ದೇಸಿ ನುಡಿಗಟ್ಟು - ಮಾಲೂರು ಪ್ರಾಂತ್ಯ | ನಮ್ಮೂರುಗ್ ಬಂದಿದ್ದ ಮುನೆಸ್ಪುರನ ಮಹಾತ್ಮೆ

Muneshwara 3

ಈಗ ಸೀಕಲ್ ಅವರ ತೋಟ ಅದಲ್ಲ, ಆಗ ಅದು ಮಾಂಗಾಯಿ ತೋಪು. ಪಕ್ಕದಾಗ ಚೆರುವು ಇತ್ತು. ಹೆಂಗಸ್ರು ಕೊಡಗಳು ಇಡಕಂಡು ಚೆರುವು ತಟ್ಟು ಹೋದಾಗ, ಮಾಂಗಾಯಿ ಕಿತ್ಕಂಡು ಕೊಂಗುನಾಗ ಅವಿಸಿಟ್ಟುಕೊಂಡು ಬರೋರು. ಈ ಕಿತ್ತ ಮಾಂಗಾಯಿ ಪೀಕೊಕೆ ಹೋದಾಗ ನೋಡ್ತಾರೆ, ಯಾರೋ ಇರಬ್ರಹ್ಮಯ್ಯನ ತರ ಗಡ್ಡ ಬಿಟ್ಕಂಡು ಮಾನು ಕಿಂದ ಕುಂತವ್ರೆ!

ನಮ್ಮೂರಾಗ ದಿಕ್ಕಿಗೊಂದೊಂದು ದೇವಸ್ಥಾನಗಳು ಅವೆ. ಎಲ್ಲಮ್ಮನು, ಗಂಗಮ್ಮನು, ಮಾರಮ್ಮನು, ಈಸ್ಪರುನು, ಮುನೆಸ್ಪುರುನು... ಇಂಗೆ, ಇನ್ನೂ ಲೆಕ್ಖ ಕೊಡು ಅಂದ್ರೆ ಕೊಡಬೋದು. ಈ ಸ್ವಾಮ್ಗಳಿಗೆ ಊರನಾಗ ಎಲ್ಲ ಜಾತ್ಯಾಸ್ತರು ಸಾಮ್ರಾಣಿ ಕಡ್ಡಿ ಅಂಟಿಸ್ತಾರೆ. ಮನೆಗಳಾಗ ಹೆಂಗೆ ಎಂಟರೋಣಸ್ವಾಮಿ ಪೋಟೋಕ ಬಯ ಭಕ್ತಿ ತೋರಿಸ್ತಾರೋ ಹಂಗೇ ಇಲ್ಲೂ ತೋರಿಸ್ತಾರೆ.

ಇದರಾಗ ಒಂದು ಸ್ಪೆಶಲ್ ಅದೆ. ಎಲ್ಲಮನುಕಾ, ಗಂಗಮ್ಮುನುಕಾ, ಮಾರಮ್ಮುನುಕಾ ಪರ್ಶೆ ಮಾಡೋಲ್ಲ. ಇಸ್ಪುರುನುಕ ಪರ್ಶೆ ಅದೆ. ಮುನೆಸ್ಪುರುನುಕ ಮಾತ್ರ ಅತಗ ಪರ್ಶೆನು ಅಲ್ಲ, ಇತಗ ಎಲ್ಲಮನುಕಾ, ಗಂಗಮ್ಮನುಕಾ ಮಾಡದಿರಂಗೆ ಸುಮ್ಮುಕು ಇರೋಲ್ಲ. ದ್ಯಾವ್ರ ಅಂತ ಮಾಡ್ತಾರೆ,  ಆಯಪ್ನುಕ.

