ದೇಸಿ ನುಡಿಗಟ್ಟು - ರಾಮನಗರ ಸೀಮೆ | ನಮ್ಮೂರ್ನಲ್ಲಿ ಮನ್ಸಸ್ಟೇ ಅಲ್ಲ - ಹೊಲ, ಗೋಮಾಳ, ಸ್ಮಸಾಣನೂ ಕವ್ಲೊಡ್ಕಂಡವೆ!

ನಮ್ಮೂರ್ನ ಕೇರಿಗಳ ಬಾಸೆ, ಸಾಸ್ತ್ರಾ, ರೀತೀ, ರಿವಾಜ್ಗಳೆಲ್ಲ ಬೇರ್ಬೇರೆ. ಮೊದ್ಲಿಗೆ ಬೊಮ್ಗಳ್ಕೇರಿ. ಎರಡ್ನೇದಾಗಿ ಸ್ವಾಮ್ಗಳ್ದು. ಮೂರ್ಬೀದಿ ಕೂಡೋ ಮೂರ್ನೆ ಕೇರಿ ಗೌಡ್ರುದು. ನಾಡ್ಗೂ ಕಾಡ್ಗೂ ಸೇರೋ ನಾಯಕ ರೆಡ್ಡಿಗಳ್ದು ‌ನಾಲ್ಕನೇ ಕೇರಿ. ಐದ್ನೇದು ಸಾಯೇಬ್ರಿಗ್ ಸೇರಿದ್ದು. ಗಲ್ಲೇಪಾನಿ ಸಿಗೋ ಆರ್ನೆಕೇರಿ ಮಾದಿಗ್ರುದು. ತಿಪ್ಪೇ ಮೇಲಿನ್ ದಿಬ್ಬದ್ಕೇರಿ ಹೊಲೆಯರ್ದು

ನಮ್ಮೂರಿನ ಗೌರ್ಮೆಂಟ್ ಇಸ್ಕೂಲು, ಮಳೆ-ಬಿಸಿಲು-ಗಾಳಿಗೆ ಸೀದಾ ತೆರ್ಕೊಂಡ ಚಾವ್ಡಿ, ಜೋತ್ಬಿದ್ದ ಮುರ್ಕುಲು ಬಾಗ್ಲು, ಕಿತ್ತೋದ್ ಕಿಟ್ಕಿ, ಅಲ್ಲಲ್ಲಿ ಇಲಿ-ಹಾವು-ಚೇಳ್ಗಳಿಗೆ ಬಾಯ್ಬಿಟ್ಟ ಬಿಲಗಳಿದ್ರೆ, ಅಂಗಳದಾಗೆ ಆಲ, ಅರಳಿ, ಮಾವು, ನೇರ್ಳೆ, ಚೀಬೆ ಮರ್ಗಳಿಗೆ ಹಬ್ಕೊಂಡ ಕಲರ್ಕಲರ್ ಕಾಡ್ಬಳ್ಳಿ ಹೂ, ಗಿಡಗಳ ಸುತ್ತಾ ಚಿಲಿಪಿಲಿಗುಟ್ಟೋ ತರಾವರಿ ಅಂದದ ಪಕ್ಸಿಗಳೆಲ್ಲವೂ ಜೊತ್ಗೂಡಿ ಹೇಳುವಂಗಿತ್ತು - 'All the living beings are inheritors of the earth.'

