ದೇಸಿ ನುಡಿಗಟ್ಟು - ಕಲಬುರಗಿ ಸೀಮೆ | ಸೋಸಿ ಬಂದಳಂದರ ಫ್ರೀ ಕೆಲಸದವಳು ಸಿಕ್ಕಳಂತ ಅನ್ಕೋಬ್ಯಾಡ್ದರೀ ಅಕ್ಕೋರೇ...

"ಸೋಸಿ ಬರೊದಕ್ಕಿಂತ ಮೊದಲೆ ಡಿಸೈಡ್ ಮಾಡಿಬಿಟ್ಟಿರೇನು - ಅವಳು ಹೊಂದಕೊಳ್ಳಲ್ಲಂತ! ಅಲ್ಲ, ಅವಳಾ ಯಾಕ ಹೊಂದಕೋಬೇಕು? ನೀವು ಮೊದಲು ಹೊಂದಕೊಳ್ಳೋ ಪ್ರಯತ್ನ ಮಾಡಬಾರದ್ಯಾಕ?" ಅಂದೆ. "ಐ... ನಮದೇನ ಇಲ್ಲರಿ. ಅವರು ಗಂಡ-ಹೆಂಡತಿ ಛಲೋ ಇದ್ದರಾಯಿತು. ನಮದೇನು ಹ್ಯಾಂಗರ ನಡಿತದ..." ಅಂದ್ರು ಬಾಜುಮನಿ ಅಕ್ಕೋರು

ಸಂಜಿ ಮುಂದ ಮನಿ ಮುಂದುಗಡಿ ವಾಕಿಂಗ ಮಾಡುವಾಗ ಬಾಜು ಮನಿ ಅಕ್ಕೋರು ಜ್ವಾಳ ಬೀಸಲಾಕ ಗಿರಣಿಗಿ ಹೋಗತಿದ್ದರು. ನನಗೂ ಮಾತಿಗೊಬ್ಬರು ಸಿಕ್ಕರು ಅಂತಾ, "ಏನ್ರೀ ಅಕ್ಕೋರೆ... ಭಾಳ ದಿನ ಆತು ಭೇಟಿಯಾಗಿ, ಎನ್ ಮಗನ ಮದಿ ತಯಾರಿದಾಗ ಭಾಳ ಬಿಜಿ ಇದ್ದಂಗಿದ್ದರಿ," ಅಂದೆ.

"ಹೌದ್ರೀ, ಇನ್ನ ಒಂದು ತಿಂಗಳ ಉಳಿತ ನೋಡ್ರೀ," ಅಂತ ತಲಿ ಮೇಲಿನ ಜ್ವಾಳದ ಡಬ್ಬಿ ಕೆಳಗಿಟ್ಟರು. ಇಬ್ಬರು ಮನಿ ಮುಂದ ಝಿಡಿ ಮ್ಯಾಲ ಮಾತಾಡತ ಕುಳಿತೆವು.

"ಮತ್ತ... ಎನಾಂತಳ ಸೋಸಿ? ಫೋನ್ದಾಗ ಮಾತಾಡತೀರೋ ಇಲ್ಲೋ?"

"ಐ... ಮಾತಿಗೇನು? ದುನೇದು ಮಾತಾಡತಾಳ. ಅದೆಲ್ಲ ಚಂದ ಹಳಾ. ಆದರೂ, ನಮ್ಮ ಮನಿಗಿ ಬಂದ ಮ್ಯಾಲನ ಗೊತ್ತಾಗತದ ನೋಡ್ರೀ ಹಕಿಕತ್. ಮಗನ ಮದಿದು ಖುಷಿ ಒಂದ ಕಡಿ ಆದರ, ಆತಂಕನೂ ಇದ್ದೆ ಇರತಾದ ನೋಡ್ರೀ..."

"ಆತಂಕ ಯಾಕ...?"

