ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಪರವೂರಿಗೆ ಹೊಯ್ ದುಡ್ಮಿ ಮಾಡಿ ಬದ್ಕ ಕಟ್ದರ್ ಕಥಿ

Hotel Worker

ವರ್ಷಾನಗಟ್ಲೇ ಹೋಟ್ಲಂಗೆ ದುಡ್ದ್ ಊರಲ್ ಮನಿ ಕಟ್ಸಿ, ಅಕ್ಕ ತಂಗಿದಿಕ್ಕಳ್ ಮದಿ ಮಾಡ್ಸಿ, ಅಪ್ಪಯ್ಯ ಮಾಡದ್ ಸಾಲ ಪೂರ್ತಿ ತೀರ್ಸದರ್ ಇದ್ರ್. ಹೋಟ್ಲ್ ಹೆರ್ಗೆ ಚಣ್ ಬೀಡದ್ ಅಂಗಡಿ ಹಾಯ್ಕಂಡ್ ವ್ಯಾಪಾರ ಮಾಡಿ ಬದ್ಕ್ ಕಟ್ಕಂಡರ್ ಇದ್ರ್. ಊರಿಂದ ಎಂಟನೇ ಕ್ಲಾಸ್ ಪೈಲ್ ಆಯ್ ಹೊದರ್, ಎಷ್ಟೋ ವರ್ಷದ ಮೇಲೆ ದೊಡ್ ಮನ್ಸರ್ ಆಯ್ ವಾಪಸ್ ಬಂದರೂ ಇದ್ರ

ಮುಂಚಿನ ಕಾಲ್ದಿಂದೂ ನಮ್ ಕುಂದಾಪ್ರ ಬದಿಯರ್ ಪರವೂರಿಗೆ ಹೊಯ್ ಹೋಟ್ಲ್, ಅಂಗಡಿ ಬ್ಯುಸಿನೆಸ್ ಮಾಡ್ಕಂಡ್ ಇಪ್ಪರ್. ಮನೆಂಗೆ ಒಪ್ಪತಿನ್ ಊಟಕ್ಕೂ ತಾಪತ್ರಯ ಇದ್ದಾಗಳಿಕೆ ಅಪ್ಪಯ್ಯನ ಕಷ್ಟಕ್ಕೆ ಹೆಗಲ್ ಕೊಡುಕೆ ಊರ್ ಬದೆಂಗೆ ಇದ್ ಹುಡ್ಗರ್ ಮಕ್ಕಳ್ ಎಂಟನೇ ಕ್ಲಾಸಿಗೋ, ಹತ್ತನೇ ಕ್ಲಾಸಿಗೋ ಶಾಲಿ ಕೈದ್ ಮಾಡಿ ಬೆಂಗಳೂರ್, ಬೆಳಗಾಂ, ಬೊಂಬಾಯಿ ಬದೆಂಗೆ ನಮ್ ಬದಿಯರ್ ನಡೆಸ್ತೇ ಇದ್ ಹೋಟ್ಲಿಗೆ ಕೆಲ್ಸಕ್ಕೆ ಹೊತಿದಿರ್.

ಹೋಟ್ಲಂಗೆ ಕೆಲ್ಸಕ್ಕೆ ಹೊರೆ ಹೊತ್-ಹೊತ್ತಿಗೆ ಸಮ ಉಂಬುಕೆ ಸಿಕ್ಕತ್, ಐಕಂಬುಕೆ ಸೂರು ಆಯ್ತ್; ಅದರ ಒಟ್ಟಿಗೆ ನಾಕ್ ಕಾಸ ಸಂಪಾದನಿಯೂ ಆತ್ ಅಂದ್ಹೇಳಿ ಹೊಯ್ ಕೆಲ್ಸಕ್ಕೆ ಸೇರ್ಕಂತಿದಿರ್. ಅಲ್ ಅವರ ದುಡ್ದ್ ಕಳ್ಸದ್ ದುಡ್ಡಂಗೆ ಊರಂಗೆ ಅಪ್ಪಯ್ಯ, ಅಬ್ಬಿ, ತಂಗಿದಿಕ್ಕಳ್ ಜೀವ್ನ ಮಾಡ್ತಿದಿರ್. ಕೆಲವರ್ ಚಣ್ ಕಿಪ್ಪತ್ತಗೆ ಊರ್ ಬಿಟ್ ಓಡಿ ಹೊಯ್ ಹೋಟ್ಲ್ ಕೆಲ್ಸಕ್ಕೆ ಸೇರ್ಕಂಡರೂ ಇದ್ರ. ಕಾಂಬುಕ್ ಹ್ವಾರೆ ಪ್ರತಿ ಮನೆಂಗೆ ಒಬ್ರಾರು ಪರವೂರಂಗೆ ಕೆಲ್ಸಕ್ಕೆ ಇರ್ತ್ ಕಾಣಿ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಚಾಮರಾಜನಗರ ಪ್ರಾಂತ್ಯ | ಅಮೋಸ ಟೈಮ್ಗ ಉಲಿ ಕೆರ ಚೊರಿ ಓಡಾಡಿದಂತ

