ದೇಸಿ ನುಡಿಗಟ್ಟು - ರೋಣ ಸೀಮೆ | ತಂಡಿ ಹೊಡ್ತಕ್ಕ ರಾಗ ಕಳ್ಕೊಂಡ ಪ್ರಾಥ್ನಾ ಗೀತೆ ನಡಗಿ-ನಡಗಿ ಸುಸ್ತಾಗಿತ್ತು!

ಮೇಷ್ಟ್ರು "ಮುಂಜಾನೆದ್ದು ನದಿಯೋಳ್ ಮಿಂದು ಗಡಗಡ ನಡುಗುತ..." ಹೇಳ್ತಿದ್ದಂಗ, ಬಾಗಲ್ದಾಗ ಬಂದ ಮಂಜ, "ಮೇ ಕಮ್ ಸರ್..." ಅಂತಂದ. ಮೇಷ್ಟ್ರುಗೆ ಸಿಟ್ಟ್ ನೆತ್ತಿಗೇರಿ, "ನಾ ಕನ್ನಡ ಮಸ್ತಾರ್ ಅದಿನಿ... ನನ್ಮುಂದನ ಇಂಗ್ಲೀಷ್ನಾಗ 'ಮೇ ಕಮ್ ಸರ್' ಅಂತಿಯಾ ಮಗನ..." ಅಂತ್ಹೇಳೆ ಬುಕ್ನ ಟೇಬಲ್ಮ್ಯಾಗ ಇಟ್ಟು, ಮಗ್ಗಲ ಇದ್ದ ಬಡ್ಗಿ ತಗಳ್ಳುತ್ಲೆ, ಮಂಜ ಹೆದರಿ, "ಸರ್, ಒಳ್ಗ ಬರ್ತಿನ್ರಿ..." ಅಂದ

ತಂಡಿ ಚಾಲೂ ಆದ್ರು ಅಷ್ಟ್ ಇರ್ಲಿಲ್ಲ. ಆದ್ರ, "ಇವತ್ತ ಬಾಳ ತಂಡಿ ಐತಿ ನೋಡ್ಲೇ..." ಅಂತ ಕೌದಿ ಹೊಚಗೊಂಡ ಹೇಳ್ತಿದ್ರ, ಇವ ತಂಡಿ ಹೊಡ್ತಕ್ಕ ನನ್ನ ಕೌದಿನ ಎಳ್ಕೊಂಡು ಹೊಚ್ಗಳ್ಳಾಕಿಂತಿದ್ದ. ನಂಗು ತಂಡಿ ಹತ್ತಿತ್ತು. ಹೊಳ್ಳಮಳ್ಳ ಜಗ್ಗುದು ನೋಡಿ-ನೋಡಿ ಒಂದ ಜಾಡಿಸಿ ಒದ್ನಿ ನೋಡು, ಅವಾಗ್ ಎಳಿಯೋದ ಬಿಟ್ಟ. ಅಷ್ಟೊತ್ಗಿ, "ಲೋ ಬ್ಯಾಡಾಗೂಳ್ರ, ಬೆಳಕ್ ಹರ್ದೈತಿ, ಇನ್ನ ಮಲ್ಗಿರಲ್ಲ, ಇವತ್ತ ಶನ್ವಾರ, ನೆಪ್ಪಗಿಪ್ಪರ ಐತಿಲ್ಲೋ ಸಾಲಿಗೋಗೋದು, ಎಳ್ತಿರೊ ಇಲ್ಲಾ ನೀರುಗ್ಲ್ಯಾ..." ದನಿ ಕೇಳಿ, ಎಲ್ಲರೂ ಕಪ್ಪರಿಸ್ಗೊಂಡು ಎದ್ದು ಕುಂತು, ಹಾಸ್ಗಿ ಮಡಿಚಿ ಬಗ್ಲಾಗ್ ಇಟ್ಗಂಡು ಹೊಂಟಿದ್ವಿ.

