ದೇಸಿ ನುಡಿಗಟ್ಟು - ಗದಗ ಪ್ರಾಂತ್ಯ | ಗುಡ್ಡದ ಮ್ಯಾಲಿನ ಶಾಲಿ ಸಾಕ್ಷೀಲಿ ತೇಲಿಹೋದ ಕಿವಿಯೋಲಿ

Rain 1

ಮನಿಯಿಂದ ಶಾಲಿಗ ಬರೋ ದಾರಿ ಭಾಳ ಚಲೋ ಇತ್ತು. ಪುರಾ ಡಾಂಬರ್‌ ರಸ್ತೆ. ಆದರ ನಮ್ಮ ಶಾಲಿಗುಡಿಯೊಳಗ ಇದ್ದದ್ದು ಮಣ್ಣಿನ ಅಂಗಳ. ಭಾಳ ಜಾಗ ಇತ್ತು ಶಾಲಿ ಗುಡಿ ಸುತ್ತಾಮುತ್ತ. ನಾವ ಶಾಲ್ಯಾಗಿದ್ದಾಗ ಮಳಿ ಬಂತಂದ್ರ ಆ ಮಳಿನೀರು ಭೂಮಿಗ ಬಿದ್ದು, ಶಾಲಿ ಮೈದಾನ ತುಂಬಿ, ಬಾಜು ಇದ್ದ ಡೊಡ್ಡ ಹೊಂಡಕ್ಕ ಹೋಗಿ ಬೀಳುತನ ನಾವ್ ಮನಿಗ ಹೊಕ್ಕಿದ್ದಿಲ್ಲ!

ಇನ್ನೇನ ಮಳಿಗಾಲ ಶುರು ಆತು. ಒಂದ ಸಮನ ಸುರಿಯೋ ಮಳಿ ಭಾಳ ಮಂದಿಗೆ ಅವರ ಹಳೆ ನೆನೆಪ, ಹೊಸ ನೆನೆಪ, ಮುಂದಿನ ಕನಸ ಅಂತ ಹೇಳಿ ಎಲ್ಲಾ ನೆನೆಪ ಮಾಡಸಲಿಕ್ಕೆ ಶುರು ಮಾಡತ. ಹೋದ ವಾರ ಮಳಿ ಭಾಳಾತು ಅಂತ್ಹೇಳಿ ಶಾಲಿಗೆಲ್ಲಾ ರಜೆ ಕೊಟ್ಟಾರ. ನಾವು ಶಾಲಿಗ ಹೋಗು ಮುಂದ ಇದಕ್ಕಿನಾ ಜೋರ ಮಳಿಯಾಗತಿತ್ತಲ್ಲಾ, ನಮ್ಮ ಶಾಲಿ ರಜಾನ ಕೊಡತಿರಲಿಲ್ಲ. ಅಪ್ಪಿತಪ್ಪಿ ಮಳಿ ನೆವಾ ಹೇಳಿ ಶಾಲಿ ಬಿಟ್ರ, ಮಾಸ್ತರ ಮನಿಗೇ ಬರೋರು; "ಯಾಕವಾ ಶಾಲಿಗ ಬಂದಿಲ್ಲ, ನಮ್ಮ ಶಾಲಿಯೇನ ಮುಳಗ್ಯದನು? ನಡಿ ಶಾಲಿಗೆ," ಅನ್ನೋರು.

