ದಕ್ಷಿಣ ಕನ್ನಡ| ಪ್ರಕರಣದ ಸುದೀರ್ಘ ವಿಚಾರಣೆಯೇ ಆರೋಪಿಗೆ ಶಿಕ್ಷೆಯಾಗಿ ಪರಿಣವಿಸುತ್ತಿದೆ; ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್

Dakshina kannada
  • ‘ಕಾರಾಗೃಹದಲ್ಲಿರುವ  6.1 ಲಕ್ಷ ಕೈದಿಗಳಲ್ಲಿ ಶೇಕಡ 80ರಷ್ಟು ವಿಚಾರಣಾಧೀನ ಕೈದಿಗಳು’
  • ‘ಶೇ 14ರಷ್ಟು ಆರೋಪಿಗಳಿಗೆ ಜಾಮೀನು ಪಡೆದುಕೊಳ್ಳಲು ಬೇಕಾದ ಪೂರಕ ಸ್ಥಿತಿಯಿಲ್ಲ’

“ಪ್ರಕರಣದ ಸುದೀರ್ಘ ವಿಚಾರಣಾ ಪ್ರಕ್ರಿಯೇ ಆರೋಪಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ. ಈ ವ್ಯವಸ್ಥೆಯನ್ನು ತುರ್ತಾಗಿ ಬದಲಾಯಿಸುವ ಅಗತ್ಯವಿದೆ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಹೇಳಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾನಿಲಯ ಶನಿವಾರ (ಆಗಸ್ಟ್‌ 13) ಆಯೋಜಿಸಿದ್ದ ಬೆಳ್ಳಿಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಜಾಮೀನು ಮತ್ತು ಜೈಲು’ ವಿಷಯದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು “‘ಜಾಮೀನು ನೀಡಲು ಕಾನೂನಿನಲ್ಲಿ ಅವಕಾಶವಿದ್ದು, ಶಿಕ್ಷಿಸುವುದು ಆಯ್ಕೆಗೆ ಬಿಟ್ಟ ವಿಷಯ” ಎಂದರು.

“ದೇಶದ ಕಾರಾಗೃಹದಲ್ಲಿರುವ  6.1 ಲಕ್ಷ ಕೈದಿಗಳಲ್ಲಿ ಶೇಕಡ 80ರಷ್ಟು ವಿಚಾರಣಾಧೀನ ಕೈದಿಗಳೇ ಇದ್ದಾರೆ. ನ್ಯಾಯಾಲಯವು ವಿಚಾರಣೆ ಮಾಡಿ ಅಪರಾಧಿ ಎಂದು ತೀರ್ಪು ಕೊಟ್ಟ ಮೇಲೆ ಜೈಲಿಗೆ ಹಾಕಬೇಕು. ಈ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ |ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ 900 ಕೆ.ಜಿ ದವಸ-ಧಾನ್ಯದಿಂದ ತಿರಂಗಾ ಕಲಾಕೃತಿ

ಆರೋಪಿಯ ವರ್ತನೆ ಮತ್ತು ಅಪರಾಧದ ಮಟ್ಟ ಕೆಲವೊಮ್ಮೆ ಜಾಮೀನು ನಿರಾಕರಿಸಲು ಕಾರಣವಾಗುತ್ತವೆ. ಕೆಲವು ಆರೋಪಿಗಳು ಜಾಮೀನು ಪಡೆದರೂ, ಜಾಮೀನು ಷರತ್ತುಗಳನ್ನು ಅನುಸರಿಸಲು ಸಾಧ್ಯವಾಗದೆ ಜೈಲಿನಲ್ಲಿ ಕೊಳೆಯುತ್ತಾರೆ. ಕೆಲವೊಂದು ಸನ್ನಿವೇಶದಲ್ಲಿ ಆರೋಪಿಯ ಆರ್ಥಿಕ ಸ್ಥಿತಿ ಜಾಮೀನು ಪಡೆದುಕೊಳ್ಳದೇ ಇರಲು ಕಾರಣವಾಗುತ್ತದೆ. ಅಧ್ಯಯನವೊಂದರ ಪ್ರಕಾರ ಶೇಕಡಾ 14ರಷ್ಟು ಆರೋಪಿಗಳಿಗೆ ಜಾಮೀನು ಪಡೆದುಕೊಳ್ಳಲು ಬೇಕಾದ ಪೂರಕ ಸ್ಥಿತಿಯಿಲ್ಲ ಎಂದು ಉಲ್ಲೇಖಿಸಿದೆ” ಎಂದು ತಿಳಿಸಿದರು

“10ರಿಂದ 15ವರ್ಷಗಳ ಕಾಲ ವಿಚಾರಣಾಧೀನ ಕೈದಿಗಳನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಇಷ್ಟು ವರ್ಷಗಳ ಕಾಲ ಆರೋಪಿ ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಶೇಕಡ 90ರಷ್ಟು ವಿಚಾರಣಾಧೀನ ಕೈದಿಗಳನ್ನು ನಿರಾಪರಾಧಿಯೆಂದು ಘೋಷಿಸಲಾಗುತ್ತದೆ. ಇಷ್ಟರಲ್ಲಾಗಲೇ ಕೈದಿಯ ಆಯಸ್ಸು ಮುಗಿದಿರುತ್ತದೆ” ಎಂದು ಬೇಸರ ವ್ಯಕಪಡಿಸಿದರು.   

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಎಸ್‌.ಡಿ.ಎಂ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಸತೀಶ್‌ ಚಂದ್ರ, ಎಸ್‌.ಡಿ.ಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ತಾರಾನಾಥ ಉಪಸ್ಥಿತರಿದ್ದರು

ನಿಮಗೆ ಏನು ಅನ್ನಿಸ್ತು?
0 ವೋಟ್