Eedina App

ಸಂಗವತ್ತಿ ಮನಿಮುಂದು ಕುಪ್ಪಡಿಗ್ಯಾಗ ಶೆಗಣಿ ಕುಳ್ ಇಟ್ಟು ಬೆಂಕಿ ಹಾಕಿ ಇಟ್ಟಿದ್ದು ನೋಡಿ, ಬಗಲಾಗಿನ ಹಾಸ್ಗಿನ ಕಟ್ಟಿಮ್ಯಾಗ ಇಟ್ಟು, ಕುಪ್ಪಡಿಗಿ ಮುಂದ ಬೆಚ್ಚಗಾಗಾಕ ಕುಂತ್ವಿ. ಹಂಗ ಓಣ್ಯಾನ ಹುಡ್ರು ನಡ್ಗತಾ ಕುಪ್ಪಡಗಿ ಸುತ್ತಾರ್ದ ಕುಂದ್ರಾಕ ನಾ ಮುಂದ್ ನೀ ಮುಂದ ಅಂತ ಒತ್ಯಾಡಕ ಹತ್ತಿದ್ರು. ಅಷ್ಟೊತ್ತಿಗೆ ಸಂಗವತ್ತಿ ಬಂದು, "ಲೋ ಬಾಡ್ಯಾಗೂಳ, ಹೆಣ್ಮಕ್ಳಾಗಿರನೂ? ಕುಪ್ಪಡಗಿ ಬೆಂಕಿ ಕಾಸಾಕ ಹೊಕ್ಕಿರಿಲ್ಲ..." ಅಂತ ಬೈದಾಗ ಎದ್ದು ಹಿಂದಕ್ಕ ಸರಿದು. ಆಕಿ ಕುಪ್ಪಡಗಿ ತಗಂಡು ಮನಿ ಒಳ್ಗ ಹೋದ್ಲು. ನಾವೇಲ್ಲ ಹುಡ್ರು ಕುಪ್ಪಡಗಿ ಇಟ್ಟ ಚಾಗ ಬೆಚ್ಚಗ ಇದ್ದಿದ್ರಿಂದ ಆರುಮಟ ಅಂಗಾಲದಿಂದ ತುಳ್ದು-ತುಳ್ದು ಬೆಚ್ಚ ಮಾಡ್ಕಂಡು ಮನಿಗೋಗ್ತಿದ್ವಿ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಅಳ್ವಿ ಪ್ರದೇಸ ಅಂದ್ರೆ ವಜ್ರದ ಗಣಿಗಿಂತ್ಲೂ ಹೆಚ್ಚು ನಮ್ಗೆ

AV Eye Hospital ad

ಅವರವರ ಮನಿಯಾಗ ಬಿಸ್ನೀರ್ ಇದ್ರ ಬಿಸ್ನೀರು, ತನ್ನೀರಿದ್ರ ತನ್ನೀರು. ಗುಂಡ್ಯಾಗ ತೊಡ್ಕಂಡು ಜಳ್ಕ ಮಾಡಿ ಓಣ್ಯಾನ ವಾರ್ಗಿ ಹುಡ್ರು ಎಲ್ರೂ ನಡುಕೊಂತ ಹೈಸ್ಕೂಲ್ ಕಡೆ ಮುಖ ಮಾಡಿದ್ವಿ. ಸಾಲಿ ಹೋಗಿ ಪ್ರಾಥ್ನಾಕ ಸಾಲಾಗಿ ನಿಂತ್ಗಂಡಿದ್ರೂ, ನಿಂತ್ ನಿಂತಲ್ಲೆ ಹುಡ್ರು ಹುಡ್ಗ್ಯಾರು ಗುತ್ಯಾಗ ನಿಂತ್ಗಂಡು ನಡಗ್ತಿದ್ರು. ಮುಂದ ನಿಂತ್ ನಾಕ್ ಹುಡ್ಗುರಲ್ಲಿ ಒಬ್ಬಾವ, "ಪ್ರಾಥ್ನಾ ಶೂರುಕರ್..." ಅಂದಾಗ ತಂಡಿ ಹೊಡ್ತಕ್ಕ ಪ್ರಾಥ್ನಾ ಗೀತೆ ಹುಡ್ರು ಹುಡ್ಗ್ಯಾರ ಬಾಯಾಗ ಸಿಕ್ಕು ರಾಗ ಕಳ್ಕೊಂಡು ನಡಗಿ ನಡಗಿ ಸುಸ್ತಾಗಿತ್ತು! ಪ್ರಾಥ್ನಾ ಮುಗಿಸಿ ಎಲ್ರೂ ಕ್ಲಾಸ್ರೂಮ್ ಒಳಗ ಒಳಗ ಹ್ವಾದ್ವಿ.