ನಮ್ಮೂರ್ನಲ್ಲಿ ಬರೋಬ್ಬರಿ ಏಳ್ಕೇರಿಗಳು. ಒಂದೊಂದು ಕೇರಿ ಜನ್ಗಳ್ ಬಾಸೆ, ಸಾಸ್ತ್ರಾ, ಸಂಪ್ರದಾಯ, ಆಚರಣೆ, ಅಲಂಕಾರ, ರೀತೀ, ರಿವಾಜ್ಗಳೆಲ್ಲ ಬೇರ್ಬೇರೆಯೇ. ಊರ್ ಮೊದ್ಲಿಗೆ ಬೊಮ್ಗಳ್ಕೇರಿ. ಎರಡ್ನೇದಾಗಿ ಸ್ವಾಮ್ಗಳ್ದು. ಮೂರ್ಬೀದಿ ಕೂಡೋ ಮೂರ್ನೆ ಕೇರಿ ಗೌಡ್ರುದು. ನಾಡ್ಗು ಕಾಡ್ಗು ಸೇರೋ ನಾಯಕ ರೆಡ್ಡಿಗಳ್ದು ‌ನಾಲ್ಕನೇ ಕೇರಿ. ಐದ್ನೇದು ಸಾಯೇಬ್ರಿಗ್ ಸೇರಿದ್ದು. ಗಲ್ಲೇಪಾನಿ ಸಿಗೋ ಆರ್ನೆಕೇರಿ ಮಾದಿಗ್ರುದು. ತಿಪ್ಪೇ ಮೇಲಿನ್ ದಿಬ್ಬದ್ಕೇರಿ ಹೊಲೆಯರ್ದು. ಮನ್ಗಳಸ್ಟೇ ಅಲ್ಲ ಜಾಗ, ಜಮೀನು, ಹೊಲ, ತೋಟ, ಗದ್ದೆ, ಗೋಮಾಳ, ಸ್ಮಸಾಣನೂ ಸೇರಿ ಕವ್ಲೊಡ್ಕಂಡವೆ. ಇನ್ಮಿಕ್ಕಿದ್ದೆಲ್ಲ ಕಾಡು-ಮೇಡು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಔರಾದ್ ಸೀಮೆ | ಎದ್ಯಾಗ್ ನಾಕ್ ಅಕ್ಷರ್ ಇಲ್ಲ ಖರೇ, ಅವರೋಟ್ ಶ್ಯಾಣೆ ಯಾರ್ಬಿ ಇಲ್ಲ

ನಮ್ಮೂರ್ನ ದೊಡ್ಡೋರ್ ಅನ್ಸಕೊಂಡ್ವ್ರ ಮನ್ಗಳಲ್ಲಿ ಸ್ನಾನದ್ ಮನೇನೂ ಟಾಯ್ಲೇಟ್ನೂ ಒಟ್ಟಿಗೇ ಕಟ್ಸ್ಕೊಂಡವ್ರೆ. ಆದ್ರೆ, ಪ್ರತೀ ಸಾರೀನೂ ಅವ್ರ್ಗಳ ಕಕ್ಕಸ್ಗುಂಡಿ ತುಂಬಿ, ಗಬ್ಬು ಊರ್ ಹೊಲ್ಗೇರಿಗೆ ನಾರ್ವಾಗ, ನಮ್ಬೀದಿಯ ಹಿರಿಕ್ರಾದ ಪೆದ್ದಣ್ಣ-ಕಾಳಯ್ಯನಂತವ್ರ್ನೇ ಕರ್ಸ್ಕೊಂಡು, ನಮ್ ಜನಗಳಲ್ಲಿ ಮೂರುಮುಕ್ಕಾಲ್ ಓದಿ ಮುಕ್ಮಂತ್ರಿ ಆದೋರ್ನ ಬಿಟ್ಟು ಸರ್ದಿ ಸಾಲ್ನಲ್ಲಿ ಮನ್ಗಿಸ್ಟು ಹೊಂತ್ಕೆ ನಿಗಾ ಮಾಡಿ ಆಳ್ಗಳ್ನ ಜೊತ್ಗೊಯ್ದು ಅವ್ರಗಳ್ ಕಕ್ಕಸ್ ಬಾಚಿ ಬಳ್ದು ಒಪ್ಪ ಮಾಡಿ ನಡುಬಗ್ಸಿ, "ದಣ್ಗಳೇ, ಮುಂದಿನ್ ಸಾರ್ಗೂ ನಮ್ನೇಯ ಕೂಗ್ರಿ, ಆಗ ರವಸ್ತು ಹೆಚ್ಗೆ ದಯ್ಪಾಲ್ಸಿ," ಅಂತ, ಗೋಗರಿತಲೇ ಅವ್ರ್ಗಳ ಲೇಬಲ್ ಅಂಟ್ಸಿದ ಮೆಟ್ಗಳಿರುವ ಪಾದ್ಗಳಿಗೆ ಮೂರಡಿ ದೂರ್ದಿಂದ್ಲೇ ಅಡ್ಬಿದ್ದು ಉಧೋ ಉಧೋ ಅಂತ ಮೆರ್ಸಿ;‌ ಗಡಂಗಿನಾಚೆಯ ಬಯಲಲ್ಲಿ ಕುರ್ಚುಲು