ಈಸ್ಪುರುನುಕ, ಮುನೆಸ್ಪುರುನುಕ ಏನ ಯ್ಯತ್ಯಾಸ ಅಂತ ಆಲು ಬುಟ್ಟ ಚಿಲ್ಟುಗಳು ಕೇಳುದ್ರೆ, ಊರಾಗ ಎಲ್ರೂ ಹೇಳೋದು ಒಂದೆ ಕತೆಯಾ:

ಚಿಲ್ಟು ಆಗಿದ್ದಾಗ ನಾನೂವೆ ಆ ಕತೆಯ ಕೇಳಿದೀನಿ. ಆ ಕತೆನಾಗ ಈಸ್ಪುರುನು ಪಾರ್ವತಮ್ಮನ ಜತೆ ಒಂದ್ಕಿತ ಕುಸಾಲು ಮಾತಾಡ್ತಾ ಇದ್ನಂತೆ. ಮಗನು ಮುರುಗನು ಅಲ್ಲೆ ನವಿಲ್ ಮ್ಯಾಗ ಕೈ ಆಡಿಸ್ತಾ ಇದ್ನಂತೆ. ಅದನ್ನ ನೋಡಿ ಅಮ್ಮನು, "ಪಿಳ್ಳೆಯಾರ್ ಎಲ್ಲಿ?" ಅಂತ ಬೆಮೆ ಪಟ್ಲಂತೆ. ಈಸ್ಪುರುನು ಕುಸಾಲಾಗಿ, ಪಟಾಸು ಸಿಡಿದಂತೆ, "ವಾಡು ನಾ ಕೊಡಕಾ?" ಅಂದ್ನಂತೆ.

Image
Muneshwara 5

ಇದ್ನ ಕೇಳಿ ಅಮ್ಮನುಕ ಜುಟ್ಟುಗಳುಕ ಕ್ವಾಪ ಹತ್ತಿಬಿಡ್ತು. "ನಿನಗ ಮುರುಗುನು ಮ್ಯಾಲೆ ಇರೋ ಬೆಮೆ ಪಿಳ್ಳೆಯಾರ್ ಮ್ಯಾಲೆ ಇಲ್ಲ," ಅಂತ ಕಣ್ ಗುಡ್ಡಿಗಳನ ಊರಗಳ ಮಾಡಿದ್ಲಂತೆ.

ಈಸ್ಪುರುನುಕ ಈ ಮಾಟ ಸುರುಕ್ ಅನ್ಸುತು. ಅಪ್ನನುಕ ಮೂಲೋಕ ನೋಡ್ಕೊಳ್ಳೋ ಪಂಗ ಇರೋವಾಗ ಪೆತ್ತ ಪುಳ್ಳೆನಾ ಗ್ಯಪ್ತಿ ಮಡಗಿಲ್ಲ ಅಂದ್ರೆ ಪೆದ್ದ ಮಿಸ್ಟೇಕ್ ಏನಲ್ಲ! ಆದ್ರೆ ಅಮ್ಮುನುಕ ಇದು ಪೆದ್ದ ಮ್ಯಾಟ್ರು ಆಗೋಯ್ತು. ಬ್ಯಾರೆ ಹೆಂಗುಸ್ರು ತರ ಬೇಲಾಡೋ ಹೆಂಗಸಲ್ಲ ಅಮ್ನು. ಸಿರ್ ಅಂತ ಸಿರ್ಗುಡೋ ಜಾತಿ. "ಮಸಾಣದಲ್ಲಿ ಇರೋ ನಿನಗ ಮಕ್ಕಳ ಮ್ಯಾಲೆ ಬೆಮೆ ಎಲ್ಲೈತೆ ಹೇಳು..." ಅಂದುಬಿಟ್ಲು.