ನಮ್ಗ ಒಂದ ಪಾಠ ಇತ್ತು. ಅದು ಹಳ್ಗನ್ನಡ ಪದ್ಯ. ಆ ಪದ್ಯ ಪೂರ ನೆಪ್ ಇಲ್ಲ. ಆದ್ರ ನೆಪ್ಪ ಇದ್ದಷ್ಟ್ ಮಾತ್ರ ಹೇಳ್ತಿನಿ. ಆವತ್ತು ನಮ್ಮ ಕನ್ನಡ ಮೇಷ್ಟ್ರು ತಂಡಿ ತಡಿಲಾರ್ದ ನಡುಕೊಂತ ಕ್ಲಾಸಿಗೆ ಬಂದು ಬೊರ್ಡನ್ಯಾಗ ಪದ್ಯದ ಹೆಡ್ಲೈನ್ ಬರ್ದು. "ಲೇ ಯಾವನಾದ್ರ ಗದ್ಲ ಮಾಡಿದ್ರ, ನಾನೇನ್ ಮಾಡ್ತಿನಿ ನಂಗ ಗೊತ್ತಿಲ್ಲ. ಮನಿಷ್ಯನ ಆಗಿರಂಗಿಲ್ಲ. ಅದಕ್ಕ ಗಪ್ಪನ ಕುಂದರ್ಬೇಕು..." ಹೇಳಿ, ಹುಡ್ಗ್ಯಾರ್ಕಡೆ ಹೊಳ್ಳಿ, "ಅವರ್ಗಷ್ಟಲ್ಲ ನಿಮ್ಗೂ...." ಅಂತ್ಹೇಳಿ, ಹಳ್ಗನ್ನಡ ಪದ್ಯ ಓದಾಕ ಚಾಲು ಮಾಡಿದ್ರು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ದಕ್ಷಿಣ ಕನ್ನಡ ಸೀಮೆ ಹವ್ಯಕ | 'ಮನುಷ್ಯನಷ್ಟು ದುರಾಸೆ ಇಪ್ಪ ಮತ್ತೊಂದು ಪ್ರಾಣಿಯ ನೋಡಿದ್ದೆಯೋ?'

ಮೇಷ್ಟ್ರು, "ಮುಂಜಾನೆದ್ದು ನದಿಯೋಳ್ ಮಿಂದು ಗಡಗಡ ನಡುಗುತ..." ಹೇಳ್ತಿದ್ದಂಗ, ಬಾಗಲ್ದಾಗ ಮಂಜ ಬಂದ ನಿಂತ್ಗಂಡು, "ಮೇ ಕಮ್ ಸರ್..." ಅಂತಂದ. ಮೇಷ್ಟ್ರುಗೆ ಸಿಟ್ಟ್ ನೆತ್ತಿಗೇರಿ, "ನಾ ಕನ್ನಡ ಮಸ್ತಾರ್ ಅದಿನಿ, ಅರುವಿಲ್ದ ನನ್ಮುಂದನ ಇಂಗ್ಲೀಷ್ನಾಗ 'ಮೇ ಕಮ್ ಸರ್' ಅಂತಿಯಾ ಮಗನ..." ಅಂತ್ಹೇಳೆ ಕೈಯಾಗಿದ್ದ ಬುಕ್ನ ಟೇಬಲ್ಮ್ಯಾಗ ಇಟ್ಟು, ಮಗ್ಗಲ ಇದ್ದ ಬಡ್ಗಿ ತಗಳ್ಳುತ್ಲೆ, ಮಂಜ ಬಾಗ್ಲಾ ದಾಟಿ ಒಳಗ ಬಂದಾವ ಹೆದರಿ ಹೊರಗ ನಿಂತು, "ಸರ್, ಒಳ್ಗ ಬರ್ತಿನ್ರಿ..." ಅಂದ. ಮೇಷ್ಟು, "ಹಿಂಗನ್ಬೇಕು... ಒಳ್ಗ ಬಾ ಈಗ," ಅಂದ್ರು. ಮಂಜ ನಡಗ್ತಾ ಒಳ್ಗ ಬಂದು ಕುಂತ.

ಮೇಷ್ಟ್ರು, "ನಾ ಆಗಲೇ ಏನ್ ಓದಿದ್ಯಾ ಹೇಳ್ರಲೇ..." ಅಂದಾಗ ಒಬ್ಬಾವ ಎದ್ದು ನಿಂತ್ ಹೇಳ್ದ, "ಗಡ್ಡ್ ಗಡ್ಡ್ ಗಡ್ಡ್ ಗಡ್ಡ್ ನಡುಗ್ತಾ ಬಂದ..." ಎಲ್ರೂ "ಸೋ..." ಅಂತ ದೊಡ್ಡ ದನಿಲಿ ಹೇಳ್ದಾಗ, ಮೇಷ್ಟ್ರಿಗೆ ಯಾವ್ ಪದ್ಯ ಹೇಳಿದೆ ಅನ್ನೊದೇ ಮರ್ತಹೋಗಿತ್ತು. ಅಷ್ಟೋತ್ತಿಗಾಗಲೇ ಗಂಟಿ ಹೊಡಿತು. ಮೇಷ್ಟ್ರು ಕ್ಲಾಸ್ನಿಂದ ಹೊರಗ ಹೋದ್ರು. ಹುಡ್ರು ಗಡ್ಡ್-ಗಡ್ಡ್ ನಡಗ್ತಾನ ಕ್ಲಾಸಿನ್ ಹೊರಗ ಬಂದ್ರು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app