"ಅದ... ಅತ್ತಿ ಆಗತೀನಿ, ಬರೋ ಸೋಸಿ ಹೆಂಗರತಾಳೋ, ನಮಗ ಹೊಂದಕೊತಾಳೋ ಇಲ್ಲೋ... ಇವೇ ಆತಂಕ ನೋಡ್ರೀ. ಇವತ್ತ ನಾಳ ಹೊಂದಾಣಿಕಿ ಅಂಬೋದು ಭಾಳ ಕಠಿಣ ಆಗ್ಯಾದ."

Image

"ಏನ್ರೀ ಅಕ್ಕೋರೇ, ಸೋಸಿ ಬರೊದಕ್ಕಿಂತ ಮೊದಲೆ ಡಿಸೈಡ್ ಮಾಡಿಬಿಟ್ಟಿರೇನು - ಅವಳು ಹೊಂದಕೊಳ್ಳಲ್ಲಂತ! ಅಲ್ಲ, ಅವಳಾ ಯಾಕ ಹೊಂದಕೋಬೇಕು? ನೀವು ಮೊದಲು ಹೊಂದಕೊಳ್ಳೋ ಪ್ರಯತ್ನ ಮಾಡಬಾರದ್ಯಾಕ?"

"ಐ... ನಮದೇನ ಇಲ್ಲರಿ. ಅವರು ಗಂಡ-ಹೆಂಡತಿ ಛಲೋ ಇದ್ದರಾಯಿತು. ನಮದೇನು ಹ್ಯಾಂಗರ ನಡಿತದ..."

"ಅವರು ಛಲೋ ಇರಬೇಕಂದ್ರ ನೀವು ಮೊದಲು ಅವರ ಜೊತಿ ಛಲೋ ಇರಬೇಕಾಗತದ. ನಾವೆಲ್ಲಿ ಛಂದ ಇರತಿವಿ! ಸೋಸಿ ಬರೋದ್ರಾಗ ಅವಳ ಮ್ಯಾಲ ಮಣಭಾರದ ಎಕ್ಸಪೆಕ್ಟೇಷನ್ ಇಟ್ಟಕೊಂಡು ಕುಂತುಬಿಡತಿವಿ. ನಾವು ಇಷ್ಟಪಟ್ಟಂಗೆ ಉಟಗೋಬೇಕು, ನಾವು ಹೋಗಂದಲ್ಲಿಗೆ ಹೋಗಬೇಕು, ಅವಳು ಅವಳ ಗಂಡನ ಸರಿ ಛಲೋ ಇದ್ರು ಅತ್ತಿದೇರಿಗಿ ಪಸಂದ ಬರಲ್ಲ. ಗಂಡನ ಸುತ್ತಾನೆ ಇರತಾಳ ಅಂತಾರ. ಇಲ್ಲ ಮಗನಿಗಿ ಹೆಂಡತಿ ಗುಲಾಮ ಅಂತಾರ. ಅಲ್ಲ... ಅವಳು ಪಾಪ ತನ್ನ ಗಂಡನ ಸಲುವಾಗಿ ತವರಮನಿ ಬಿಟ್ಟು ಬಂದಿರತಾಳ. ಅವಳು ಮೊದಲು ತನ್ನ ಗಂಡಗ ಉತ್ತಮ ಸಂಗಾತಿ ಆಗಬೇಕು. ನಂತರ ಅತ್ತಿ, ಮಾವ, ನಾದನಿ, ಮೈದುನದೇರೆಲ್ಲ. ನಮ್ಮ ವಿಚಾರ ಹಾಂಗಿರಲ್ಲ, ಅವಳು ಮನಿಗಿ ಬರೋದೆ ತಡ, ಅತ್ತಿ-ಮಾವ ಅಂತ ಅವರಿಗಿ ಮೊದಲು ಮಾಡಬೇಕಂತ ಬಯಸಕ್ಕ ಶುರು ಮಾಡತೀವಿ. ಅತೀ ನಿರೀಕ್ಷೆ ಇಟಗೊತಿವಿ. ಅವಳಿಂದ ಅದು ಸಿಗದಿದ್ದರ ಅವಳಿಗೆ ಕೆಟ್ಟವಳಂತ ಪಟ್ಟ ಕಟ್ಟಬಿಡತಿವಿ..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೊರಟಗೆರೆ ಸೀಮೆ | 'ಅಗಳೇ ಅಮಯ, ಮರುತ್ಬಿಟ್ಟಿದ್ದೆ... ಬೆಳ್ಳುದ್ದದೋವು ನಾಕು ಪುಳ್ಳೆ ಮುರ್ಕಂಡ್ ಬಾ...'