ನಮ್ ಕೋಟ ಬದಿ ಶಿವಳ್ಳಿ ಬ್ರಾಹ್ಮಣರ್ ಅಡುಗೆ ಮಾಡುದ್ರಂಗೆ ಎತ್ತದ್ ಕೈ ಕಾಣಿ. ಒಂದ್ 60-70 ವರ್ಷದ್ ಹಿಂದೆ ಇವರ್ ಬೇರೆ-ಬೇರೆ ಊರಿಗ್ ಹೊಯ್ ಹೋಟ್ಲ್ ವ್ಯವಹಾರ ಮಾಡುಕೆ ಸುರು ಮಾಡ್ರ ಅಂಬ್ರ. ಹೋಟ್ಲಂಗೆ ತಿಂಡಿ ಮಾಡುಕೆ, ಸಪ್ಲೆಯರ್ ಕೆಲ್ಸಕ್ಕೆ ಎಲ್ಲಾ ನಮ್ ಬದಿ ಮಾಣಿಗಳನ್ನೇ ಹಾಕಂತಿದಿರ್ ಅಂಬ್ರ.

ಹೊತೆ-ಹೊತೆ ಹೆಚ್ಚಾಯ್ ಊರ್ ಬದಿ ಗಂಡಗಳಿಗೆ ಕೆಲ್ಸ ಕೊಡ್ತೇ ಹೊರ್ ಅಂಬ್ರ. ಒಳ್ಳೆ ರುಚಿ-ರುಚಿ ಚಾ, ತಿಂಡಿ, ಊಟ ಸಿಕ್ಕುಕ್ ಹೊಯ್ ಎಲ್ಲಾ ಬದೆಂಗೆ ಉಡುಪಿಯರ್ ಹೋಟೆಲ್ ಪ್ರಸಿದ್ಧಿ ಪಡಿತಾ ಹೋಯ್ತ್. 'ಉಡುಪಿ ಹೋಟೆಲ್' ಅಂದ್ಹೇಳಿ ಬೋರ್ಡ್ ಇದ್ದದ್ ಕಂಡ ಜನ ಚಾ ಕುಡುಕೆ, ತಿಂಡಿ ತಿಂಬುಕೆ ಬಪ್ಪುಕೆ ಸುರು ಮಾಡ್ರ. ಆಗಿನ್ ಕಾಲದಿಂದಲೂ ಬೆಂಗಳೂರ್, ಮಂಗಳೂರ್, ಬೆಳಗಾಂ, ಧಾರವಾಡ, ಹುಬ್ಬಳ್ಳಿ, ಬೊಂಬಾಯಿ, ಮದ್ರಾಸ್, ಹೈದ್ರಬಾದಂಗೆಲ್ಲಾ ಉಡುಪಿ ಹೋಟೆಲ್ ಹೆಸರ್ ಫೇಮಸ್.