ಈಸ್ಪೂರುನುಕ ಈ ವಾರ್ತೆ ಕೇಳಿ ಕ್ವಾಪ ನೆತ್ತಿಗಳುಕ ಹತ್ತಿಬಿಡೋದಾ! ದಾಳಾವ್ಯಾಗ ಮೂಳೆ ಹಾಕ್ಕಂಡು ನಮುಲುವ ತರ ಹಲ್ನಾ ನೊರಕಿಬಿಟ್ಟ. ಅಷ್ಟರಾಗ ಮುರುಗನು ಇದ್ನೆಲ್ಲಾ ಕಂಡು ದಿಗಿಲು ಬಿದ್ನು. ಈಗ ಅಪ್ನು ಹಾವ್ನ ನಡುಮುಕ ಟೈನ್ಪುರಿ ತರ ಕಟ್ಕಂಡು ರಿಕಾರ್ಡ್ ಡ್ಯಾನ್ಸ್ ಆಡಿದರೆ, ನವಿಲು ದಯ್ಯಮು ಕಂಡಂಗೆ ದಿಗಿಲು ಬೀಳುವುದು ಕಂಡಿಪ ಅನುಸ್ತು.

ಆಗ ಮುರುಗನಿಗೆ ಸರಕ್ ಅಂತ ಒಂದು ಉಪಾಯ ಹೊಳೆದು, ಸರ್ ಸರ್ನೆ ನವಿಲು ಮ್ಯಾಲೆ ಕುಂತು, ಅದನ್ನ, "ಬಿರ್ ಬಿರ್ನೆ ಪದ" ಅಂತ ಓಡಿಸಿಬಿಟ್ಟ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಗದಗ ಪ್ರಾಂತ್ಯ | ಗುಡ್ಡದ ಮ್ಯಾಲಿನ ಶಾಲಿ ಸಾಕ್ಷೀಲಿ ತೇಲಿಹೋದ ಕಿವಿಯೋಲಿ

ಅಮ್ನುಕು ಅಪ್ನುಕು ಈ ಸಂಭವ ನೋಡಿ ಎಗಟು ಹೊಡೆದಂಗಾಯ್ತು. ಈಸ್ಪುರುನುಕ ಅಲ್ಲೆ ವೈರಾಗ್ಯ ಹುಟ್ಬಿಡ್ತು. ಕಣ್ ಗುಡ್ಡಿಗಳನ ಹಂಗೇ ಕ್ಲೋಸ್ ಮಾಡಿದ. ಪಾರ್ವತಮ್ಮನು ದಿಗಿಲು ಬಿದ್ದು, "ವದ್ದಯ್ಯ… ವದ್ದಯ್ಯ…" ಅಂತ ಬೇಲಾಡಿದ್ರು, ಅಪ್ನೂ ಗುಡ್ಡಿಗಳನ ಬಿಡ್ಲಿಲ್ಲ.

ತರ್ವಾತ, ಪಲಾನ ಹೊತ್ತು ಬುಟ್ಟು ಈಸ್ಪುರುನು ಗುಡ್ಡಿಗಳನ ಪಲಾಸಾಗಿ ಬುಟ್ಟು, ಎದುರ್ನಾಗ ತನ್ನನ್ನೇ ದಿಟ್ಟಿಸ್ತಿದ್ದ ಮನವಿಯನ್ನು ನೋಡಿ, "ಚೂಸಾವಾ, ನೀ ಬಿಡ್ಡನಿ?" ಅಂದ.

ಅಮ್ನುಕ ಈ ತಟ್ಟು ಮಗನ್ನ ಬಿಡೋಕೂ ಆಗ್ದು; ಆ ತಟ್ಟು ಮಾಮುನ ಬಿಡೋಕೂ ಆಗ್ದೂ. ಹಂಗೆ ಸಿಕ್ಕಲ್ನಾಗ ಸಿಕ್ಕಿಬಿದ್ಲು.