ಪೊದೆಗಳ್ ಮದ್ಯೆ ಪುಳ್ಳೆಗಳ ಬೆಂಕಿ ಹೊಗೆಗೆ ಸುಟ್ಟ ದನ್ದ ಕೊರ್ಬಾಡು ಜಗೀತ, ಕುಡಿಯೋ ಸ್ಟಿಕ್ಕರ್ ಎಣ್ಣೆಗೆ ಗೋಲಿ ಸೋಡಾ ಬೆರ್ಸಿ, '64' ಬೀಡಿ ಸೇಯ್ತಲೇ ಮತ್ನಲ್ಲಿ ಮರ್ತೇಬಿಡ್ತಾರೆ ಕಕ್ಕಸ್ ಬಾಚಿದ್ದು! ಮೆತ್ಗೇ ಅವ್ರವ್ರ್ ಮದ್ಯೇನೆ ಮಾತಾಡ್ಕೊಳ್ತಾರೆ, "ಏಯ್ ಸುಮ್ಕಿರ್ಲಾ ನನ್ಗ್ ಹುಟ್ಟಿದ್ ಕಂಕ್ಳು ಕೂಸು ನನ್ಮೇಲಿಯೇ ಹೇತ್ಕೊಂಡ್ ಬಿಟ್ಟಾಗ ಅದ್ರು ಕುಂಡೀನೆ ಕುಯ್ದಬಿಟ್ಟಾನ್ಯೆ, ಮೂತಿ ಮುಸ್ಡೀನ ಮುಚ್ಕಳ್ದೆ ಅಂದ್ರಂಡ್ ತೊಳ್ದಿ ಹೊಟ್ಗ್ ಅನ್ನ ತಿನ್ನಲ್ವೇ? ಹಂಗೆಯೇ ಇದ್ಕೂಡ," ಅಂದಿ, ಮನೆಗ್ ಬಂದಾಗ ಬಾಡ್ನೆಸ್ರು ಗಮ್ಗುಟ್ಟೋದ್ ಮೂಗುಗ್ ರಾಸುದ್ರೂ, "ಯಾಕೋ ಹೊಟ್ಟೆ ಸರಿ ಇಲ್ಲ, ಬೆಳ್ಗಾದ್ರೆ ತಂಗ್ಳು ಬಾಡು ಬೇಜಾನ್ ರುಚಿ ಕೊಡ್ತಯ್ತೆ," ಅನ್ನೋ ನೆಪ್ವೇಳಿ, ಮೂರ್ನಾಕ್ದಿನ ರಾಗಿ ಅಂಬ್ಲಿನೂ ಕುಡೀದೆ ಬದ್ಕೋ ನಾವ್ಕೂಡ ಕಲಿತಿರೋದು ಒಂದೇ ಇಸ್ಕೂಲ್ನಲ್ಲಿ ಅನ್ನೋದು ಜಗತ್ತೇ ಖುಷಿಪಡೋ ವಿಚಾರ.

Image

ಹಿಂಗಿರ್ಬೇಕಾದ್ರೆ ಏಳೂವರೆ ದಿವ್ಸ್ದಿಂದೆ ನಮ್ಮೂರ್ನ ಇಸ್ಕೂಲಿಗೆ ಹೊಸ ಮಾಸ್ಟ್ರು ಬಂದ್ರು. ಅವ್ರೆಸ್ರು ಅದೆಂತದೋ ಬಟ್‌ರಂತೆ. ನಿಮ್ಸಕ್ಕೊಂದ್ಸಲ ಜೈ ಬಜರಂಗ್ ಬಲಿ ಪಟ್ಸ್ತಾ ಅವ್ರ್ ಎದೇಗೂ ಆಕಾಸಕ್ಕೂ ಮುತ್ತಿಕ್ಕೋಳ್ವಂಗೆ ಮುಕ್ಕೋಳವ್ರು. ಇವ್ರ್ ಬಂದ್ಮೇಲೆ ಅದೇನೊ ಹೊಸ ಪರಿಪಾಟ್ಲು ಸುರುವಾಯ್ತು. ಒಂದಾಗ್ ಕೂಡ್ಕಲ್ತ್ ಆಡ್ತಿದ್ದ ನಮ್ ಇಸ್ಕೂಲ್ ಮಕ್ಳು ದೂರ್ದೂರ್ವಾಗಿ ಆಡೋದು, ಕಲ್ಯೋದು, ಅದ್ಯಾವ್ದೋ ಅರ್ಥವಾಗ್ದ ಮಂತ್ರ-ಹಾಡು ಆಚರ್ಣೆಗಳ್ನ ಮಾಡೋದು, ಇವು ನಮ್ಮೂರ್ನ ಮೂರ್ಕೇರಿ ಮಕ್ಳಿಗೆ ಕಿಂಚಿತ್ತಾದ್ರು ಅರ್ಥವಾಗ್ಲು ಹೇಗ್ಸಾಧ್ಯ? ಆ ಮಾಸ್ಟ್ರು ನಮ್ನ ಹತ್ರಕ್ಕೂ ಬಿಟ್ಕೊತಾನೆ ಇರ್ಲಿಲ್ಲ. ಅವ್ರ್ ಬರೋದಿರ್ಲಿ, ಕೊನೇ ಪಕ್ಸ ನಮ್ಮೂರ್ನ ಮಿಕ್ಕೇರಿ ಮಕ್ಳು ಜೊತೆಯಾಗಕ್ಕೂ ಬಿಡ್ತಿರ್ಲಿಲ್ಲ.