"ಹಂಗ್ಂದ್ರ, ಅತ್ತಿ-ಮಾವಗ ಮಾಡಬ್ಯಾಡದೇನ್ರೀ? ನಮ್ಮ ಮನಿಗಿ ನಮ್ಮ ಆಸ್ತಿ ತಿನಲಾಕ ಬಂದು ನಮಗ ಮಾಡಲ್ಲಂದ್ರ... ಯಾರು ಮಾಡಬೇಕು?"

"ಮಾಡಬಾರದು ಅಂತಲ್ಲರೀ ಅಕ್ಕೋರೇ... ನಮ್ಮ ಮನಿಗಿ ಬಂದ ಮ್ಯಾಲ್ ಅವಳಿಗಿ ಸ್ವಲ್ಪ ಟೈಮ್ ಕೊಡಬೇಕು. ನಾವು ಹ್ಯಾಂಗ್ ಮಾಡತಿವಿ ಅಂದ್ರ, ಸೋಸಿ ಬರೋ ಮುಂಚೆ ಮನಿದ ಎಲ್ಲ ಕೆಲಸ ನಾವೇ ಮಾಡತಿವಿ. ಅವಳು ಬರೋದೆ ತಡ, ಎಲ್ಲಾ ಅವಳೇ ಮಾಡ್ಲಿ ಎಂದು ಆಪೇಕ್ಷ ಮಾಡತೀವಿ. ಹಿಂಗ್ಯಾಕ? ಅವಳು ಅವಳ ತವರಮನ್ಯಾಗ ಅಪರೂಪ ಬೆಳೆದಿರತಾಳ. ಗಂಡನ ಮನಿಗಿ ಬಂದ ತಕ್ಷಣ ಅವಳಿಗಿ ಹಾಂಗಿರು, ಅದೇ ಮಾಡು, ಇದು ಮಾಡಬ್ಯಾಡ, ಅಲ್ಲಿಗಿ ಹೋಗಬ್ಯಾಡ, ಹಿಂಗೆಲ್ಲ ರೋಕಟೋಕ್ ಮಾಡುರ, ನಮ್ಮತ್ತಿ ಖೈ ಹಳಾ ಅಂತ ಅವಳೂ ನಿರ್ಧರಿಸಿಬಿಡತಾಳ. ಇನ್ನ ಆಸ್ತಿ ವಿಷಯ... ಆಸ್ತಿ ನಿಮ್ಮ ಮಗನೂ ತಿಂತಾನ; ಅವನ ಕೈಲಿಯಾಕ ನಿಮ್ಮ ಬಟ್ಟಿ ಒಗಸಲ್ಲ, ನಿಮ್ಮ ಮನಿ ಕೆಲಸ ಮಾಡಸಲ್ಲ. ಒಂದ ದಿನ ನಿಮಗ ಒಂದು ಅನ್ನ ಬೆಯಿಸಿ ಕೊಡಂತ ಹೇಳ್ರೀ ನಿಮ್ಮ ಮಗನಿಗಿ, ಮಾಡತಾನೇನು? ಮತ್ತ ಇವೆಲ್ಲ ಸೋಸಿನೆ ಮಾಡಬೇಕಾಗತದ. ಸೋಸಿ ಬಂದಳಂದರ ಫ್ರೀ ಕೆಲಸದವಳು ಸಿಕ್ಕಳಂತ ಅನ್ಕೋಬ್ಯಾಡ್ದರೀ ಅಕ್ಕೋರೇ..."