Image
Hotel Worker 2
ಸಾಂದರ್ಭಿಕ ಚಿತ್ರ

ಹೋಟ್ಲ್ ಕೆಲಸ ಅಂದ್ರೆ ಎಲ್ಲರಿಗೂ ಗೊತ್ತಿದ್ದದ್ದೇ ಅಲ್ದಾ. ಹೋಟ್ಲಂಗೆ ಬೆಳಗಾತ ಬೇಗ ಎದ್ ಕೆಲ್ಸ ಸುರು ಮಾಡ್ರೆ, ರಾತ್ರಿ ಮನಿಕಂಬುವಲವರಿಗೂ ಕೆಲ್ಸವೇ. ಹಿಟ್ ಕಡುದ್, ಮಸಾಲಿ ಕಡುದ್, ತರಕಾರಿ ಕೊಯ್ಯುದ್, ಕಾಯಿ ಹೆರುದ್, ಪಾತ್ರೆ ತೊಳುದ್, ನೀರ್ ತುಂಬುದ್, ಟೇಬಲ್ ಕುರ್ಚಿ ವರ್ಸುದ್... ಹೀಗೆ ಕೆಲ್ಸ ಆಯ್ತ್ ಹೊಯ್ತ್ ಅಂದ್ಹೇಳಿ ಇಲ್ಲ. ಕೆಲ್ಸದರಿಗೆ ಮಲ್ಕಂಬುಕೆ ಅಂದ್ಹೇಳಿ ಬೇರೆ ಮನಿ ಇರ್ತಿರ್ಲಾ. ಅದೇ ಹೋಟ್ಲಂಗೆ ರಾತ್ರಿ ಟೇಬಲ್ ಕುರ್ಚಿ ಸರ್ಸಿ ಇಟ್, ಚಾಪಿ ಹಾಸ್ಕಂಡ್ ಮನಿಕಂಬುದ್.

ಹೀಂಗೆ ದಿನಾ ಮಾಡದ್ ಕೆಲ್ಸವೇ ಮಾಡು ಊರ್ ಬದಿಯರೆಲ್ಲಾ ವರ್ಷಕ್ಕೊಂದ್ ಸಲ ಹೋಟ್ಲ್ ಸಾವುಕಾರರ ಹತ್ರ ಸಂಬಳದ ದುಡ್ಡ್ ಅಡ್ವಾನ್ಸ್ ತಕ್ಕಂಡ್ ಊರ್ ಹಬ್ಬಕ್ಕೋ, ಗೆಂಡಕ್ಕೋ, ದೀಪಾವಳಿಗೋ ಬಪ್ಪುದ್. ವರ್ಷದ ಮೇಲೆ ಊರಿಗೆ ಬಂದ ಮಗಂದ, ಗಂಡಂದ, ಅಣ್ಣಂದ್ ಮುಖ ಕಾಂಬೂಕು ಮನಿ ಹೆಣ್‌ಮಕ್ಕಳಿಗೆ ಆಪು ಖುಷಿ ಇತ್ ಕಾಣಿ, ಅದ ಎಷ್ಟ ಕೋಟಿ ಕೊಟ್ರು ಸಿಕ್ಕುದಿಲ್ಲ. ಹೆತ್ ಮಗ ವರ್ಷ ಪೂರ್ತಿ ಎಲ್ಲೋ ಪರವೂರಂಗೆ ದುಡ್ಮಿ ಮಾಡಿ ನಮ್ಮೆನ್ನೆಲ್ಲಾ ಸಾಂಕ್ತಾ ಅಂಬು ಅಭಿಯಾನದೊಟ್ಟಿಗೆ ಮಗನ ಮುಖ ಕಾಂಬೂಕು ತಾಯಿ ಮನ್ಸ್ ಕರಗಿ ಪ್ರೀತಿ ಒಕ್ಕಿ ಬತತ್.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಆನೇಕಲ್ ಪ್ರಾಂತ್ಯ | ತ್ವಾಟ ಮಾಡೋರ ತಾಕಲಾಟಗಳು