ಒಂದಿನ ನಮ್ ಇಸ್ಕೂಲ್ನಲ್ಲಿ ಸ್ವಾತಂತ್ರದ ಅಮೃತ್ಮಹೋತ್ಸವ ಆಚರಣೆಗೆ ಅಂಗ್ಳ ಗುಡ್ಸಿ, ತಪ್ಪೆ ಸಾರ್ಸಿ ಚಿತ್ತಾರದ್ ರಂಗೋಲೆ ಬಿಟ್ಟು, ಸ್ಟಾಪ್ರೂಮು-ತರ್ಗತಿಗಳು ಮತ್ತೆ ಶೌಚಾಲಯಗಳ್ನೂ ನಾವ್ ಕ್ಲೀನ್ ಮಾಡ್ತಿದ್ರೆ, ಆ ನಾಲ್ಕೇರಿ ಮಕ್ಳುನ್ನ ಗುಡ್ಡೆ ಹಾಕ್ಕೊಂಡು ಈ ಮಾಸ್ಟ್ರು ಧ್ವಜಾರೋಹಣಕ್ಕೆ ವೇದ್ಕೆಗೆ ಸಂಬಂಧಿಸಿದ್ ಕೆಲ್ಸಾನ ಬಾರಿ ಜೋರಾಗ್ ಮಾಡ್ತಿದ್ರು. ನಾವ್ ಮೂರ್ಕೇರಿ ಮಕ್ಳು ಬಿಟ್ಬಾಯಿ ಬಿಟ್ಕೊಂಡೇ ತಲೆ ಕೆರ್ಕೊಂಡು, "ಯಾಕೀ ಸಾರಿ ಎರಡೆರಡು ಧ್ವಜಕಂಬ ನೆಟ್ಟವ್ರೆ...?" ಅಂದ್ಕಂಡ್ರು. ಅದ್ರಲ್ಲೊಂದು ಚಿಕ್ದು, ಇನ್ನೊಂದು ದೊಡ್ದು. ಇವ್ತ್ರು ಮುಂದೆ ಭಾರ್ತಾಂಬೆ, ಗಾಂಧಿ, ಅದ್ಯಾರೋ ವಿ ಡಿ ಸಾರಿಕರ್ ಅಂತೆ ಮೂರೇ ಮೂರ್ ಫೋಟೋಗಳು. ಅಲ್ದೆ ನಮ್ ಇಸ್ಕೂಲ್ ಫುಲ್ಲೂ ಕೇಸ್ರಿ ಕಲರ್ ಮೆತ್ಕೊಂಡಿತ್ತು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಅಳ್ವಿ ಪ್ರದೇಸ ಅಂದ್ರೆ ವಜ್ರದ ಗಣಿಗಿಂತ್ಲೂ ಹೆಚ್ಚು ನಮ್ಗೆ

