ಲಿಗೆ ಯಾಕೆ ಪೂಜೆ ಮಾಡಲಿ...

- ಅಂತ ಕಲ್ಯಾಣ ಬಸವಣ್ಣಗ ನೆನಸಕೊಂಡಿ, "ಈ ದೇಹನೇ ಗುಡಿ ಇದ್ಹಾಂಗ," ಅಂದ್ಮೇಲೆ ಮತ್ತ್ಯಾಕ್ ಕಲ್ಲಿಗ್ ಪೂಜಾ ಮಾಡ್ತಿ ಅಂತ ಜವಾಬ ಹಾಕ್ತಾರ.

ಎಳ್ಳ ಅಮವಾಸ್ಯೆ ಎಂಬುದು ದೊಡ್ಡ ಹಬ್ಬ
ಇದು ದೊಡ್ಡ ಹಬ್ಬ ಸುಳ್ಳೆ ಹೋಳಗಿ ಮಾಡಲ್ಯಾಂಗ್
ಬುಟ್ಟಿ ತುಂಬಾಲ್ಯಾಂಗ್
ಮುಂದೆ ನಡೀರಿ ನೀವು ಗಂಡಸುರು
ಹಿಂದೆ ಬರ್ತೇವು ನಾವು ಹೆಂಗಸುರು
ಒಯ್ದು ಇಳಸರೀ ಬುಟ್ಟಿ ನಮ್ಮ ಹೊಲ್ದಾಗ್
ಸಣ್ಣ ಮೊಳಿನಾಗ
ಸೆರ್ಗಾ ಚೆಲ್ಲರೀ ನಮ್ಮ ಹೊಲ್ದಾಗ್
ಪೂಜೆ ಮಾಡ್ರೀ ಪಂಚ್ ಪಾಂಡವರಿಗಿ...

-ವರ್ಷಿಗೊಮ್ಮಿ ಎಳ್ಳ ಅಮಾಸಿಗ ಹೊಲ್ದದಾಗ ಹಿಂಗ್ ಹಾಡಕೋತಾ ಮನಿಮಂದಿಯೆಲ್ಲ ಹೊಲುಕ್ ಹೋಗಿ, ಒಣಗಿಂದ ಖಡಕ್ ರೊಟ್ಟಿ, ಭಜ್ಜಿ, ಜ್ವಾಳ ಬಾನಾ, ಕುಟ್ಟಿಂದ್ ಹುಗ್ಗಿ ಉಂಡಿ, ನಡುಕಟ್ಟಿಗ್ ಹುಂಚೆಗಿಡುಕ್ ಹಾಕಿಂದ ಜುಖಾಲಿಗ್ ತುಕೊಂಡಿ, ದೊಡ್ಡಜ್ವಾಳ್ ಅಂಬಲಿ ಕೊಂಡಿ, ಬೇನ್ ಗಿಡದ್ ಕೆಳಗ್ ಮಕೊಂಡುರ್ ಅಂದುರ್ ಮುಗೀತು - ಮತ್ತ್ ಸಂಜಿಗೇ ಎಚ್ರಿಕಿ ಆಗೋದು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೆ ಆರ್ ಪೇಟೆ ಸೀಮೆ | ತಿಂಗ್ಳು ಪೂರ್ತಿ ಬಾಡೇ ತಿಂದಂಗೆ ಅಬ್ಬ ಮಾಡ್ಬೇಕು ಅಂದ್ರೆ ಆಯ್ತದಾ?

ಛಳಗಾಲ್ ಬಂತಂದ್ರ ಸಾಕ್, ಕಡ್ಡಿ, ತೊಗ್ರಿ ರಾಶಿ ಇರ್ತಾವ್. ಹಿಂಗಾಗಿ, ಹೊಲ್ದಾಗೇ ಮಕೊಂಬದ್ ರಾಟಿ ಇರ್ತುದ್. ಸುಮ್ಮುನ್ ಮಕೊಂಡುರ್ ದೊಡ್ಡಜ್ವಾಳ್ ತೆನಿ ತಿಲ್ಲಾಕ್ ಹಕ್ಕಿ ಬರ್ತಾವಂತ ಗುಡ್ಸಿ ಮ್ಯಾಲ್ ಕುಂತಿ ಗಂಗಾಳ್ ಭಾರ್ಸಕೋತಾ ಕುಂತಿ. ಹಂಗೇ ಕಟ್ಟಿದ್ ತತ್ವದ ಪದ ಹಾಡ್ತಾ ಇರ್ತಾರ್. ಬೆಳಗನಾ ಹಕ್ಕಿ ಹೊಡಿತಾರ್.

ಅತ್ತಿ-ಮಾವ ಹೊಲವ ಕೊಟ್ಟಾರ
ಮಾಡಿ ಉಳ್ಳಾಕೆ ಎರಡು ಎತ್ತುಗೊಳು ಖಳವಿ
ಕೊಟ್ಟಾರ್ ಮಾಡಿ ಉಳ್ಳಾಕೆ

ಓಂಕಾರದ ಬೀಜ ಕೊಟ್ಟಾರ್
ಹೊಲವ ಬಿತ್ತೊದಕೆ
ಓಂ-ಶ್ಯಾಮಾ ಕೂರ್ಗಿ ಖಳವ್ಯಾರ್
ಹೊಲವ ಬಿತ್ತೊದಕೆ
 
ನಾಲ್ಕು ಕಾಲಿನ ಮಂಚ ಕಳಶ್ಯಾರ ಹೊಲವ ಕಾಯುವುದಕೆ
ಆರು ಛಿಡಿಯಾ ಬಿಗಿದು ಕಟ್ಯಾರ್
ಮೇಲೆ ಹತ್ತುವುದಕೆ

ಬಾರಾ ಮಣದ ಕವಣಿ ಖಳವ್ಯಾರ್
ಹಕ್ಕಿ ಹೊಡೆಯುವುದಕೆ
ಅಂಕಿ ಮಾಡಿ ಗುನಿಯ ಉಳಿಸಿ
ಗೂಡು ಮುರಿಯೋಕೆ

ಹಿಂದಾ ಖೊಲ್ಲಿ ಮುಂದಾ ಪಡಸಾಲೆ
ಮಾಲು ತುಂಬೋಕೆ
ಸೋಳಾ ಎತ್ತುಗೊಳು ಖಳ್ಸಿ ಕೊಟ್ಟಾರ್
ಮಾಲು ಎಳೆಯುದಕೆ...

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
15 ವೋಟ್
eedina app