ದಕ್ಷಿಣ ಕನ್ನಡ | ಸ್ವಾತಂತ್ರ್ಯದ ಅಮೃತ ಮಹೋತ್ಸವ; ಕೋಮು ಸೌಹಾರ್ದತೆ ಸಾರಲು ಮುಸ್ಲಿಮ್‌ ಸಮುದಾಯದಿಂದ ‘ಬಾಕ್ಸ್‌ ಆಫ್‌ ಹ್ಯಾಪಿನೆಸ್’ ಅಭಿಯಾನ

Dakshina kannada
  • ಮುಸ್ಲಿಮರ ಗುಂಪಿನಿಂದ 1000 ಸಿಹಿ ಪೊಟ್ಟಣ ವಿತರಣೆ
  • ಏಕತೆ ಮತ್ತು ಸಹೋದರತ್ವದ ಸಂದೇಶ ಸಾರುವ ಉದ್ದೇಶ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆಯನ್ನು ಮರು ಸ್ಥಾಪಿಸಲು ಮುಸ್ಲಿಮರ ಗುಂಪೊಂದು ಮುಂದೆ ಬಂದಿದ್ದು, ‘ಬಾಕ್ಸ್‌ ಆಫ್‌ ಹ್ಯಾಪಿನೆಸ್’ ಅಭಿಯಾನದ ಹೆಸರಿನಲ್ಲಿ ಎಲ್ಲ ಸಮುದಾಯದವರಿಗೆ 1,000 ಸಿಹಿ ಪೊಟ್ಟಣಗಳನ್ನು ವಿತರಿಸಲು ನಿರ್ಧರಿಸಿವೆ.

“ಕಳೆದ ತಿಂಗಳು ನಡೆದ ಮೂರು ಕೊಲೆಗಳ ನಂತರ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರದ 10 ಪ್ರದೇಶಗಳಲ್ಲಿ ಕೋಮು ಸೌಹಾರ್ದತೆಗಾಗಿ ಸಿಹಿ ಹಂಚುವ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಸೋಮವಾರ (ಆಗಸ್ಟ್‌ 15) ಆಟೊ ನಿಲ್ದಾಣಗಳು, ಪೊಲೀಸ್ ಠಾಣೆಗಳು, ಅಂಗಡಿಗಳು, ದೇವಸ್ಥಾನಗಳು ಮತ್ತು ಚರ್ಚ್‌ಗಳಲ್ಲಿ ಸಿಹಿ ಹಂಚಲಿದ್ದೇವೆ” ಎಂದು ಅಭಿಯಾನದ ಸದಸ್ಯರಲ್ಲಿ ಒಬ್ಬರಾದ ಸೈಫ್ ಸುಲ್ತಾನ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಕುರ್ಚಿ ಉಳಿಸಿಕೊಳ್ಳಲು ನೆಹರೂ ಫೋಟೋ ಕೈಬಿಡುವಷ್ಟು ಗುಲಾಮಗಿರಿ ಬಂತೆ ಬೊಮ್ಮಾಯಿ ಅವರೇ?: ಸಿದ್ದರಾಮಯ್ಯ ಕಿಡಿ

ಸರಣಿ ಕೊಲೆಗಳ ನಂತರ ಸಮಾಜದಲ್ಲಿ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಬಹಳಷ್ಟು ತಪ್ಪು ಕಲ್ಪನೆಗಳು ಮೂಡಿವೆ. ಆದ್ದರಿಂದ,ಆ ಸಮುದಾಯಕ್ಕೆ ಸೇರಿದವರಾಗಿ ಎಲ್ಲರೂ ಒಟ್ಟಾಗಿ ಸೇರಿ 1,000  ಸಿಹಿತಿಂಡಿಗಳ ಪೊಟ್ಟಣಗಳನ್ನು ವಿತರಿಸಲು ನಿರ್ಧರಿಸಿದ್ದೇವೆ. ಮುಸ್ಲಿಮರು ನಾನಾ ಧರ್ಮದ ಜನರಿಗೆ ಸಿಹಿ ವಿತರಿಸುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಔಪಚಾರಿಕ ಕಾರ್ಯಕ್ರಮ ಅಥವಾ ಭಾಷಣಗಳನ್ನು ಮಾಡಲಾಗುವುದಿಲ್ಲ” ಎಂದು ಹೇಳಿದ್ದಾರೆ. 

“ಈ ಅಭಿಯಾನದ ಮೂಲಕ  ಏಕತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತೇವೆ. ಮುಸ್ಲಿಮರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಅವರು ಈ ದೇಶದ ಅಭಿವೃದ್ಧಿಯ ಭಾಗವಾಗಿದ್ದಾರೆಂದು ಮನದಟ್ಟು ಮಾಡುತ್ತೇವೆ. ನೀವು (ಬಹುಸಂಖ್ಯಾತರು) ಆಚರಿಸುವ ಹಾಗೆಯೇ ನಾವು (ಮುಸ್ಲಿಂಮರು) ಸ್ವಾತಂತ್ರ್ಯವನ್ನು ಆಚರಿಸುತ್ತೇವೆ. ನಿಮ್ಮಂತೆಯೇ ನಾವೂ ಈ ದೇಶದ ಭಾಗ ಎಂದು ಜನರಿಗೆ ತಿಳಿಸುತ್ತೇವೆ” ಎಂದು ಸೈಫ್ ಹೇಳಿದ್ದಾರೆ. 

ಪ್ರತಿ ಪೊಟ್ಟಣದಲ್ಲಿ ಜ್ಯೂಸ್, ಚಾಕೊಲೇಟ್, ಕೇಕ್ ಮತ್ತು ಇತರ ತಿಂಡಿಗಳ ಪ್ಯಾಕೆಟ್‌ಗಳನ್ನು ಹಾಕಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್