ಈಸ್ಪುರುನು ಸರಕ್ ಅಂತ ಎದ್ದು ನಿಂತುಕೊಂಡು, "ನನಗ ಈ ಲೋಕ ವದ್ದು" ಅಂತೇಳಿ, ಕೈಲಾಸನಿಂಚಿ ಸೀದಾ ಭೂಲೋಕ ಬಂದುಬುಟ್ಟ. ಅಂಗೆ ಬರುವಾಗ ಪರಿಗೆತ್ತಿ ಪರಿಗೆತ್ತಿ ಮನೆಹೆಂಗಸ್ರು ಕೂಡ ಪಾಲಾ ಮಾಡ್ತಾರಂತೇಳಿ ಅಪ್ನು ಈರಬ್ರಹ್ಮಯ್ಯನ ತರ ಗಡ್ಡವ ಬುಟ್ಟು ನಮ್ಮೂರುಕ ಬಂದ.

ಈಗ ಸೀಕಲ್ ಅವರ ತೋಟ ಅದಲ್ಲ, ಆಗ ಅದು ಮಾಂಗಾಯಿ ತೋಪು. ಪಕ್ಕದಾಗ ಚೆರುವು ಇತ್ತು. ಹೆಂಗಸ್ರು ಕೊಡಗಳು ಇಡಕಂಡು ಚೆರುವು ತಟ್ಟು ಹೋದಾಗ, ಮಾಂಗಾಯಿಗಳನ್ನ ಕಿತ್ಕಂಡು ಕೊಂಗುನಾಗ ಅವಿಸಿಟ್ಟುಕೊಂಡು ಬರೋರು.

Image
Muneshwara 2

ಈ ಕಿತ್ತ ಮಾಂಗಾಯಿ ಪೀಕೊಕೆ ಹೋದಾಗ ನೋಡ್ತಾರೆ, ಯಾರೋ ಇರಬ್ರಹ್ಮಯ್ಯನ ತರ ಗಡ್ಡ ಬಿಟ್ಕಂಡು ಮಾನು ಕಿಂದ ಕುಂತವ್ರೆ. ಈ ಮ್ಯಾಟ್ರು ಗಂಣ್ಣಸರಿಗೆ ತಲುಪಿ, ಅವ್ರು ಊರೊಟ್ಟಿನ ಎಲ್ಲ ಪೆದ್ದ-ಪೆದ್ದ ಜನಗಳನು ಕರ್ಕಂಡು ಸ್ವಾಮಿಗಳನ ನೋಡೋಕೆ ಬಂದರು.

ಸ್ವಾಮಿಗಳು ಕಣ್ ಬಿಡಲಿಲ್ಲ... ಬಾಯಿ ಬಿಡಲಿಲ್ಲ....

ಜನಗಳು ಅವ್ರಿಗೆ ಆಲು, ಹಣ್ಣು ಮಡಗಿ ಕೈಮಕ್ಕಿದರು. ಕಷ್ಟ-ಸುಕ ಹ್ಯೇಳಿ, "ಸ್ವಾಮ್ಲು ಮಾಕಿ ದಾರಿ ಚೂಪಂಡಿ,” ಅಂತ ಬೇಲಾಡೋರು.

ಆ ಕಿತ್ತ ಊರಾನಾಗ ವಾನಲು ವರ್ಷಾಲು ಸಖತ್ತಾಗಿ ಆಯ್ತು. ಪಂಟ ಕೂಡ ಮೋಪಾಗೆ ಆಯ್ತು. ಜನಗಳು ಇದೆಲ್ಲಾ ಇರಬ್ರಹ್ಮಯ್ಯನ ಆಟ ಅಂದ್ಕಂಡ್ರು. ಸಾಮ್ರಾಣಿ ಕಡ್ಡಿ ಅಂಟಿಸಿ, ಕರ್ಪೂರ ಬೆಳಕು ಮಾಡಿದರು.

