ದಕ್ಷಿಣ ಕನ್ನಡ |ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ 900 ಕೆ.ಜಿ ದವಸ-ಧಾನ್ಯದಿಂದ ತಿರಂಗಾ ಕಲಾಕೃತಿ

Dakshina kannada
  • ಕಲಾಕೃತಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ
  • ಯಾವುದೇ ರಾಸಾಯನಿಕವನ್ನು ಬಳಕೆ ಮಾಡದೆ ಕಲಾಕೃತಿ ರಚನೆ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ 900 ಕೆ.ಜಿ ದವಸ ಧಾನ್ಯಗಳನ್ನು ಬಳಸಿ ತಿರಂಗಾ ಕಲಾಕೃತಿ ರಚಿಸಲಾಗಿದ್ದು, ಎಲ್ಲರ ಗಮನ ಸೆಳೆದಿದೆ.

ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರುವ ತಿರಂಗಾವನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮತ್ತು ಗುರು ಬೆಳದಿಂಗಳು ಫೌಂಡೇಷನ್ ಜಂಟಿಯಾಗಿ ವಿನ್ಯಾಸ ಮಾಡಿದೆ. ತಿರಂಗಾ ಕಲಾಕೃತಿಯನ್ನು ವೀಕ್ಷಿಸಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಕೇಸರಿ ಬಣ್ಣಕ್ಕಾಗಿ 300 ಕೆ.ಜಿ ಕೆಂಪು ತೊಗರಿ ಬೇಳೆ ಬಳಸಲಾಗಿದೆ. ಬಿಳಿ ಬಣ್ಣಕ್ಕಾಗಿ 300 ಕೆ.ಜಿ ಉದ್ದಿನ ಬೇಳೆ, ಹಸಿರು ಬಣ್ಣಕ್ಕಾಗಿ 300 ಕೆ.ಜಿ ಹೆಸರು ಕಾಳು ಬಳಸಲಾಗಿದೆ.  ಬೆಂಡೆಕಾಯಿ, ಮೂಲಂಗಿ ಮುಂತಾದ ತರಕಾರಿಗಳನ್ನೂ ಜೋಡಿಸಲಾಗಿದೆ. ಕೇವಲ ಧವಸ ಧಾನ್ಯಗಳನ್ನು ಬಳಸಿ ಚಿತ್ರಿಸಲಾಗಿದೆ. ಯಾವುದೇ ರೀತಿಯ ರಾಸಾಯನಿಕವನ್ನು ಬಳಕೆ ಮಾಡಿಲ್ಲ” ಎಂದು ತಿರಂಗಾ ರಚನೆಯಲ್ಲಿ ಭಾಗವಹಿಸಿದವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಹಾವೇರಿ | ಮನೆ– ಮನೆಗೂ ಗಿಡ, ಮರ ಅಭಿಯಾನ ಆರಂಭಕ್ಕೆ ಪ್ರಧಾನಿಗೆ ಪತ್ರ ಬರೆದ ಬಾಲಕಿ

ಕಲಾವಿದ ಪುನೀಕ್‌ ಶೆಟ್ಟಿ ನೇತೃತ್ವದಲ್ಲಿ ಸುಮಾರು ಮೂವತ್ತು ಮಂದಿ ಸೇರಿ 18 ಗಂಟೆಯಲ್ಲಿ ಕಲಾಕೃತಿ ರಚಿಸಿದ್ದಾರೆ. 38 ಅಡಿಯ ವೃತ್ತದಲ್ಲಿ ತಿರಂಗಾ ಕಲಾಕೃತಿ ರಚಿಸಲಾಗಿದೆ. ಕಲಾಕೃತಿ ಸುತ್ತ ಸುಮಾರು 54 ಕಳಶವಿಟ್ಟು ಹೂಗಳಿಂದ ಅಲಂಕರಿಸಲಾಗಿದೆ.

ಆಗಸ್ಟ್‌ 14ರ ಬೆಳಗಿನಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್