ದೇಸಿ ನುಡಿಗಟ್ಟು - ಆನೇಕಲ್ ಪ್ರಾಂತ್ಯ | ತ್ವಾಟ ಮಾಡೋರ ತಾಕಲಾಟಗಳು

Anekal Dialects 4

ಅತ್ಕಡೆ, ಸರಿಯಾಗಿ ರೇಟ್ ಸಿಗದೆ ರೈತರು ತ್ವಾಟ ಮಾಡದನ್ನೇ ಬಿಡ್ತಾವ್ರೆ. ಇತ್ಕಡೆ, ಹೊಲ-ತ್ವಾಟ ಮಾಡೋ ಹುಡುಗ್ರಕ, ಹೆಣ್ಣು ಕೊಡೋಕು ಹಿಂದೂ ಮುಂದು ನೋಡ್ತಾರೆ. ಹೆಣ್ಣು ನೋಡೊಕ ಹೋದ್ರೆ, ಹೆಣ್ಣೋರು, "ಬಾಡಿಗೆ ಮನೆ ಅವ? ಎಷ್ಟು ಬಾಡಿಗೆ ಬತ್ತದೆ? ಹುಡುಗ್ನದ್ದು ಗೌರ್ಮೆಂಟ್ ಕೆಲಸಾನ?" - ಇಂತಾವೇ ತಲೇ ಬುಡ ಇಲ್ದೆ ಇರೋ ಪ್ರಶ್ನೆಗಳನ್ನ ಕೇಳ್ತಾರೆ

ನಮ್ ಆನೇಕಲ್ನೋರು ಮುಂಚಿಂದ್ಲೂ ತ್ವಾಟ, ಹೂವು, ಹಣ್ಣು ಬೆಳೆಯೋದ್ರಾಗೆ ಎತ್ತಿದ ಕೈಗಳು. ಬೆಂಗ್ಳೂರಿಂದ ನಲವತ್ತು ಕಿಲೋಮೀಟರ್ ದೂರ ಇದ್ರೂನು, ಅಷ್ಟಾಗಿ ಸಿಟೀ ಥರ ಅನ್ಸಲ್ಲ. ಈವತ್ತು ಆನೇಕಲ್‌ಗೆ ಎಂಟ್ರಿ ಕೊಡೋವಾಗ, 'ರಾಗಿಯ ಕಣಜ-ಆನೇಕಲ್' ಅಂತ ಬೋರ್ಡ್ ಕೂಡ ಕಾಣಿಸ್ತಾದೆ. ಒಂದು ಟೈಮ್ನಾಗೆ ಅಷ್ಟು ರಾಗಿ ಬೆಳೆಯೋರು ನಮ್ಮೋರು. ಈವತ್ತೂ ಜನ ಒಕ್ಕಲುತನ, ದನ, ಕರ, ಕುರಿ ಅಂತ ಬದುಕುತಾವ್ರೆ. ದೊಡ್ ದೊಡ್ ಅಪಾರ್ಟ್ಮೆಂಟ್ ಪಕ್ಕಾನೇ ತ್ವಾಟ ಕೂಡ ಕಾಣಿಸ್ತಾದೆ. ಅಪಾರ್ಟಮೆಂಟ್ನೋರು 'ಲೇಕ್ ವೀವ್' ಜೊತೆಗೆ 'ಫಾರ್ಮ್ ವೀವ್' ಅಂತ ಕೂಡ ಅಡ್ವಿರ್ಟೈಸ್ಮೆಂಟ್ ಕೊಡ್ಬೊದೇನೋ ಅನ್ನೋಷ್ಟರ ಮಟ್ಟಿಗೆ ಕೆಲವು ಕಡೆ ಹೂತ್ವಾಟಗಳು ಇದಾವೆ.

