
- ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡಗಳು ಕುಸಿತ
- "ಅಧಿಕಾರಿಗಳಿಗೆ ಮನವಿ ಮಾಡಿದರೂ ವ್ಯರ್ಥ"
ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂಗಳೂರು ತಾಲೂಕಿನ ಗುರುಪುರ ಹಾಗೂ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡಗಳು ಕುಸಿಯುತ್ತಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಭಯದ ವಾತಾವರಣದಲ್ಲಿ ವಾಸಿಸುವ ಪರಿಸ್ಥಿತಿ ಉಂಟಾಗಿದೆ.
ಮುತ್ತೂರು ಗ್ರಾಮ ಪಂಚಾಯತ್ನ ಅಂಬೇಡ್ಕರ್ ನಗರದ ಪರಿಶಿಷ್ಟ ಜಾತಿ (ಎಸ್ಸಿ) ಕಾಲೋನಿಯ ಬಳಿಯಿರುವ ಸತ್ಯಸಾರಮಾಣಿ ದೇವಸ್ಥಾನ ಸಮೀಪದ ಗುಡ್ಡವೊಂದು ಕುಸಿಯುವ ಹಂತಕ್ಕೆ ತಲುಪಿದೆ.
ಒಂದು ವೇಳೆ ಆ ಗುಡ್ಡ ಕುಸಿದರೆ, ಅದರ ತಪ್ಪಲಿನಲ್ಲೇ ಇರುವ ದಲಿತ ದಂಪತಿ ಶಂಕರ ಮತ್ತು ಜ್ಯೋತಿ ಅವರ ಮನೆ ಹಾಗೂ ದಯಾನಂದ ಆಚಾರಿಯವರ ಮನೆಗಳ ಮೇಲೆ ಗುಡ್ಡದ ಕಲ್ಲು, ಮಣ್ಣು ಬೀಳುವ ಆತಂಕವಿದೆ. ಅಲ್ಲದೆ, ಗುಡ್ಡದ ಸಮೀಪವೇ ಇರುವ ದರ್ಣಪ್ಪ ಮೂಲ್ಯ, ತಿಮ್ಮಪ್ಪ ಪೂಜಾರಿ, ಲಿಂಗಪ್ಪ ಮೂಲ್ಯ ಹಾಗೂ ಹರಿಯಪ್ಪ ಮುತ್ತೂರು ಎಂಬವರ ಮನೆಗಳಿಗೂ ಹಾನಿಯಾಗುವ ಸಂಭವಿದೆ.
ಒಂದು ವರ್ಷದ ಹಿಂದೆಯೇ ಈ ಬಗ್ಗೆ ಮುತ್ತೂರು ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮಸಭೆಯಲ್ಲಿಯೂ ಪ್ರಸ್ತಾಪಿಸಲಾಗಿದೆ. ಗ್ರಾಮಸ್ಥರೆಲ್ಲ ಸೇರಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರಿಯೂ ಮನವಿ ಮಾಡಿದ್ದರು. ಆದರೆ, ಇದೂವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ಎರಡು ಗುಂಪುಗಳ ನಡುವೆ ಹಿಂಸಾಚಾರ: ಮೂವರಿಗೆ ಚಾಕುವಿನಿಂದ ಇರಿತ
"ಮಂಗಳೂರು ಜಿಲ್ಲಾಧಿಕಾರಿ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಪರಿಸ್ಥಿತಿಯ ಬಗ್ಗೆ ಅವರಿಗೂ ಮನವಿ ಮಾಡಿದ್ದೇವೆ. ಪಂಚಾಯತ್ಗೆ ಸುತ್ತೋಲೆ ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಯಾರೂ ಈ ಬಗ್ಗೆ ಗಮನಕೊಡಲಿಲ್ಲ" ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ದಿನ.ಕಾಮ್ ಜತೆ ಮಾತನಾಡಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಒ) ಪ್ರಮೋದ್, “ಸ್ಥಳವನ್ನು ಪರಿಶೀಲಿಸಿದ್ದೇನೆ. ಗುಡ್ಡ ಕುಸಿತದಿಂದ ಇಲ್ಲಿನ ಜನರಿಗೆ ತುಂಬಾ ಅಪಾಯವಿದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಶಾಸಕರಲ್ಲಿ ಮನವಿ ಸಲ್ಲಿಸಲಾಗಿದೆ. ಇನ್ನೂ ಹೆಚ್ಚು ಮಣ್ಣು ಕುಸಿಯುವ ಸಂಭವವಿರುವುದರಿಂದ ತಾತ್ಕಾಲಿಕವಾಗಿ ಟರ್ಪಾಲ್ ವ್ಯವಸ್ಥೆಯನ್ನು ಮಾಡುತ್ತೇವೆ. ಪಂಚಾಯತ್ನಿಂದ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಪರ್ಯಾಯ ಕ್ರಮವನ್ನು ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಬಳ್ಳಾಜೆ ಮಾತನಾಡಿ, “ಗುಡ್ಡ ಕುಸಿಯುವ ಬಗ್ಗೆ ಮೊದಲೇ ಶಾಸಕರಲ್ಲಿ ಮನವಿ ಮಾಡಿದ್ದೆವು. ಆದರೆ, ಇಲ್ಲಿಯವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಶಾಸಕರಲ್ಲಿ ಮತ್ತೆ ಮನವಿ ಮಾಡಿದ್ದು, ಎಂಜಿನಿಯರ್ ಮೂಲಕ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮಣ್ಣು ಕುಸಿಯದಂತೆ ತಾತ್ಕಾಲಿಕವಾಗಿ ಟರ್ಪಾಲ್ ಹಾಕಲಾಗಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ ಗಂಜಿ ಕೇಂದ್ರದ ವ್ಯವಸ್ಥೆಯನ್ನು ಮಾಡುವಂತೆ ಕಂದಾಯ ಇಲಾಖೆ ಮೂಲಕ ಮನವಿ ಮಾಡಿಸುತ್ತೇವೆ” ಎಂದಿದ್ದಾರೆ.
ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ದಾಸಪ್ಪ, ಗೋಪಾಲ್ ಮುತ್ತೂರು, ಗ್ರಾಮ ಪಂಚಾಯತ್ ಸದಸ್ಯರಾದ ರುಕ್ಮಿಣಿ, ಅನಿತಾ, ತಾರನಾಥ್ ಕುಲಾಲ್, ವನಿತಾ ಗೋಪಾಲ್, ಚಂದ್ರಹಾಸ್ ಶೆಟ್ಟಿ, ಲೋಕೇಶ್ ಮುತ್ತೂರು ಹಾಗೂ ಸ್ಥಳೀಯರು ಉಪಸ್ಥಿರಿದ್ದರು.