ಸೀಕಲ್ ವೆಂಕಟಪ್ಪನವರು ಸ್ವಾಮ್ಗಳು ಇರುವ ತಟ್ಟೆ ಒಂದು ಗುಡ್ಲು ಹಾಕ್ಕೊಟ್ರು. ಆಲು, ಹಣ್ಣುಗಳನ್ನ ಜನಗಳು ಡೈಲಿ ಮಡಗಿ ಹೋಗೋರು.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಪರವೂರಿಗೆ ಹೊಯ್ ದುಡ್ಮಿ ಮಾಡಿ ಬದ್ಕ ಕಟ್ದರ್ ಕಥಿ

ದಿನಗಳು ಹಿಂಗೆ ಹೋಗ್ತಾ-ಹೋಗ್ತಾ ಸೀಕಲ್ ಅವರು ಸ್ವಾಮ್ಗಳಿಗೆ ಮೋಪಾದ ಒಂದು ಕೋಯಿಲ್ ಕಟ್ಟಬೇಕು ಅಂತ ಊರ ಜನಗಳ ತಾವ ಕೇಳಿದ್ರು. ಅವ್ರು ತಮ್ ತಾಕತ್ ಇದ್ದಷ್ಟು ಕೊಟ್ಟರು. ಸೀಕಲ್ ಅವರು ಉಳಿದದ್ದ ತಮ್ ಕೈಯಿಂದ ಹಾಕಿ ಕೋಯಿಲ್ ತರದ್ದು ಒಂದು ಕಟ್ಟಿಸಿದರು.

ಅಷ್ಟರಲ್ಲಿ ಪಾರ್ವತಮ್ಮನವ್ರು ತಮ್ಮ ಯಜಮಾನನನ್ನು ಪತ್ತಾ ಮಾಡಿಕೊಂಡು ನಮ್ಮೂರುಕ ಬಂದಳು. ಈಸ್ಪುರುನು ತಮ್ಮ ಹೆಂಗಸರನ್ನು ನೋಡಿ, "ಈ ತರ ಪರಿಗೆತ್ತಿ ಪರಿಗೆತ್ತಿ ನನ್ನ ಹಿಂದೆ ಬರೋಕೆ ನಿನಗೆ ಸಿಗ್ಗಿಲ್ಲವಾ?" ಅಂತ ಬೈದು, ಅಲ್ಲಿಂದ ಸರಕ್ ಅಂತ ಮಾಯವಾಗಿಬಿಟ್ಟ. ಯಜಮಾನನು ಹೋದ ಮೇಲೆ ನನ್ನದೇನು ಪಂಗ ಅಂತ ಅಮ್ಮುನು ಮಾಯವಾದ್ಲು.

ಜನಗಳು ತಮ್ ಊರಕ ಸಾಕ್ಷಾತ್ ಈಸ್ಪುರುನೆ ಬಂದು ನೆಲೆಗೊಂಡಿದ್ದು ತಿಳಿದು, ತಮ್ ಊರ ಮಹಿಮೆ ಎಷ್ಟು ದೊಡ್ಡದು ಅಂದ್ಕಂಡರು.

ತರ್ವಾತ, ಸ್ವಾಮ್ಗಳಿಗೆ ಅಂತ ಕಟ್ಟಿಸಿದ್ದ ಆ ಕೋಯಿಲು ಮುನಿ ಯಾಷದಲ್ಲಿ ಇದ್ದ ಮುನೆಸ್ಪುರನ ಕೋಯಿಲ್ ಆಗಿ ಚೇಂಜ್ ಆಗೋಯ್ತು. ಸ್ವಾಮುಗಳ ತರನೆ ಇಗ್ರ ಒಂದು ಶಿವಾರ ಪಟ್ಟಣದಾಗ ಮಾಡಿಸಿ ಅಲ್ಲಿ ಕುಂಡ್ರಿಸಲಾಯ್ತು.