Image

"ಖರೇ ಅದಾರೀ ನೀವು ಹೇಳಾದು... ಆದ್ರೂ, ಒಂದೇ ಕಡೀ ಇದ್ದಮ್ಯಾಲ್ ಒಬ್ಬರ ಕಾಲು ಒಬ್ಬರಿಗಿ ಹತ್ತೋದು ಸಹಜ. ಅದಕ್ಕ ದೂರ-ದೂರ ಇರೋದೆ ಛಲೋ,"

"ಐ... ದೂರ-ದೂರ ಇರೋ ಎಷ್ಟೋ ಅತ್ತಿ-ಸೋಸಿ ಮಗಾ ಮಾರಿ ಕಟಕೊಂಡು ಬದುಕಲತಾರ. ವಯಸ್ಸಾಗತ ಸ್ವಾಭಿಮಾನ ಹೆಚ್ಚಾಗತಾ ಹೋಗತದ. ಚಿಕ್ಕವರಿಗೂ ಹೀರೀರ ಮನಸ್ಥಿತಿ ಅರ್ಥ ಆಗಲ್ಲ. ವಯಸ್ಸಾದ ಮ್ಯಾಲ್ ಮಕ್ಕಳ ಸರಿ ಈ ರೀತಿ ಮನಸ್ತಾಪ ಹಣ್ಣ ಮಾಡಿ ಬಿಡತದ್ರೀ..."

"ಹೌದ್ರೀ... ಪರಾಯದಾಗ ಮಕ್ಕಳ ಮಕ್ಕಳಂತ ಬಡಿದಾಡಿ, ಮುಂದ ಮಕ್ಕಳು ನಮ್ಮ ಸರಿ ಛಲೋ ಇರಲ್ಲಂದರ ಬಾಳ ಕಷ್ಟರೀ..."

"ಮತ್ತ ಮಕ್ಕಳಿಗೆ ಅಂತಿರಲ್ಲರೀ ಅಕ್ಕೋರೆ... ಮಕ್ಕಳು ಹೀರೇರಿಗೆ ಅರ್ಥ ಮಾಡಕೊಳ್ಳೋದು ಕಡಿಮಿ. ಹಿರಿಯರೇ ಮಕ್ಕಳಿಗೆ ಅರ್ಥ ಮಾಡಕೊಂಡು ಬದುಕಬೇಕು,"

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಅಳ್ವಿ ಪ್ರದೇಸ ಅಂದ್ರೆ ವಜ್ರದ ಗಣಿಗಿಂತ್ಲೂ ಹೆಚ್ಚು ನಮ್ಗೆ

"ಹ್ಯಂಗ್ ಇರಬೇಕೋ ಏನೋ ನೋಡ್ರೀ... ನಾವು ಛಂದೆ ಇರಬೇಕಂತಿವಿ. ಆದ್ರ ಎಲ್ಲಿ ತಪ್ಪದದ ಗೊತ್ತಗವಲ್ದು..."

"ಜಾಸ್ತಿ ತಲಿ ಕೆಡಸಕೋಬ್ಯಾಡ್ರೀ ಅಕ್ಕೋರೇ... ಮಗ ಹೊಸ ಕಾರು ತಗೊಂಡನಂತಲ್ಲ..."

"ಹೂಂ ರೀ... ನಾಳಿಗ ನನಗ ಮತ್ತ ಅವನ ಹೆಣತಿಗಿ ಗುಡಿಗಿ ಕರಕೊಂಡು ಹೋಗತಿನಿ ಅಂದಾನ,"

"ಛಲೋ ಆಯ್ತು... ಹೋಗಿ ಬರ್ರೀ. ಹಾ, ಅಂದಂಗ ಮುಂದಿನ ಸೀಟು ಸೋಸಿಗಿ ಬಿಟ್ಟಕೋಡ್ರೀ. ಇಲ್ಲ ಇನ್ನಾ ನಂದೇ ಮುಂದಿನ ಸೀಟ್ ಅನಬ್ಯಾಡ್ರೀ ಮತ್ತ..."

"ಆಯ್ತರೀ..." ಅಂದು ನಗುತ್ತ ಬಿಸಲಾಕ ಹೋದ್ರು ಬಾಜುಮನಿ ಅಕ್ಕೋರು.

ಚಿತ್ರಗಳು - ಸಾಂದರ್ಭಿಕ | ಕೃಪೆ: ಸಹ್ಯಾದ್ರಿ ನಾಗರಾಜ್
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180