ಬೆಂಗ್ಳೂರ್ ಮಾರ್ಕೆಟ್ಟು, ತಮಿಳ್ನಾಡಿನ ಹೊಸೂರ್ ಮಾರ್ಕೆಟ್ ಹತ್ರ ಇರೋದ್ರಿಂದ ಯಾಪಾರಕ್ಕೆ ಬಾದೆ ಇಲ್ಲ ಅಂತ ಶಾನೆ ಜನ ಇನ್ನೂ ತ್ವಾಟಗಳು ಮಾಡ್ತಾವ್ರೆ. ಹಂಗಾಗಿ, ತ್ವಾಟ ನಂಬ್ಕೊಂಡೇ ಜೀವನ ಮಾಡೋರ್ಗೇನೂ ಕಮ್ಮಿ ಇಲ್ಲ. ಪಾಪಾ ನೆಲ ನಂಬ್ಕೊಂಡಿರೋ ರೈತರಿಗೆ ಈವಾಗ ಬಾಧೆ ಕೊಡ್ತಿರೋದು; ಅಂದರೆ, ನೀರಿನ ಸಮಸ್ಯೆ. ಇದು ಅಂತಿಂತ ತೊಂದ್ರೆ ಅಲ್ಲ.

ನಮ್ ಕಡೆ ಈವಾಗ ಸಾವರ, ಒಂದೂವರ್ಸಾವ್ರ ಅಡಿ ಬೋರ್ ಹಾಕ್ಸುದ್ರೂನು ನೀರು ಸಿಕ್ತಾಯಿಲ್ಲ. ಮೊದಲೆಲ್ಲಾ ಇನ್ನೂರಡಿ, ಮುನ್ನೂರಡಿ ಹಾಕ್ಸುದ್ರೇನೇ ನಾಲ್ಕಿಂಚು, ಐದಿಂಚು ನೀರು ಬೀಳೋವು. ಬತ್ತಾ ಬತ್ತಾ ಭೂಮ್ತಾಯಿ ಬರಡಾಗ್ತಾವ್ಳೇನೋ ಅನಿಸ್ತದೆ.

Image
Anekal Dialects 3

ಕೆಂಪ್ ನೆಲದ ಮ್ಯಾಲೆ ಎಲ್ಲು ನೋಡಿದ್ರೂ ಬರೀ ಕರೀ ಪೈಪುಗಳ ಡ್ರಿಪ್ಪು. ಒಂದೊಂದ್ ಹನೀ ನೀರು ಕೂಡ ಉಳ್ಸಿ ತ್ವಾಟ ಮಾಡೋ ಪರಿಸ್ಥಿತಿ. ಅಷ್ಟೇ ಸಾಲ್ದೂ ಅಂತ, ಟ್ಯಾಂಕರ್ ಒಳಗೆ ನೀರು ಹೊಡಸ್ಕೊಂಡು ತ್ವಾಟಗಳು ಮಾಡ್ತಾವ್ರೆ. ನೀರು ಇಮರಬಾರದು ಅಂತ ತೊಟ್ಟಿ ಒಳಗೆಲ್ಲಾ ಟಾರ್ಪಲ್ಲುಗಳು, ತೊಟ್ಟಿ ಮ್ಯಾಲೆಲ್ಲ ಕವರ್‌ಗಳು ಹಾಕಿ, ಅತ್ಲಾಗೆ ಭೂಮಿ ಬಾಯಿಂದ, ಸೂರ್ಯನ ಕಣ್ಣಿಂದ ಒಂದು ಹನಿ ನೀರು ಕೂಡ ವೇಸ್ಟಾಗದೆ ಇರೋ ತರ ಕಾಪಾಡ್ಕೊಂಡು ತ್ವಾಟಗಳು ಮಾಡ್ತಾವ್ರೆ.

ಜಾಸ್ತಿ ಏನಿಲ್ಲ, ಬರೀ ಹದ್ನೈದ್ ವರ್ಷಗಳ ಕೆಳ್ಗೆ ಇಂತ ತೊಂದರೆ ಇರಲಿಲ್ಲ. ಎಲ್ಲು ನೋಡಿದ್ರೂ ಹಸ್ರು, ಮಣ್ಣಾಗ ಮಾಡಿದ ತೊಟ್ಟಿಗಳು. ಇಡೀ ತ್ವಾಟಕ್ಕೆಲ್ಲ ನೀರು ಹಂಗೇ ಕಟ್ಟೋರು. ಬೇಜಾನ್ ನೀರು ಇರೋವು. ನೀರು ಶಾನೆ ಇತ್ತಿದ್ರಿಂದ ಸೌತೆಕಾಯಿ, ಚಪ್ಪರ ಬದನೆಕಾಯಿ, ಕೋಸು, ಕೊತ್ಮೀರಿ ಸೊಪ್ಪು, ಇಂತ ನೀರು ಶಾನೆ ಕುಡಿಯೋ ಬೆಳೆಗಳೆಲ್ಲ ಬೆಳೆಯೋರು.