Image
Muneshwara 4

ಅಂದಿನಿಂಚಿ ವರ್ಷಕ್ಕೊಮ್ಮೆ ಊರನ ಎಲ್ಲ ಜ್ಯಾತ್ಯಾಸ್ತರು ದ್ಯಾವ್ರ ಅಂತ ಮುನೆಸ್ಪುರುನುಕ ಮಾಡ್ತಾರೆ. ಕೋಯಿಲ್ ಮೊಡುಕಾಗ ಮೂರು ರೂಮುಗಳ ತರ ಜಾಗ ಅದೆ. ಒಂದರಾಗ ಐನೋರು; ಇನ್ನೊಂದುರಾಗ ರೆಡ್ಡಿಗಳು, ಕುರುಬರು, ಪಳ್ಳಿಗರು, ಗಾಣಿಗರು ಇಂತವರು; ಲಾಸ್ಟ್ ಒಂದರಾಗ ಹೊಲಮಾದಿಗರು ಅಟ್ಟು ಮಾಡಿಕೊಂಡು ಮುನೆಸ್ಪುರುನುಕ ನಡ್ಕತಾರೆ.

ಈ ಮುನೆಸ್ಪುರುನ ಕತೆ ಹೇಳುವ ಜನಗಳು ಇನ್ನೊಂದು ಕತೆಯೂ ಇದರ ಕೂಡೆ ಹೇಳುವುದ ಕೇಳಬೇಕು...

ಡೈಲಿ ಮಧ್ಯಾಹ್ನ ಒಂದು ಗಂಟೆಕ ಮುನೆಸ್ಪುರುನು ಸರ್ಪದ ರೂಪ ತಾಳಿ ಸಂಚಾರ ಹೋಗ್ತಾನಂತೆ. ಯಾಕ ಅಂತ ಕೇಳಿದರೆ, "ಅದಕ್ಕೊಂದು ಕತೆ ಅದೆ ಕೇಳು ಅಪ್ಪಯ್ಯ..." ಅಂತ ಅದ ಹೇಳ್ತಾರೆ:

ಒಂದ್ಕಿತ ಮಧ್ಯಾಹ್ನ ಟೇಮಲ್ಲಿ ಮಳೆ ಬಂದುಬಿಡ್ತು. ಸೀಕಲ್ ವೆಂಕಟಪ್ಪನವರ ಅಪ್ಪಯ್ಯನು ಅಲ್ಲೆ ಎಲ್ಲೊ ಇದ್ದವನು ಬಿರ್ ಬಿರ್ನೆ ಮುನೆಸ್ಪುರುನ ಗುಡಿ ಒಳಕ್ಕ ನುಸಿಳಿಕೊಂಡವನೆ. ಅದೇ ಟೇಮಿಗೆ ಮುಂತಾಯಕ್ಕನ ಮಗಳು ಮಾಲಿ ಕೂಡ ಮಳಕ ತಪ್ಪಿಸಿಕೊಳ್ಳೋಕೆ ಇದೆ ಗುಡಿ ಒಳಕ್ಕ ನುಗ್ಗವ್ಳೆ.

ಮುಂದೆ ಆದ ಸಂಭವವ ನೋಡಲಾರದೆ ಮುನೆಸ್ಪುರುನು ಸರ್ಪ ರೂಪವ ತಾಳಿ ಆಚೆತಟ್ಟು ಬಂದುಬುಟ್ಟ ಅಂತಾರೆ.

"ಅದ್ಯಾಕ ಅಂಗೆ?" ಅಂತ ಕೇಳುದ್ರೆ,

"ಮುಂದಿನದು ನಾವು ಏಳಾಕಾದು," ಅಂತ, ಅಲ್ಲಿಗೆ ಮುನೆಸ್ಪುರನ ಮಾಹಾತ್ಮೆಯ ನಿಲ್ಲಿಸುವರು.

ಚಿತ್ರ ಕೃಪೆ: ಪಿಂಟರೆಸ್ಟ್ ಜಾಲತಾಣ
ನಿಮಗೆ ಏನು ಅನ್ನಿಸ್ತು?
3 ವೋಟ್