Eedina App

ನಮ್ಮ ಶಾಲಿ ಗುಡ್ಡದ ಮ್ಯಾಲೆ ಇತ್ತು ಅನಕೊಂಡ್ರ ತಪ್ಪಾಗಂಗಿಲ್ಲ ಬಿಡ್ರಿ. ಯಾಕಂದ್ರ ನಮ್ಮೂರ ಬಸ್‌ಟ್ಯಾಂಡ್‌ನಿಂದ ಏರಿ ಮ್ಯಾಲ ಏರಿ ನಮ್ಮ ಶಾಲಿಗ ಬರಬೇಕಿತ್ತು. ನಮ್ಮ ಶಾಲಿ ಐತಿಹಾಸಿಕ ಶಂಭುಲಿಂಗೇಶ್ವರ ಗುಡಿ ಸುತ್ತ ಇತ್ತು; ನಾಲ್ಕು ಕಡೆಯಿಂದ ಬಂದ್.‌ ಗುಡಿ ದ್ವಾರಬಾಗಲ ನಮ್ಮ ಶಾಲಿ ಬಾಗಲು. ಗುಡಿ ಹಿಂದ ಒಂದು ದಾರಿ, ನಮ್ಮ ಮನಿಯಿಂದ ಶಾಲಿಗ ಬರೋ ದಾರಿ ಭಾಳ ಚಲೋ ಇತ್ತು. ಪುರಾ ಡಾಂಬರ್‌ ರಸ್ತೆ. ಆದರ ನಮ್ಮ ಶಾಲಿಗುಡಿಯೊಳಗ ಇದ್ದದ್ದು ಮಣ್ಣಿನ ಅಂಗಳ. ಭಾಳ ಜಾಗ ಇತ್ತು ಶಾಲಿ ಗುಡಿ ಸುತ್ತಾಮುತ್ತ. ನಾವ ಶಾಲ್ಯಾಗಿದ್ದಾಗ ಮಳಿ ಬಂತಂದ್ರ ಆ ಮಳಿನೀರು ಭೂಮಿಗ ಬಿದ್ದು, ಶಾಲಿ ಮೈದಾನ ತುಂಬ ತುಂಬಿ, ಬಾಜು ಇದ್ದ ಡೊಡ್ಡ ಹೊಂಡಕ್ಕ ಹೋಗಿ ಬೀಳುತನ ನಾವ್ ಮನಿಗ ಹೊಕ್ಕಿದ್ದಿಲ್ಲ. ಎಲ್ಲಾ ಕಡೆ ನೀರು ಹರಿಯುದಕ್ಕಿಂತ ಜಾಸ್ತಿ ನಿಲ್ಲತದ; ಯಾಕಂದ್ರ, ಅದಕ ಬ್ಯಾರೆ ಕಡೆ ಹರದ ಹೋಗಾಕ ನಾವ್ ಜಾಗಾ ಎಲ್ಲಿ ಬಿಟ್ಟಿವಿ?

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಪರವೂರಿಗೆ ಹೊಯ್ ದುಡ್ಮಿ ಮಾಡಿ ಬದ್ಕ ಕಟ್ದರ್ ಕಥಿ

AV Eye Hospital ad

ಹಿಂಗ್ ಒಮ್ಮೆ ನಾನ ಸಣ್ಣಕಿ ಇದ್ದಾಗ, ಅಂದ್ರ, ಒಂದ ಐನೆತ್ತಾ ಏನ್‌ ಆರನೆತ್ತಾ ಇದ್ದೇ... ನಮ್ಮ ಅಪ್ಪ ನಮ್ಮ ಅವ್ವಗ ಬಂಗಾರದ ಕಿವ್ಯಾನವ ಕೊಡಸಿದ್ರು. ಅವು ಭಾಳ ಚಂದ ಅದಾವ ಅಂತ್ಹೇಳಿ ನಮ್ಮ ಅವ್ವ, "ಇವತ್ತೊಂದಿನ ನೀ ಹಕ್ಕೊಂಡ ಶಾಲಿಗೆ ಹೋಗಿ ಬಾ. ಆಮೇಲ ನಾ ಹಕ್ಕೊತೇನಿ," ಅಂದು, ನನ್ನ ಕಿವಿಗೆ ಹೊಸಾ ಕಿವ್ಯಾನವನ ಹಾಕಿದ್ಲು. ಮುಂಜಾನಿಂದ ಎಲ್ಲರ ಹತ್ರ, "ನಮ್ಮ ಮಮ್ಮಿ ನನಗ ಹೊಸಾ ಕಿವ್ಯಾನ ಹಾಕ್ಯಾರ," ಅಂತ ಊರಿಗೆಲ್ಲಾ ಹೇಳಕೊಂಡ ಬಂದಿದ್ದೆ. ಎಲ್ಲಾ ಕಡೆ ಸುದ್ದಿ ಮುಟ್ಟಿಸಿ ಶಾಲಿ ಸೇರಿದ್ದೆ.