ವತ್ತೀನೆ ಕುಂಟೆ ಕಡೆ ಹೋದ್ಮೇಲೆ ತ್ವಾಟಗಳ ಹತ್ರ ಹೋಗಿ ಟ್ಯಾಂಕ್‌ಗಳ ಹತ್ರಾನೆ ಜನ ನಿರಾಳವಾಗಿ ತೊಳ್ಕೊಳೋರು. ಆದ್ರೆ ಈವಾಗ, ಡ್ರಿಪ್ ಬಂದ್ಮೇಲೆ, ಟ್ಯಾಂಕ್ ಹತ್ರ ತೊಳ್ಕೋಳೋಕು ಕೂಡ ಆಗ್ತಾಯಿಲ್ಲ! ಅಂತ ದರಿದ್ರ ಕಾಲ ಬಂದದೆ!

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಹೊಳಿ ದಂಡಿಗ ಮೆತ್ಕಂಡ ಸುಗ್ಗಿ ಖುಷಿ, ಕುಣ್ಕಂಡಿ ಹೋಗುವ ಅಲೆ

ಇಂತ ಒಳ್ಳೇ ನೆಲ, ಅದ್ವಾನ ಅಡವಿ ಆಗಿದ್ದೇ ನೀಲಗಿರಿ ತೋಪು ಜಾಸ್ತಿ ಆದ್ಮೇಲೆ. ಯಾರ್ ನೋಡಿದ್ರು ನೀಲಗಿರಿ ಗಿಡ ಇಟ್ಬುಟ್ರು. ಈ ನೀಲಗಿರಿ ಬೇರು ಇರೋ ಬರೋ ನೀರನ್ನೆಲ್ಲಾ ಎಳ್ಕೊಂಡ್ವು. ಭೂಮಿ ಒಳಗಿನ ನೀರಿನ ಮಟ್ಟಾನೆ ಕಮ್ಮಿ ಆದ್ವು. ಜನಕ್ಕೂ ಭಯ-ಭಕ್ತಿ ಇಲ್ಲ; ಇದ್ದ ಬದ್ದ ಖಾಲಿ, ಕರಾಬಿ ಜಮೀನ್ಗೆಲ್ಲ ನೀಲಗಿರಿ ಗಿಡ ಇಕ್ಕಿದ್ದೇ ಇಕ್ಕಿದ್ದು. ಈವಾಗ ಅದರಿಂದ ಬಾಧೆ ಅನುಭವಿಸ್ತಾವ್ರೆ.

ಮೊದಲೆಲ್ಲಾ ಹೊಲ ತ್ವಾಟಗಳಿಗೆ ಕೆಲಸಕ್ಕೆ ಕೂಲೇರು ಆರಾಮಾಗಿ ಸಿಕ್ಕೋರು. ಈವಾಗ ಮಾತಾಡ್ಸಾಕಗಲ್ಲ ಅವರನ್ನ. ಹೆಂಗಸ್ರು ತ್ವಾಟದ ಕೆಲಸಾನ ಯಾರ ಬಿಸಲಲ್ಲಿ ಮಾಡ್ತಾರೆ ಅಂತ, ಸಲೀಸಾಗಿ ಇರಲಿ ಅಂತ ಗಾರ್ಮೆಂಟ್ಸ್ ನೋಡ್ಕಂಡ್ರು. ಗಂಡುಸ್ರು ಸೋಮಾರಿಗಳು. ಹೆಂಗೋ ಹೆಂಗಸರು ದುಡ್ಡು ಸಂಸಾರ ನಡಿಸ್ತಾವ್ರೆ ಅಂತ ಆರಾಮು ಕಂಡ್ಕೊಂಡ್ರು. ಹಂಗಾಗಿ ಈವತ್ತು ತ್ವಾಟದ ಕೆಲಸ ಮಾಡೋಕೆ ಕೂಲೇರನ್ನು ಹುಡ್ಕಂಬರಾದು ತಲೆನೋವಾಗದೆ. ಬಂಗಾರ ಬೆಳೀತಿದ್ದ ನೆಲಗಳೆಲ್ಲಾ ಈವತ್ತು ಲೇಔಟ್ ಆಗೋಗ್ತಿವೆ.