ವೇದ್ಕೆ ಕಾರ್ಯಕ್ರಮ ಸುರುವಾಗೋ ಮುಂಚೆ ಆ ದೊಡ್ ಕಂಬದ್ ಮೇಲೆ ಕೇಸ್ರಿ ಕಲರ್ ಬಾವ್ಟ ಹಾರ್ಸಿದ ಆ ಮಾಸ್ಟ್ರು, ನಾಲ್ಕೇರಿ ಮಕ್ಳು ಮತ್ತೇ ವೇದ್ಕೆ ಮೇಲೆ ಅದ್ರ ಅಕ್ಪಕ್ಕ ಇದ್ದೋರು ಕೈ ಮುಂದೆ ಮಾಡ್ಕೊಂಡು, ಯಾವ್ದೋ ಹಾಡೇಳಿ, ಆ ಧ್ವಜಕ್ಕೆ ಕೈ ಮುಗ್ದ ಮೇಲಿಯೇ ಭಾರತದ್ ಧ್ವಜ ಹಾರ್ಸಿ, 'ವಂದೇ ಮಾತರಂ'ನ ನಮ್ಗೂ ಸೇರ್ಸ್ಕೊಂಡ್ ಹಾಡ್ಸಿ, 'ಬೋಲೋ ಭಾರತ್ ಮಾತಾಕಿ ಜೈ' ಹೇಳ್ಸಿ, ಸ್ವಾತಂತ್ರ್ಯ ದಿನದ ಶುಭಾಶಯನೂ ಹೇಳ್ದೆ ನಮ್ ಮಾಸ್ಟ್ರು, ಫೋಟೋದಲ್ಲಿದ್ದ ಸಾರಿಕರ್ ಬಗ್ಗೆ ಮಾರುದ್ದ ಬಾಷ್ಣ ಬಿಗ್ದು, ಜೋರ್ದನೀಲಿ, ಕ್ರಾಂತಿಕಾರಿ ನಾಯಕ, ಆದರ್ಶ ದೇಶಭಕ್ತ ಅಂತೇನೇನೋ ಅರ್ಚಿದ್ರು. ನಾನು, "ಮಾಸ್ಟ್ರೇ ನಮ್ ಬಾವುಟದ್ ಮಧ್ಯೆ ನೀಲಿ ಕಲರ್ ಕೂಡಾ ಐತೆ. ಆದ್ರೂ ಎಲ್ರು ಯಾಕ್ ಬರೀ ತಿರಂಗಾಂತ ಹೇಳ್ತಾರೆ?" ಅಂತ ಬಹುಕಾಲದ ಡೌಟು ಕೇಳಿದ್ಕೆ, ನಮ್ ಮಾಸ್ಟ್ರು ಮುಖಾನೊಂತರ ಮಾಡ್ಕೊಂಡು, ಮರುಮಾತ್ನಾಡ್ದೆ ಬಿಸಿಯೂಟ ಮಾಡೋ ಆಂಟಿಗೆ, "ಹೇ ಚೌದ್ರಿ, ಬೇರ್ಬೇರೆ ಪಂಕ್ತಿ ಮಾಡ್ಸಿ ಆ ಕೇಸ್ರಿಬಾತ್ ಹಂಚು," ಅಂತೇಳಿ ಸ್ಟಾಫ್ರೂಂ ಸೇರ್ಕೊಂಡ್ರು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೊರಟಗೆರೆ ಸೀಮೆ | 'ಅಗಳೇ ಅಮಯ, ಮರುತ್ಬಿಟ್ಟಿದ್ದೆ... ಬೆಳ್ಳುದ್ದದೋವು ನಾಕು ಪುಳ್ಳೆ ಮುರ್ಕಂಡ್ ಬಾ...'