ತಗೋರಿ... ಬಂತ ನೋಡ ಭಾರಿ ಮಳಿ. ಮಧ್ಯಾನ ಶುರುವಾಗಿದ್ದು ಸಂಜೀ ಶಾಲಿ ಬಿಟ್ರು ಮಳಿ ಬಿಡವಲ್ದು. ಮದ್ಲ ನಮ್ಮ ಶಾಲಿ ಸುತ್ತ ನೀರು ಭಾಳ ನಿಲ್ತಿತ್ತು. ನಮ್ಮ ಸರ್‌, ಟೀಚರ್ ನಮ್ಮನ ಹೊರಗ ಬಿಡತಿರಲಿಲ್ಲಾ. ಆದ್ರ ಮಳಿ, "ಯಾಕ ಒಳಗ ಕೂತಿರಿ ಬರ್ರೀ ಹೋರಗ ಮಳೆಯೊಳಗ ಆಟಾ ಆಡ್ರಿ," ಅಂತ ಕೈ ಬೀಸಿ ಕರಿತಿತ್ತು. ಶಾಲಿ ಬಿಡು ಟೈಮ್‌ ಆಗತ್ತು ನಾವು ಅವರಿಗೆ, "ಸರ್‌ ನಿವ್ ಹೋಗ್ರಿ ನಾವ ಶಾಲಿ ಕಿಲಿ ಹಕ್ಕೊಂಡ ಬಂದ ನಿಮ್ಮ ಮನಿಗೇ ಕೊಡತಿವಿ. ನಮ್ಮ ಮನಿ ಇಲ್ಲೇ ಸಮಿಪ ಅದವಲ್ಲಾ ಹೋಗ್ರಿ," ಅಂದು ಸಾಗಹಾಕಿ, ಆ ಮಳಿ ನೀರಾಗ ಆಡಾಕ ಹೊಕ್ಕಿದ್ವಿ.

Rain 3

ಮಳಿ ಬಂದಾಗ ಗೆಳತ್ಯಾರ ಜೊಡಿ ಆಟಾ ಆಡು ಮಜಾನಾ ಬ್ಯಾರೆ. ಅದು ಈ ಇಂಗ್ಲೀಷ್‌ ಶಾಲ್ಯಾಗ ಸಿಗಂಗಿಲ್ಲ ಬಿಡ್ರಿ. ಕನ್ನಡ ಶಾಲಿ ಹುಡುಗುರಿಗೆ ದೈರ್ಯ ಜಾಸ್ತಿ ಅಂತ ನಮಗ ಈಗ ಗೊತ್ತಾಗಕತ್ತೇತಿ. ಹೀಂಗ್‌ ನಮ್ಮ ಮಾಸ್ತರನ ಜೋಪಾನಗಿ ಮನಿಗ ಕಳಸಿ ನೀರಾಟಾ ಶುರು ಮಾಡ್ತಿದ್ದ ನಾವು, ಪುರಾ ತೋಸ್ಕೊಂಡ್ರು ಖಬರ್‌ ಇಲ್ದಾ ಆಟದಾಗ ಮುಳಗಿರತಿದ್ವಿ. ಅವತ್ತು ಭಾರಿ ಮಳಿ ಬಂದಿತ್ತು. ಶಾಲಿ ಗುಡಿ ತುಂಬ ನೀರ್‌ ನಿಂತಿದ್ವು. ನಮ್ಮ ಆಟಗುಳು ಜೋರ್‌ ಇದ್ವು. ಕಣ್ಣಾಮುಚ್ಚಿ, ಮುಟ್ಟಾಟ ಅದು-ಇದು ಅಂತ್ಹೇಳಿ ಕತ್ತಲಾಗುತನ ಆಡಿ, ಆಮೇಲ ಮನಿದಾರಿ ಹಿಡದಿದ್ವಿ.

ಅವತ್‌ ಮನಿಗೆ ತಡಾ ಆಗಿ ಬಂದಿದ್ದೆ. ನಮ್ಮ ಅವ್ವ ಮಳೆಗಾಲದಾಗಿನ ಬಿಸಿ ಬಜಿ ಆಗಿದ್ಲು ಸಿಟ್ಟಿಂದ. ಅಕಿ ಬಾಯಿಗೆ ಹತ್ತುದ ಬ್ಯಾಡ ಅಂತ ಜಾಣ್‌ ಹುಡಗಿಗತೆ ಬುಕ್ಕಾ ಹಿಡದೇ. ಬಂದ್ಲು ನಮ್ಮ ಅವ್ವಾ. "ಬಾಯಿಲ್ಲೆ ಕಿವಿ ತೋರಸು," ಅಂದ್ಲು. ಅಂದದ್ದ ತಡಾ, "ನಡಿ ಹೋರಾಗ... ಇವತ್ತರ ಹಾಕೀನಿ ಕಿವಿದು ಆಗಲೇ ಕಳಕೊಂಡ ಬಂದಿ ಅದು ಸಿಗುತನ ಮನಿಗ ಬರಬ್ಯಾಡ," ಅಂತ ಹೊರಗ ಹಾಕಿದ್ಲು. ಅವಾಗ ಗೊತ್ತಾಗಿದ್ದ ನನಗ - ನಾನ ಒಂದು ಬಂಗಾರದ ಕಿವಿಯೋಲಿ ಕಳದದ ಅಂತ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಎಲ್ಲಾ ಉಳಿಗೆಂಡಿ ಕಣ್ಣಲ್ಲಿ ನೀರ ತರ್ಸದ್ರೆ ನಮ್ ಉಳಿಗೆಂಡಿ ಬಾಯ್ಲಿ ನೀರು ತರಸ್ತದೆ