Image
Anekal Dialects 5

ಅತ್ಕಡೆ ನೀರು, ಇತ್ಕಡೆ ಕೂಲೇರು, ಸಾಲ್ದು ಅಂತ ಸರಿಯಾಗಿ ರೇಟ್ ಸಿಗದೆ ರೈತರು ತ್ವಾಟ ಮಾಡದನ್ನೇ ಬಿಡ್ತಾವ್ರೆ. ಕೆಲವರಂತೂ, ಬಿಟ್ಟರೆ ಬೇರೆ ವಿಧಿ ಇಲ್ಲ ಅಂತ ಲಾಸೋ ಪಾಸೋ ತ್ವಾಟ ಮಾಡ್ತಾವ್ರೆ. ಹೊಲ, ತ್ವಾಟ ಮಾಡೋ ಹುಡುಗ್ರಕ, ಹೆಣ್ಣು ಕೊಡೋಕು ಹಿಂದೂ ಮುಂದು ನೋಡ್ತಾರೆ. ಹೆಣ್ಣು ನೋಡೊಕ ಹೋದ್ರೆ, ಹೆಣ್ಣೋರು, "ಬಾಡಿಗೆ ಮನೆ ಅವ? ಎಷ್ಟು ಬಾಡಿಗೆ ಬತ್ತದೆ? ಹುಡುಗ್ನದ್ದು ಗೌರ್ಮೆಂಟ್ ಕೆಲಸಾನ?" - ಇಂತಾವೇ ತಲೇ ಬುಡ ಇಲ್ದೆ ಇರೋ ಪ್ರಶ್ನೆಗಳನ್ನ ಕೇಳ್ತಾರೆ.

ಮನೆಗೆ ಬೇಕಾಗಿರೋ ಸೊಪ್ಪು-ಸೊದೆ, ಕಾಳು ಕಡಿ ಎಲ್ಲಾ ದಂಢಿಯಾಗಿ ಬೆಳ್ಕೊಂಡು ಬೇರೆಯವ್ರಗೂ ಕೊಡ್ತಿದ್ದ ಹಳ್ಳಿಗಳ ಒಳಗೆ, ತರಕಾರಿ ಮಾರೋ ಟೆಂಪೋಗಳು ಮೈಕ್ ಹಾಕೊಂಡ್ ಬರೋಕೆ ಶುರುವಾಗಿ ಬಾಳ ದಿನಾನೆ ಆಗೋಯ್ತು. ಮನೆ ಒಳಗೆ ಇರ್ತಿದ್ದ ರಾಗಿ ಕಣಜಗಳು ನೆಲಸಮಾ ಆಗಿ ಎಷ್ಟೋ ವರ್ಷ ಆದ್ವು. ನೋಡೋಣ ಅಂದ್ರೂ ಅಗೇವುಗಳು ಈವತ್ತು ಕಣ್ಣಾಗೆ ಬೀಳಲ್ಲ. ನೆಲ್ಲು ಬೆಳ್ದು ಯಾವ ಕಾಲ ಆಯ್ತೋ! ದೊಡ್ಡಬೇರು ನೆಲ್ಲು ಅಕ್ಕಿ ಅನ್ನ, ಗಟ್ಟಿ ಮೊಸರು ತಿರಗಾ ತಿನ್ನೋಕಾಗಲ್ಲ ಅನ್ಸುತ್ತೆ. ಹೇಳ್ತಾ ಹೋದ್ರೆ ದಿನಗಳು ಸಾಲಲ್ಲ.

ಇದು ಬರೀ ನಮ್ಮೂರು ಸಮಸ್ಯೆ ಅಲ್ಲ, ನಿಮ್ಮೂರು ಕಥೇನೂ ಇದೇ ಅಂತಾನೂ ಗೊತ್ತು. ಇಡೀ ಪ್ರಪಂಚಾನೆ ಈವತ್ತು ಹಿಂಗೆ ಆಗದೆ. ಇದು ಹಿಂಗೆ ಮುಂದುವರೆದ್ರೆ ಮನ್ಷ ಏನಾಗ್ತಾನೋ! ಆ ದೇವ್ರೇ ಬಲ್ಲ.

ಮುಖ್ಯಚಿತ್ರ ಕೃಪೆ: ಮೈಖೆಲ್ ರಂಜಿತ್
ನಿಮಗೆ ಏನು ಅನ್ನಿಸ್ತು?
4 ವೋಟ್