ಹಬ್ಬಕ್ ಊರಿಗ್ ಬಂದರ್ ಒಂದ್ ಹದಿನೈದ್ ಇಪ್ಪತ್ ದಿನ ಇರ್ತಿದಿರ್. ಅವರ ಇದ್ದಷ್ಟ ದಿನವೂ ಮನೆಂಗೆ ಗೌಲ್ ಊಟವೇ. ಮೀನ್ ಪದಾರ್ಥ, ಊರ್ ಕೋಳಿ ಪದಾರ್ಥ, ಪತ್ರೋಡೇ ಅಲ್ಲದೇ ಅವರಿಗೆ ಎಂತ ತಿನ್ಕಂಬಂಗೆ ಇತ್ತೋ ಅದೆಲ್ಲಾ ಅಡಗಿ ಮಾಡಿ ಉಣ್ಸುದ್ರಂಗೆ ಮನಿ ಹೆಂಗಸರಿಗೆ ಒಂದ್ ಖುಷಿ. ಊರಿಗ್ ಬಪ್ಪಂಗೆ ತಂದದ್ದ್ ದುಡ್ಡಂಗೆ ಮನಿಯರಿಗೆಲ್ಲಾ ಹೊಸ ಬಟ್ಟಿ, ಮಕ್ಕಳಿಗೆ ಶಾಲಿ ಬ್ಯಾಗ್ ಅಂದ್ಹೇಳಿ ಎಂತ ಬೇಕೋ ಎಲ್ಲಾ ತೆಗ್ಸಿ ಕೊಟ್ಟಿಕಿ, ಹಬ್ಬದ ಗುಡ್ಡೆಂಗೆಲ್ಲಾ ತಿರ್ಗಿ, ಹಳಿ ದೋಸ್ತಿಗಳನ್ನೆಲ್ಲಾ ಮಾತಾಡ್ಸುದ್ರೊಳಗೆ ದಿನ ಕಳದ್ದೇ ಗೊತ್ತಾತಿಲ್ಲ ಕಾಣಿ. ವಾಪಸ್ ಪರವೂರಿಗೆ ಹೊರಟ ನಿಂತ ಕಂಡಾಗಳಿಕೆ ಮನಿ ಮಂದಿಗೆಲ್ಲಾ ಒಂದ್ ನಮೂನಿ ಬೇಜಾರ್, ಸಂಕಟ ಆಪುದ್. ಆರೆ ಎಂತ ಮಾಡುದ್ ಕಳ್ಸಿ ಕೊಡ್ಕೆ ಅಲಾ.

ಹೀಂಗೆ ವರ್ಷಾನಗಟ್ಲೇ ಹೋಟ್ಲಂಗೆ ದುಡ್ದ್ ಊರಲ್ ಮನಿ ಕಟ್ಸಿ, ಅಕ್ಕ ತಂಗಿದಿಕ್ಕಳ್ ಮದಿ ಮಾಡ್ಸಿ, ಅಪ್ಪಯ್ಯ ಮಾಡದ್ ಸಾಲ ಪೂರ್ತಿ ತೀರ್ಸದರ್ ಇದ್ರ್. ಹೋಟ್ಲ್ ಹೆರ್ಗೆ ಚಣ್ ಬೀಡದ್ ಅಂಗಡಿ ಹಾಯ್ಕಂಡ್ ವ್ಯಾಪಾರ ಮಾಡಿ ಬದ್ಕ್ ಕಟ್ಕಂಡರ್ ಇದ್ರ್. ಕೆಲವರ ಊರಿಂದ ಎಂಟನೇ ಕ್ಲಾಸ್ ಪೈಲ್ ಆಯ್ ಪರವೂರಿಗ್ ಹೊದರ್, ಎಷ್ಟೋ ವರ್ಷದ ಮೇಲೆ ದೊಡ್ ಮನ್ಸರ್ ಆಯ್ ವಾಪಸ್ ಬಂದರೂ ಇದ್ರ. ಹೀಂಗೆ, ಮನೆಂಗೆ ಒಬ್ಬೊಬ್ರ ಪರವೂರಿಗ್ ಹೊಯ್ ದುಡಿತೆ ಇಪ್ಪುಕ್ ಹೊಯ್ ಊರಬದೆಂಗೆ ಎಲ್ಲರೂ ಹೊಟ್ಟಿ ತುಂಬಾ ಉಡ್ಕಂಡ್ ಆರಾಮ ಜೀವ್ನ ಮಾಡ್ತೇ ಇಪ್ಪುದ್.

ನಿಮಗೆ ಏನು ಅನ್ನಿಸ್ತು?
15 ವೋಟ್
Image
av 930X180