ಶಾಲಿ ಕಡೆ ಓಡಿ ಹೋಗಿ ನೋಡಿದ್ರ, ಇಷ್ಟ ಹೊತ್ತು ಆಟಾ ಆಡುವಾಗ ಸಣ್ಣದಿದ್ದ ಮೈದಾನ ಈಗ ಭಾಳಾ ದೊಡ್ಡದಾಗಿತ್ತು. ಅಷ್ಟು ದೊಡ್ಡ ಶಾಲಿ ಗ್ರೌಂಡ್‌ದಾಗ ನನ್ನ ಕಳದ ಕಿವಿಯೋಲಿ ಎಲ್ಲಿ ಅಂತ ಹುಡಕಲಿ ಅಂದು ಮಳಿನ, ಮಳಿ ನೀರನ ಬೈಕೊಂಡ-ಬೈಕೊಂಡ ಹುಡಕಿದ್ದ-ಹುಡಕಿದ್ದು. ಅದೇನ ಸಿಗಲಿಲ್ಲ. ಅಷ್ಟ ನೀರನ್ಯಾ ಎಲ್ಲಿ ಕೊಚ್ಚಕೊಂಡ ಹೋಗಿ, ಯಾವ ಹೊಂಡಾ ಸೇರಿತ್ತೋ... ಅದ್ಯಾವ್‌ ಬಾವ್ಯಾಗ ಬಿದ್ದಿತ್ತೊ ಗೊತ್ತಿಲ್ಲ. ನಾನು ಮನಿಗ ಹೋಗಾಕ ಆಗದ, ಕಿವ್ಯಾಂದ ಹುಡಕಾಕ ಆಗದ ಶಾಲಿ ಗುಡಿ ತುಂಬ ಒಬ್ಬಕಿನ ಓಡಾದಿದ್ದೇ…

ಕತ್ತಲ ಭಾಳಾಗಿತ್ತು. ನಮ್ಮ ಅಪ್ಪ ಮನಿಗ ಬಂದಾಗ ನಾ ಕಾಣಲಿಲ್ಲಾ ಅಂತ ಹುಡಕ್ಕೊಂಡ ಬಂದು, "ಇರಲಿ ಬಾ... ನಾ ನಿಮ್ಮ ಅವ್ವಗ ಇನ್ನೊಂದು ಕಿವಿಯೋಲಿ ಕೊಡಸ್ತಿನಿ," ಅಂದು ಸಮಾಧಾನ ಮಾಡಿ ಮನಿಗ ಕರಕೊಂಡ ಹೋಗಿದ್ರು. ಅವತ್ತಿಂದ ನಾ ಕಾಲೇಜ್‌ ಮೆಟ್ಟಲ ಹತ್ತುತನ, ನಮ್ಮ ಅವ್ವಾ ಬಂಗಾರದ ಕಿವಿಯೋಲಿ ಹಾಕಲಿಲ್ಲ ನನಗ. ಈಗ ಮಳಿ ಬಂದಾಗೆಲ್ಲಾ ಈ ಘಟನೆ ನೆನಸ್ಕೊಂಡ ನಗು ಬರತದ ನನಗ. ಹಿಂಗ ಮಳಿ ಭೂಮಿಗೆ ಮಳಿ ನೀರ ತರೋ ಜೊತಿಗೆ, ಎಲ್ಲಾರಿಗೂ ಅವರ ಹಳೆ ನೆನಪನೂ ಮೊಡದಾಗ ಹೊತ್ತ ತರತದ. ಅದಕ್ಕ ಮಳಿ ಇನ್ನು ಹೆಚ್ಚು ತಂಪ ಅನಸ್ಸತದ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app