ನಾನೋ ಎರಡೆರಡ್ ಸಾರಿ ಕೇಸ್ರಿಬಾತ್ ತಿಂದು ಸಿಹೀನೆ ವಾಕರ್ಸ್ಕೊಂಡು, ತಿಂದುದ್ ಅಷ್ಟನ್ನೂ ಇಸ್ಕೂಲ್ನ ಮೂಲೆಲಿದ್ದ ಚೀಬೆ ಮರದ್ ಬುಡಕ್ಕೆ ಕಕ್ಕಿ ಸುಧಾರ್ಸ್ಕೊಂಡ್ ಸೀದ ಬಂದು, ಕಣ್ಣಿಗ್ ಕಂಡ  ಸ್ಟಾಫ್ರೂಂ ಪಕ್ಕದ ಮಡ್ಕೆ ನೀರ್ನ ಗಟ್ಗಟಾಂತ ಗಂಟ್ಲಿಗಿಳಿಸ್ತಿದ್ದೆ. ಅಷ್ಟ್ರಲ್ಲೇ ಯಾರೋ ಜೋರಾಗಿ ಹೆಕ್ಕತ್ತಿನ್ ಮೇಲೆ ಹೊಡುದ್ರು. ಯಾರಂತ ನೋಡಕ್ಕೆ ಹಿಂದೆ ತಿರುಗ್ತಿದ್ದಂಗೇ ಕಣ್ಣು ಮಂಜ್ಮಂಜಾಗಿ ತಲ್ಸುತ್ತಿ ಕೆಳಗ್ ಬೀಳ್ತಿದ್ ನನ್ ಕೆನ್ನೆಗೆ ಇನ್ನೊಂದ್ ಏಟು ಮೊದ್ಲುದ್ಕಿಂತ ಜೋರಾಗ್ಬಿತ್ತು. ಆಮೇಲೇನಾಯ್ತೊ ಏನೋ ಗೊತ್ತಿಲ್ಲ. ಎಚ್ರವಾಗ್ ಕಣ್ಬಿಟ್ಟ್ ನೋಡಿದ್ರೆ ನನ್ಗೆಲ್ರೂ ಕಾಣ್ಸ್ತವ್ರೆ, ಅವ್ರ್ ಮಾತೂ ಕೇಳಿಸ್ತೈಯ್ತೆ. ಆದ್ರೆ ನಾನ್ ಮಾತ್ರ ಯಾರ್ಗೂ ಕಾಣ್ಸ್ತಿಲ್ಲ, ನನ್ ಕೂಗು ಯಾರೊಬ್ರುಗೂ ಕೇಳಿಸ್ತಾನೂ ಇಲ್ಲ. ಅಚ್ಚರಿ ವಿಷ್ಯಾ ಅಂದ್ರೆ ಎಷ್ಟೇ ಪ್ರಯತ್ನ ಪಟ್ರೂ ನನ್ ಕಾಲು ಭೂಮಿಗ್ ತಾಗ್ತಾನೆ ಇಲ್ಲ, ಒಳ್ಳೆ ಗಾಳಿಲ್ ತೇಲಾಡ್ತಿದೀನಿ ಅನ್ಸತೈತೆ. ನಮ್ ಹಟ್ಟೀಲಿ ನನ್ ಫೋಟೋಗ್ ಹಾರ ಕುಂಕುಮ ಹಾಕಿ ಸತ್ತೋದ್ ನಮ್ ತಾತ-ಅಜ್ಜಿ ಫೋಟೋಗಳ್ ಪಕ್ಕ ಮೊಳೆ ಹೊಡ್ದ್ ತೂಗಾಕವ್ರೆ. ನಮ್ಮೂರ ಇಸ್ಕೂಲ್ನಲ್ಲಿ ನಮ್ ಮಾಸ್ಟ್ರು ಸನ್ಮಾನ ಮಾಡ್ತಾ ಹಣೆತುಂಬ ಉದ್ದ ಕೇಸ್ರಿ ನಾಮ ಬಳ್ಕೊಂಡು ನಮ್ಮೂರ್ನ ನಾಲ್ಕೇರಿ ಜನ್ಗಳ್ ಆಶಿರ್ವಾದ ಪಡಿತವ್ರೆ. ಇವ್ತರು ಮಧ್ಯೆ ನಮ್ಮೂರ್ನ ಉಳ್ದ್ ಮೂರ್ಕೇರಿಯ ಸಾಯೇಬ್ರು ಮಕ್ಳು ಪಂಚರ್ ಶಾಪಲ್ಲಿ, ಮಾದಿಗ್ರ ಮಕ್ಳು ಇಸ್ತ್ರಿ-ಚಪ್ಪಲ್ ಅಂಗ್ಡೀಲಿ, ಹೊಲೆಯರ್ ಐಕ್ಲು ಚರಂಡಿ-ಕಕ್ಕಸ್ಗುಂಡಿಗಳಲ್ಲಿ ಕಸ ಬಾಚ್ತ ಬೀದೀಲ್ ನಿಂತವ್ರೆ. ಇವ್ರೆಲ್ಲಾ ನಾನು ಇಸ್ಕೂಲಿಗ್ ಹೋಗ್ಬೇಕಾದ್ರೆ ನನ್ ಜೊತ್ಜೊತೆಗೆ ಇಸ್ಕೂಲಿಗ್ ಬರೋರು, ಕಲಿಯೋರು, ಆಡೋರು... ಆದ್ರೆ ಈಗ್ಯಾಕೆ ಹಿಂಗೆ? ಅಂತ ಯೋಚ್ನೆ ಮಾಡ್ತಾ...

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
1 ವೋಟ್